ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನವೊಲಿಕೆ ಯತ್ನ ವಿಫಲ

3ನೇ ದಿನಕ್ಕೆ ಕಾಲಿಟ್ಟ ಶಿರವಾಡ ಗ್ರಾಮಸ್ಥರ ಪ್ರತಿಭಟನೆ
Last Updated 15 ಜುಲೈ 2013, 5:30 IST
ಅಕ್ಷರ ಗಾತ್ರ

ಕಾರವಾರ: ತಾಲ್ಲೂಕಿನ ಶಿರವಾಡದಲ್ಲಿರುವ ನಗರಸಭೆಯ ತಾಜ್ಯ ವಿಲೇವಾರಿ ಘಟಕದ ಅಸಮರ್ಪಕ ನಿರ್ವಹಣೆ ವಿರುದ್ಧ ಗ್ರಾಮಸ್ಥರು ನಡೆಸುತ್ತಿರುವ ಹೋರಾಟ 3ನೇ ದಿನವಾದ ಭಾನುವಾರವೂ ಮುಂದುವರಿದಿದ್ದು, ಶಾಸಕರ ಮನವೊಲಿಕೆ ಪ್ರಯತ್ನವೂ ವಿಫಲಗೊಂಡಿದೆ.

ತಾಜ್ಯ ವಿಲೇವಾರಿ ಘಟಕಕ್ಕೆ ಸಾರ್ವಜನಿಕರು ಶುಕ್ರವಾರ ಬೀಗ ಜಡಿದಿರುವ ಹಿನ್ನೆಲೆಯಲ್ಲಿ ಶಾಸಕ ಸತೀಶ ಸೈಲ್ ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿದರು.

`ನಗರದ ತ್ಯಾಜ್ಯದ ಜೊತೆಗೆ ಶೌಚಾಲಯದ ಮಲ ಹಾಗೂ ಸೀಬರ್ಡ್ ನೌಕಾನೆಲೆಯ ತ್ಯಾಜ್ಯವನ್ನು ಸಹ ಇಲ್ಲಿ ಅವೈಜ್ಞಾನಿಕವಾಗಿ ಸಂಗ್ರಹಿಸಲಾಗುತ್ತಿದೆ. ತ್ಯಾಜ್ಯ ವಿಲೇವಾರಿ ಮಾಡುವ ಸಂಬಂಧ ಕೇಂದ್ರ ಸರ್ಕಾರದ ನಗರ ಘನತ್ಯಾಜ್ಯ ನಿರ್ವಹಣೆ 2000ರ ಕಾಯ್ದೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ. ಇದರಿಂದ ಗ್ರಾಮದ ಜನರು ನಾನಾ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ತ್ಯಾಜ್ಯ ಘಟಕವನ್ನು ಸ್ಥಳಾಂತರಿಸಬೇಕು' ಎಂದು ಗ್ರಾಮಸ್ಥರು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, `ನಗರಸಭೆಗೆ ಒಂದು ತಿಂಗಳ ಅವಕಾಶ ನೀಡಿ. ಸಮರ್ಪಕವಾಗಿ ಕಸ ವಿಲೇವಾರಿ ಮಾಡದೇ ಇದ್ದಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ' ಎಂದರು. ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಘಟಕವನ್ನು ಸ್ಥಳಾಂತರಿಸಬೇಕು ಎಂದು ಪಟ್ಟು ಹಿಡಿದರು. ಅವರ ಮಾತಿಗೆ ಶಾಸಕರು ಸಹಮತ ತೋರದೇ ಇದ್ದಾಗ ಗ್ರಾಮಸ್ಥರು ಶಾಸಕರು ಹಾಗೂ ನಗರಸಭೆ ವಿರುದ್ಧ ಘೋಷಣೆ ಕೂಗಿದರು.

ಬಳಿಕ ಶಾಸಕರು ತ್ಯಾಜ್ಯ ವಿಲೇವಾರಿ ಘಟಕದ ಪರಿಶೀಲನೆ ನಡೆಸಿದರು. ಸ್ಥಳದಲ್ಲಿಯೇ ಅಧಿಕಾರಿಗಳು ಹಾಗೂ ಗ್ರಾಮದ ಪ್ರಮುಖರ ಜೊತೆ ಚರ್ಚಿಸಿ ಇನ್ನು 30 ದಿನದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

`24 ಗಂಟೆಯೊಳಗೆ ಇಲ್ಲಿ ಹಾಕಿರುವ ಮಲವನ್ನು ಖಾಲಿ ಮಾಡಿ. ತ್ಯಾಜ್ಯದಲ್ಲಿನ ಪ್ಲಾಸ್ಟಿಕ್ ಬೇರ್ಪಡಿಸಿ ಸರಿಯಾಗಿ ವಿಲೇವಾರಿ ಮಾಡಬೇಕು. ಯಾವುದೇ ಕಾರಣಕ್ಕೂ ನೌಕಾನೆಲೆ ಕಸವನ್ನು ಇಲ್ಲಿ ವಿಲೇವಾರಿ ಮಾಡಬಾರದು' ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಮಿತಿ ರಚನೆ: ಈ ಎಲ್ಲ ಕಾರ್ಯದ ಮೇಲ್ವಿಚಾರಣೆಗಾಗಿ ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿಯ ತಲಾ ಒಬ್ಬ ಸದಸ್ಯ ಹಾಗೂ ಇಬ್ಬರು ಗ್ರಾಮಸ್ಥರನ್ನೊಳಗೊಂಡ ಸಮಿತಿ ರಚಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸಿದರು. ಆದರೆ ಇದಾವುದಕ್ಕೂ ಗ್ರಾಮಸ್ಥರು ಒಪ್ಪಿಗೆ ಸೂಚಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT