ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಬಂದಂತೆ ರಸ್ತೆ ಅಗೆತ; ಸಾರ್ವಜನಿಕರಿಗೆ ಪ್ರಾಣಸಂಕಟ

Last Updated 7 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯ ರಸ್ತೆಗಳನ್ನು ಮನಬಂದಂತೆ ಅನಧಿಕೃತವಾಗಿ ಅಗೆಯುವ ಚಾಳಿಯನ್ನು ಜಲಮಂಡಳಿ ಮುಂದುವರಿಸಿದ್ದು, ಜನತೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಪರವಾನಗಿ ಇಲ್ಲದೆ ರಸ್ತೆ ಅಗೆದಿರುವುದಕ್ಕೆ ಬಿಬಿಎಂಪಿ ದಕ್ಷಿಣ ವಲಯ ಈವರೆಗೆ ರೂ 16 ಕೋಟಿ ದಂಡಶುಲ್ಕ ವಿಧಿಸಿದ್ದರೂ ಜಲಮಂಡಳಿ ಸ್ಪಂದಿಸಿಲ್ಲ!

ಕುಡಿಯುವ ನೀರು ಪೂರೈಕೆ ಹಾಗೂ ಒಳ ಚರಂಡಿ ಕೊಳವೆ ತುರ್ತು ದುರಸ್ತಿ ನೆಪದಲ್ಲಿ ಜಲಮಂಡಳಿ ಸಿಬ್ಬಂದಿ ರಸ್ತೆಯನ್ನು ಅಗೆಯುತ್ತಾರೆ. ಅಲ್ಲದೇ ಹೊಸದಾಗಿ ಕೊಳವೆ ಅಳವಡಿಸುವ ಉದ್ದೇಶಕ್ಕೂ ರಸ್ತೆ ಅಗೆಯಲಾಗುತ್ತದೆ. ಆದರೆ ಬಹುಪಾಲು ಸಂದರ್ಭ ಜಲಮಂಡಳಿಯು ರಸ್ತೆ ಅಗೆಯುವುದಕ್ಕೆ ಪಾಲಿಕೆಯಿಂದ ಪರವಾನಗಿ ಪಡೆಯುವುದಿಲ್ಲ.

ರಸ್ತೆ ಅಗೆಯುವಾಗ ತೋರುವ ಆಸಕ್ತಿಯನ್ನು ಕೆಲಸ ಮುಗಿದ ಬಳಿಕ ದುರಸ್ತಿಪಡಿಸುವ ಕಾರ್ಯಕ್ಕೆ ತೋರುವುದಿಲ್ಲ. ಅಗೆದ ಭಾಗವನ್ನು ಸರಿಯಾಗಿ ಮುಚ್ಚದ ಕಾರಣ ಮಳೆ ನೀರು ನಿಂತು ಗುಂಡಿ ನಿರ್ಮಾಣವಾಗುತ್ತದೆ. ಇದರಿಂದ ಇಡೀ ರಸ್ತೆ ಹದಗೆಡುತ್ತದೆ. ಪರಿಣಾಮವಾಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ. ಅದರಲ್ಲೂ ದ್ವಿಚಕ್ರ ವಾಹನ ಹಾಗೂ ಲಘುವಾಹನ ಚಾಲಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಹನುಮಂತನಗರದ 80 ಅಡಿ ರಸ್ತೆ ಸೇರಿದಂತೆ ಹಲವೆಡೆ ಅನಧಿಕೃತವಾಗಿ ರಸ್ತೆ ಅಗೆಯಲಾಗಿದೆ. ನಾಗರಬಾವಿ, ವಿದ್ಯಾ ಪೀಠ ಮುಖ್ಯರಸ್ತೆಗಳಲ್ಲೂ ಇದೇ ರೀತಿ ನಡೆದಿತ್ತು ಎಂದು ಮೂಲಗಳು ತಿಳಿಸಿವೆ.

46 ಕಿ.ಮೀ. ಅಗೆತ: ಪಾಲಿಕೆಯ ದಕ್ಷಿಣ ವಲಯವೊಂದರಲ್ಲೇ ಜನವರಿಯಿಂದ ಈವರೆಗೆ 46 ಕಿ.ಮೀ ಉದ್ದದ ರಸ್ತೆಯನ್ನು ಜಲಮಂಡಳಿ ಪರವಾನಗಿ ಪಡೆಯದೆ ಅಗೆದಿದೆ. ಗೋವಿಂದರಾಜನಗರ, ವಿಜಯನಗರ, ಪದ್ಮನಾಭನಗರ, ಬಸವನಗುಡಿ, ಚಿಕ್ಕಪೇಟೆ, ಜಯನಗರ, ಬಿಟಿಎಂ ಲೇಔಟ್‌ನಲ್ಲಿ ಜಲಮಂಡಳಿಯು ಅನಧಿಕೃತವಾಗಿ 46 ಕಿ.ಮೀ. ಉದ್ದದ ರಸ್ತೆಯನ್ನು ಅಗೆದಿದೆ. ಆದರೆ ಎಲ್ಲಿಯೂ ಸಹ ದುರಸ್ತಿ ಕಾರ್ಯ ಕೈಗೊಂಡಿಲ್ಲ. ದಿಢೀರ್ ಕೊಳವೆ ಒಡೆದಾಗ ದುರಸ್ತಿಪಡಿಸಲು ರಸ್ತೆ ಅಗೆಯುವುದು ಅನಿವಾರ್ಯ. ಆದರೆ ಹೊಸದಾಗಿ ಕೊಳವೆ ಅಳವಡಿಸುವಂತಹ ಪ್ರಮುಖ ಕಾಮಗಾರಿ ವೇಳೆಯೂ ರಸ್ತೆಅಗೆಯಲು ಜಲಮಂಡಳಿ ಅನುಮತಿ ಪಡೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.



ಜನಪ್ರತಿನಿಧಿಗಳ ಕುಮ್ಮಕ್ಕು: `ಜಲಮಂಡಳಿಯು ಅನಧಿಕೃತವಾಗಿ ರಸ್ತೆ ಅಗೆದು ಕೊಳವೆ ಅಳವಡಿಸುವ ಕಾರ್ಯ ಕೈಗೊಂಡಿದ್ದರೆ ಪಾಲಿಕೆ ಅಧಿಕಾರಿಗಳು ಪ್ರಶ್ನಿಸುತ್ತಾರೆ. ಪರವಾನಗಿ ಪಡೆಯದಿರುವ ಬಗ್ಗೆ ಆಕ್ಷೇಪ ಕೂಡ ವ್ಯಕ್ತಪಡಿಸುತ್ತಾರೆ.ಆದರೆ ಸ್ಥಳೀಯ ಪಾಲಿಕೆ ಸದಸ್ಯರು ಇಲ್ಲವೇ ಶಾಸಕರು ಜಲಮಂಡಳಿಯ ಬೆಂಬಲಕ್ಕೆ ನಿಲ್ಲುತ್ತಾರೆ~ ಎಂದು ಪಾಲಿಕೆಯ ದಕ್ಷಿಣ ವಲಯ ಹಿರಿಯಅಧಿಕಾರಿಯೊಬ್ಬರು ದೂರಿದರು.

`ಜಲಮಂಡಳಿ ಕಾಮಗಾರಿಗೆ ಅಡ್ಡಿಪಡಿಸದಂತೆ ಜನಪ್ರತಿನಿಧಿಗಳು ತಾಕೀತು ಮಾಡುತ್ತಾರೆ. ಇದು ಜಲಮಂಡಳಿಯ ಅಧಿಕಾರಿಗಳಿಗೆ ಉತ್ತೇಜನ ನೀಡಿದಂತಾಗಿದೆ. ಹಾಗಾಗಿ ಪರವಾನಗಿ ಪಡೆಯದೆ ರಸ್ತೆ ಅಗೆಯುವುದು ಹೆಚ್ಚಾಗಿದೆ~ ಎಂದು ಅವರು ಆರೋಪಿಸಿದರು.

16 ಕೋಟಿ ಶುಲ್ಕ:`ಬಿಬಿಎಂಪಿ ದಕ್ಷಿಣ ವಲಯದಲ್ಲಿ ಕಳೆದ ಐದು ತಿಂಗಳಲ್ಲಿ 46 ಕಿ.ಮೀ. ಉದ್ದ ರಸ್ತೆಯನ್ನು ಜಲಮಂಡಳಿ ಸಿಬ್ಬಂದಿ ಅನಧಿಕೃತವಾಗಿ ಅಗೆದಿದ್ದಾರೆ. ಆದರೆ ಎಲ್ಲೂ ದುರಸ್ತಿ ಕಾರ್ಯ ಕೈಗೊಂಡಿಲ್ಲ.

ಹಾಗಾಗಿ ಪಾಲಿಕೆ ವತಿಯಿಂದಲೇ ದುರಸ್ತಿ ಕಾರ್ಯ ಕೈಗೊಳ್ಳಲು ನಿರ್ಧರಿಸಲಾಗಿದ್ದು, ರೂ 5.47 ಕೋಟಿ ಶುಲ್ಕ ಪಾವತಿಸುವಂತೆ ಮೇ 24ರಂದು ಪತ್ರ ಬರೆಯಲಾಗಿದೆ~ ಎಂದು ಬಿಬಿಎಂಪಿ ದಕ್ಷಿಣ ವಲಯದ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

 `2010ರ ಜನವರಿಯಿಂದ ಮಾರ್ಚ್‌ವರೆಗೆ ಪರವಾನಗಿ ಪಡೆಯದೆ ಅಗೆದ ರಸ್ತೆಯ ದುರಸ್ತಿ ಕಾರ್ಯಕ್ಕೆ ರೂ 7.41 ಕೋಟಿ ಶುಲ್ಕ ಪಾವತಿಸುವಂತೆ ಸೂಚಿಸಲಾಗಿತ್ತು. ಆ ನಂತರವೂ 2010ರ ಏಪ್ರಿಲ್, ಮೇ ಎರಡೇ ತಿಂಗಳಲ್ಲಿ 140 ಕಿ.ಮೀ. ಉದ್ದ ರಸ್ತೆಯನ್ನು ಜಲಮಂಡಳಿ ಅಗೆದು ಹಾಕಿತ್ತು. ಆ ಸಂದರ್ಭದಲ್ಲಿ ರೂ 3.66 ಕೋಟಿ ಶುಲ್ಕ ವಿಧಿಸಲಾಗಿತ್ತು. ಆದರೆ ಈವರೆಗೆ ಒಟ್ಟು ರೂ 16 ಕೋಟಿ  ಶುಲ್ಕ ವಿಧಿಸಿದ್ದರೂ ಜಲಮಂಡಳಿ ಭರಿಸಿಲ್ಲ~ ಎಂದು ಆರೋಪಿಸಿದರು.

ಅಧ್ಯಕ್ಷರು ಅಲಭ್ಯ!: ಈ ಕುರಿತು ಜಲಮಂಡಳಿ ಅಧ್ಯಕ್ಷ ಪಿ.ಬಿ.ರಾಮಮೂರ್ತಿ ಅವರ ಪ್ರತಿಕ್ರಿಯೆ ಪಡೆಯಲು ಯತ್ನಿಸಿದರೂ ಸಾಧ್ಯವಾಗಲಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT