ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯರಾತ್ರಿವರೆಗೂ ತಪಾಸಣೆ

Last Updated 6 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬಳ್ಳಾರಿ: ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಅವರ ನಿವಾಸದ ಮೇಲೆ ಸೋಮವಾರ ಬೆಳಿಗ್ಗೆ ದಾಳಿ ನಡೆಸಿ, ಅವರನ್ನು ಬಂಧಿಸಿದ ನಂತರವೂ ತಪಾಸಣೆ ಮುಂದುವರಿಸಿದ್ದ ಸಿಬಿಐ ತಂಡದ ಇತರ ಸದಸ್ಯರು, ಮಧ್ಯರಾತ್ರಿಯವರೆಗೂ ಹಲವಾರು ದಾಖಲೆ ಪರಿಶೀಲಿಸಿದರು.

ಜನಾರ್ದನರೆಡ್ಡಿ ಹಾಗೂ ಶ್ರೀನಿವಾಸ ರೆಡ್ಡಿ ಅವರ ನಿವಾಸಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದ ಸಿಬಿಐ ತಂಡದ ಮುಖ್ಯಸ್ಥ ಡಿಐಜಿ ವಿ.ವಿ. ಲಕ್ಷ್ಮಿನಾರಾಯಣ, ಇಬ್ಬರನ್ನೂ ಬಂಧಿಸಿ ಹೈದರಾಬಾದ್‌ನತ್ತ ಕರೆದೊಯ್ದ ನಂತರವೂ ಸಂಬಂಧಿಗಳ ವಿಚಾರಣೆ ಹಾಗೂ ದಾಖಲೆಗಳ ಪರಿಶೀಲನೆ ಮುಂದುವರಿಸಲಾಗಿತ್ತು.

ಜನಾರ್ದನರೆಡ್ಡಿ ಅವರ ಪತ್ನಿ ಲಕ್ಷ್ಮಿ ಅರುಣಾ ಹಾಗೂ ಶ್ರೀನಿವಾಸರೆಡ್ಡಿ ಅವರ ಪತ್ನಿ ಶ್ರೀಲತಾ ಅಲ್ಲದೆ, ಸಂಬಂಧಿಗಳನ್ನು ಸೋಮವಾರವಿಡೀ ವಿಚಾರಣೆಗೆ ಒಳಪಡಿಸಿದ್ದ ಸಿಬಿಐ ಸಿಬ್ಬಂದಿ, ರಾತ್ರಿ 11.45ರ ವೇಳೆಗೆ ಮಹತ್ವದ ದಾಖಲೆಗಳು ಹಾಗೂ ಚಿನ್ನಾಭರಣ, ನಗದು ಒಳಗೊಂಡ ಪೆಟ್ಟಿಗೆಗಳ ಸಮೇತ ಹೊರಬಂದರು.
ರಾತ್ರಿ ನಗರದ ಸರ್ಕಾರಿ ಅತಿಥಿ ಗೃಹವೊಂದರಲ್ಲಿ ತಂಗಿ, ಬೆಳಿಗ್ಗೆ ಹೈದರಾಬಾದ್‌ಗೆ ಮರಳಿದರು.

ಜನಾರ್ದನರೆಡ್ಡಿ ಬಂಧನದ ಹಿನ್ನೆಲೆಯಲ್ಲಿ ಮೈಸೂರಿನಿಂದ ರಸ್ತೆ ಮೂಲಕ ಸೋಮವಾರ ರಾತ್ರಿ 9.45ಕ್ಕೆ ಜನಾರ್ದನರೆಡ್ಡಿ ಅವರ ನಿವಾಸಕ್ಕೆ ಆಗಮಿಸಿದ ಮಾಜಿ ಸಚಿವ ಬಿ.ಶ್ರೀರಾಮುಲು, ಸಿರುಗುಪ್ಪ ಶಾಸಕ ಎಂ.ಎಸ್. ಸೋಮಲಿಂಗಪ್ಪ, ಕಂಪ್ಲಿ ಶಾಸಕ ಸುರೇಶಬಾಬು ಅವರೊಂದಿಗೆ ಮನೆಯೊಳಗೆ ತೆರಳಿ ಅಧಿಕಾರಿಗಳೊಂದಿಗೆ  ಚರ್ಚೆ ನಡೆಸಿ ರಾತ್ರಿ 11.15ರ ಸುಮಾರಿಗೆ ಹೊರಬಂದರು.

ಶ್ರೀರಾಮುಲು ಹೊರ ಬಂದ ಅರ್ಧ ಗಂಟೆ ಅವಧಿಯಲ್ಲಿ ಪೆಟ್ಟಿಗೆಗಳ ಸಮೇತ ಹೊರಬಂದ ಸಿಬಿಐ ಸಿಬ್ಬಂದಿ, ಅವುಗಳನ್ನು ವಾಹನದಲ್ಲಿ ಇರಿಸಿಕೊಂಡು, ಪೊಲೀಸ್ ಭದ್ರತೆಯಲ್ಲೇ ಸಾಗಿದರು. ಜನಾರ್ದನರೆಡ್ಡಿ ಹಾಗೂ ಶ್ರೀನಿವಾಸರೆಡ್ಡಿ ಅವರಿಗೆ ಸೇರಿರುವ ವಾಹನಗಳನ್ನು ಜಪ್ತಿ ಮಾಡಲಾಗಿದೆಯಾದರೂ ಅವುಗಳನ್ನು ಮಂಗಳವಾರವೂ ಬೇರೆಡೆ ಕೊಂಡೊಯ್ಯಲಾಗಿಲ್ಲ.

ಸಿಬಿಐ ಸಿಬ್ಬಂದಿ ಬೆಳಿಗ್ಗೆ 6ಕ್ಕೆ ನಗರದಿಂದ ಹೊರಟಿದ್ದು, ಅವರಿಗೆ ಅಗತ್ಯವಾಗಿದ್ದ ಎಲ್ಲ ಭದ್ರತೆಯನ್ನೂ ನೀಡಲಾಗಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT