ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಾರಾಧನೆಗೆ ಹರಿದುಬಂದ ಭಕ್ತಸಾಗರ

Last Updated 20 ಅಕ್ಟೋಬರ್ 2011, 10:40 IST
ಅಕ್ಷರ ಗಾತ್ರ

ಸಿರುಗುಪ್ಪ (ಬಳ್ಳಾರಿ ಜಿಲ್ಲೆ): ಸಿರುಗುಪ್ಪ ತಾಲ್ಲೂಕಿನ ಕೆಂಚನಗುಡ್ಡ ಬಳಿ ತುಂಗಭದ್ರಾ ನದಿ ತೀರದಲ್ಲಿರುವ ರಾಯರ ಮಠದಲ್ಲಿ ಶ್ರೀ ವಸುಧೇಂದ್ರತೀರ್ಥ ಶ್ರೀಗಳ 250ನೇ ಆರಾಧನೆ ಅಂಗವಾಗಿ ಬುಧವಾರ ನಡೆದ ಮಧ್ಯಾರಾಧನೆಗೆ ಭಕ್ತಸಾಗರವೇ ಹರಿದುಬಂದಿತ್ತು.

ಪ್ರಾತಃಕಾಲದಲ್ಲಿ ಸಾವಿರಾರು ಭಕ್ತರು ನದಿಯಲ್ಲಿ ಸ್ನಾನ ಮಾಡಿ, ಬೃಂದಾವನಕ್ಕೆ ತೆರಳಿ, ಹರಕೆ ಅರ್ಪಿಸಿ ದರ್ಶನ ಪಡೆದು ಭಕ್ತಿಯಲ್ಲಿ ಮಿಂದು ಎದ್ದರು. ಧಾರ್ಮಿಕ ವಿಧಿವಿಧಾನಗಳು ಶ್ರದ್ಧಾಭಕ್ತಿಯಿಂದ ನಡೆದವು. ಮಧ್ಯಾರಾಧನೆ ನಿಮಿತ್ತ ಶ್ರೀಪಾದಂಗಳವರ ಬೃಂದಾವನಕ್ಕೆ ಮತ್ತು ಮೂಲ ದೇವರಿಗೆ ಪಂಚಾಮೃತಾಭಿಷೇಕ, ಅಷ್ಟೋತ್ತರ ಪೂಜಾ ವಿಧಿವಿಧಾನಗಳು ನಡೆದವು.

ಮಂತ್ರಾಲಯದ ಸುಯತೀಂದ್ರತೀರ್ಥರು ಬೃಂದಾವನಕ್ಕೆ ವಿಶೇಷ ಪೂಜೆ ನೆರವೇರಿಸಿದರು.
ಸುದರ್ಶನ ಹೋಮದಲ್ಲಿ ಪಾಲ್ಗೊಂಡ ಅವರು ನೂತನ ರಥಕ್ಕೆ ಪೂಜೆ ಸಲ್ಲಿಸಿದರು. ಸುಮಾರು 3.5 ಕೋಟಿ ರೂಪಾಯಿ ವೆಚ್ಚದ ಸಭಾಭವನ ಮತ್ತು ಕಲ್ಯಾಣ ಮಂಟಪಕ್ಕೆ ಇದೇ ಸಂದರ್ಭದಲ್ಲಿ ಶ್ರೀಗಳು ಶಂಕುಸ್ಥಾಪನೆ ನೆರವೇರಿಸಿದರು.

ಶ್ರೀ ವಸುಧೇಂದ್ರ ವಿದ್ವತ್‌ಸಭಾದಲ್ಲಿ ವಸುಧೇಂದ್ರತೀರ್ಥರ ಕೃತಿಗಳ `ವಸುಧೇಂದ್ರ ಸಂಪುಟ~ಗಳನ್ನು ಶ್ರೀಗಳು ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಕೃತಿ ರಚನಾಕಾರರನ್ನು ಗೌರವಿಸಲಾಯಿತು.

ನಂತರ ನಡೆದ ಸಂಸ್ಥಾನ ಪೂಜೆಯಲ್ಲಿ ಮೂಲರಾಮದೇವರಿಗೆ ಪೂಜೆ ಸಲ್ಲಿಸಿ, ನೆರೆದ ಭಕ್ತರಿಗೆ ಮುದ್ರೆ ಧಾರಣ ಮಾಡಿ, ಮಂತ್ರಾಕ್ಷತೆ ನೀಡಿ ಹರಸಿದರು. ಮಾಜಿ ಶಾಸಕ ಎಂ.ಶಂಕರ ರೆಡ್ಡಿ, ತಾ.ಪಂ. ಮಾಜಿ ಅಧ್ಯಕ್ಷ ಎಂ.ಗೋಪಾಲ ರೆಡ್ಡಿ, ಪುರಸಭೆ ಮಾಜಿ ಅಧ್ಯಕ್ಷ ಕೆ.ವೆಂಕಟರಾಮ ರೆಡ್ಡಿ, ಅಕ್ಕಿಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಬಿ.ಜಿ. ಸಿದ್ಧಾರೆಡ್ಡಿ, ವೈಶ್ಯ ಸಮಾಜದ ಹಿರಿಯ ಎಂ.ಪಂಪಾಪತಿ ಶೆಟ್ಟಿ ಮತ್ತು ವಿಪ್ರ ಸಮಾಜದವರು, ಆರ್ಯವೈಶ್ಯ ಸಮಾಜದ ಗಣ್ಯರು ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆದರು.

ಚಿಂತನೆಗೆ ಗುರುಗಳ ಮಾರ್ಗದರ್ಶನ ಅಗತ್ಯ
ಸಿರುಗುಪ್ಪ:
ತಾಲ್ಲೂಕಿನ ಕೆಂಚನಗುಡ್ಡದ ಬಳಿಯ ಶ್ರೀವಸುಧೇಂದ್ರತೀರ್ಥ ಶ್ರೀಪಾದಂಗಳವರ 250ನೇ ಆರಾಧನೆ ಅಂಗವಾಗಿ ಬುಧವಾರ ನಡೆದ ವಿದ್ವದ್ಗೋಷ್ಠಿಯಲ್ಲಿ ಜಗತ್ತಿನಲ್ಲಿ ಸರ್ವೋತ್ತಮನ್ಯಾರು ? ವಿಷಯ ಕುರಿತು ನೂರಕ್ಕೂ ಅಧಿಕ ವಿದ್ವಾಂಸರು ಪಾಲ್ಗೊಂಡು ಸಂವಾದ ನಡೆಸಿದರು.

ದೇವರು ಯಾರು, ಈಶ್ವರ ಯಾರು ಎಂಬ ಜಿಜ್ಞಾಸೆ ನಾಗರಿಕ ವಿಜ್ಞಾನ ಬೆಳವಣಿಗೆಯಿಂದ ಗೊಂದಲ ಉಂಟಾಗಿದೆ. ಸರಿಯಾದ ನಿರ್ಣಯಗಳಿಗೆ ಸೂಕ್ತ ಮಾರ್ಗದರ್ಶಕರಾಗಬೇಕಾದ ಗುರುಗಳ ಅಗತ್ಯವಿದೆ. ಶಾಸ್ತ್ರ ಹೇಳಿದ ರೀತಿಯಲ್ಲಿ ಶಿಷ್ಯವೃಂದ ಜ್ಞಾನಸಂಪಾದನೆ ಮಾಡಿಕೊಂಡು, ಅರ್ಹ ಶಿಷ್ಯನಾಗಿ ವಿಷಯಗಳ ಮನವರಿಕೆ ಮಾಡಿಕೊಳ್ಳಬೇಕು. ಈ ಜಗತ್ತಿನ ಬಗ್ಗೆ ಚಿಂತನೆ ಮಾಡುವವರಿಗೆ ಇದು ಸುವ್ಯವಸ್ಥಿತವೋ ಅಥವಾ ಅವ್ಯವಸ್ಥಿತವೋ ಎಂಬ ಜಿಜ್ಞಾಸೆ ಉಂಟಾಗಿದೆ. ಸುವ್ಯವಸ್ಥಿತ ಕಲ್ಪನೆಯುಳ್ಳವರಿಗೆ ಸೃಷ್ಟಿಕರ್ತ ಒಬ್ಬನಿದ್ದಾನೆ ಎಂಬ ಮನೋಬಲ ಇರುತ್ತದೆ. ಅವ್ಯವಸ್ಥಿತ ಮನದಾಳ ಉಳ್ಳವರಿಗೆ ಹೇಗೋ ನಡೆಯುತ್ತದೆ ಎಂಬ ಭಾವನೆ ಇರುತ್ತದೆ. ಇದರ ಚಿಂತನೆಗೆ ಸೂಕ್ತ ಗುರುಗಳ ಮಾರ್ಗದರ್ಶನ ಅವಶ್ಯವೆಂದು ಮೈಸೂರಿನ ವಿದ್ವಾಂಸ ಸಿ.ಎಚ್.ಶ್ರೀನಿವಾಸಮೂರ್ತಿ ತಮ್ಮ ನಿಲುವು ಮಂಡಿಸಿದರು.

ಆಗಮ, ವೇದ, ಪುರಾಣಗಳ ಬಗ್ಗೆ ಚರ್ಚಾಗೋಷ್ಠಿಯಲ್ಲಿ ಸಂವಾದ ನಡೆಸಿದ ವಿದ್ವಾಂಸರು ರುದ್ರ ದೇವರು, ವಿಷ್ಣು ದೇವರು ಆರಾಧನೆಯ ಬಗ್ಗೆ  ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಮೈಸೂರಿನ ಮತ್ತೊಬ್ಬ ವಿದ್ವಾಂಸ ಶೇಷಗಿರಿಆಚಾರ್ ಈ ಸಂವಾದಗಳಿಗೆ ಸಮರ್ಪಕ ಉತ್ತರ ನೀಡಿ ಸಭಿಕರ  ಮೆಚ್ಚುಗೆಗೆ ಪಾತ್ರರಾದರು. ಆಸ್ಥಾನ ವಿದ್ವಾಂಸರಾದ ಬದ್ರಿನಾಥಾಆಚಾರ್, ಸತ್ಯನಾರಾಯಣಾಚಾರ್ಯ, ಶಾಮಾಚಾರ್, ಮುರುಳಿಧರಾಚಾರ್ಯ, ಮರುಳೀಧರ ದಾಸರು, ಪಂಚಮುಖಿ ಪವನಾಚಾರ್, ಸತ್ಯನಾರಾಯಣಚಾರ್ಯ, ಅಕ್ಕಿ ರಾಘವೇಂದ್ರಾಚಾರ್, ಕಡಪ ರಾಘವೇಂದ್ರಚಾರ್, ಎನ್.ವಾದಿರಾಜಾಚಾರ್ ಮಂತ್ರಾಲಯ ಮಠದ ಆಪ್ತಕಾರ್ಯದರ್ಶಿ ರಾಜಗೋಪಾಲಾಚಾರ್ಯ, ರಾಮಕೃಷ್ಣಾಚಾರ್ ಮತ್ತು ಇನ್ನೂ ಅನೇಕರು  ವಾದ-ಪ್ರತಿವಾದಗಳನ್ನು ಮಂಡಿಸಿದರು.

ವಿದ್ವಾನ್ ರಾಜಾ.ಎಸ್. ಪವಮಾನಾಚಾರ್ಯ ಅಧ್ಯಕ್ಷತೆ ವಹಿಸಿದ್ದರು. ವಿದ್ವಾನ್ ಬಂಡಿಶಾಮಾಚಾರ್ಯ ಮತ್ತು ಟಿ.ಮರುಳಿಧರಾಚಾರ್ಯ ಪ್ರವಚನ ನೀಡಿದರು.

ಶ್ರೀ ವಸುಧೇಂದ್ರತೀರ್ಥರ ಸಂಸ್ಕೃತ ಸಂಪುಟವನ್ನು ವಿದ್ವಾನ್ ರಾಜಾ.ಎಸ್. ಪವಮಾನಾಚಾರ್ಯ, ಶ್ರೀ ವಸುಧೇಂದ್ರತೀರ್ಥರ ಜೀವನಚರಿತ್ರೆ ಕನ್ನಡ ಭಾಷೆ ಕೃತಿಯನ್ನು ಶ್ರೀನಿಧಿ ಉತ್ತನೂರು, ಶ್ರೀನಿವಾಸಕಲ್ಯಾಣ ಮತ್ತು ಗುರುಗುಣ ಸ್ಥವನಂ ಕೃತಿಯನ್ನು ರಚಿಸಿದ ರಾಜಾ.ಎಸ್. ಗುರುರಾಜಾಚಾರ್ ಈ ನಾಲ್ಕು ಜನ ವಿದ್ವಾಂಸರನ್ನು ಮಂತ್ರಾಲಯ ಶ್ರೀಗಳು ಗೌರವಿಸಿ ಹರಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT