ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯ ಕರ್ನಾಟಕ ಜಿಲ್ಲೆ ತ್ರಿಶಂಕು ಸ್ಥಿತಿ

Last Updated 7 ಜೂನ್ 2012, 19:30 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಸಂಪನ್ಮೂಲ ಸಾಕಷ್ಟಿದ್ದರೂ ಕೈಗಾರಿಕಾ ಕ್ಷೇತ್ರ ಆರಕ್ಕೇರದ ಮೂರಕ್ಕಿಳಿಯದ ಸ್ಥಿತಿಯಲ್ಲಿದೆ.

ಇಲ್ಲಿನ ವೈರುಧ್ಯ ಪರಿಸ್ಥಿತಿ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ, ರಾಜಕೀಯ ತಟಸ್ಥ ನಿಲುವು... ಹೀಗೆ ಹಲವಾರು ಕಾರಣಗಳಿಂದ ಜಿಲ್ಲೆಗೆ ಹೊಸ ಹೂಡಿಕೆದಾರರು ಬರಲು ಹಿಂದೇಟು ಹಾಕುತ್ತಿದ್ದಾರೆ.

`ಕರ್ನಾಟಕದ ಮ್ಯಾಂಚೆಸ್ಟರ್~ ಎಂಬ  ಖ್ಯಾತಿಗೆ ಕಾರಣವಾಗಿದ್ದ ಹತ್ತಿಮಿಲ್‌ಗಳಿದ್ದ ದಾವಣಗೆರೆಯಲ್ಲಿ ಈಗ ಅದೆಲ್ಲವೂ ಇತಿಹಾಸ. ಇಂದು ಕೇವಲ ಮೂರು ಮಿಲ್‌ಗಳು ಉಸಿರಾಡುತ್ತಿವೆ.

ಸ್ವಲ್ಪಮಟ್ಟಿಗೆ ಮಿಲ್ ಮಾಲೀಕರ ಕಠೋರ ನಿಲುವು,  ಹೋರಾಟದ ಹೆಸರಿನ ಕಾರ್ಮಿಕ ಚಳವಳಿ ಬಹುತೇಕ ಮಿಲ್‌ಗಳು ಬಾಗಿಲೆಳೆಯಲು ಕಾರಣವಾಯಿತು. ಅದರ ಬೆನ್ನಲ್ಲೇ ಕಾರ್ಮಿಕ ಹೋರಾಟದ ಧ್ವನಿಯೂ ಕ್ಷೀಣವಾಯಿತು. ಆದರೆ, ಇತಿಹಾಸದ ನೆನಪಿನಿಂದ ಹೊರಬರದ ಉದ್ಯಮಿಗಳು ಜಿಲ್ಲೆಯಲ್ಲಿ ಹೂಡಿಕೆ ನಡೆಸಲು ಮುಂದೆ ಬರುತ್ತಿಲ್ಲ.

ಜಿಲ್ಲಾ ಕೇಂದ್ರದಿಂದ 15 ಕಿ.ಮೀ ದೂರದ ಹಾವೇರಿ ಜಿಲ್ಲೆಯ ಕುಮಾರಪಟ್ಟಣಂನಿಂದ ಒಂದಿಷ್ಟು ಕೈಗಾರಿಕಾ ಘಟಕಗಳು ಉಸಿರಾಟ ಆರಂಭಿಸುತ್ತವೆ.

ಆದರೆ, ಜಿಲ್ಲೆಯಲ್ಲಿ ಮಾತ್ರ ಅವು ಇಲ್ಲ. ಇಲ್ಲಿ ಮುಖ್ಯವಾಗಿ ಭೂಮಿ ಸಿಗುತ್ತಿಲ್ಲ. ಭೂಸ್ವಾಧೀನದ ಸಣ್ಣ ಸುಳಿವು ಸಿಕ್ಕರೂ ರೈತ ಹೋರಾಟಗಳು ದಿಢೀರ್ ಹುಟ್ಟಿಕೊಳ್ಳುತ್ತವೆ.

ಕಳೆದ ಮೂರು ವರ್ಷಗಳಿಂದ ಕರೂರು ಕೈಗಾರಿಕಾ ಪ್ರದೇಶ, ಬಾತಿ ಸಮೀಪ 180 ಎಕರೆ ವಸತಿಗೆ, ಹೊನ್ನೂರು ಗೊಲ್ಲರಹಟ್ಟಿ ಬಳಿ ಕೈಗಾರಿಕೆ, ವಿಮಾನ ನಿಲ್ದಾಣಕ್ಕಾಗಿ ಭೂಸ್ವಾಧೀನಕ್ಕೆ ಮುಂದಾದಾಗಲೆಲ್ಲಾ ರೈತಶಕ್ತಿ ಸಿಡಿದೆದ್ದ ಪರಿಣಾಮ ಯಾವ ಹೊಸ ಕೈಗಾರಿಕೆಯೂ ಇಲ್ಲಿ ತಲೆಯೆತ್ತಿಲ್ಲ.

ರಸಗೊಬ್ಬರ ಘಟಕ ಸ್ಥಾಪನೆಗೂ ರೈತರಿಂದ ವಿರೋಧ ವ್ಯಕ್ತವಾಗಿದ್ದ ಇಲ್ಲಿ ಉಲ್ಲೇಖಾರ್ಹ.
ಜಿಲ್ಲೆಗೆ ಬರಬೇಕಾಗಿದ್ದ ಮೆಕ್ಕೆಜೋಳ ಸಂಸ್ಕರಣಾ ಘಟಕ ಶಿವಮೊಗ್ಗಕ್ಕೆ ಹೋಯಿತು. ಇದೀಗ ಹರಪನಹಳ್ಳಿ ತಾಲ್ಲೂಕು ದುಗ್ಗಾವತಿ ಬಳಿ ಶಾಮನೂರು ಸಮೂಹ ಇಂಥ ಘಟಕವೊಂದನ್ನು ಸ್ಥಾಪಿಸುತ್ತಿದೆ.

ಸದ್ಯ ಜಿಲ್ಲೆಯಲ್ಲಿ ಮೂರು ಹತ್ತಿ ಗಿರಣಿ ಸೇರಿ ಬೃಹತ್ ಕೈಗಾರಿಕಾ ಘಟಕಗಳು ಕೇವಲ 10 ಇವೆ. ಅದರಲ್ಲಿ ಸಹಕಾರ ಕ್ಷೇತ್ರದ ಭದ್ರಾ ಸಹಕಾರ ಸಕ್ಕರೆ ಕಾರ್ಖಾನೆ ಮುಚ್ಚಿದೆ. ಎರಡು ಸಕ್ಕರೆ ಕಾರ್ಖಾನೆ, 1 ಡಿಸ್ಟಿಲರಿ ಘಟಕ, ಗ್ರೀನ್ ಆಗ್ರೋ ಪ್ಯಾಕ್ (ಗರ್ಕಿನ್ಸ್ ಸಂಸ್ಕರಣೆ), ಉಕ್ಕು ಉದ್ಯಮ, ಬಯೋ ಕೆಮಿಕಲ್ ಉದ್ಯಮ, ಅಕ್ಕಿ ಗಿರಣಿ ಇವೆ.

ಪ್ರಸಕ್ತ ವರ್ಷ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಂಬಂಧಿಸಿದಂತೆ 68 ಪ್ರಸ್ತಾವನೆಗಳು ಬಂದಿವೆ. ಅದರಲ್ಲಿ ಸಿಎಫ್‌ಎಲ್ ಬಲ್ಬ್ ಘಟಕ(ರೂ 2 ಕೋಟಿ ), ರಿಫೈನ್ಡ್ ಎಣ್ಣೆ ಮತ್ತು ವಿದ್ಯುತ್ ಘಟಕ (ರೂ 26 ಕೋಟಿ), ಮರ ಮತ್ತು ಸ್ಟೀಲ್‌ನ ಪೀಠೋಪಕರಣ ಘಟಕ(ರೂ 10 ಕೋಟಿ), ಕಾಟನ್ ಜಿನ್ನಿಂಗ್ ಆ್ಯಂಡ್ ಪ್ರೆಸ್ಸಿಂಗ್ ಘಟಕ (ರೂ 6 ಕೋಟಿ)  ಪ್ರಮುಖವಾದವು.

ಇನ್ನು ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಬರುವ ಹೊಸ ಪ್ರಸ್ತಾವಗಳನ್ನು ಕಾದು ನೋಡಬೇಕು ಎನ್ನುತ್ತಾರೆ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಉಪ ನಿರ್ದೇಶಕ ಮಹಾದೇವಪ್ಪ.

ಜಿಲ್ಲೆಯಲ್ಲಿ ಹೂಡಿಕೆ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಒಂದು ತಿಂಗಳ ಹಿಂದೆ ಉದ್ಯಮಿಗಳ ಸಭೆಯನ್ನೂ ನಡೆಸಲಾಗಿದೆ. ಹೊಸ ಉದ್ಯಮಗಳನ್ನು ಜಿಲ್ಲೆಗೆ ತರುವ ಪ್ರಯತ್ನ ನಡೆದಿದೆ. ಅದು ತನ್ನದೇ ಆದ ಸಮಯ ತೆಗೆದುಕೊಳ್ಳುತ್ತದೆ ಎಂದು ಉದ್ಯಮಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಅಧ್ಯಕ್ಷ ಕಾಸಲ್ ಎಸ್. ವಿಠ್ಠಲ್ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT