ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯರಾತ್ರಿ ಮುಗಿಲುಮುಟ್ಟಿತು ಜೈಹೋ

Last Updated 1 ಜೂನ್ 2011, 8:05 IST
ಅಕ್ಷರ ಗಾತ್ರ

ಬಾಗಲಕೋಟೆ: ಐಹೊಳೆಯ ದೇವಸ್ಥಾನ ಸಮುಚ್ಚಯದ `ಜಯ~ಸಿಂಹ ವೇದಿಕೆಯಲ್ಲಿ `ವಿಜಯ~ ಪ್ರಕಾಶ್ ಕಂಠಸಿರಿಯಲ್ಲಿ ಮಧ್ಯರಾತ್ರಿ ಹೊರಹೊಮ್ಮಿದ `ಜೈಹೋ~ ಹಾಡಿಗೆ ಸಾವಿರಾರು ಜನರು ಧ್ವನಿಗೂಡಿಸಿದಾಗ ಚಾಲುಕ್ಯರ ಕಾಲದ ಶಿಲೆ ಶಿಲೆಗಳಲ್ಲೂ `ಜೈಹೋ~ ಅನುರಣಿಸಿತು!

ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪಡೆದ `ಸ್ಲಂಡಾಗ್ ಮಿಲೇನಿಯರ್~ ಸಿನಿಮಾದ `ಜೈಹೋ~ ಹಾಡಿನಿಂದ ಜಗದ್ವಿಖ್ಯಾತರಾಗಿರುವ ಮೈಸೂರು ಮೂಲದ ವಿಜಯ ಪ್ರಕಾಶ್, ಚಾಲುಕ್ಯ ಉತ್ಸವದ ಸಮಾರೋಪ ಸಮಾರಂಭದಲ್ಲಿ ಜೈಹೋ ಹಾಡಿದಾಗ ಜನರು ಹುಚ್ಚೆದ್ದು ಕುಣಿದರು.

ತಮ್ಮ ನೆಚ್ಚಿನ ಗಾಯಕನ ಮೋಡಿಗೊಳಗಾದ ಯುವಕರು ಕಿವಿಗಡಚಿಕ್ಕುವ ಸಂಗೀತಕ್ಕೆ ಉನ್ಮಾದಭರಿತ ಹೆಜ್ಜೆ ಹಾಕಿದರು.

ಮೂರು ದಿನಗಳವರೆಗೆ ನಡೆದ ಚಾಲುಕ್ಯ ಉತ್ಸವವು ಪ್ರೇಕ್ಷಕರ ಕೊರತೆಯಿಂದ ಕಳಾಹೀನಗೊಂಡಿತ್ತು. ಆದರೆ ಕೊನೆಯ ದಿನ ನಡೆದ ವಿಜಯ ಪ್ರಕಾಶ್ ಕಾರ್ಯಕ್ರಮ ವೀಕ್ಷಿಸಲು ಐಹೊಳೆ ಗ್ರಾಮದಲ್ಲಿ ಸುಮಾರು ನಾಲ್ಕು ಸಾವಿರ ಜನರು ನೆರೆದಿದ್ದರು.

ಇಷ್ಟೊಂದು ಸಂಖ್ಯೆಯಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ಕಂಡು ವಿಜಯ ಪ್ರಕಾಶ ಮನತುಂಬಿ ಹಾಡಿದರು. ಇವರಿಗೆ ಸಾಥ್ ನೀಡಿದ ಖ್ಯಾತ ಗಾಯಕಿ ಎಂ.ಡಿ. ಪಲ್ಲವಿ ಕೂಡ ಅಷ್ಟೇ ಅದ್ಭುತವಾಗಿ ಹಾಡಿದರು.

ಇವರಿಬ್ಬರ ಕಂಠಸಿರಿ ಹಾಗೂ ಸಂಗೀತಗಾರರ ಜುಗಲ್‌ಬಂದಿ ನಡುವೆ ಬಂಧಿಯಂತಾಗಿದ್ದ ಯುವಸಮೂಹವು ಪ್ರತಿ ಹಾಡಿಗೂ ಕುಣಿದು ಕುಪ್ಪಳಿಸಿದರು.

ಕನ್ನಡ ಡಿಂಡಿಮ
25 ವಿದೇಶಿ ಸಿನಿಮಾಗಳಿಗೆ ಸಂಗೀತ ನೀಡಿರುವ ವಿಜಯ ಪ್ರಕಾಶ್ ತವರು ನಾಡಿನ ಐಹೊಳೆಯಲ್ಲಿ ಕನ್ನಡ ಡಿಂಡಿಮ ಬಾರಿಸಿದರು.

ಎಂ.ಡಿ. ಪಲ್ಲವಿ ಅವರು ಹುಯೀಲಗೋಳ ನಾರಾಯಣರಾವ್ ವಿರಚಿತ `ಉದಯವಾಗಲಿ ಚೆಲುವ ಕನ್ನಡ ನಾಡು~ ಹಾಡಿನ ಮೂಲಕ `ಸ್ವರಸಂಜೆ~ಗೆ ಚಾಲನೆ ನೀಡಿದರು.

ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ರಚಿಸಿದ `ಬ್ಯಾಟಿ ಬ್ಯಾಟಿ ಬ್ಯಾಡರ ಹುಡುಗ ಆಡಿದ ಬ್ಯಾಟಿ~ ಹಾಡಿನ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಿದರು.

ಪಲ್ಲವಿ ಹಾಗೂ ವಿಜಯ ಪ್ರಕಾಶ್ ಜೋಡಿಯು ಜನರ ಆಗ್ರಹದ ಮೇರೆಗೆ ಮುಕ್ತ ಧಾರಾವಾಹಿಯ ಟೈಟಲ್ ಹಾಡು `ಮಣ್ಣ ತಿಂದು ಸಿಹಿ ಹಣ್ಣ ನೀಡಿ ಮರ ಮುಕ್ತ ಮುಕ್ತ...~ ಹಾಡಿದಾಗ ಜನರು ಮಂತ್ರಮುಗ್ಧ.
ದುನಿಯಾ ಚಿತ್ರದ ಸುಪ್ರಸಿದ್ಧ `ನೋಡಯ್ಯ ಕ್ವಾಟೆ ಲಿಂಗವೇ~ ಹಾಡನ್ನು ಪಲ್ಲವಿ ಹಾಡಿದರು.

`ದೀಪವೂ ನಿನ್ನದೇ ಗಾಳಿಯು ನಿನ್ನದೇ ಆರದಿರಲಿ ಬೆಳಕು~; `ನೀ ಬಂದು ನಿಂತಾಗ; ನಿಂತು ನೀ ನಕ್ಕಾಗ~ ಸೇರಿದಂತೆ ಅನೇಕ ಮಧುರಗೀತೆಗಳ ಮೂಲಕ ಜನರ ಮನ ರಂಜಿಸಿದರು.

`ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು~; `ಹೀರೋ ಹೀರೋ ನಾನೇ ನಾನೇ~ `ಮಸಕ್ ಕಲಿ~ ಹಾಡುಗಳಿಗೆ ಯುವಕರು ಹುಚ್ಚೆದ್ದು ಕುಣಿದರು.

ಇವುಗಳಲ್ಲದೇ ಶಿಶುನಾಳ ಷರೀಫರ `ತರವಲ್ಲ ತಗೀ ನಿನ್ನ ತಂಬೂರಿ, ಬರಿದೇ ಬಾರಿಸದಿರು ತಂಬೂರಿ..~; `ಕೋಡಗನ ಕೋಳಿ ನುಂಗಿತ್ತ~ ಮತ್ತಿತರ ಗೀತೆಗಳು ಹಾಗೂ ಕೆಲವು ಭಾವಗೀತೆಗಳನ್ನು ಹಾಡಿದರು.

ಕಾರ್ಯಕ್ರಮದ ಕೊನೆಗೆ `ಜೈಹೋ~ ಹಾಡತೊಡಗಿದಾಗ ಪ್ರೇಕ್ಷಕ ಸಮೂಹದಿಂದ ಕರತಾಡನ. ಕಿವಿಗಡಚಿಕ್ಕುವ ಸಂಗೀತದ ಮಧ್ಯೆ ಆಗಾಗ ಕೇಳಿಬರುತ್ತಿದ್ದ `ಜೈಹೋ~ ಪದವು ಮಧ್ಯರಾತ್ರಿ ಮುಗಿಲು ಮುಟ್ಟಿತು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT