ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯವರ್ತಿ ಕಾಟ: ಹಾಳಾದ ನೆಮ್ಮದಿ

Last Updated 24 ನವೆಂಬರ್ 2011, 8:45 IST
ಅಕ್ಷರ ಗಾತ್ರ

ಕೆಜಿಎಫ್: ಕಂದಾಯ ಇಲಾಖೆಗಳಿಂದ ವಿತರಣೆಯಾಗುವ ಪ್ರಮಾಣ ಪತ್ರ ನೀಡುವ ನೆಮ್ಮದಿ ಕೇಂದ್ರದ ಅಸಮರ್ಪಕ ನಿರ್ವಹಣೆಯಿಂದ ದಾಖಲೆಗಾಗಿ ವಾರಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಉದ್ಭವಿಸಿದೆ.

ಒಂದೆರಡು ದಿನಗಳಲ್ಲಿ ದೊರಕಬೇಕಾದ ದಾಖಲೆಗಳು ಹಾಗೂ ಪ್ರಮಾಣ ಪತ್ರಗಳಿಗಾಗಿ ನಿತ್ಯ ಕಚೇರಿಯಿಂದ ಕಚೇರಿಗೆ ಅಲೆದಾಡಬೇಕಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಆದಾಯ, ಜಾತಿ, ವಾಸಸ್ಥಳ, ಜೀವಂತ ಸದಸ್ಯರ ಕುಟುಂಬ ಸದಸ್ಯರ ಪ್ರಮಾಣ ಪತ್ರ ಸೇರಿದಂತೆ 32 ವಿವಿಧ ಪ್ರಮಾಣ ಪತ್ರ ಪಡೆಯಲು ನೆಮ್ಮದಿ ಕೇಂದ್ರದ ಮೂಲಕವೇ ಅರ್ಜಿ ಸಲ್ಲಿಸಿ, ಪುನಃ ಅಲ್ಲಿಂದಲೇ ದಾಖಲೆ ಪಡೆಯಬೇಕಾಗಿರುವುದರಿಂದ ಈ ಅವ್ಯವಸ್ಥೆ ಉಂಟಾಗಿದೆ.

ರಾಬರ್ಟ್‌ಸನ್‌ಪೇಟೆ ನಾಡಕಚೇರಿಯಿಂದ ಸುಮಾರು ಎರಡು ಕಿ.ಮೀ ದೂರದಲ್ಲಿರುವ ನೆಮ್ಮದಿ ಕೇಂದ್ರದ ಕಾರ್ಯವೈಖರಿಯಿಂದ ಸಾರ್ವಜನಿಕರು ನೇರವಾಗಿ ಕೆಲಸ ಮಾಡಿಸಿಕೊಳ್ಳುವ ಬದಲು ಏಜೆಂಟ್ ಮೂಲಕ ಹೋದರೆ ಸುಲಭವಾಗಿ ಕೆಲಸ ಮಾಡಿಸಿಕೊಳ್ಳಬಹುದು ಎಂಬ ಭಾವನೆ ಮೂಡಿದೆ.

ಸುಮಾರು ಇಪ್ಪತ್ತಕ್ಕೂ ಹೆಚ್ಚು ಏಜೆಂಟರು ಸಕ್ರಿಯವಾಗಿ ಕಾರ್ಯನಿರತರಾಗಿದ್ದು, ಅವರಿಗೆ ಅರ್ಜಿ ನೀಡಿ, ಸಂಭಾವನೆ ನೀಡಿದರೆ ಸುಲಭವಾಗಿ ಕೆಲಸ ಮಾಡಿಸಿಕೊಳ್ಳಬಹುದು. ಇಲ್ಲವಾದರೆ 30 ದಿನ ಕಾಯಬೇಕು ಎಂದು ಇ.ಟಿ.ಬ್ಲಾಕ್ ನಿವಾಸಿ ರಮೇಶ್ ಅಭಿಪ್ರಾಯ ಪಡುತ್ತಾರೆ.

ಗೌತಂ ನಗರದಲ್ಲಿರುವ ಫ್ರಂಟ್ ಆಫೀಸ್ ಕಚೇರಿ ಸಮಯದಲ್ಲಿ ಬಾಗಿಲು ತೆಗೆಯುವುದೇ ಅಪರೂಪ. ಬಾಗಿಲು ತೆರೆದರೂ ವಿದ್ಯುತ್ ಇಲ್ಲ, ಪ್ರಿಂಟರ್‌ನ  ಕಾಟ್ರಿಡ್ಜ್ ಇಲ್ಲ ಎಂದು ಅರ್ಜಿದಾರರನ್ನು ಸಾಗಿ ಹಾಕುತ್ತಾರೆ ಎಂದು ಆಂಡರಸನ್‌ಪೇಟೆಯ ಎಳಂಗೋವನ್ ಹೇಳುತ್ತಾರೆ.

ಬಂಗಾರಪೇಟೆ ತಾಲ್ಲೂಕಿನ ಹುನ್ಕುಂದ, ಮಾವಹಳ್ಳಿ, ದೊಡ್ಡಚಿನ್ನಹಳ್ಳಿ, ಘಟ್ಟಕಾಮಧೇನಹಳ್ಳಿ, ದೊಡ್ಡವಲಗಮಾದಿ, ದೊಡ್ಡೂರುಕರಪನಹಳ್ಳಿ, ಮಾರಿಕುಪ್ಪ ಹೋಬಳಿಗೆ ಸೇರಿದ 59 ಗ್ರಾಮಗಳು ಸದರಿ ನೆಮ್ಮದಿ ಕೇಂದ್ರದ ವ್ಯಾಪ್ತಿಗೆ ಬರುತ್ತವೆ. ಕೋಲಾರ ತಾಲ್ಲೂಕಿಗೆ ಹತ್ತಿರವಿರುವ ಮಾವಹಳ್ಳಿ ಮತ್ತಿತರ ಹಳ್ಳಿಗಳೂ ಸಹ ಇದೇ ವ್ಯಾಪ್ತಿಗೆ ಬರುತ್ತವೆ. ಸುಮಾರು 30-40 ಕಿ.ಮೀ ದೂರದ ಕೆಜಿಎಫ್‌ಗೆ ಎರಡು ಬಸ್ ಹಿಡಿದು ಬರುವ ಗ್ರಾಮಸ್ಥರು ದಾಖಲೆಗಳಿಗಾಗಿ ಅಲೆದಾಡುತ್ತಿರುವ ದೃಶ್ಯ ನಿತ್ಯ ಕಾಣುತ್ತಿವೆ.

ನಿತ್ಯವೂ ಸುಮಾರು 400ಕ್ಕೂ ಹೆಚ್ಚು ಅರ್ಜಿಗಳು ವಿದ್ಯಾರ್ಥಿಗಳ ಆದಾಯ ಮತ್ತು ಜಾತಿ ಪ್ರಮಾಣ ಪತ್ರಕ್ಕೆ ಕೋರಿಕೆ ಬರುತ್ತಿದೆ. ಇರುವ ಒಂದು ಕಂಪ್ಯೂಟರ್‌ನಲ್ಲಿ ಗ್ರಾಮೀಣ ಪ್ರದೇಶದ ಮತ್ತು ನಗರದ ಎಲ್ಲ ಅವಶ್ಯಕತೆ ಪೂರೈಸಲು ಸಾಧ್ಯವಿಲ್ಲ ಎಂಬ ಮಾತನ್ನು ಸಿಬ್ಬಂದಿ ಹೇಳುತ್ತಾರೆ. ಹೆಚ್ಚುವರಿ ಕಂಪ್ಯೂಟರ್, ನಿರಂತರ ವಿದ್ಯುತ್ ವ್ಯವಸ್ಥೆ, ಬದಲಿ ಪ್ರಿಂಟರ್ ವ್ಯವಸ್ಥೆ ಹಾಗೂ ಅಧಿಕ ಸಿಬ್ಬಂದಿ ನಿಯೋಜಿಸಿ, ಏಜೆಂಟರ ಹಾವಳಿ ತಪ್ಪಿಸಿದರೆ ಸಾರ್ವಜನಿಕರು ಮುಕ್ತವಾಗಿ ತಮ್ಮ ಕೆಲಸ ಮಾಡಿಸಿಕೊಳ್ಳಬಹುದು ಎಂಬ ಅಭಿಪ್ರಾಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT