ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯದಂಗಡಿ: ದಲಿತರಿಗೆ ಆದ್ಯತೆ ನೀಡಲು ಸಲಹೆ

Last Updated 7 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಗಣಿ, ಮದ್ಯದ ಅಂಗಡಿಗಳ ಪರವಾನಗಿ ಹಾಗೂ ವ್ಯಾಪಾರ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ದಲಿತರಿಗೆ ಆದ್ಯತೆ ನೀಡುವ ಕಾರ್ಯಕ್ರಮಗಳನ್ನು ಮುಂಬರುವ ಬಜೆಟ್‌ನಲ್ಲಿ ಪ್ರಕಟಿಸಬೇಕು ಎಂದು ಸಾಹಿತಿಗಳು, ಚಿಂತಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.

ಸಮಾಜ ಕಲ್ಯಾಣ ಇಲಾಖೆ, ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ ಮತ್ತು ರಾಷ್ಟ್ರೀಯ ಕಾನೂನು ಶಾಲೆ ಆಶ್ರಯದಲ್ಲಿ ಭಾನುವಾರ ನಡೆದ `ಬಜೆಟ್ ಪೂರ್ವ ದುಂಡು ಮೇಜಿನ ಸಭೆ'ಯಲ್ಲಿ ದಲಿತರ ಏಳ್ಗೆಗಾಗಿ ರೂಪಿಸಬೇಕಾದ ಯೋಜನೆಗಳು ಮತ್ತು ಈಗಿರುವ ಕಾರ್ಯಕ್ರಮಗಳಲ್ಲಿರುವ ಲೋಪದೋಷಗಳನ್ನು ಸಾಹಿತಿಗಳು, ದಲಿತ ಮುಖಂಡರು ಪ್ರಸ್ತಾಪಿಸಿದರು.

ಸಾಹಿತಿ ದೇವನೂರು ಮಹಾದೇವ ಮಾತನಾಡಿ, ದಲಿತ ಸಮುದಾಯಕ್ಕೆ ಚಲನೆ ಬೇಕು. ಚಲನೆ ಇರುವಂತಹ ವ್ಯಾಪಾರ ಕ್ಷೇತ್ರದಲ್ಲಿ ದಲಿತರಿಗೆ ಹೆಚ್ಚಿನ ಆದ್ಯತೆ ದೊರೆಯಬೇಕು. ಯಾವುದೇ ರೀತಿಯ ಲಾಬಿಗಳಿಗೆ ಮಣಿಯದೆ ಜನ ಕಲ್ಯಾಣ ಬಜೆಟ್ ಮಂಡಿಸಬೇಕು ಎಂದು ಸಲಹೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕೊರೆಯಲಾಗುವ ಕೊಳವೆಬಾವಿಗಳ ಜತೆಯಲ್ಲೇ ಅಂತರ್ಜಲ ಮರುಪೂರಣ ಕೈಗೊಳ್ಳುವ ಯೋಜನೆಯನ್ನು ಸಹ ಆರಂಭಿಸಬೇಕು ಮತ್ತು ಸೌರದೀಪಗಳನ್ನು ದಲಿತ ಸಮುದಾಯಕ್ಕೆ ನೀಡಬೇಕು. ಜತೆಗೆ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ದೊರೆಯಬೇಕು. ಇದಕ್ಕಾಗಿ ಸಮಾಜ ಕಲ್ಯಾಣ ಇಲಾಖೆಯಿಂದಲೂ ನೆರವು ಬೇಕು ಎಂದು ನುಡಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟಿರುವ ಶೇಕಡಾ 22.75 ಅನುದಾನ ದುರ್ಬಳಕೆಯಾಗುತ್ತಿದೆ. ಈ ಅನುದಾನ ಇತರೆ ಇಲಾಖೆಗಳಿಗೆ ಸೋರಿಕೆಯಾಗುತ್ತಿದೆ. ಈ ಅನುದಾನದ ದುರ್ಬಳಕೆ ಮಾಡುವವರನ್ನು ಶಿಕ್ಷೆಗೆ ಒಳಪಡಿಸಲು ಸಚಿವ ಎಚ್. ಆಂಜನೇಯ ಮುಂದಾಗಿರುವುದು ಶ್ಲಾಘನೀಯ.

ಶೋಷಿತರಲ್ಲಿ ಜಾಗೃತಿ ಮೂಡಿಸಲು ರಾಜ್ಯದಲ್ಲಿರುವ ಅಂಬೇಡ್ಕರ್ ಮತ್ತು ಜಗಜೀವನ್‌ರಾಮ್ ಸಂಶೋಧನಾ ಕೇಂದ್ರಗಳಿಗೆ ಕನಿಷ್ಠ 50 ಲಕ್ಷ ರೂಪಾಯಿ ನೀಡಬೇಕು ಎಂದು ಕವಿ ಸಿದ್ದಲಿಂಗಯ್ಯ ಸಲಹೆ ನೀಡಿದರು.

ಮಾಜಿ ಶಾಸಕ, ಸಾಹಿತಿ ಎಲ್. ಹನುಮಂತಯ್ಯ ಮಾತನಾಡಿ, ಅಬಕಾರಿ ಇಲಾಖೆಯಿಂದ ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡುವಾಗ ಪರಿಶಿಷ್ಟರಿಗೆ ಮೀಸಲಾತಿ ದೊರೆಯುತ್ತಿಲ್ಲ. ರಾಜ್ಯದಲ್ಲಿ 3850 ಚಿಲ್ಲರೆ ಮದ್ಯದ ಅಂಗಡಿಗಳು ಹಾಗೂ 3500 ಬಾರ್ ಮತ್ತು ರೆಸ್ಟೋರೆಂಟ್‌ಗಳಿವೆ. ಇವುಗಳಲ್ಲಿ ಪರಿಶಿಷ್ಟರಿಗೆ ಎಷ್ಟು ನೀಡಲಾಗಿದೆ ಎನ್ನುವ ಮಾಹಿತಿ ಇಲ್ಲ. ಆದ್ದರಿಂದ ಪರಿಶಿಷ್ಟರಿಗೆ ಶೇಕಡಾ 22.75ರಷ್ಟು ಪರವಾನಗಿ ನೀಡಬೇಕು ಎಂದು ಸಲಹೆ ನೀಡಿದರು.

ಪರಿಶಿಷ್ಟರ ಪಾರಂಪರಿಕ ವೃತ್ತಿಗಳನ್ನು ಬದಲಾಯಿಸಬೇಕಾಗಿದೆ. ಕೈಗಾರಿಕಾ ಕ್ಷೇತ್ರದಲ್ಲಿ ದಲಿತರು ಹೆಚ್ಚು ತೊಡಗಿಸಿಕೊಳ್ಳಲು ಸರ್ಕಾರ ಪ್ರೋತ್ಸಾಹ ನೀಡಬೇಕು. ಗಣಿಗಾರಿಕೆ ಪರವಾನಗಿ ನೀಡುವಲ್ಲಿಯೂ ಮೀಸಲಾತಿ ನೀಡಬೇಕು ಹಾಗೂ ಖಾಸಗಿ ಕಾಲೇಜುಗಳಲ್ಲಿ ವೃತ್ತಿಪರ ಕೋರ್ಸ್‌ಗಳ ಅಧ್ಯಯನ ಮಾಡುವ ವಿದ್ಯಾರ್ಥಿಗಳ ಸಂಪೂರ್ಣ ಶುಲ್ಕವನ್ನು ಸರ್ಕಾರವೇ ಭರಿಸಬೇಕು ಎಂದು ಸಲಹೆ ನೀಡಿದರು.

ಇಲಾಖೆ ಸೌಲಭ್ಯಗಳನ್ನು ಒದಗಿಸುತ್ತಿದ್ದರೂ ಸದ್ವಿನಿಯೋಗವಾಗುತ್ತಿಲ್ಲ. ಸಭೆಯಲ್ಲಿನ ಅಭಿಪ್ರಾಯಗಳನ್ನು ಮುಖ್ಯಮಂತ್ರಿ ಅವರಿಗೆ ತಲುಪಿಸಿ ಬಜೆಟ್‌ನಲ್ಲಿ ಸೇರಿಸುವಂತೆ ಕೋರಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಆಂಜನೇಯ ಹೇಳಿದರು.

ರಾಷ್ಟ್ರೀಯ ಕಾನೂನು ಶಾಲೆ ಕುಲಪತಿ ಪ್ರೊ. ವೆಂಕಟರಾವ್, ಪ್ರೊ. ಜಾಫೆಟ್, ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನಮಟ್ಟು, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ನವೀನ್‌ರಾಜ್‌ಸಿಂಗ್ ಹಾಜರಿದ್ದರು.

ದಲಿತರು ವಿದ್ಯಾವಂತರಾಗುವುದನ್ನು ಸಮಾಜ ಇನ್ನೂ ಒಪ್ಪುತ್ತಿಲ್ಲ. ದಲಿತರನ್ನು ಸರಿಸಮಾನವಾಗಿ ನೋಡಲು ತಯಾರಿಲ್ಲ.
- ದೇವನೂರ ಮಹದೇವ .

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕ ಕೈಗಾರಿಕಾ ನೀತಿ ರೂಪಿಸಬೇಕು.
- ಎಲ್. ಹನುಮಂತಯ್ಯ.

ಸಮಾಜ ಕಲ್ಯಾಣ ಇಲಾಖೆಯನ್ನು ಅನುಮಾನಸ್ಪದವಾಗಿ ನೋಡಲಾಗುತ್ತಿದೆ. ಆದರೆ, ನಾವೆಲ್ಲರೂ ಇರುವುದು ಅಭಿವೃದ್ಧಿಗಾಗಿ.
- ಸಚಿವ ಎಚ್. ಆಂಜನೇಯ .

ದಲಿತರದ್ದು ಕೇವಲ ಸಾಮಾಜಿಕ, ಆರ್ಥಿಕ ಸಮಸ್ಯೆ ಅಲ್ಲ. ಮನಃಶಾಸ್ತ್ರೀಯ ಸಮಸ್ಯೆಯೂ ಇದೆ. ದಲಿತರಿಗೆ ಸ್ವಾಭಿಮಾನದ ಕೆಚ್ಚು ಮೂಡಬೇಕು.
-ಕವಿ ಸಿದ್ಧಲಿಂಗಯ್ಯ.

ಸಮಾಜ ಕಲ್ಯಾಣ ಇಲಾಖೆ ಯೋಜನೆಗಳ ಮೇಲೆ ನಿಗಾವಹಿಸಲು ಸಚಿವ ಸಂಪುಟದ ಉಪಸಮಿತಿ ರಚಿಸಬೇಕು.
-ಡಿ. ತಂಗರಾಜು .

ಅಲೆಮಾರಿಗಳಿಗೆ ವಸತಿ ಸೌಲಭ್ಯ ಹಾಗೂ ಪೌರಕಾರ್ಮಿಕರಿಗೆ ಆರ್ಥಿಕ ಭದ್ರತೆ ದೊರೆಯಬೇಕು.
-ಪ್ರೊ. ಎಸ್.ಜಿ. ಸಿದ್ದರಾಮಯ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT