ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಾಹ್ನದ ಬಿಸಿ ಊಟ- ಖಾಸಗಿ ಕಂಪೆನಿಗೆ ಗುತ್ತಿಗೆ: ಪ್ರತಿಭಟನೆ

Last Updated 27 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಧ್ಯಾಹ್ನದ ಬಿಸಿ ಊಟ ಯೋಜನೆಯನ್ನು ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದ್ದು, ಅದನ್ನು ಕೂಡಲೇ ವಾಪಸ್ ಪಡೆದು ಬಿಸಿ ಊಟ ನೌಕರರಿಗೆ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿ ಸಮತಾ ಸೈನಿಕ ದಳದ ಸದಸ್ಯರು ಹಾಗೂ ಬಿಸಿ ಊಟ ನೌಕರರು ನಗರದ ನೃಪತುಂಗ  ರಸ್ತೆಯಲ್ಲಿರುವ ಪ್ರಾಥಮಿಕ ಸಾರ್ವಜನಿಕ ಶಿಕ್ಷಣ ಆಯುಕ್ತರ ಕಚೇರಿ ಮುಂದೆ ಶುಕ್ರವಾರ ಧರಣಿ ನಡೆಸಿದರು.

ಸಮತಾ ಸೈನಿಕ ದಳದ ರಾಜ್ಯಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಮಾತನಾಡಿ `ನಗರದ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿ ಊಟ ಯೋಜನೆಯನ್ನು ಇಸ್ಕಾನ್, ಅದಮ್ಯ ಚೇತನಾದಂತಹ ಹಲವು ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗಿದೆ. ಇದರಿಂದ ಬಿಸಿ ಊಟದ ನೌಕರರು ಕೆಲಸ ಕಳೆದುಕೊಂಡಿದ್ದಾರೆ. ಇದೇ ವೃತ್ತಿಯನ್ನು ಅವಲಂಭಿಸಿ ಜೀವನ ನಡೆಸುತ್ತಿರುವ ನೌಕರರಿಗೆ ಈ ನೀತಿಯಿಂದ ಅನ್ಯಾಯವಾಗಿದೆ. ಕೂಡಲೇ ಗುತ್ತಿಗೆಯನ್ನು ವಾಪಸ್ ಪಡೆದು ಬಿಸಿ ಊಟ ನೌಕರರಿಗೆ ನೀಡಬೇಕು ಎಂದು ಆಗ್ರಹಿಸಿದರು.

ಬಿಸಿ ಊಟ ನೌಕರರಿಗೆ 1,100 ರೂಪಾಯಿ ವೇತನ ನೀಡಲಾಗುತ್ತಿದೆ. ಈ ಹಣದಿಂದ ಅವರ ಜೀವನ ನಡೆಸಲು ಕಷ್ಟವಾಗುತ್ತಿದೆ. ಅದನ್ನು ಹಿರಿಯ ನೌಕರರಿಗೆ ರೂ. 4,500 ಹಾಗೂ ಸಹಾಯಕ ನೌಕರರಿಗೆ 3,500 ರೂಪಾಯಿಗೆ ಹೆಚ್ಚಿಸಬೇಕು. ಜತೆಗೆ ವಿಮೆ ಯೋಜನೆ ಹಾಗೂ ನಿವೃತ್ತಿ ವೇತನ ನೀಡುವ ಮೂಲಕ ಅವರ ಮುಂದಿನ ಜೀವನಕ್ಕೆ ಸರ್ಕಾರ ಪೂರಕವಾಗಬೇಕು ಎಂದು ಆಗ್ರಹಿಸಿದರು.

ಪ್ರಾಥಮಿಕ ಸಾರ್ವಜನಿಕ ಶಿಕ್ಷಣ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದ್ದು, ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಆಯುಕ್ತರು ಭರವಸೆ  ನೀಡಿದ್ದಾರೆ ಎಂದರು. ಪ್ರತಿಭಟನೆಯಲ್ಲಿ ಹಾವೇರಿ ಜಿಲ್ಲೆಯ ಬಿಸಿ ಊಟ ನೌಕರರ ಸಂಘದ ಅಧ್ಯಕ್ಷ ನಾಗಪ್ಪ ಹಂಚಿನಮನಿ, ಸೈನಿಕ ಸಮತಾ ದಳದ ಜಿಲ್ಲಾ ಕಾರ್ಯದರ್ಶಿ ಎಂ.ಭಾಗ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT