ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯ ಏಷ್ಯಾದಲ್ಲೆಲ್ಲಾ ಕ್ರಾಂತಿಯ ಕಿಡಿ

Last Updated 12 ಫೆಬ್ರುವರಿ 2011, 10:50 IST
ಅಕ್ಷರ ಗಾತ್ರ

 
ಸನಾ  (ಐಎಎನ್ಎಸ್): ಅತ್ತ ಕೈರೋದಲ್ಲಿ ಈಜಿಪ್ಟ್ ಜನತೆ ವಿಜಯೋತ್ಸಾಹದಲ್ಲಿ ತೊಡಗಿದ್ದರೆ, ಇತ್ತ ಯೆಮನ್ ನಲ್ಲಿ ಪ್ರಭುತ್ಪದ ವಿರುದ್ದ ಜನತೆ ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ.

1978ರಿಂದ ಅಧಿಕಾರದಲ್ಲಿರುವ ಅಧ್ಯಕ್ಷ ಅಲಿ ಅಬ್ದುಲ್ಲಾ ಸಲ್ಹೆ ಅವರು ಅಧಿಕಾರ ತ್ಯಜಿಸಬೇಕು ಎಂದು ಒತ್ತಾಯಿಸಿ ಸಹಸ್ರಾರು ಮಂದಿ ಶನಿವಾರ ದೇಶದ ದಕ್ಷಿಣ ಭಾಗದ ಆಡೆನ್ ನಗರ ಹಾಗೂ ಮ್ಯಾನ್ ಸ್ವಾರಗಳಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದರು.

ಇದೀಗ ಆಡೆನ್ ನಗರ ಸೇರಿದಂತೆ ದೇಶದ ದಕ್ಷಿಣ ಭಾಗಕ್ಕೆಲ್ಲಾ ಪ್ರತಿಭಟನೆಯ ಕಾವು ವಿಸ್ತರಿಸುತ್ತಿದ್ದು, ಅಧ್ಯಕ್ಷ ಅಲಿ ಅಬ್ದುಲ್ಲಾ ಸಲ್ಹೆ ಅವರಿಗೆ ತಲೆನೋವಾಗಿ ಪರಿಣಮಿಸಿದೆ.

ಟ್ಯುನಿಷೀಯಾ, ಈಜಿಪ್ಟ್ ನಂತರ ಯೆಮನ್ ಸಾಮ್ರಾಜ್ಯಷಾಹಿ ಶಕ್ತಿಗಳಿಂದ ಬಿಡುಗಡೆ ಹೊಂದಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

ಪ್ರತ್ಯೇಕತಾವಾದಿ ನಾಯಕರು ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಕೇವಲ ರಾಜಕೀಯ ಕ್ರಾಂತಿ ಮಾತ್ರವಲ್ಲ ದೇಶದಲ್ಲಿ ವ್ಯಾಪಕವಾಗಿರುವ ಭ್ರಷ್ಟಾಚಾರವನ್ನು ಕೊನೆಗಾಣಿಸುವುದು ಚಳವಳಿಯ ಬಹು ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ ಎಂದು ನಾಯಕರು ತಿಳಿಸಿದ್ದಾರೆ.

ಇದೇ ವೇಳೆ ಉತ್ತರ ಯೆಮನ್ ನಿಂದ ದಕ್ಷಿಣ ಯೆಮನ್ ನನ್ನು ಪ್ರತ್ಯೇಕವಾಗಿಸುವ ಬೇಡಿಕೆಯನ್ನೂ ಸಹ ದಕ್ಷಿಣ ಯೆಮನ್ ಅವರು ಪ್ರಬಲವಾಗಿ ಮುಂದಿಟ್ಟಿದ್ದಾರೆ.

ಅಮೆರಿಕ ಒಂದು ಪ್ರಜಾಪ್ರಭುತ್ಪವಾದಿ ರಾಷ್ಟ್ರ. ಆದರೆ ಅರಬ್ ರಾಷ್ಟ್ರಗಳ ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿಕ ಸದಾ ದಮನಕಾರರ ಪರವಾಗಿದೆ ಎಂದು ಪ್ರತಿಭಟನಾಕಾರರು ವ್ಯಾಖ್ಯಾನಿಸಿದ್ದಾರೆ.

ಮಧ್ಯ ಏಷ್ಯಾದಲ್ಲಿ ವ್ಯಾಪಿಸುತ್ತಿರುವ ಕ್ರಾಂತಿಯಿಂದ ಹಾಗೂ ದೇಶದಲ್ಲಿ ತೀವ್ರಗೊಳ್ಳುತ್ತಿರುವ ಪ್ರತಿಭಟನೆಗಳಿಂದ ಕಂಗೆಟ್ಟಿರುವ ಯೆಮನ್ ಅಧ್ಯಕ್ಷ ಅಲಿ ಅಬ್ದುಲ್ಲಾ ಸಲ್ಹೆ ಅವರು 2013ರಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ.

ಟ್ಯುನೇಷಿಯಾದಲ್ಲಿ ಮೊದಲಿಗೆ ಆರಂಭವಾದ ಕ್ರಾಂತಿ ಅಲ್ಲಿ ಯಶಕಂಡಿತು. ಮಧ್ಯ ಜನವರಿಯಲ್ಲಿ ತೀವ್ರ ಸ್ವರೂಪ ಪಡೆದ ಚಳವಳಿಯನ್ನು ನಿಯಂತ್ರಿಸಲಾಗದೆ ಇಲ್ಲಿನ ಅಧ್ಯಕ್ಷ ಸಹ ದೇಶ ಬಿಟ್ಟು ಪಲಾಯನಗೈದ. ನಂತರ ತಾತ್ಕಾಲಿಕ ಸರ್ಕಾರ ರಚನೆಗೊಂಡು ಮೊದಲ ನ್ಯಾಯಸಮ್ಮತ ಚುನಾವಣೆಯತ್ತ ದೇಶ ಮುಖ ಮಾಡಿದೆ.

ನಂತರ ಕ್ರಾಂತಿ ಕಿಡಿ ಈಜಿಪ್ಟ್ ಗೆ ವ್ಯಾಪಿಸಿ ಅಧ್ಯಕ್ಷ ಹೋಸ್ನಿ ಮುಬಾರಕ್ ಸಹ ಪಲಾಯನಗೈಯಬೇಕಾಯಿತು.

ಇವುಗಳಿಂದ ಎಚ್ಚೆತ್ತುಗೊಂಡಿರುವ ಜೋರ್ಡಾನ್ ದೊರೆ 2 ನೇ ಅಬ್ದುಲ್ಲಾ ಮಂಗಳವಾರವೇ ತನ್ನ ಸಚಿವ ಸಂಪುಟವನ್ನು ವಿಸರ್ಜಿಸಿ, ಹೊಸ ಸರ್ಕಾರ ರಚನೆಗೆ ಕಸರತ್ತು ಆರಂಭಿಸಿದ್ದಾರೆ. ಹೊಸ ಸರ್ಕಾರವು ಸುಧಾರಣೆಗಳನ್ನು ಜಾರಿಗೆ ತರಲಿದೆ ಎಂದು ಅವರು ಜನತೆಗೆ ಭರವಸೆ ನೀಡಿದ್ದಾರೆ.

ಅತ್ತ ಸಿರಿಯಾದಲ್ಲಿ ಇದುವರೆಗೂ ಅಂತಹ ಭಾರಿ ಪ್ರತಿಭಟನೆಗಳು ನಡೆದಿಲ್ಲವಾದರೂ ಪ್ರಭುತ್ವದ ವಿರುದ್ದದ ದನಿಗಳು ಅಲ್ಲಲ್ಲಿ ಕೇಳಿಬರುತ್ತಿವೆ. ಇಲ್ಲಿನ ಅಧ್ಯಕ್ಷ ಬಷರ್ ಅಲ್-ಅಸಾದ್ ಅವರ ಸರ್ಕಾರವೂ ಕೂಡ ದಮನಕಾರಿಯಾಗಿದ್ದು, ಮಾಧ್ಯಮಗಳ ಮೇಲಿನ ನಿರ್ಬಂಧ ಸೇರಿದಂತೆ ಹಲವು ನಿರಂಕುಶ ಅಧಿಕಾರವನ್ನು ಅವರು ಚಲಾಯಿಸುತ್ತಿದ್ದಾರೆ. ಇದಕ್ಕೆ ವಿರುದ್ದದ ದನಿಗಳು ~ಫೇಸ್ ಬುಕ್~ ನಲ್ಲಿ ಗಟ್ಟಿಯಾಗಿಯೇ ಕೇಳಿ ಬರತೊಡಗಿದಾಗಲೇ ಎಚ್ಚೆತ್ತ ಸರ್ಕಾರ ~ಫೇಸ್ ಬುಕ್~ ತಾಣವನ್ನೇ ತಾಂತ್ರಿಕವಾಗಿ ನಿಷೇಧಿಸಿದೆ.

ಅತ್ತ ಸೂಡಾನ್ ನಲ್ಲೂ ಪ್ರತಿಭಟನೆ ಕಿಡಿ ವ್ಯಾಪಿಸತೊಡಗಿದ್ದು ರಾಜಧಾನಿಯಲ್ಲಿ ಸೇರಿದ್ದ ನೂರಾರು ಪ್ರತಿಭಟನಾಕಾರರ ಮೇಲೆ ಇಲ್ಲಿನ ಅಧ್ಯಕ್ಷ ಒಮರ್ ಅಲ್-ಬಷೀರ್ ಅವರು ಕಟ್ಟುನಿಟ್ಟಿನ ಕ್ರಮ ಜರುಗಿಸಿ ದಮನಿಸಲು ಯತ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT