ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಮವೇಗಿಗಳ ಕಣಜ ಕರುನಾಡು!

Last Updated 1 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಕಟಕ್‌ನ ಡ್ರೀಮ್ಸ್ ಅಂಗಳದಲ್ಲಿ ಕಳೆದ ಗುರುವಾರ ಅಭಿಮನ್ಯು ಮಿಥುನ್ ಕೈಯಿಂದ ಬಿಡುಗಡೆಗೊಂಡು ಬಾಣದಂತೆ ನುಗ್ಗುತ್ತಿದ್ದ ಎಸೆತಗಳನ್ನು ನೋಡುತ್ತಿರುವಂತೆಯೇ ಕರ್ನಾಟಕದ ವೇಗಿಗಳ ವೈಭವ ಕಣ್ಣ ಮುಂದೆ ಮಿಂಚಿ ಮಾಯವಾಯಿತು.

ಕಳೆದ 80 ವರ್ಷಗಳಲ್ಲಿ ಬಿ.ಆರ್. ನಾಗರಾಜರಾವ್ ಅವರಿಂದ ಇವತ್ತಿನ ರೋನಿತ್ ಮೋರೆಯವರೆಗೆ ಕನ್ನಡನಾಡಿನ ಮಧ್ಯಮವೇಗಿಗಳ  ಶ್ರೀಮಂತ ಪರಂಪರೆಯ ಸರಣಿ ಮನದಲ್ಲಿ ತಂಗಾಳಿಯ ಅಹ್ಲಾದತೆ ಅನುಭವ ನೀಡುತ್ತದೆ. ತಮ್ಮ ಊರಿನ ಪುಟ್ಟ ಗಲ್ಲಿಗಳಲ್ಲಿ ಟೆನಿಸ್‌ ಬಾಲ್‌ನಿಂದ ಆರಂಭಿಸಿ, ಲೆದರ್‌ ಬಾಲ್‌ನವರೆಗೆ. ಜೂನಿಯರ್ ತಂಡದಿಂದ ಭಾರತ ತಂಡದವರೆಗೆ ಬೆಳೆದ ರೀತಿ ಅನನ್ಯ.

1934ರಲ್ಲಿ  ಮೊದಲ ರಣಜಿ ಪಂದ್ಯ ಆಡಿದ ದಿನದಿಂದ ಇಲ್ಲಿಯವರೆಗೆ ಕರ್ನಾಟಕವು ಮಧ್ಯಮವೇಗದ ಬೌಲಿಂಗ್ ವಿಭಾಗ ನಿರಂತರ ಸೆಲೆಯಾಗಿ ಉಕ್ಕುತ್ತಿದೆ. ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ಹೇಳುವುದಾದರೆ, ಮದ್ರಾಸ್ ವಿರುದ್ಧ ನಡೆದ ಮೊಟ್ಟಮೊದಲ ರಣಜಿ ಪಂದ್ಯದಲ್ಲಿ ಆಗಿನ ಮೈಸೂರು ರಾಜ್ಯದ ವೇಗದ ಬೌಲಿಂಗ್ ದಾಳಿಯ ಸಾರಥ್ಯ ವಹಿಸಿದ್ದ ಕೆನಡಾ ಮೂಲದ ಸೆಡ್ರಿಕ್ ಜಾರ್ಜ್ ಬುಟೆನ್‌ಶಾ ಮತ್ತು ಇಲ್ಲಿಯವರೇ ಆದ ಬಿ.ಆರ್. ನಾಗರಾಜರಾವ್ ಅವರೇ ರಾಜ್ಯದಿಂದ ಪ್ರಥಮ ದರ್ಜೆ ಪಂದ್ಯ ಆಡಿದ ಮೊದಲ ಮಧ್ಯಮವೇಗಿಗಳು. ನಾಗರಾಜರಾವ್ ಆರು ಪಂದ್ಯ ಆಡಿ 16 ವಿಕೆಟ್ ಗಳಿಸಿದ್ದರು.

ತುಂಬಿ ತುಳುಕುವ ವಿಭಾಗ: ಬೆಂಗಳೂರು ‘ಮಹಾನಗರಿ’ಯ ಐದು ಕಿಲೋಮೀಟರ್ ವ್ಯಾಪ್ತಿಯಿಂದಲೇ ನಾಲ್ವರು ಮಧ್ಯಮವೇಗಿಗಳು (ಪೀಣ್ಯ ಪ್ರದೇಶದ ದೊಡ್ಡಗಣೇಶ್, ದಾಸರಹಳ್ಳಿಯ ಮಿಥುನ್, ರಾಜಾಜಿನಗರದ ಅರವಿಂದ್, ಯಶವಂತಪುರದ ಡೇವಿಡ್ ಜಾನ್ಸನ್ ಅವರೇ ಆ ನಾಲ್ವರು ವೇಗಿಗಳು.)  ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.  ಇನ್ನು ಕರ್ನಾಟಕದ ತುಂಬ ವೇಗದ ಬೌಲಿಂಗ್ ಪ್ರತಿಭೆಗಳು ಎಷ್ಟಿರಬಹುದು?

ಕರ್ನಾಟಕದ ಒಂದು ವಿಶೇಷತೆಯೆಂದರೆ, ಇಲ್ಲಿ ಬ್ಯಾಟಿಂಗ್, ಸ್ಪಿನ್, ಮಧ್ಯಮವೇಗ, ವಿಕೆಟ್‌ಕೀಪಿಂಗ್‌ ಸೇರಿದಂತೆ ಎಲ್ಲ ವಿಭಾಗಗಳಲ್ಲಿ ಅಂತರರಾಷ್ಟ್ರೀಯ ಆಟಗಾರರು  ಹೆಸರು ಮಾಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಸ್ಪಿನ್ನರ್‌ಗಳ ಕೊರತೆ ಕಾಡುತ್ತಿದೆ. ಮಧ್ಯಮವೇಗದ ವಿಭಾಗ ಮಾತ್ರ ತುಂಬಿ ತುಳುಕುತ್ತಿದೆ.

ಭಾರತ ತಂಡದಲ್ಲಿ ಒಬ್ಬರಾದರೂ ಕರ್ನಾಟಕದ ವೇಗಿಗಳು ಇದ್ದೇ ಇರುತ್ತಾರೆ. ಸುನಿಲ್ ಜೋಶಿ ನಂತರ ಇನ್ನೊಬ್ಬ ಸ್ಪಿನ್ನರ್‌ ಅಥವಾ ರಾಹುಲ್ ದ್ರಾವಿಡ್ ನಂತರ ಮತ್ತೊಬ್ಬ ಬ್ಯಾಟ್ಸ್‌ಮನ್ ಕರ್ನಾಟಕದಿಂದ ಟೀಮ್‌ ಇಂಡಿಯಾಕ್ಕೆ ಹೋಗಿಲ್ಲ. ಆದರೆ ಜಾವಗಲ್ ಶ್ರೀನಾಥ್, ವೆಂಕಟೇಶಪ್ರಸಾದ್ ನಂತರ ಈಗಿನ ಪೀಳಿಗೆಯ ಆರ್‌. ವಿನಯಕುಮಾರ್, ಅಭಿಮನ್ಯು ಮಿಥುನ್ ಹೋಗಿ ಬಂದಿದ್ದಾರೆ. ಎಡಗೈ ವೇಗಿ ಎಸ್. ಅರವಿಂದ್ ಕೂಡ ಅವಕಾಶ ಪಡೆದಿದ್ದರು.  

ಇದಕ್ಕೆ ಕಾರಣಗಳು ಹಲವು. ರಾಜ್ಯದ ಬಹುತೇಕ ಮಧ್ಯಮವೇಗಿಗಳು ಬೆಳದು ಬಂದಿದ್ದು ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಕುಟುಂಬಗಳಿಂದ. ಅವರೆಲ್ಲರ ಕ್ರಿಕೆಟ್‌ ಆಸಕ್ತಿ ಶುರುವಾಗಿದ್ದು ಗಲ್ಲಿ ಕ್ರಿಕೆಟ್‌ನಿಂದ. 15 ರಿಂದ 20 ಗ್ರಾಮ್ ತೂಕದ ಟೆನಿಸ್‌ಬಾಲ್ ಅವರ ಸರ್ವಸ್ವ.

ಬಹುತೇಕರಿಗೆ ಕಪಿಲ್ ದೇವ್, ಪಾಕಿಸ್ತಾನದ ಇಮ್ರಾನ್ ಖಾನ್, ವಸೀಂ ಅಕ್ರಮ್ ಅವರ ಶೈಲಿಯ  ಅನುಕರಣೆಯೇ ಕಲಿಕೆಯ ಹಂತ. ಮನೆಮನೆಗೂ ಟಿವಿ ಬಂದ ನಂತರವಂತೂ ಕನ್ನಡದ ಜಾವಗಲ್ ಶ್ರೀನಾಥ್, ವೆಂಕಿ, ದೊಡ್ಡಗಣೇಶ್ ಕಣ್ತುಂಬಿಕೊಂಡರು. ಎದುರಾಳಿ ಬ್ಯಾಟ್ಸ್‌ಮನ್ ಪರದಾಡುವಂತೆ ಮಾಡಿ, ಮಿಡ್ಲ್‌ ಸ್ಟಂಪ್ ಕೀಳುವುದೇ ಅವರ ಪರಮ ಉದ್ದೇಶವಾಗಿತ್ತು.

‘ನಮ್ಮ ಎಲ್ಲ ಕ್ರಿಕೆಟಿಗರೂ ಟೆನಿಸ್‌ಬಾಲ್‌ ಕ್ರಿಕೆಟ್‌ನಿಂದಲೇ ಬೆಳೆದು ಬಂದವರು. ಜೊತೆಗೆ ನಮ್ಮ ರಾಜ್ಯದ ಪರಿಸರ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗಳು ನಮ್ಮನ್ನು ಕಠಿಣ ಪರಿಶ್ರಮಿಗಳನ್ನಾಗಿ ಮಾಡಿದ್ದು, ಇದರಿಂದ ದೈಹಿಕ ಸದೃಢತೆ ಹೆಚ್ಚುತ್ತದೆ. ಇದರಿಂದ ವೇಗದ ಬೌಲರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುತ್ತಿದ್ದಾರೆ. ನಾನು ಕೂಡ ಕಪಿಲ್‌ ದೇವ್ ಬೌಲಿಂಗ್‌ ನೋಡಿ ಕಲಿತವನು.

ನಮ್ಮ ಬಹುತೇಕ ಬೌಲರ್‌ಗಳೆಲ್ಲ ಒಬ್ಬ ಹೀರೋನನ್ನು ಅನುಕರಿಸಿಯೇ ಸಾಧನೆ ಮಾಡಿದ್ದಾರೆ’ ಎಂದು ಹೇಳುವ ಮಧ್ಯಮವೇಗಿ ದೊಡ್ಡಗಣೇಶ್, ‘ಚೆನ್ನೈನಲ್ಲಿರುವ ಎಂಆರ್‌ಎಫ್ ಬೌಲಿಂಗ್ ಅಕಾಡೆಮಿಯಂತೆ ಕರ್ನಾಟಕದಲ್ಲಿಯೂ ಆಗಬೇಕು. ಉತ್ತರ ಕರ್ನಾಟಕದಿಂದ ಹೆಚ್ಚಿನ ಪ್ರತಿಭೆಗಳನ್ನು ಹುಡುಕಲು ಸಾಧ್ಯವಿದೆ’ ಎನ್ನುತ್ತಾರೆ.

ಈಗ ರಣಜಿ ತಂಡಕ್ಕೆ ಆಡುತ್ತಿರುವ ಬಹುತೇಕ ಬೌಲರ್‌ಗಳು ಗ್ರಾಮಾಂತರ ವಿಭಾಗದಿಂದಲೇ ಬಂದಿದ್ದಾರೆ. ದಾವಣಗೆರೆ ಆರ್.ವಿನಯಕುಮಾರ್, ಮಂಡ್ಯದ ಎಚ್‌.ಎಸ್. ಶರತ್, ಬೆಳಗಾವಿಯ ರೋನಿತ್ ಮೋರೆ, ಸಿ.ಕೆ. ನಾಯ್ಡು ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕಕ್ಕೆ ಆಡುತ್ತಿರುವ ಮೈಸೂರಿನ ಆದಿತ್ಯ ಸಾಗರ್ ಇದಕ್ಕೆ ಉತ್ತಮ ಉದಾಹರಣೆ. ಇದರಿಂದ ವಿನಯ್ ಮತ್ತು ಮಿಥುನ್ ಭಾರತ ತಂಡದ ಸೇವೆಗೆ ಹೋದರೂ ಉತ್ತಮ ಬೌಲರ್‌ಗಳ ದೊಡ್ಡ ಸಾಲು, ಕೆಎಸ್‌ಸಿಎ ಹೊಸ್ತಿಲಲ್ಲಿ ನಿಂತಿದೆ. ಕರ್ನಾಟಕ ಮಧ್ಯಮವೇಗಿಗಳ ಕಣಜವಾಗಿ ಮುಂದುವರೆಯುತ್ತಿದೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT