ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಗೆದ್ದ ನೃತ್ಯ ಸಂಯೋಜನಾ ಉತ್ಸವ

Last Updated 7 ಮೇ 2012, 19:30 IST
ಅಕ್ಷರ ಗಾತ್ರ

`ರಂಗ ತರಂಗ~ ರಾಷ್ಟ್ರೀಯ ನೃತ್ಯ ಸಂಯೋಜನಾ ಉತ್ಸವವು ಕಲಾಪ್ರೇಮಿಗಳ ಮನಗೆದ್ದಿತು. ಚೌಡಯ್ಯ ಸ್ಮಾರಕ ಭವನದಲ್ಲಿ ಅಕಾಡೆಮಿ ಆಫ್ ಮ್ಯೂಸಿಕ್‌ನ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.

ಯಶಸ್ಸಿನ ಸಂಪೂರ್ಣ ಶ್ರೇಯಸ್ಸು ಅಕಾಡೆಮಿಯ ಅಧ್ಯಕ್ಷೆ ವೈಜಯಂತಿ ಕಾಶಿ ಮತ್ತು ರಿಜಿಸ್ಟ್ರಾರ್ ಸಿ.ಹೆಚ್.ಭಾಗ್ಯ ಅವರಿಗೆ ಸಲ್ಲಬೇಕಾದುದು. ರಾಷ್ಟ್ರದ ಬೇರೆ ಬೇರೆ ಭಾಗಗಳಿಂದ ಆಗಮಿಸಿದ್ದ ಪ್ರಸಿದ್ಧ ಕಲಾವಿದರು ಭಾಗವಹಿಸ್ದ್ದಿದರು. ಪ್ರತಿದಿನ ಬೆಳಿಗ್ಗೆ ಕಥಕ್, ಕೂಚಿಪುಡಿ, ಒಡಿಸ್ಸಿ, ಮೋಹಿನಿಆಟ್ಟಂ, ಮಣಿಪುರಿ ಮತ್ತು ಭರತನಾಟ್ಯ ಪ್ರಕಾರಗಳಲ್ಲಿ ಶಿಬಿರಗಳನ್ನು ನಡೆಸಲಾಯಿತು. ಯುವ ಕಲಾವಿದರು ಇದರ ಪ್ರಯೋಜನವನ್ನು ಪಡೆದುಕೊಂಡರು. ಶಿಬಿರಾರ್ಥಿಗಳು ಆಯಾ ಕಲಾಪ್ರಕಾರಗಳ ವೈಶಿಷ್ಟ್ಯಗಳನ್ನು ಅರಿತು ತಾವೂ ನರ್ತಿಸಿ ಆನಂದಿಸಿದರು.

ಕಥಕ್‌ನ ದಂತಕಥೆಯೆಂದೇ ಹೆಸರಾಗಿರುವ ಹಿರಿಯ ನೃತ್ಯ ಕಲಾವಿದೆ, ಬೋಧಕಿ, ಸಂಯೋಜಕಿ ಮತ್ತು ಲೇಖಕಿ ಡಾ. ಮಾಯಾ ರಾವ್ ಅವರು ತಮ್ಮ ಮಗಳು ಮಧು ನಟರಾಜ್ ಮತ್ತು ಇತರೆ ಹಿರಿಯ ಶಿಷ್ಯರೊಂದಿಗೆ ಕಥಕ್ ಶಿಬಿರವನ್ನು ನಡೆಸಿದರು.
ಕಥಕ್ ನೃತ್ಯದ ತಂತ್ರದಲ್ಲಿ ಸಲಾಮಿ, ತುಕುಡಾಗಳು, ಜೀವಂತ ಸಂಗೀತದ ವಿಶೇಷಗಳ ಬಗ್ಗೆ ಮಾಹಿತಿ ಒದಗಿಸಲಾಯಿತು. ಅರುಣ ಮೊಹಂತಿ ಅವರು ಒಡಿಸ್ಸಿ ಪ್ರಕಾರದಲ್ಲಿ ತ್ರಿಭಂಗಿಗಳು, ಚೌಕಗಳು, ಮಯೂರ ಚಲನೆಗಳು ಮತ್ತು ಮಳೆಹನಿಗಳ ಅನುಭವವನ್ನು ಉಂಟು ಮಾಡಿ ಅವುಗಳನ್ನು ಶಿಬಿರಾರ್ಥಿಗಳೂ ಮಾಡಿ ತೋರುವಂತೆ ಮಾಡಿದರು.

ರೋಮಾಂಚಕ ಸಾರೆ ಜಹಾಂ ಸೆ ಅಚ್ಛಾ

ಮೊದಲನೆಯ ದಿನದ ಸಂಜೆ ಕಾರ್ಯಕ್ರಮ ದೃಶ್ಯ-ಶ್ರವಣಾನಂದದ ವೈಭವವನ್ನು ಮೆರೆಯಿತು. ಡಾ.ಮಾಯಾ ರಾವ್ ಸಂಯೋಜಿಸಿದ್ದ ಅದರ ಜೊತೆಗೆ ಮಧು ಅವರು ತಮ್ಮ ಕೊಡುಗೆಯನ್ನೂ ನೀಡಿದ್ದ  ಸಾರೆ ಜಹಾಂ ಸೆ ಅಚ್ಛಾ (ತರಾನಾ-ಎ-ಹಿಂದಿ) ನೃತ್ಯ ರೂಪಕ ಸುಮಾರು ಎರಡು ಗಂಟೆಗಳ ಕಾಲ ರಸಿಕರನ್ನು ರೋಮಾಂಚಿತಗೊಳಿಸಿತು. ದೇಶಭಕ್ತಿಯನ್ನು ಪದ ಪದದಲ್ಲೂ ಸೂಸುವ ಇಕ್ಬಾಲ್ ಅವರ ಆ ಗೀತೆಯೇ ಪುಳಕಗೊಳಿಸುವಂತಹುದು. ಅದರ ಸಂದೇಶವನ್ನು ಸಾಮಾನ್ಯ ರಸಿಕನಿಗೂ ತಲುಪುವಂತೆ ಕಥಕ್ ಮತ್ತು ಸಮರಕಲೆಗಳನ್ನು ಪ್ರಧಾನವಾಗಿಟ್ಟುಕೊಂಡು ನೃತ್ಯ ರೂಪಕವನ್ನು ಸಂಯೋಜಿಸಲಾಗಿತ್ತು. ಕಥಕ್ ಶೈಲಿಯ ಶುದ್ಧತೆ, ಸಂಪ್ರದಾಯ, ಚಕ್ಕರ್‌ಗಳು, ಕಸಕ್-ಮಸಕ್‌ಗಳು ಅದನ್ನು ಗಾಢವಾಗಿಸಿತು. ಮುಂಚೂಣಿ ನರ್ತಕರಾಗಿದ್ದ ಮಧು ನಟರಾಜ್ ಮತ್ತು ತುಷಾರ್ ಭಟ್ ಅವರ ತತ್ಕಾರಗಳು ನೃತ್ಯ ರೂಪಕದ ಮಧ್ಯೆ ಅಲ್ಲಲ್ಲಿ ಅಡಕಗೊಳಿಸಲಾಗಿದ್ದ ನೃತ್ತಕ್ಕೆ ಕಿರೀಟಪ್ರಾಯವಾಗಿದ್ದವು.

ಇಕ್ಬಾಲ್ ಅವರ ಹಸ್ತಪ್ರತಿಗಳು, ನಮ್ಮ ರಾಷ್ಟ್ರದ ಮಹಾನ್ ವ್ಯಕ್ತಿಗಳು, ಪ್ರಾಕೃತಿಕ ಸೌಂದರ್ಯ, ವಿವಿಧ ಸಂಸ್ಕೃತಿಗಳು ಮುಂತಾದ ಸ್ಲೈಡುಗಳನ್ನು ಹಿನ್ನೆಲೆಯಲ್ಲಿ ಪ್ರದರ್ಶಿಸಿ ಹೆಜ್ಜೆ- ಹೆಜ್ಜೆಯಲ್ಲೂ ದೇಶಭಕ್ತಿಯನ್ನು ಸ್ಫುರಿಸುತ್ತಿದ್ದ ಪ್ರಸ್ತುತಿಯನ್ನು ಮತ್ತಷ್ಟು ಪ್ರಭಾವಕಾರಿಯನ್ನಾಗಿ ಮಾಡಲಾಯಿತು. ಧ್ವನಿಮುದ್ರಿತ ಸಂಗೀತವು ಪರಿಣಾಮಕಾರಿಯಾಗಿತ್ತು. ಭಾಗವಹಿಸಿದ್ದ ನಾಟ್ಯ ಸ್ಟೆಮ್ ಸಂಸ್ಥೆ ನರ್ತಕ-ನರ್ತಕಿಯರು ತಮ್ಮ ಪಾದರಸದಂತಹ ಚಲನೆಗಳಿಂದ ರಂಜಿಸಿದರು. ಮಧು ನಟರಾಜ್, ತುಷಾರ್ ಭಟ್, ಜನಾರ್ದನ ಅರಸ್, ಪೊನ್ನಮ್ಮ, ರಮ್ಯೋ ಮತ್ತಿತರೆ ನರ್ತಕ ನರ್ತಕಿಯರು ಮಿಂಚಿದರು.
ಅರುಣಾ ಮೊಹಂತಿ ಅವರು ತಮ್ಮ ತಂಡದೊಂದಿಗೆ ಜಗನ್ನಾಥ ಅಷ್ಟಕವನ್ನು ಸೊಗಸಾಗಿ ನಿರೂಪಿಸಿ ಖಮಾಚ್ ಪಲ್ಲವಿಯ ವಿಸ್ತೃತ ಪ್ರತಿಪಾದನೆಯಲ್ಲಿ ಒಡಿಸ್ಸಿ ನೃತ್ಯದ ವಿಶಿಷ್ಟತೆಗಳನ್ನು ಸೆರೆಹಿಡಿದರು. ರಾಮಾಯಣದ ವಿವಿಧ ಘಟನೆಗಳನ್ನು ಆಧರಿಸಿ ನವರಸಗಳನ್ನು ಅಭಿವ್ಯಕ್ತಗೊಳಿಸಲಾಯಿತು.

ಆಕರ್ಷಕ ದಶಾವತಾರ

ಸುಮಧುರ ಗಾಯಕ ಡಿ.ಎಸ್.ಶ್ರಿವತ್ಸ ಅವರ `ಪಾದ ಸೇವಿಪರೆ ಪಾವನ~ ಎಂಬ ರಾಗಮಾಲಿಕಾ ರಚನೆಯ ಆಶಯದಂತೆ ನುರಿತ ಭರತನಾಟ್ಯ ಪಟು ಬೆಳಗಾಂನ ರೇಖಾ ಹೆಗಡೆ ದಶಾವತಾರಗಳನ್ನು ಅಭಿನಯಿಸಿದರು. ತಮ್ಮ ಶಿಷ್ಯೆಯರಾದ ಅರ್ಪಿತಾ, ಪುಣ್ಯಾ, ರಮ್ಯೋ, ಅಂಬಾ, ಧನ್ಯಶ್ರಿ ಮತ್ತು ಶ್ರಿರಕ್ಷಾ ಅವರೊಂದಿಗೆ ನಮೂದಿಸಲಾದ ದಶಾವತಾರಗಳು ಆಕರ್ಷಿಸಿದವು.  

ಮೂರು ದಿನಗಳ  ಆರಾಧನಾ  ಸಂಗೀತೋತ್ಸವವು ಬಸವೇಶ್ವರನಗರದ ಎಸ್‌ವಿಕೆಲೇಔಟ್‌ನ ಶ್ರಿವರಪ್ರದ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಭಾನುವಾರ ಸಮಾಪ್ತವಾಯಿತು. ವಿದ್ವಾಂಸ ಎನ್.ಎಸ್.ಕೃಷ್ಣಮೂರ್ತಿ, ಮೈಸೂರು ಸುಬ್ರಹ್ಮಣ್ಯ  ಹಾಜರಿದ್ದರು. ಸಂಗೀತೋತ್ಸವದ ಅಧ್ಯಕ್ಷತೆಯನ್ನು ವಹಿಸಿದ್ದ   ಪ್ರೊ.ಟಿ.ಟಿ.ಶ್ರಿನಿವಾಸನ್ ಅವರಿಗೆ  ಕಲಾರಾಧನಾಶ್ರೀ ಬಿರುದನ್ನು ನೀಡಿ ಸನ್ಮಾನಿಸಲಾಯಿತು.

ನಿಯಂತ್ರಿತ ಮಂಡನೆಗಳು

ಸಂಗೀತೋತ್ಸವದ ಮೊದಲ ದಿನದ ಕಛೇರಿಯನ್ನು ಶ್ರೀನಿವಾಸನ್ ಅವರು ತಮ್ಮ ಸೋಲೋ ಪಿಟೀಲು ವಾದನದೊಂದಿಗೆ ನಡೆಸಿದರು. ಅವರ ಕಮಾನಿನ ಬಳಕೆ, ಕೈಬೆರಳುಗಳ ಚಲನೆಗಳು, ಆವೇಗ-ಆವೇಶರಹಿತ ನಿಯಂತ್ರಿತ ಮಂಡನೆಗಳು ಹಾಗೂ ಇತಿ-ಮಿತಿಯ ಲಯ ಚಮತ್ಕಾರಗಳಿಂದ ಕೇಳುಗರಲ್ಲಿ ಸಂತಸ ಮೂಡಿತು. ನೇರವಾಗಿ ತ್ಯಾಗರಾಜರ  ತೆರೆತೀಯಕರಾದ (ಗೌಳೀಪಂತು) ಕೀರ್ತನೆಯೊಂದಿಗೆ ಕಛೇರಿಯ ಆರಂಭ. ಸರಸೀರುಹಾಸನಾ (ನಾಟ) ರಚನೆಗೆ ಸ್ವರಕಲ್ಪನೆಯ ಅಲಂಕರಣ.  ಶ್ರೀವರಲಕ್ಷ್ಮಿ (ಶ್ರೀ) ಚೇತೋಹಾರಿಯಾಗಿತ್ತು. ನೇನೆಂದು ವೆದಕುದುರಾ (ಕರ್ನಾಟಕಬೇಹಾಗ್) ಸುಖಪ್ರದಲಯದಲ್ಲಿತ್ತು. ಅಪರೂಪಕ್ಕೆ ಮಂದಾರಿ ರಾಗದ ವಿಸ್ತರಣೆಯನ್ನು ಕೇಳಿ ಆನಂದಿಸಬಹುದಾಗಿತ್ತು. ಪಟ್ಣಂ ಅವರ ಭಜರೇಮಾನಸ  ಮತ್ತು ತ್ಯಾಗರಾಜರ ವಿರಳವಾದ ಪಟ್ಟಿವಿಡುವ (ಅಪೂರ್ವ ಮಂಜರಿರಾಗದಲ್ಲಿ) ಸಂಪ್ರದಾಯದ ಸೊಗಡನ್ನು ಹೊಂದಿತ್ತು. ಕಛೇರಿಯ ಪ್ರಧಾನ ಅಂಶವಾಗಿದ್ದ ಶಂಕರಾಭರಣದ ವಿಶಾಲ ಹರಹು, ಅತ್ಯಂತ ಅನುಭವೀ ಮತ್ತು ಸಹೃದಯೀ ಸಿ.ಚೆಲುವರಾಜು ಅವರ ಮೃದಂಗವಾದನ ಮತ್ತು ದಯಾನಂದ ಮೊಹಿತೆ ಅವರ ಘಟ ಪಕ್ಕವಾದ್ಯ ಕಛೇರಿಯನ್ನು ಅಂದಗಾಣಿಸಿತು.

ಉತ್ಸಾಹಪೂರ್ಣ ಶಾಮಲಾ ಗಾಯನ

ಶನಿವಾರ ಹಾಡಿದ ಉಭಯಗಾನ ವಿಶಾರದೆ ಡಾ.ಶಾಮಲಾ ಜಿ.ಭಾವೆ ಅವರು ಅಪೂರ್ವವಾದ ದಕ್ಷಿಣೋತ್ತರ ಗಾಯನದಿಂದ ತುಂಬಿದ್ದ ಸಭೆಯನ್ನು ತಣಿಸಿದರು. ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತದ ಬೆಡಗನ್ನು ಅವರು ಸುಸ್ಪಷ್ಟವಾಗಿ ಪ್ರಚುರಪಡಿಸಿದರು. 

 72ರ ಪ್ರಾಯದಲ್ಲೂ ಉತ್ಸಾಹ ಮತ್ತು ತುಂಬು ಕಂಠದಿಂದ ಹಾಡಿದ ಶಾಮಲಾ ಎರಡೂ ಪ್ರಕಾರಗಳ ನಯ- ನವಿರುಗಳನ್ನು ಸೂಕ್ತವಾಗಿ ಹೊರಹೊಮ್ಮಿಸಿದರು. ಗುರುವಿನ ಕುರಿತಾದ ಶ್ಲೋಕದೊಂದಿಗೆ ತಮ್ಮ ವಿಶೇಷ ಕಛೇರಿಗೆ ಅವರು ಚಾಲನೆ ನೀಡಿದರು. ಹಿಂದೂಸ್ತಾನಿಯ ಪೂರಿಯಾಧನಾಶ್ರಿ (ರೂಪಕ್) ಮತ್ತು ಅದಕ್ಕೆ ಸಮಾನವಾದ ಕರ್ನಾಟಕ ಸಂಗೀತದ ಕಾಮವರ್ಧಿನಿಯ (ತ್ರಿಪುಟ) ಆಯ್ಕೆ ಸ್ವಾಗತಾರ್ಹ.  ಸ್ವರಗಳು ಮತ್ತು ತೀರ್ಮಾನಗಳಲ್ಲಿ ಲಯವೈವಿಧ್ಯ ತುಂಬಿತ್ತು. ಕರ್ನಾಟಕದ ಚಾರುಕೇಶಿರಾಗವು ಅದೇ ಹೆಸರು ಮತ್ತು ರೂಪದಲ್ಲಿ ಹಿಂದೂಸ್ತಾನಿಯಲ್ಲೂ ಜನಪ್ರಿಯವಾಗಿದೆ. 

ಗಾಯಕಿಯು  ಕೃಪಾಕರೋ ನಂದಕಿಶೋರ (ಹಿಂದೂಸ್ತಾನಿ ಶೈಲಿಯಲ್ಲಿ) ಮತ್ತು  ಕೃಪಯಾಪಾಲಯಾ (ಕರ್ನಾಟಕ ಶೈಲಿಯಲ್ಲಿ) ರಚನೆಗಳನ್ನು ಹಾಡಿ ಏಕಕಾಲಕ್ಕೆ ಎರಡೂ ರೂಪಗಳ ಆಸ್ವಾದವನ್ನು ಉಣಬಡಿಸಿದರು. ಅಭೋಗಿಯಂತೆ ಮೂಡಿ ಬರುವ ಶಾಮಲಾ ಅವರೇ ಸೃಷ್ಟಿಸಿರುವ ದೇವಾಂಗಿಣಿ ರಾಗದಲ್ಲಿ ವಿಜಯವಿಠಲದಾಸರ ಭಕ್ತಜಯಪಾಲಕ ರಚನೆಯ ಗಾಯನ ಭಾವಮಯವಾಗಿತ್ತು. ಭೈರವ್, ಬೃಂದಾವನಸಾರಂಗ, ಕಲ್ಯಾಣ್, ಹಂಸಧ್ವನಿ, ದರ್ಬಾರಿ ಕಾನಡಾ ಮತ್ತು ಲಲಿತ್ ರಾಗಗಳಲ್ಲಿ ಹಾಡಲಾದ ಶಿವಷಡಾಕ್ಷರಿ ಸ್ತೋತ್ರ ಅನುರಣಿಸಿತು. ಆದಿತ್ಯ (ಪಿಟೀಲು), ಶಿವು (ಮೃದಂಗ), ಗುರುನಂದನ್ ಕಲ್ಯಾಣಪುರ್ (ಹಾರ್ಮೋನಿಯಂ) ಮತ್ತು ಉದಯರಾಜ ಕರ್ಪೂರ್ (ತಬಲ) ಅವರು ಸಾಥ್ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT