ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುಮೇಹದ ಜತೆ ಎಂಟು ದಶಕದ ನಂಟು!

Last Updated 17 ಜೂನ್ 2011, 19:30 IST
ಅಕ್ಷರ ಗಾತ್ರ

ಬಾಬ್ ಕ್ರೂಸ್ ಕೆಲ ದಿನಗಳ ಹಿಂದೆ 90ನೇ ಜನ್ಮ ದಿನ ಆಚರಿಸಿಕೊಂಡಾಗ ವೈದ್ಯಕೀಯ ಲೋಕದಲ್ಲಿ ಪುಳಕ. ಎಷ್ಟೋ ಜನರು ಶತಾಯುಷಿಗಳಾಗಿರುತ್ತಾರೆ; ಆದರೆ ಕ್ರೂಸ್ ತೊಂಬತ್ತನೇ ವರ್ಷಕ್ಕೆ ಕಾಲಿಟ್ಟಿದ್ದೇನು ವಿಶೇಷ?

ಆತನಿಗೆ 85 ವರ್ಷಗಳಿಂದಲೂ ಮಧುಮೇಹ (ಡಯಾಬಿಟಿಸ್) ಇದೆ! ದೀರ್ಘ ಕಾಲದಿಂದ ಮಧುಮೇಹದ ಜತೆಗೆ `ಜೀವನ~ ನಡೆಸಿದ ಮೊದಲ ವ್ಯಕ್ತಿ ಈತ.

ಮಧುಮೇಹದ ಬಗ್ಗೆ ಸಂಶೋಧನೆ ನಡೆಸುತ್ತಿರುವ ಅಮೆರಿಕದ ಬೋಸ್ಟನ್‌ನಲ್ಲಿರುವ ಪ್ರಸಿದ್ಧ ಸಂಶೋಧನಾ ಸಂಸ್ಥೆ ಜಾಸ್‌ಲಿನ್ ಡಯಾಬಿಟಿಕ್ ಸೆಂಟರ್, ಸ್ಯಾನ್ ಡಿಯಾಗೊ ನಗರದ ನಿವಾಸಿ ಬಾಬ್ ಕ್ರೂಸ್‌ನನ್ನು `ಡಯಾಬಿಟಿಸ್ ರೋಗದೊಂದಿಗೆ ಅಧಿಕ ವರ್ಷ ಜೀವಿಸಿದ ಮೊದಲ ಅಮೆರಿಕನ್~ ಎಂಬ ವಿಶೇಷಣ ನೀಡಿ, ಸನ್ಮಾನಿಸಿತು.

1921ರಲ್ಲಿ ಜನಿಸಿದ ಬಾಬ್ ಕ್ರೂಸ್ ಸಾಮಾನ್ಯ ವ್ಯಕ್ತಿಗಿಂತಲೂ ಹೆಚ್ಚಿನ ಆರೋಗ್ಯಕರ ಜೀವನ ನಡೆಸಿದ್ದಾರೆ. ಮಧುಮೇಹ ತನ್ನೊಂದಿಗೇ ಬಂದಿದೆ ಎಂಬುದನ್ನು ಅರಿತುಕೊಂಡೇ ಬದುಕು ನಡೆಸಿದ ಕ್ರೂಸ್, ಅದನ್ನು ಯಾವತ್ತೂ ಪೀಡೆ ಎಂದು ಭಾವಿಸಲಿಲ್ಲ ಎಂಬುದೇ ವಿಶೇಷ ಎಂದು ಕ್ರೂಸ್ ಕುಟುಂಬದ ವೈದ್ಯ ಡಾ. ಪೆಟ್ರಿಶಿಯಾವು ಬಣ್ಣಿಸಿದರು.

ಠಾಕುಠೀಕಾದ ಡ್ರೆಸ್, ಸುಗಂಧ ಪೂಸಿಕೊಂಡು ಜನ್ಮದಿನದ ಸಮಾರಂಭವನ್ನು `ಎಂಜಾಯ್~ ಮಾಡಿದ ಕ್ರೂಸ್ ಕೊನೆಗೆ ಹೇಳಿದ್ದು- ನಾನು ಹಠವಾದಿ. ಹಾಗೆಲ್ಲ ಜೀವನವನ್ನು ಬಿಟ್ಟು ಕೊಡುವವನಲ್ಲ!

ನಿಜ..! ಕ್ರೂಸ್ ಯಾವತ್ತೂ ತನ್ನ ಛಲ ಬಿಟ್ಟುಕೊಡಲಿಲ್ಲ. ಅದೇ ಆತನನ್ನು ಇಷ್ಟು ವರ್ಷಗಳ ಜೀವನ ಪಯಣದಲ್ಲಿ ಕಾಪಾಡಿದೆ.

ಕ್ರೂಸ್ ಬಳಲುತ್ತಿರುವುದು `ಟೈಪ್-1~ ಡಯಾಬಿಟೀಸ್‌ನಿಂದ. ಹೆಚ್ಚಿಗೆ ಇದು ಬಾಲ್ಯಾವಸ್ಥೆಯಿಂದಲೇ ಬರುವಂಥದು. ಈ ಬಗೆಯ ಮಧುಮೇಹ ಇರುವ ವ್ಯಕ್ತಿಯ ದೇಹ ನಿಗದಿತ ಪ್ರಮಾಣದಲ್ಲಿ ಇನ್ಸುಲಿನ್ ಅನ್ನು ಉತ್ಪಾದಿಸುವುದಿಲ್ಲ. ಇದಕ್ಕೆ ನಿಖರ ಕಾರಣಗಳು ಇನ್ನೂ ಗೊತ್ತಾಗಿಲ್ಲ. ಆದರೆ ವಂಶವಾಹಿ ಹಾಗೂ ದೇಹದ ರೋಗನಿರೋಧಕ ಶಕ್ತಿಯೇ ಇದಕ್ಕೆ ಮೂಲ ಕಾರಣ ಎಂದು ಹೇಳಲಾಗುತ್ತದೆ.

ಮಧುಮೇಹ ಎಂದ ಕೂಡಲೇ ಅದರ ಹಿಂದೆ ಹೃದಯರೋಗ, ಆಘಾತ, ಅಂಧತ್ವ, ಮೂತ್ರಪಿಂಡದ ತೊಂದರೆ ಸೇರಿದಂತೆ ಸಾಲುಸಾಲು ಆರೋಗ್ಯದ ತೊಂದರೆ ಕಾಣಿಸಿಕೊಳ್ಳುತ್ತವೆ. ಎಷ್ಟೋ ಜನರು ಡಯಾಬಿಟಿಸ್ ಬಂದಿದೆ ಎಂಬುದು ಗೊತ್ತಾಗುತ್ತಲೇ ಅಧೀರರಾಗಿ ಬಿಡುತ್ತಾರೆ.

ಇಲ್ಲ... ಹಾಗಲ್ಲ. ನೀವು ದೇಹವನ್ನು ಕಾರಿನ ಹಾಗೆ ನೋಡಿಕೊಳ್ಳಬೇಕು. ಅರ್ಥವಾಗಲಿಲ್ಲವೇ?! ಅಗತ್ಯವಾಗಿದ್ದಾಗ ಮಾತ್ರ ಯಂತ್ರಕ್ಕೆ ಇಂಧನ ತುಂಬುತ್ತೀರಲ್ಲವೇ? ಹಾಗೇ ದೇಹಕ್ಕೆ ಎಷ್ಟು, ಯಾವಾಗ ಅಗತ್ಯವಿದೆಯೋ ಆಗ ಮಾತ್ರ ಆಹಾರ ಕೊಡಬೇಕು” ಎಂದು ಚಟಾಕಿ ಹಾರಿಸುತ್ತಾರೆ,
 
ಮೆಕ್ಯಾನಿಕಲ್ ಎಂಜಿನಿಯರ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದ್ದ ಕ್ರೂಸ್. “ಮಧುಮೇಹವನ್ನು ನಿಯಂತ್ರಣದಲ್ಲಿಡಲು ಕಷ್ಟವೇನಿಲ್ಲ. ಕೆಲಸ ನಿರ್ವಹಿಸುವ ಮುನ್ನ ಅಗತ್ಯದಷ್ಟು ಪ್ರಮಾಣದ ಆಹಾರ ಸೇವಿಸಿದೆ. ಜೀವಿಸಲು ಊಟ ಮಾಡಿದೆನೇ ಹೊರತೂ, ನಾಲಿಗೆ ಚಪಲಕ್ಕಾಗಿ ಸದಾ ತಿನ್ನಲಿಲ್ಲ” ಎಂದು ಕ್ರೂಸ್ ಗುಟ್ಟು ರಟ್ಟು ಮಾಡಿದ!

ಹಿಂದಿನಂತೆ ಈಗ ಚಟುವಟಿಕೆ ಅಥವಾ ಕೆಲಸ ಮಾಡಲು ಆಗುತ್ತಿಲ್ಲ. ಹೀಗಾಗಿ ಹೆಚ್ಚಿನ ಆಹಾರ ಅನಗತ್ಯ ಎನ್ನುವ ಕ್ರೂಸ್, ಬೆಳಿಗ್ಗೆ ಉಪಹಾರಕ್ಕೆ ಸಣ್ಣ ಬಟ್ಟಲು ಕಾಳು ಸೇವಿಸುತ್ತಾರೆ. ಮಧ್ಯಾಹ್ನ ಊಟ ಇಲ್ಲ. ಇನ್ನು ರಾತ್ರಿ ಅಲ್ಪ ಮಾಂಸದ ಜತೆ ತರಕಾರಿ ಸೇವನೆ.

“ಮಧುಮೇಹದೊಂದಿಗೆ ಜೀವಿಸುತ್ತಿರುವ ಅತಿ ದೀರ್ಘ ವಯಸ್ಸಿನ ವ್ಯಕ್ತಿ ನಾನು ಎಂಬುದು ಗೊತ್ತಾದಾಗ ಅಚ್ಚರಿಯಾಯಿತು. ಏಕೆಂದರೆ, ನನ್ನಂತೆಯೇ ಇನ್ನೂ ಎಷ್ಟೋ ವೃದ್ಧರಿದ್ದಾರೆ ಅಂತ ಭಾವಿಸಿದ್ದೆ. ಇಷ್ಟು ದೀರ್ಘ ಕಾಲದವರೆಗೆ ಇದರೊಂದಿಗೆ ಬದುಕಿದ್ದು ನಾನೊಬ್ಬನೇ ಎಂಬುದು ನಿಜಕ್ಕೂ ಗೊತ್ತಿರಲಿಲ್ಲ” ಎಂದು ಕ್ರೂಸ್ ಮುಗುಳ್ನಗುತ್ತ ಹೇಳಿದರು.

ಮಧುಮೇಹದೊಂದಿಗೆ ಬದುಕುತ್ತಿರುವ ಗರಿಷ್ಠ ವಯಸ್ಸಿನವರನ್ನು ಜಾಸ್‌ಲಿನ್ ಡಯಾಬಿಟಿಕ್ ಸೆಂಟರ್ 1948ರಿಂದಲೂ ಸನ್ಮಾನಿಸುತ್ತ ಬಂದಿದೆ. 75 ವರ್ಷ ವಯಸ್ಸಿನ 34 ಜನರನ್ನು ಈ ರೀತಿ ಗೌರವಿಸಿದ ಸಂಸ್ಥೆ, “ಮಧುಮೇಹದ ಬಗ್ಗೆ ನಮಗೆ ಗೊತ್ತಿರುವುದಕ್ಕಿಂತ ಎಷ್ಟೋ ಪಾಲು ಕ್ರೂಸ್‌ಗೆ ತಿಳಿದಿದೆ!” ಎಂದು ಉದ್ಗರಿಸಿದೆ.

ಅದಿನ್ನೂ ಇನ್ಸುಲಿನ್ ಸಂಶೋಧನೆಯಾಗಿರದ ಕಾಲ. ಕ್ರೂಸ್ ತಮ್ಮ ಜಾಕಿ ಕೂಡ ಮಧುಮೇಹದಿಂದ ಬಳಲುತ್ತಿದ್ದ. ಆತನಿಗೆ ಈ ರೋಗವಿದೆ ಎಂದು ಪತ್ತೆಯಾದ ಒಂದು ವರ್ಷದ ಬಳಿಕ ಮೃತಪಟ್ಟಿದ್ದ. ಇನ್ಸುಲಿನ್ ಸಂಶೋಧನೆಗೂ ಮುನ್ನ ಪರಿಸ್ಥಿತಿ ಹೇಗಿತ್ತೆಂದರೆ, ಮಧುಮೇಹ ಪತ್ತೆಯಾದ ಕೂಡಲೇ ಆ ವ್ಯಕ್ತಿಗೆ ಮರಣದಂಡನೆ ವಿಧಿಸಿದಂತಾಗುತ್ತಿತ್ತು!

ಜಾಕಿ ಸಾಯುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಅದೂ ಹಸಿವಿನಿಂದ..! ಹೇಗೆಂದರೆ, ಊಟ ಮಾಡಿದರೂ ಅದರಿಂದೇನೂ ಉಪಯೋಗವಿಲ್ಲ. ಆಹಾರ ಶಕ್ತಿಯಾಗಿ ಪರಿವರ್ತನೆಯಾಗುವುದಿಲ್ಲವಲ್ಲ? ಹಾಗಾಗಿ ಊಟ ಮಾಡಿದರೂ ಹಸಿವೆಯಿಂದಲೇ ಆತ ಮೃತಪಟ್ಟ”- ಅಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಕ್ರೂಸ್.

ಕೆನಡಾದ ವಿಜ್ಞಾನಿಗಳಾದ ಫ್ರೆಡರಿಕ್ ಬಾಂಟಿಂಗ್ ಹಾಗೂ ಜಾನ್ ಮೆಕ್ಲಾಡ್ ಸತತ ಹಲವು ಪ್ರಯೋಗಗಳ ಬಳಿಕ ಕಂಡುಹಿಡಿದಿದ್ದು ಇನ್ಸುಲಿನ್ ಅನ್ನು. ಮೃತ ಹಸುವಿನ ಮೇದೋಜೀರಕ ಗ್ರಂಥಿಯನ್ನು ಕೊಯ್ದು ತೆಗೆದು, ಚೆನ್ನಾಗಿ ಅರೆದು ಅದಕ್ಕೆ ಉಪ್ಪು ಹಾಗೂ ನೀರು ಸೇರಿಸಿದರು.

ಇದೇ ಇನ್ಸುಲಿನ್. ಇದನ್ನು ಮಾನವರ ಮೇಲೆ ಪ್ರಯೋಗಿಸುವ ಪ್ರಕ್ರಿಯೆ 1922ರಲ್ಲಿ ಆರಂಭವಾಯಿತು. ಈ ಸಂಶೋಧನೆ 1923ರಲ್ಲಿ ನೊಬೆಲ್ ಪುರಸ್ಕಾರಕ್ಕೆ ಪಾತ್ರವಾಯಿತು.
ಡಯಾಬಿಟಿಸ್‌ನಿಂದಾಗಿ ಒಬ್ಬ ಮಗನನ್ನು ಕಳೆದುಕೊಂಡಿದ್ದ ಕ್ರೂಸ್‌ನ ತಾಯಿ, ಇನ್ನೊಬ್ಬನನ್ನು ಕಳೆದುಕೊಳ್ಳಲು ಸಿದ್ಧಳಿರಲಿಲ್ಲ.

ಹೀಗಾಗಿ ಆರು ವರ್ಷ ಪ್ರಾಯದ ಮಗು ಬಾಬ್ ಕ್ರೂಸ್‌ಗೆ ಕರಾರುವಾಕ್ಕು ತೂಕದ ಆಹಾರ ಕೊಡುತ್ತಿದ್ದಳು. ಪ್ರತಿಯೊಂದು ಪದಾರ್ಥವನ್ನು ತೂಕ ಮಾಡಿ ಊಟಕ್ಕೆ ನೀಡುತ್ತಿದ್ದಳು. ಇಷ್ಟೇ ಅಲ್ಲ; ಪ್ರತಿ ಊಟದ ನಂತರ ಕೈ ಅಥವಾ ಕಾಲಿಗೆ ಇನ್ಸುಲಿನ್ ಇಂಜೆಕ್ಷನ್ ಕೊಡುತ್ತಿದ್ದಳು.

ಆವತ್ತಿನ ಸ್ಥಿತಿಯಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಎಷ್ಟೆಂಬುದನ್ನು ಖಚಿತವಾಗಿ ಹೇಳಲು ಕೂಡ ಆಗುತ್ತಿರಲಿಲ್ಲ. ಇದಕ್ಕಾಗಿ ಕ್ರೂಸ್ ತನ್ನ ಮೂತ್ರವನ್ನು ಪ್ರಣಾಳಿಕೆಯಲ್ಲಿ ಕುದಿಸುತ್ತಿದ್ದ. ನಂತರ ಅದರಲ್ಲಿ ಮಾತ್ರೆಯೊಂದನ್ನು ಹಾಕಿ, ಅದು ಯಾವ ಬಣ್ಣ ಪಡೆಯುತ್ತಿದೆ ಎಂಬುದರ ಮೇಲೆ ಲೆಕ್ಕಾಚಾರ ಹಾಕಬೇಕಿತ್ತು.

1978ರ ಬಳಿಕ ಕ್ರೂಸ್ ಇನ್ಸುಲಿನ್ ಪಂಪ್ ಮೇಲೆ ಅವಲಂಬಿತರಾದರು. ಅಂದಿನಿಂದ ಈವರೆಗೆ ಅವರೇ ತಮಗೆ ಅಗತ್ಯದಷ್ಟು ಪ್ರಮಾಣದ ಇನ್ಸುಲಿನ್ ಪಡೆಯುತ್ತಿದ್ದಾರೆ. “ನನ್ನ ತಂದೆ ಯಾವತ್ತಿಗೂ ತಮ್ಮ ಮಂಚದ ಬಳಿ ಸಕ್ಕರೆ ತುಂಡುಗಳನ್ನು ಇಟ್ಟುಕೊಂಡಿರುತ್ತಾರೆ.

ದಿಢೀರ್ ಅಸ್ವಸ್ಥರಾದಾಗ ಅವುಗಳನ್ನು ತಿನ್ನುತ್ತಾರೆ. ಆ ಮೂಲಕ ತಮ್ಮ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವಲ್ಲಿ ಸಫಲರಾಗಿದ್ದಾರೆ” ಎನ್ನುತ್ತಾನೆ, ಪುತ್ರ ಟಾಮ್ ಕ್ರೂಸ್. “ಇಷ್ಟು ದೀರ್ಘ ಅವಧಿಯವರೆಗೂ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಬಂದಿರುವ ಅವರ ಜೀವನ ಕ್ರಮ ಕಂಡು ಬೆರಗಾಗಿದ್ದೇನೆ. ಇದಕ್ಕೆಲ್ಲ ಅಗಾಧ ಮನೋಬಲ ಕೂಡ ಬೇಕು ಎಂಬುದು ನನ್ನ ಅನಿಸಿಕೆ” ಎನ್ನುತ್ತಾನೆ ಟಾಮ್.

ರಕ್ತದಲ್ಲಿ ಸಕ್ಕರೆ ಅಂಶವನ್ನು ಪತ್ತೆಹಚ್ಚುವ ಈಗಿನ ವಿಧಾನ ವೈದ್ಯಕೀಯ ಕ್ಷೇತ್ರದಲ್ಲಿ ಮಾಡಲಾದ ಮಹಾನ್ ಸಾಧನೆ ಎನ್ನುವ ಕ್ರೂಸ್, ಇದರಿಂದ ವ್ಯಕ್ತಿಯೊಬ್ಬ ಕೆಲವೇ ಕ್ಷಣಗಳಲ್ಲಿ ಸಕ್ಕರೆ ಪ್ರಮಾಣವನ್ನು ನಿಖರವಾಗಿ ಗೊತ್ತು ಮಾಡಿಕೊಳ್ಳಬಹುದು. ಅವತ್ತಿನ ಸ್ಥಿತಿಗೆ ಹೋಲಿಸಿದರೆ ಇದು ಕ್ರಾಂತಿಕಾರಕ ಸಾಧನೆ ಎಂದು ಬಣ್ಣಿಸುತ್ತಾರೆ.

ಮೊದಲ ಬಾರಿ    ಡಾ. ಪೆಟ್ರಿಶಿಯಾವು ಅವರ ಆಸ್ಪತ್ರೆಗೆ ಬಂದಿದ್ದ ಕ್ರೂಸ್, ತಮ್ಮಂದಿಗೆ ಕಾಗದಪತ್ರಗಳ ದೊಡ್ಡ ಕಂತೆಯನ್ನೇ ಹೊತ್ತು ತಂದಿದ್ದರು. ಅವುಗಳಲ್ಲಿ ಪ್ರತಿ ತಿಂಗಳು ಕ್ರೂಸ್‌ನ ಮಧುಮೇಹದ ವಿವರಗಳಿದ್ದವು. ಹಲವು ನಕ್ಷೆಗಳು, ಗ್ರಾಫ್‌ಗಳು, ಇನ್ಸುಲಿನ್ ತೆಗೆದುಕೊಳ್ಳುವ ಹಾಗೂ ಸಕ್ಕರೆ ಪ್ರಮಾಣದ ಮಾಹಿತಿಗಳಿದ್ದವು.
 
ಇದೇ ಕ್ರೂಸ್‌ನ ಆರೋಗ್ಯಕ್ಕೆ ಮುಖ್ಯ ಕಾರಣ. ತನ್ನೊಂದಿಗೆ ಇರುವ ಮಧುಮೇಹವನ್ನು ರೋಗ ಎಂದು ಪರಿಗಣಿಸದೇ ಅದರ ವಿವರಗಳನ್ನೆಲ್ಲ ಕಲೆ ಹಾಕಿ, ಅದನ್ನು ನಿಯಂತ್ರಣದಲ್ಲಿ ಇಡಲು ಬಯಸಿದ್ದರು. ಹಾಗೂ ಅವರು ಅದರಲ್ಲಿ ಸಫಲರಾಗಿದ್ದರು” ಎನ್ನುತ್ತಾರೆ ಡಾ. ವು.

ಡಾ. ಪೆಟ್ರಿಶಿಯಾ ವು ಹಲವು ವರ್ಷಗಳಿಂದಲೂ ಕ್ರೂಸ್‌ಗೆ ಸಲಹೆ ನೀಡಲು ಅವರ ಮನೆಗೆ ಬಂದು ಹೋಗುತ್ತಿರುತ್ತಾರೆ. “ಮಧುಮೇಹ ಎಂದರೆ ಗಾಬರಿ ಬೀಳುವವರೇ ಹೆಚ್ಚು. ಆದರೆ ಅದನ್ನು ಹೇಗೆ ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು? ಹತ್ತಾರು ವರ್ಷಗಳ ಕಾಲ ಸುಲಭವಾಗಿ ಬದುಕಬಹುದು ಎಂಬುದನ್ನು ಕ್ರೂಸ್ ಸಾಬೀತುಪಡಿಸಿದ್ದಾರೆ.
 
ಈ ಕಾಯಿಲೆಗೆ ಸಂಬಂಧಿಸಿದಂತೆ ಹೊಸ ಹೊಸ ಸಂಶೋಧನೆ ನಡೆದು, ಯಂತ್ರಗಳು ಬಂದಂತೆಲ್ಲ ನಾನು ಕ್ರೂಸ್‌ಗೆ ಹೇಳುತ್ತಲೇ ಇರುತ್ತೇನೆ. ಆರೈಕೆ- ಚಿಕಿತ್ಸೆಗೆ ಸಂಬಂಧಿಸಿದಂತೆ ಕೆಲವು ಸಲ ಏನೋ ಮುನ್ನೆಚ್ಚರಿಕೆ ಹೇಳಲು ಹೋದಾಗ, `ನೀನು ಜನಿಸುವುದಕ್ಕೂ ಮುನ್ನವೇ ಇದನ್ನು ನಾನು ಅನುಭವಿಸಿದ್ದೇನೆ~ ಎಂದು ಕ್ರೂಸ್ ನನಗೆ ನೆನಪಿಸುತ್ತಾರೆ” ಎಂದು ನಗುತ್ತಾರೆ ಡಾ. ವು.
(ಆಧಾರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT