ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯ ಕರ್ನಾಟಕದಲ್ಲಿ ಚಿನ್ನ, ಪ್ಲಾಟಿನಂ ನಿಕ್ಷೇಪಗಳು ಪತ್ತೆ

Last Updated 30 ನವೆಂಬರ್ 2011, 19:30 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಚಿನ್ನ ಹಾಗೂ ಪ್ಲಾಟಿನಂ ನಿಕ್ಷೇಪವಿರುವ ಸ್ಥಳಗಳಲ್ಲಿ ಗಣಿಗಾರಿಕೆ ನಡೆಸಲು ಸದ್ದಿಲ್ಲದೆ ಯೋಜನೆ ಸಿದ್ಧವಾಗುತ್ತಿದೆ. ಅಲ್ಲಲ್ಲಿ ಸಮೀಕ್ಷೆ, ಅದಿರು ಮಾದರಿ ಸಂಗ್ರಹ ಪರೀಕ್ಷೆಗಳು ನಡೆದಿದ್ದು, ಶೀಘ್ರವೇ ಇಲ್ಲಿ ಗಣಿ ಘಟಕ ಸ್ಥಾಪಿಸಲು ಸರ್ಕಾರಿ ಸ್ವಾಮ್ಯದ ರಾಯಚೂರಿನ ಹಟ್ಟಿ ಚಿನ್ನದ ಗಣಿ ಕಂಪೆನಿ ಚಿಂತನೆ ನಡೆಸಿದೆ.

ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಹೊನ್ನಾಳಿ ತಾಲ್ಲೂಕಿನ ಕುದುರೆಕೊಂಡ ಸೇರಿದಂತೆ ಸುತ್ತಮುತ್ತಲಿನ 7 ಹಳ್ಳಿಗಳನ್ನು ಚಿನ್ನದ ನಿಕ್ಷೇಪವಿರುವ ಸ್ಥಳ ಎಂದು ಗುರುತಿಸಿದೆ. ಹಟ್ಟಿ ಚಿನ್ನದ ಗಣಿ ಕಂಪೆನಿ ಇಲ್ಲಿ ಗಣಿಗಾರಿಕೆಗೆ ಮುಂದಾಗಿದೆ. ಭೂವಿಜ್ಞಾನ ಇಲಾಖೆ ಈ ಬಗ್ಗೆ ಸಮ್ಮತಿ ಸೂಚಿಸಿ ಸರ್ಕಾರಕ್ಕೆ ಶಿಫಾರಸು ಕಳುಹಿಸಿದೆ. ಹೊನ್ನಾಳಿ ತಾಲ್ಲೂಕಿನ ಕೋಡಿಕೊಪ್ಪ, ಪಾಲವ್ವನಹಳ್ಳಿ, ಚಟ್ನಹಳ್ಳಿ, ಗಂಜಿಗನಹಳ್ಳಿ, ದಾಸರಹಳ್ಳಿ ಮತ್ತು ಹಿರೇಗೋಣಿಗೆರೆ ಹಳ್ಳಿಗಳ 2,500 ಎಕರೆ ಪ್ರದೇಶದಲ್ಲಿ ಚಿನ್ನದ ನಿಕ್ಷೇಪವಿದೆ. ಇಲ್ಲಿ ಪ್ರತಿ ಮೆಟ್ರಿಕ್‌ಟನ್ ಅದಿರಿನಲ್ಲಿ 2.5 ಗ್ರಾಂ ಚಿನ್ನ ಸಿಗುವ ನಿರೀಕ್ಷೆಯಿದೆ ಎಂದು ಜಿಲ್ಲೆಯ ಹಿರಿಯ ಭೂವಿಜ್ಞಾನಿ ಎಚ್.ಪಿ. ಮಲ್ಲೇಶ್ `ಪ್ರಜಾವಾಣಿ~ಗೆ ತಿಳಿಸಿದರು.

ಪ್ಲಾಟಿನಂ ನಿಕ್ಷೇಪ ಪತ್ತೆ: ಚನ್ನಗಿರಿ ತಾಲ್ಲೂಕಿನ ಹನುಮಲಾಪುರದಲ್ಲಿ ಪ್ಲಾಟಿನಂ ನಿಕ್ಷೇಪ ಪತ್ತೆಯಾಗಿದೆ. ಇಲ್ಲಿ 2 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಅದಿರು ಹರಡಿಕೊಂಡಿದೆ. ಇಲ್ಲಿಯೂ ಪ್ರತಿ ಮೆಟ್ರಿಕ್ ಟನ್ ಅದಿರಿಗೆ 2.5 ಗ್ರಾಂ ಪ್ಲಾಟಿನಂ ಸಿಗುವ ನಿರೀಕ್ಷೆ ಹೊಂದಲಾಗಿದೆ. ಇಲ್ಲಿಯೂ ಗಣಿಗಾರಿಕೆ ನಡೆಸಲು ಹಟ್ಟಿ ಚಿನ್ನದ ಗಣಿ ಕಂಪೆನಿ ಮುಂದೆ ಬಂದಿದೆ ಎಂದು ಮಲ್ಲೇಶ್ ತಿಳಿಸಿದರು.

ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಯರಗನಾಳು ಗ್ರಾಮಪಂಚಾಯ್ತಿಯ ಕುದುರೆಕೊಂಡ ಗ್ರಾಮದಲ್ಲಿ ಬ್ರಿಟಿಷರ ಕಾಲದಲ್ಲಿ ಇಲ್ಲಿ ಚಿನ್ನ ತೆಗೆಯಲಾಗುತ್ತಿತ್ತು. ಅಂದು ಇಲ್ಲಿ ಗಣಿಗಾರಿಕೆಗೆ ತೋಡಲಾದ ಆಳವಾದ 16 ಗುಂಡಿಗಳು ಈಗ ಪಾಳುಬಾವಿಗಳಾಗಿವೆ. ಈ ಪ್ರದೇಶದ ಸಮೀಪದಲ್ಲಿಯೇ ಹೊಗೆ ಚಿಮಿಣಿ ಮಾದರಿಯ ಇಟ್ಟಿಗೆಯ ರಚನೆಯೊಂದು ಸ್ಮಾರಕದಂತೆ ನಿಂತಿದೆ.

ಗಣಿಗಾರಿಕೆ ಸ್ಥಗಿತವಾದ ಬಳಿಕ ಮಳೆಗಾಲದಲ್ಲಿ ಆ ಪ್ರದೇಶದಿಂದ ಹರಿದು ಬರುವ ನೀರನ್ನು ಸೋಸಿ ಚಿನ್ನ ತೆಗೆಯುತ್ತಿದ್ದ ಜಾಲಗಾರರು ಈ ಗ್ರಾಮದಲ್ಲಿ ಇದ್ದರು ಎಂದು ಗ್ರಾಮದ ಪಟೇಲರಾಗಿದ್ದ ಯಲ್ಲಪ್ಪ ಅವರು ನೆನಪಿಸಿಕೊಳ್ಳುತ್ತಾರೆ.

ಇಲ್ಲಿನ 85 ಎಕರೆಯಷ್ಟು ಪ್ರದೇಶವು ಬ್ರಿಟಿಷ್ ಸರ್ಕಾರದ ಅವಧಿಯಲ್ಲಿ ಗುಮಾಸ್ತರಾಗಿದ್ದ ಅಮೀರ್ ಅಹಮದ್ ಎಂಬುವವರಿಗೆ ಸೇರಿತ್ತು. ಈಗ ಅವರ ಮೊಮ್ಮಕ್ಕಳ ಹೆಸರಿನಲ್ಲಿದೆ ಎನ್ನುತ್ತಾರೆ ಯಲ್ಲಪ್ಪ.

ಇತರ ಸ್ಥಳಗಳು
: ಚಿತ್ರದುರ್ಗ ಜಿಲ್ಲೆಯ ಇಂಗಳದಾಳ್ ಮತ್ತು ಗುಡ್ಡದರಂಗವ್ವನಹಳ್ಳಿ, ತುಮಕೂರು ಜಿಲ್ಲೆಯ ಅಜ್ಜನಹಳ್ಳಿ, ಮುತ್ತಗದಹಳ್ಳಿ, ಅಂಬಾರಪುರ, ಹರಗೊಂಡನಹಳ್ಳಿ, ಬರಸಿದ್ದನಹಳ್ಳಿ ಮತ್ತು ಕೋಟೆಗಳ್ಳ, ಹಾವೇರಿ ಜಿಲ್ಲೆಯ ಚಿನ್ಮೂಲಗುಂಡ, ಕೆಂಗೋಡು, ಕಲ್ಲೇದೇವರಪುರಗಳಲ್ಲಿ ಭೂಮಿ ಗುರುತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಚಿನ್ನ ಬೇಡ, ಅನ್ನ ಬೇಕು: ಚಿನ್ನ ತೆಗೆದರೆ ಇಲ್ಲಿನ ಕೃಷಿ ನಾಶವಾಗಲಿದೆ. ಇಲ್ಲಿ ಯಾವುದೇ ಕಂಪೆನಿ ಬರುವುದನ್ನು ನಾವು ವಿರೋಧಿಸುತ್ತೇವೆ ಎಂದು ಹೊನ್ನಾಳಿ ತಾಲ್ಲೂಕು ಯರಗನಾಳು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಬಿ. ರುದ್ರಪ್ಪ ಹಾಗೂ ಸ್ಥಳೀಯರು ಖಚಿತ ಮಾತುಗಳಲ್ಲಿ ತಿಳಿಸಿದರು.

ಗಣಿಗಾರಿಕೆಗೆ ಮುನ್ನವೇ ವಿಕಿ ಮ್ಯಾಪ್ ಅಂತರ್ಜಾಲ ತಾಣದಲ್ಲಿ ಕುದುರೆಕೊಂಡ ವನ್ನು `ಭವಿಷ್ಯದ ಕೆಜಿಎಫ್~ ಎಂದು ಬಣ್ಣಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT