ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಂತರ ಚುನಾವಣೆಗೆ ಸಿದ್ಧರಾಗಿ: ಅಡ್ವಾಣಿ

Last Updated 1 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಯುಪಿಎ ಸರ್ಕಾರ ಆತ್ಮಹತ್ಯಾ ಹಾದಿಯಲ್ಲಿದ್ದು, ಅದರ ಭವಿಷ್ಯದ ಬಗ್ಗೆ ಏನೂ ಹೇಳಲಾಗದು. ಆದ್ದರಿಂದ ಮಧ್ಯಂತರ ಚುನಾವಣೆಗೆ ಸಿದ್ಧರಾಗುವಂತೆ ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಶನಿವಾರ ಹೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಅಂಗವಾಗಿ ನಡೆದ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಸಮಾರೋಪ ಭಾಷಣಮಾಡಿದ ಅವರು ಈ ವಿಚಾರ ಪ್ರಸ್ತಾಪಿಸಿದ್ದಾಗಿ ಪಕ್ಷದ ಮುಖಂಡರು ತಿಳಿಸಿದ್ದಾರೆ.

 `ಯುಪಿಎ ಸರ್ಕಾರ ಉರುಳು ಹಾಕಿಕೊಳ್ಳುವ ಮಾರ್ಗದಲ್ಲಿದೆ. ಭ್ರಷ್ಟಾಚಾರದ ಕಾರಣ ಅವಧಿಗೂ ಮುಂಚೆ ಕೇಂದ್ರ ಸರ್ಕಾರ ಅಧಿಕಾರ ಕಳೆದುಕೊಂಡ ಉದಾಹರಣೆ ಸ್ವತಂತ್ರ ಭಾರತದ ಇತಿಹಾಸದಲ್ಲೇ ಇಲ್ಲ. ಆದರೆ ಈ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ಯೋಗ್ಯತೆ ಇಲ್ಲ~ ಎಂದು ಅಡ್ವಾಣಿ ಟೀಕಿಸಿದ್ದಾರೆ.

`ಈ ಸರ್ಕಾರ ನಿಷ್ಕ್ರಿಯವಾಗಿದ್ದು, ಜನರು ಬೇಸತ್ತಿದ್ದಾರೆ. ಸರ್ಕಾರದ ಭವಿಷ್ಯ ಮಸುಕಾಗಿರುವ ಕಾರಣ ಯಾವುದೇ ಕ್ಷಣದಲ್ಲಿ ಲೋಕಸಭೆಗೆ ಮಧ್ಯಂತರ ಚುನಾವಣೆ ನಡೆಯಬಹುದು. ಆದ ಕಾರಣ ನಾವು ಈ ಅವಧಿ ಪೂರ್ವ ಚುನಾವಣೆಗೆ ಸಿದ್ಧರಾಗಬೇಕು~ ಎಂದು ಅವರು ಹೇಳಿದ್ದಾರೆ.

ಮುಂಬರುವ ಉತ್ತರ ಪ್ರದೇಶ, ಮಣಿಪುರ ಮತ್ತು ಪಂಜಾಬ್ ರಾಜ್ಯಗಳ ವಿಧಾನಸಭಾ ಚುನಾವಣೆ ಮತ್ತು ರಾಷ್ಟ್ರದ ಆರ್ಥಿಕ ಸ್ಥಿತಿ ಕುರಿತಂತೆ ಬಿಜೆಪಿ ಕಾರ್ಯಕಾರಿಣಿಯಲ್ಲಿ ಚರ್ಚೆ ನಡೆದಿದೆ.

ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಲೋಕಸಭೆಯ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್, `ಜನರು ಬಿಜೆಪಿಯನ್ನು ಆಶಾದಾಯಕವಾಗಿ ನೋಡುತ್ತಿದ್ದಾರೆ. ಪಕ್ಷವು ತನ್ನ ಶಕ್ತಿಯನ್ನು ಸಾಬೀತು ಪಡಿಸಬೇಕಿದೆ~    ಎಂದಿದ್ದಾರೆ.

~ಭ್ರಷ್ಟಾಚಾರದಿಂದ ಯುಪಿಎ ಸಾರ್ವಜನಿಕವಾಗಿ ಬಯಲಾಗಿದೆ ಎಂಬ ಕಾರಣದಿಂದಲೇ ನಾವು ಚುನಾವಣೆಯಲ್ಲಿ ಗೆಲಲ್ಲು ಆಗುವುದಿಲ್ಲ~ ಎಂದೂ ಹೇಳಿದ್ದಾರೆ.

ಪೊಖ್ರಿಯಾಲ್ ಭಾಗಿ:   ಪಕ್ಷದ ವರಿಷ್ಠರ ಬಗ್ಗೆ ಮುನಿಸಿಕೊಂಡಿರುವ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ರಮೇಶ್ ಪೊಖ್ರಿಯಾಲ್ ಮತ್ತು ಇತ್ತೀಚೆಗಷ್ಟೆ ಪಕ್ಷಕ್ಕೆ ವಾಪಸು ಬಂದಿರುವ ಉಮಾಭಾರತಿ ಅವರು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಸಮಾರೋಪದ ದಿನವಾದ ಶನಿವಾರ ಭಾಗವಹಿಸಿದ್ದರು. ಅಡ್ವಾಣಿ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ನರೇಂದ್ರ ಮೋದಿ, ಭ್ರಷ್ಟಾಚಾರದ ಆರೋಪದ ಮೇಲೆ ಅಧಿಕಾರದಿಂದ ಕೆಳಗಿಳಿದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಪೊಖ್ರಿಯಾಲ್ ಶುಕ್ರವಾರ ಆರಂಭವಾದ ಈ ಕಾರ್ಯಕಾರಿಣಿಯಿಂದ ದೂರ ಉಳಿದಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT