ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುಮೇಹ ಮೆಟ್ಟಿ ನಿಂತಳು ಈ ದಿಟ್ಟೆ

Last Updated 7 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಸಾನಿಯಾ ಮಿರ್ಜಾ ಬಳಿಕ ಭಾರತ ಟೆನಿಸ್‌ನಲ್ಲಿ ಸಂಚಲನ ಮೂಡಿಸುತ್ತಿರುವ ಮತ್ತೊಂದು ಹೆಸರು ಕೈರಾ ಶ್ರಾಫ್. ಲಂಡನ್ ಒಲಿಂಪಿಕ್ಸ್‌ಗೆ ಪ್ರಕಟಿಸಲಾಗಿದ್ದ ಸಂಭವನೀಯರ ತಂಡದಲ್ಲಿದ್ದ ಇವರು ಸದ್ಯ ಭಾರತದ ಎರಡನೇ ರ‌್ಯಾಂಕ್‌ನ ಆಟಗಾರ್ತಿ. ಮಧುಮೇಹ ಗೆದ್ದು ಚಾಂಪಿಯನ್ ಆಗಿರುವ ಇವರು ತಮ್ಮ ಫಿಟ್‌ನೆಸ್‌ಗೆ ಸಂಬಂಧಿಸಿದ ಕೆಲ ವಿಷಯಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.           
  
`ನಾನು ಕ್ರೀಡಾ ಕ್ಷೇತ್ರ ಆಯ್ಕೆ ಮಾಡಿಕೊಳ್ಳದಿದ್ದರೆ ಇವತ್ತು ಆರೋಗ್ಯಕರ ಜೀವನ ನಡೆಸಲು ಸಾಧ್ಯವಾಗುತ್ತಿರಲಿಲ್ಲವೇನೋ?' ಎಂದೇ ಮಾತು ಆರಂಭಿಸಿದ್ದು ಕೈರಾ ಶ್ರಾಫ್. ಭಾರತದ ಟೆನಿಸ್‌ನಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿರುವ 19ರ ಹರೆಯದ ಈ ಹುಡುಗಿಯ ಹಿಂದಿನ ಕಥೆ ಮಾತ್ರ ನರಕ ಯಾತನೆಯದು.
ಏಕೆಂದರೆ ಕೈರಾ ಬಾಲ್ಯಾವ್ಯಸ್ಥೆಯ ಮಧುಮೇಹಕ್ಕೆ ಒಳಗಾಗಿದ್ದರು. ಆಗ ಅವರಿಗೆ ಕೇವಲ 12 ವರ್ಷ.

ಆದರೆ ಈ ಹುಡುಗಿ ಸುಮ್ಮನೆ ಕೂರಲಿಲ್ಲ. ಆ ಕಷ್ಟಗಳ ಸವಾಲು ಮೆಟ್ಟಿ ನಿಲ್ಲಲು ಆಯ್ಕೆ ಮಾಡಿಕೊಂಡಿದ್ದು ಟೆನಿಸ್ ಕ್ರೀಡೆಯನ್ನು.`ಟೆನಿಸ್ ಆಟದಿಂದ ನನ್ನ ಜೀವನ ಬದಲಾಗಿದೆ. ಮಧುಮೇಹ ಸಮಸ್ಯೆಯಿಂದ ಹೊರಬರಲು ಸಾಧ್ಯವಾಗಿದೆ. ಇದಕ್ಕೆ ಕಾರಣ ಯಶಸ್ವಿ ಫಿಟ್‌ನೆಸ್ ಮಂತ್ರ ಹಾಗೂ ಸೂಕ್ತ ಆಹಾರ ಸೇವನೆ. ಸಮರ್ಪಕ ಫಿಟ್‌ನೆಸ್ ಕಾಪಾಡಿಕೊಂಡರೆ ಯಾವುದೇ ಕಾಯಿಲೆ ದೂರವಾಗುತ್ತದೆ. ಕ್ಯಾನ್ಸರ್‌ನಿಂದ ಚೇತರಿಸಿಕೊಂಡು ಅದ್ಭುತ ಸಾಧನೆ ಮಾಡಿದವರು ನಮ್ಮ ಮುಂದೆ ಇಲ್ಲವೇ? ಇನ್ನು ಈ ಮಧುಮೇಹ ಯಾವ ಲೆಕ್ಕ' ಎನ್ನುತ್ತಾರೆ ಮುಂಬೈನ ಕೈರಾ.

ಕೈರಾ ಬೆಂಗಳೂರಿನ ಕೊತ್ತನೂರಿನಲ್ಲಿರುವ      `ಶ್ರೀನಾಥ್ ಟೆನಿಸ್ ಅಕಾಡೆಮಿ'ಯಲ್ಲಿ ಸದ್ಯ ತರಬೇತಿ ಪಡೆಯುತ್ತಿದ್ದಾರೆ. ಪೋಷಕರು ಮುಂಬೈನಲ್ಲಿ ನೆಲೆಸಿದ್ದಾರೆ. `ಮುಂಬೈ ವಾತಾವರಣ ನನ್ನ ಆರೋಗ್ಯದ ಮೇಲೆ ಪರಿಣಾಮ ಬೀರಿತು. ಈ ಕಾರಣ ನಾನು ಬೆಂಗಳೂರಿಗೆ ಬಂದು ತರಬೇತಿ ಪಡೆಯುತ್ತಿದ್ದೇನೆ. ಇಲ್ಲಿಯ ವಾತಾವರಣ ನನ್ನ ಸಮಸ್ಯೆಯನ್ನು ಕೊಂಚ ತಗ್ಗಿಸಿದೆ. ಅಭ್ಯಾಸ ನಡೆಸಲು ಹಾಗೂ ಸೂಕ್ತ ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳಲು ಇದರಿಂದ ಸಹಾಯವಾಗಿದೆ' ಎಂದು ಹೇಳುತ್ತಾರೆ.

ಕೈರಾ ಅಂತರ ರಾಷ್ಟ್ರೀಯ ಮಟ್ಟದ ಹಲವು ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ರಾಷ್ಟ್ರೀಯ ಚಾಂಪಿಯನ್ ಪಟ್ಟಕ್ಕೇರಿದ್ದಾರೆ. ಐಟಿಎಫ್ ಮಹಿಳಾ ಓಪನ್ ಟೆನಿಸ್ ಟೂರ್ನಿಯಲ್ಲಿ ಮಿಂಚಿದ್ದಾರೆ. ಆದರೆ ಮಧುಮೇಹದಿಂದ ಮುಕ್ತರಾಗಲು ಈ ಹುಡುಗಿ ಹಾಕಿದ ಪ್ರಯತ್ನ ಮಾತ್ರ ಅಷ್ಟಿಷ್ಟಲ್ಲ.

`ಡಯಾಬಿಟೀಸ್ ನಿಯಂತ್ರಣಕ್ಕಾಗಿ ನಾನು ಪ್ರತಿದಿನ ನಾಲ್ಕು ಬಾರಿ ಇನ್ಸುಲಿನ್ ಚುಚ್ಚಿಕೊಳ್ಳಬೇಕಿತ್ತು. ಸ್ವದೇಶ ಹಾಗೂ ವಿದೇಶದಲ್ಲಿ ವಿವಿಧೆಡೆ ನಡೆಯುವ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಪ್ರಯಾಣ ಮಾಡುತ್ತಿರಬೇಕಾಗುತ್ತದೆ. ಆದರೆ ಉತ್ತಮ ಫಿಟ್‌ನೆಸ್ ಹಾಗೂ ಸೂಕ್ತ ಆಹಾರ ಸೇವನಾ ಕ್ರಮ ನನ್ನ ಜೀವನವನ್ನು ಉಲ್ಲಸಿತವಾಗಿಟ್ಟಿದೆ' ಎಂದು ಕೈರಾ ನುಡಿಯುತ್ತಾರೆ.

ಫೆಡ್ ಕಪ್ ಹಾಗೂ ಲಂಡನ್ ಒಲಿಂಪಿಕ್ಸ್‌ಗೆ ತಂಡ ಆಯ್ಕೆ ಶಿಬಿರದಲ್ಲಿ ಪಾಲ್ಗೊಂಡ್ದ್ದಿದ ಅವರು ಸಾನಿಯಾ ಮಿರ್ಜಾ ಜೊತೆ ಡಬಲ್ಸ್‌ನಲ್ಲಿ ಆಡುವ ಅವಕಾಶವನ್ನು ಕೊಂಚದರಲ್ಲಿ ಕಳೆದುಕೊಂಡಿದ್ದರು.`ಫಿಟ್‌ನೆಸ್ ಸಂಬಂಧ ದೈಹಿಕ ಸಾಮರ್ಥ್ಯ ತರಬೇತುದಾರ ಹಾಗೂ ಕೋಚ್ ಹೇಳಿದ ವಿಧಾನ ಅನುಸರಿಸುತ್ತೇನೆ. ಅವರೇ ನನ್ನ ದೈನಂದಿನ ಕಾರ್ಯಕ್ರಮ ರೂಪಿಸುತ್ತಾರೆ. ವ್ಯಾಯಾಮದ ಅವಧಿ, ಅಭ್ಯಾಸ ಅವಧಿಯನ್ನು ನಿಗದಿಪಡಿಸುತ್ತಾರೆ. ಪ್ರತಿದಿನ ನಾನು ಅದನ್ನು ತಪ್ಪದೇ ಪಾಲಿಸುತ್ತೇನೆ' ಎಂಬ ಮಾಹಿತಿಯನ್ನು ಅವರು ನೀಡುತ್ತಾರೆ.

`ಪ್ರತಿನಿತ್ಯ ಎರಡೂವರೆ ಗಂಟೆ ಜಿಮ್‌ನಲ್ಲಿ ದೈಹಿಕ ಕಸರತ್ತು ನಡೆಸುತ್ತೇನೆ. ಪುಲ್ ಅಪ್ಸ್, ಚೆಸ್ಟ್ ಪ್ರೆಸ್ ಸೇರಿದಂತೆ ವಿವಿಧ ವರ್ಕ್‌ಔಟ್ ಮಾಡುತ್ತೇನೆ. ಅದಕ್ಕೂ ಮೊದಲು ಬಿರುಸಾಗಿ ನಡೆಯುತ್ತೇನೆ. ಲಘು ವ್ಯಾಯಾಮ ಮಾಡುತ್ತೇನೆ. ಮಧ್ಯೆ ಮಧ್ಯೆ ಹೆಚ್ಚು ವಿಶ್ರಾಂತಿ ಪಡೆಯುತ್ತೇನೆ. ನಿತ್ಯ ಒಟ್ಟು 4 ಗಂಟೆ ಕ್ರೀಡಾಂಗಣದಲ್ಲಿ ಟೆನಿಸ್ ಅಭ್ಯಾಸ ನಡೆಸುತ್ತೇನೆ. ಕೆಲವೊಮ್ಮೆ 5 ಗಂಟೆಗೆ ವಿಸ್ತರಿಸಿದ್ದೂ ಇದೆ' ಎಂದು ಅವರು ವಿವರಿಸುತ್ತಾರೆ.

`ಟೂರ್ನಿಗಳು ಇಲ್ಲದ್ದ್ದಿದ್ದಾಗಲೂ ಜಿಮ್‌ಗೆ ಹೋಗುವುದನ್ನು ನಿಲ್ಲಿಸುವುದಿಲ್ಲ. ಆದರೆ ಎಲ್ಲಾ ಕೆಲಸ ಮುಗಿದ ಮೇಲೆ ಪುಸ್ತಕಗಳನ್ನು ಓದುತ್ತೇನೆ. ಸಂಗೀತ ಆಲಿಸುತ್ತೇನೆ. ಇದು ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಸುಸ್ತನ್ನು ಕಡಿಮೆ ಮಾಡುತ್ತದೆ' ಎಂದು ಈ ಆಟಗಾರ್ತಿ ಭರವಸೆಯ ಮಾತುಗಳನ್ನು ಆಡುತ್ತಾರೆ.

ಪೋಷಕಾಂಶ ಹೆಚ್ಚಿರುವ ಆಹಾರ ಸೇವಿಸುತ್ತೇನೆ. ತರಬೇತಿ ವೇಳೆ ಕಾರ್ಬೊಹೈಡ್ರೇಟ್ ಹೆಚ್ಚಿರುವ ಆಹಾರಕ್ಕೆ ಒತ್ತು ನೀಡುತ್ತೇನೆ. ಹಣ್ಣು ಹಾಗೂ ತರಕಾರಿ ಹೆಚ್ಚು ತಿನ್ನುತ್ತೇನೆ. ಆದರೆ ಟೂರ್ನಿ ಇದ್ದಾಗ ಹೆಚ್ಚಿನ ಸಮಯ ನನ್ನ ಆಹಾರ ಕೇವಲ ಹಣ್ಣು ಸೇವನೆಯಲ್ಲಿಯೇ ಮುಗಿದು ಹೋಗುತ್ತದೆ. ನಾನು ಮಾಂಸಾಹಾರಿ. ಆದರೆ ತರಕಾರಿ ಮೇಲೆ ಹೆಚ್ಚು ಒಲವು ಹೊಂದಿದ್ದೇನೆ.
    -ಕೈರಾ ಶ್ರಾಫ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT