ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನವಿ ಪುರಸ್ಕರಿಸಬೇಡಿ: ರಾಜ್ಯಪಾಲರಿಗೆ ಕೋರಿಕೆ

Last Updated 20 ಜನವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದ ಭೂಹಗರಣಗಳ ಬಗ್ಗೆ ಯಾರು ತನಿಖೆ ನಡೆಸಬೇಕು ಎಂಬ ವಿಷಯ ಕುರಿತು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಹಾಗಾಗಿ ಮುಖ್ಯಮಂತ್ರಿ ಮತ್ತು ಗೃಹಸಚಿವರ ಮೇಲೆ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಬೇಕೆಂದು ಜಸ್ಟಿಸ್ ಲಾಯರ್ಸ್ ಫೋರಂ ಮಾಡಿರುವ ಮನವಿಯನ್ನು ಪುರಸ್ಕರಿಸಬಾರದು.’- ಇದು ‘ಪ್ರಜಾಪ್ರಭುತ್ವಕ್ಕಾಗಿ ವಕೀಲರ ವೇದಿಕೆ’ ರಾಜ್ಯಪಾಲರಿಗೆ ಗುರುವಾರ ಸಲ್ಲಿಸಿರುವ ಮನವಿಯ ಸಾರಾಂಶ.

ವಕೀಲರ ವೇದಿಕೆಯ ಸದಸ್ಯರಾದ ಎಲ್.ಎನ್. ಹೆಗಡೆ, ವಿವೇಕ್ ರೆಡ್ಡಿ, ವಿನೋದ್ ಕುಮಾರ್, ಪ್ರದೀಪ್ ಸಿಂಗ್, ಸರೋಜಿನಿ ಮುತ್ತಣ್ಣ ಮತ್ತು ಗೀತಾ ನೇತೃತ್ವದ ನಿಯೋಗ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.

ನಂತರ ಸುದ್ದಿಗಾರರ ಜೊತೆ ಮಾತನಾಡಿದ ಎಲ್.ಎನ್. ಹೆಗಡೆ, ‘ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಮೇಲೆ ಬಂದಿರುವ ಭೂಹಗರಣಗಳ ಆರೋಪದ ಬಗ್ಗೆ ತನಿಖೆಯನ್ನು ಲೋಕಾಯುಕ್ತರು ಮಾಡಬೇಕೋ ಅಥವಾ ನ್ಯಾ. ಪದ್ಮರಾಜ ಆಯೋಗ ನಡೆಸಬೇಕೋ ಎಂಬ ಬಗ್ಗೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ.

ಹೈಕೋರ್ಟ್ ಈ ಕುರಿತು ತೀರ್ಪು ನೀಡುವವರೆಗೂ ಮುಖ್ಯಮಂತ್ರಿ ಮತ್ತು ಗೃಹಸಚಿವರ ಮೇಲೆ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಬಾರದು ಎಂದು ರಾಜ್ಯಪಾಲರನ್ನು ಒತ್ತಾಯಿಸಿದ್ದೇವೆ’ ಎಂದರು.

‘ನ್ಯಾಯಮೂರ್ತಿ ಪದ್ಮರಾಜ ಆಯೋಗ ಮತ್ತು ಲೋಕಾಯುಕ್ತ ತನಿಖೆಯ ವರದಿ ಬರುವ ಮೊದಲೇ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡುವುದು ಸರಿಯಲ್ಲ’ ಎಂದು ಅವರು ಹೇಳಿದರು.

‘ಎಲ್ಲ ಅಂಶಗಳನ್ನೂ ಗಮನಿಸಿ ಕಾನೂನಿಗೆ ಅನುಗುಣವಾಗಿ ಕ್ರಮ ಕೈಗೊಳ್ಳುತ್ತೇನೆ. ಕಾನೂನನ್ನು ಮೀರಿ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ರಾಜ್ಯಪಾಲರು ನಮಗೆ ತಿಳಿಸಿದ್ದಾರೆ’ ಎಂದರು.

ಪ್ರತಿಭಟನೆ: ಇದಕ್ಕೂ ಮೊದಲು ಹೈಕೋರ್ಟ್‌ನ ಸುವರ್ಣ ಮಹೋತ್ಸವ ಪ್ರವೇಶದ್ವಾರದಿಂದ ಮೆರವಣಿಗೆಯಲ್ಲಿ ಬಂದ ‘ಪ್ರಜಾಪ್ರಭುತ್ವಕ್ಕಾಗಿ ವಕೀಲರ ವೇದಿಕೆ’ ಸದಸ್ಯರು ರಾಜಭವನದ ಎದುರು ಪ್ರತಿಭಟನೆಯನ್ನು ನಡೆಸಿದರು.

‘ರಾಜಭವನ ಆಗದಿರಲಿ ರಾಜಕೀಯ ಕೇಂದ್ರ,’ ‘ಜನತಂತ್ರ ಉಳಿಸಿ ಜನಾದೇಶ ರಕ್ಷಿಸಿ’ ಎಂಬ ಪ್ರತಿಭಟನಾ ಫಲಕಗಳನ್ನು ಹಿಡಿದಿದ್ದ ವಕೀಲರು ‘ರಾಜ್ಯಪಾಲರು ಸರ್ಕಾರ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT