ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಶಾಂತಿಗೆ ಸಂಗೀತ ಪೂರಕ

Last Updated 23 ಅಕ್ಟೋಬರ್ 2011, 19:45 IST
ಅಕ್ಷರ ಗಾತ್ರ

ಬೆಂಗಳೂರು: `ದೇಶದ ಜನರಲ್ಲಿ ಶಾಂತಿ, ಸಹಬಾಳ್ವೆಯ ಭಾವನೆ ಮೂಡಿಸುವಲ್ಲಿ ಸಂಗೀತ ಕೂಡ ಪರಿಣಾಮಕಾರಿ ಸಾಧನವೆನಿಸಿದೆ. ಹಾಗಾಗಿ ಸಂಗೀತಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ~ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಹೇಳಿದರು.

ನಗರದ ಕೆ.ಆರ್. ರಸ್ತೆಯಲ್ಲಿರುವ ಬೆಂಗಳೂರು ಗಾಯನ ಸಮಾಜದಲ್ಲಿ ಭಾನುವಾರ ನಡೆದ 43ನೇ ಸಂಗೀತ ಸಮ್ಮೇಳನದ ಸಮಾರೋಪದಲ್ಲಿ ಸಮ್ಮೇಳನಾಧ್ಯಕ್ಷ ಡಾ.ನೇದನೂರಿ ಕೃಷ್ಣಮೂರ್ತಿ ಅವರಿಗೆ `ಸಂಗೀತ ಕಲಾರತ್ನ~ ಬಿರುದು ನೀಡಿ ಸನ್ಮಾನಿಸಿದ ಬಳಿಕ ಅವರು ಮಾತನಾಡಿದರು.

`ಭಾರತಕ್ಕೆ ಶ್ರೇಷ್ಠ ಸಂಗೀತ ಪರಂಪರೆ ಇದ್ದು, ತನ್ನದೇ ಆದ ಮಹತ್ವ ಪಡೆದಿದೆ. ಹಾಗಾಗಿ ಇಂದಿನ ಪರಿಸ್ಥಿತಿಯಲ್ಲಿ ಸಂಗೀತ, ಭಜನೆ, ಕೀರ್ತನೆಗಳತ್ತ ಜನತೆ ಒಲವು ತೋರಬೇಕಿದೆ. ಭಜನೆ, ಕೀರ್ತನೆಗಳ ಪಠನದಿಂದ ಶಾಂತಿ- ಸಹಬಾಳ್ವೆಯ ಮನೋಭಾವ ಮೂಡುತ್ತದೆ~ ಎಂದರು.

`ಇತ್ತೀಚೆಗೆ ಕೆಲ ಸಂಗೀತದಲ್ಲಿ ಮಾಧುರ್ಯವೇ ಇರುವುದಿಲ್ಲ. ಅಬ್ಬರದ ಸಂಗೀತವೇ ಪ್ರಧಾನವಾಗಿ ಗದ್ದಲಮಯವಾಗಿರುತ್ತದೆ~ ಎಂದು ಬೇಸರ ವ್ಯಕ್ತಪಡಿಸಿದರು.

`ಆ ಹಿನ್ನೆಲೆಯಲ್ಲಿ ಯುವ ಸಂಗೀತಗಾರರಿಗೆ ಸೂಕ್ತ ತರಬೇತಿ ನೀಡಬೇಕು. ಸಂಗೀತ ಮತ್ತು ನೃತ್ಯಕ್ಕೆ ತಲೆದೂಗದವರೇ ಇಲ್ಲ. ಹಾಗಾಗಿ ಉತ್ತಮ ಸಂಗೀತದ ಮೂಲಕ ಎಲ್ಲರೂ ಸಹಬಾಳ್ವೆಯ ಮನೋಭಾವ ಮೂಡಿಸಬೇಕು~ ಎಂದರು.ನೇದನೂರಿ ಕೃಷ್ಣಮೂರ್ತಿ ಅವರಿಗೆ ಜ್ಯೋತಿ ಸುಬ್ರಹ್ಮಣ್ಯ ಪ್ರಶಸ್ತಿ, ಭ್ರಮರಾಂಭ ನಾಗರಾಜರಾವ್ ಸ್ಮಾರಕ ಪ್ರಶಸ್ತಿ, ವಿ.ಟಿ. ಶ್ರೀನಿವಾಸನ್ ಸ್ಮಾರಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, `ಸಂಗೀತ ಕಲಾರತ್ನ ಬಿರುದು ನೀಡಿ ಸನ್ಮಾನಿಸಿರುವುದು ಸಂತಸ ತಂದಿದೆ. ಸುಮಾರು 60 ವರ್ಷಗಳಿಂದ ನನಗೆ ಕರ್ನಾಟಕದೊಂದಿಗೆ ಒಡನಾಟವಿದೆ. ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಶಾಸ್ತ್ರೀಯ ಸಂಗೀತಕ್ಕೆ ಹೆಚ್ಚು ಆದ್ಯತೆ ನೀಡಿರುವುದು ಉತ್ತಮ ಬೆಳವಣಿಗೆ~ ಎಂದರು.

`ಯುವ ಸಂಗೀತಗಾರರು ಭಜನೆ ಅಭ್ಯಾಸಕ್ಕೆ ಒತ್ತು ನೀಡಬೇಕು. ಸಂತರು, ದಾಸರು ಹಾಗೂ ಹಿರಿಯ ಸಂಗೀತಗಾರರ ಸಂಗೀತ ಸಂಯೋಜನೆಗಳನ್ನು ಅಭ್ಯಸಿಸಬೇಕು. ನಾಲ್ಕು ತಿಂಗಳಿಗೊಮ್ಮೆಯಾದರೂ ಸಂಗೀತಕ್ಕೆ ಸಂಬಂಧಪಟ್ಟ ತರಗತಿಗಳನ್ನು ನಡೆಸಬೇಕು. ಯುವ ಸಂಗೀತಗಾರರಿಗೆ ಆಗಾಗ್ಗೆ ಕಾರ್ಯಾಗಾರಗಳನ್ನು ಏರ್ಪಡಿಸಬೇಕು~ ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಪದ್ಮಭೂಷಣ ಡಾ.ಆರ್.ಕೆ. ಶ್ರೀಕಂಠನ್ ಅವರನ್ನು ಅಭಿನಂದಿಸಲಾಯಿತು. ನಂತರ ಮಾತನಾಡಿದ ಅವರು, `106 ವರ್ಷಗಳಷ್ಟು ಹಳೆಯದಾದ ಬೆಂಗಳೂರು ಗಾಯನ ಸಮಾಜವು ಕರ್ನಾಟಕ ಸಂಗೀತವನ್ನು ಅತಿ ಉಜ್ವಲವಾಗಿ ಬೆಳೆಸಿಕೊಂಡು ಬಂದಿದೆ. ಉದಯೋನ್ಮುಖ ಕಲಾವಿದರಿಗೆ ಪ್ರೋತ್ಸಾಹ ನೀಡುವ ಮೂಲಕ ಆದರ್ಶಪ್ರಾಯ ಸಂಸ್ಥೆ ಎನಿಸಿದೆ~ ಎಂದರು.

ಸಮಾರಂಭದಲ್ಲಿ ಎಂಟು ಮಂದಿಗೆ ವರ್ಷದ ಕಲಾವಿದರು ಪ್ರಶಸ್ತಿ ನೀಡಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್, ಗಾಯನ ಸಮಾಜದ ಅಧ್ಯಕ್ಷ ಡಾ.ಎಂ.ಆರ್.ವಿ. ಪ್ರಸಾದ್, ಉಪಾಧ್ಯಕ್ಷೆ ಕನಕಸ್ವಾಮಿ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT