ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಸ್ಥಿಕೆ ಕೇಂದ್ರಗಳ ಯಶಸ್ಸಿಗೆ ಸಹಕರಿಸಿರಿ

Last Updated 12 ಫೆಬ್ರುವರಿ 2011, 8:25 IST
ಅಕ್ಷರ ಗಾತ್ರ

ಹಾವೇರಿ: ‘ನ್ಯಾಯಾಲಯಗಳಲ್ಲಿನ ಬಾಕಿ ಪ್ರಕರಣಗಳ ತ್ವರಿತ ವಿಲೇವಾರಿಯಲ್ಲಿ ಮಧ್ಯಸ್ಥಿಕೆ ಕೇಂದ್ರಗಳ ಪಾತ್ರ ಹಿರಿದಾಗಿದೆ. ನ್ಯಾಯಾಲಯ ವ್ಯವಸ್ಥೆಗೆ ಪರ್ಯಾಯ ವ್ಯವಸ್ಥೆ ಇದಾಗಿದೆ. ಇದರ ಯಶಸ್ಸಿಗೆ ವಕೀಲರು ಹಾಗೂ ನ್ಯಾಯಾಧೀಶರು ಸಹಕರಿಸಬೇಕು’ ಎಂದು ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ಸಂಪನ್ಮೂಲ ವ್ಯಕ್ತಿ ವಕೀಲರಾದ ಸುಧಾ ಎಸ್.ಎನ್. ಸಲಹೆ ನೀಡಿದರು.

ಜಿಲ್ಲಾ ಮಧ್ಯಸ್ಥಿಕೆ ಕೇಂದ್ರದ ಸಹಕಾರದೊಂದಿಗೆ ಬೆಂಗಳೂರು ಮಧ್ಯಸ್ಥಿಕೆ ಕೇಂದ್ರ ಈಚೆಗೆ ನಗರದಲ್ಲಿ ಏರ್ಪಡಿಸಿದ್ದ ಯುವ ವಕೀಲರಿಗೆ ಆರು ದಿನಗಳ ಮಧ್ಯಸ್ಥಿಕೆ ತರಬೇತಿ ಹಾಗೂ ತರಬೇತಿ ಪಡೆದ ಮಧ್ಯಸ್ಥಿಕೆದಾರರಿಗೆ ಒಂದು ದಿನದ ಶಿಬಿರದಲ್ಲಿ ಅವರು ಮಾತನಾಡಿದರು.

‘ನ್ಯಾಯಾಲಯಗಳಲ್ಲಿನ ವ್ಯಾಜ್ಯಗಳ ತ್ವರಿತ ವಿಲೇವಾರಿಗಾಗಿ ಸಂಬಂಧಪಟ್ಟ ಕಾನೂನಿಗೆ 1989ರಲ್ಲಿ ತಿದ್ದುಪಡಿ ತಂದು ಲೋಕ ಅದಾಲತ್ ಮೂಲಕ ಪ್ರಕರಣಗಳ ಇತ್ಯರ್ಥಕ್ಕೆ ಒತ್ತು ನೀಡಲಾಗಿದೆ. ಈ ಪ್ರಕ್ರಿಯೆ ಜಾರಿಯಲ್ಲಿದ್ದರೂ ಮಧ್ಯಸ್ಥಿಕೆ ಕೇಂದ್ರಗಳ ಮೂಲಕವೂ ಪ್ರಕರಣಗಳ ಇತ್ಯರ್ಥಕ್ಕೆ ಹೆಚ್ಚಿನ ಗಮನ ನೀಡಲಾಗಿದೆ’ ಎಂದರು.‘ರಾಜ್ಯದಲ್ಲಿ ಮಧ್ಯಸ್ಥಿಕೆ ಮೂಲಕ ಪ್ರಕರಣಗಳ ಇತ್ಯರ್ಥಕ್ಕೆ ಶಿಫಾರಸ್ಸಾದ ಪ್ರಕರಣಗಳ ಪೈಕಿ ಶೇ. 62ರಷ್ಟು ಪ್ರಕರಣಗಳು ಇತ್ಯರ್ಥಗೊಂಡಿದ್ದು, ಇದಕ್ಕೆ ವಕೀಲರು ಹಾಗೂ ಪ್ರಕರಣಗಳನ್ನು ಮಧ್ಯಸ್ಥಿಕೆ ಕೇಂದ್ರಕ್ಕೆ ಶಿಫಾರಸು ಮಾಡಿದ ನ್ಯಾಯಾಧೀಶರ ಕಾರ್ಯ ಶ್ಲಾಘನೀಯ’ ಎಂದು ಹೇಳಿದರು.

ಜಿಲ್ಲಾ ನ್ಯಾಯಾಧೀಶ ಕೆ.ಸಿ. ರಾಮಕೃಷ್ಣಯ್ಯ, ‘ಜಿಲ್ಲೆಯಲ್ಲಿ ಸ್ಥಾಪನೆಗೊಂಡಿರುವ ಜಿಲ್ಲಾ ಮಧ್ಯಸ್ಥಿಕೆ ಕೇಂದ್ರಕ್ಕೆ ವಿವಿಧ ತಾಲ್ಲೂಕುಗಳ ನ್ಯಾಯಾಧೀಶರಿಂದ ಶಿಫಾರಸುಗೊಂಡ 103 ಪ್ರಕರಣಗಳ ಪೈಕಿ ಈವರೆಗೆ 20 ಪ್ರಕರಣಗಳು ಇತ್ಯರ್ಥಗೊಂಡಿವೆ. 75 ಪ್ರಕರಣಗಳು ಇತ್ಯರ್ಥದ ವಿವಿಧ ಹಂತದಲ್ಲಿವೆ. 8 ಪ್ರಕರಣಗಳು ಇತ್ಯರ್ಥವಾಗದೇ ವಾಪಸಾಗಿವೆ. ಈ ಕೇಂದ್ರದಲ್ಲಿ ತರಬೇತಿ ಪಡೆದ 9 ಮಧ್ಯಸ್ಥಿಕೆಗೆ ವಕೀಲರಿದ್ದಾರೆ. ಈ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಂದ ಆಯ್ದ 25 ಯುವ ವಕೀಲರನ್ನು ಆರು ದಿನಗಳ ತರಬೇತಿಗಾಗಿ ಆಹ್ವಾನಿಸಲಾಗಿದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವಿ.ಎಫ್. ಕಟ್ಟೇಗೌಡರ ಮಾತನಾಡಿ, ‘ಮಧ್ಯಸ್ಥಿಕೆ ಮೂಲಕ ಈಗ ಇತ್ಯರ್ಥಗೊಳ್ಳುತ್ತಿರುವ ಪ್ರಕರಣಗಳ ಸಂಖ್ಯೆ ಸಮಾಧಾನಕರವಾಗಿಲ್ಲ’ ಎಂದರು. ಇದಕ್ಕೂ ಮುನ್ನ ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ವಕೀಲ ಹಾಗೂ ಸಂಪನ್ಮೂಲ ವ್ಯಕ್ತಿ ಬಿ.ಕೆ. ಮೆಹ್ತಾ ಶಿಬಿರವನ್ನು ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT