ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸಿದ್ದರೆ ಮಾರ್ಗ; ಕೆರೆ ಉಳಿಸಲು ಸಾಧ್ಯ

Last Updated 16 ಜುಲೈ 2013, 10:40 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿರುವ 2023 ಕೆರೆಗಳನ್ನೂ ಮಳೆ ನೀರಿನಿಂದಲೇ ತುಂಬಿಸುವ ಒಬ್ಬೊಬ್ಬ ಸಂತ ಹುಟ್ಟಿಕೊಂಡಿದ್ದರೆ....
`ಸಂತರು ಆಕಾಶದಿಂದ ಉದುರುವುದಿಲ್ಲ, ನಮ್ಮ ನಡುವೆಯೇ, ನಮ್ಮಳಗೆಯೇ ಹುಟ್ಟಬೇಕು'. ಸಂತೆಯೊಳಗೆ ಕೆರೆ ಉಳಿಕೊಂಡಿರುವ ಸಂತರ ಸಾಲು ಕೂಡ ಜಿಲ್ಲೆಯಲ್ಲಿದೆ.

ಬರಪೀಡಿತ, ಫ್ಲೋರೈಡ್‌ಪೀಡಿತ ಮಧುಗಿರಿ ತಾಲ್ಲೂಕಿನ ಕೂನಹಳ್ಳಿಯ ಕೆರೆಯ ಕತೆ ಕೇಳಿದರೆ ಕೆರೆ ಉಳಿಸಿಕೊಂಡ ರಮೇಶ್‌ನಂತಹ ಸಂತ ನಮ್ಮೂರಲ್ಲೂ ಇದ್ದರೆ ಅನಿಸದಿರದು. ರಮೇಶ್ ಮಾತ್ರವಲ್ಲ ಈ ಊರಿನ ಎಲ್ಲರೂ ಇಲ್ಲಿ ಭಗೀರಥರೇ ಆಗಿದ್ದಾರೆ. ಊರಿಗೆ ಊರು ಮೈಕೊಡವಿ ನಿಂತರೆ ಸಾಕು ಕೆರೆ ಉಳಿಯಬಲ್ಲದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ನೂರಾರು ಕಿ.ಮೀ. ದೂರದಿಂದ ನದಿ ತಿರುಗಿಸಿಕೊಂಡು ಜಿಲ್ಲೆಯ ಕೆರೆಗಳನ್ನು ತುಂಬಿಸುವ ಕನಸು ಬಿತ್ತುತ್ತಿರುವ ರಾಜಕಾರಣಿಗಳು ಏಕೆ ಬಿದ್ದ ಮಳೆಯಲ್ಲೇ ನಮ್ಮೂರಿನ ಕೆರೆ ತುಂಬಿಸುವ ಕನಸು ಬಿತ್ತುತ್ತಿಲ್ಲ? ಈ ಪ್ರಶ್ನೆಗೆ ನಿವೃತ್ತ ಎಂಜಿನಿಯರ್ ರಾಮಚಂದ್ರಪ್ಪ ನೀಡುವ ಉತ್ತರ ಹೀಗಿದೆ; `ನದಿ ತಿರುಗಿಸುವ ಯೋಜನೆಯ ಹಿಂದೆ ಕೋಟ್ಯಂತರ ರೂಪಾಯಿ ಹಣದ ವಹಿವಾಟು ಇದೆ. ಆರ್ಥಿಕ ಲಾಭ-ಗಳಿಕೆಗಳಿವೆ. ಆದರೆ ಬಿದ್ದ ಮಳೆ ನೀರನ್ನು ನಮ್ಮೂರ ಕೆರೆ ಕಡೆಗೆ ತಿರುಗಿಸುವ ಹಿಂದೆ ಯಾವ ವಹಿವಾಟು ಇದೆ ಹೇಳಿ?' ಎನ್ನುತ್ತಾರೆ.

ಮಧುಗಿರಿಯ ಕೂನಹಳ್ಳಿಯಲ್ಲಿ ಇಂಥ ಬರಗಾಲದಲ್ಲೂ 150 ಅಡಿಗೆ ಕೊಳವೆ ಬಾವಿಗಳು ನೀರು ಕಕ್ಕುತ್ತಿವೆ. ಇದಕ್ಕೆ ಕಾರಣ, ಈ ಊರಿನ ಜನರು ಮಳೆ ನೀರಿನಿಂದಲೇ ಕೆರೆ ತುಂಬಿಸಿಕೊಂಡಿದ್ದು, ಕೆರೆಯನ್ನು ಅವರ ಬದುಕಿನ ಅವಿಭಾಜ್ಯ ಅಂಗ ಮಾಡಿಕೊಂಡಿದ್ದು. ಕೂನಹಳ್ಳಿ ಗ್ರಾಮದ ಕೆರೆ ಬಳಕೆದಾರರ ಸಂಘದ ಕಾರ್ಯದರ್ಶಿ ರಮೇಶ್ ಹೇಳುವಂತೆ, ಯಾವ ನದಿ ತಿರುವೂ ಬೇಡ, ನಿಮ್ಮೂರು ಕೆರೆ ತುಂಬಿಸಿಕೊಳ್ಳಲು ಕೆರೆಯ `ನೀರಿನ ದಾರಿ' ತಿರುವಿದರೆ ಸಾಕಲ್ಲವೇ ಎನ್ನುತ್ತಾರೆ.

ಮಳೆ ಇಲ್ಲ, ಕೆರೆ ತುಂಬುತ್ತಿಲ್ಲ ಎಂದು ಪರಿತಪಿಸುತ್ತಿರುವ ಹಾಗೂ ಮಳೆ ಇಲ್ಲ ನದಿ ತಿರುಗಿಸಿಕೊಂಡು ನೀರು ತರುತ್ತೇವೆ ಎಂದು ಹೇಳುತ್ತಿರುವ ಎಲ್ಲರೂ ಮೊದಲು ಈ `ಸಂತರ' ಬಳಿ ಕೆರೆ ತುಂಬಲು ಏನು ಮಾಡಬೇಕೆಂದು ಕೇಳಬೇಕಿದೆ.

ನೂರೈವತ್ತು ಮನೆಗಳ ಕೂನಹಳ್ಳಿಯ ಕೆರೆ ಕೂಡ ತುಂಬುತ್ತಿರಲಿಲ್ಲ. ಜಲ ಸಂವರ್ಧನಾ ಯೋಜನೆ ಕಾರಣದಿಂದ ಗ್ರಾಮದಲ್ಲಿ ಹುಟ್ಟಿಕೊಂಡ ಕೆರೆ ಬಳಕೆದಾರರ ಸಂಘ ಗ್ರಾಮದ ಚರಿತ್ರೆಯನ್ನೇ ಬದಲಿಸಿದೆ. ಈಗ ಪ್ರತಿ ವರ್ಷ ಕೆರೆಗೆ ನೀರು ಬರುತ್ತಿದೆ. ಕೆರೆ ಪೂರ್ಣ ತುಂಬದಿದ್ದರೂ ಬೇಸಿಗೆಯಲ್ಲೂ ಕೆರೆಯಲ್ಲಿ ನೀರು ಇರುತ್ತದೆ. ಕೆರೆಗೆ ನೀರು ಬರುತ್ತಿದ್ದ ಕಾಲುವೆ, ಹಳ್ಳ-ಕೊಳ್ಳ ಜನರೇ ಸೇರಿ ಸರಿಪಡಿಸಿಕೊಂಡಿದ್ದು ಕೆರೆ ತುಂಬಲು ಕಾರಣ.

ಈ ಕೆರೆ ಸಂಘದಲ್ಲಿ ಮೂರು ಲಕ್ಷ ರೂಪಾಯಿ ಉಳಿತಾಯದ ಹಣವಿದೆ. ಗ್ರಾಮದ ಜನರಿಗೆ ಕೆರೆ ಸಂಘವೇ ಸಾಲ ನೀಡುತ್ತದೆ. ಕೊನೆಯ ಅಚ್ಚುಕಟ್ಟಿನಿಂದ ಬೆಳೆಗೆ ನೀರು ಹಾಯಬೇಕೆಂಬ ನಿಯಮವಿದೆ. ಇದಕ್ಕಾಗಿ ನೀರುಗಂಟಿ ನೇಮಕ ಮಾಡಿಕೊಂಡಿದ್ದಾರೆ. ನಿಯಮ ಮುರಿದವರಿಗೆ ದಂಡ ಹಾಕುತ್ತಾರೆ. ಕೆರೆ ನೀರು ನಿರ್ಬಂಧಿಸಲಾಗುತ್ತದೆ. ಕೆರೆ ಪೂರ್ಣ ತುಂಬದಿದ್ದರೆ ಆ ವರ್ಷ ಬೆಳೆ ಇಲ್ಲ. ಬೆಳೆ ಇಟ್ಟು ಇರುವ ನೀರು ವ್ಯರ್ಥ ಮಾಡುವ ಬದಲಿಗೆ ಕೆರೆಯಲ್ಲೇ ನೀರು ಉಳಿದರೆ ಆಗುವ ಒಳಿತಿನ ಬಗ್ಗೆ ಇಲ್ಲಿನ ಗ್ರಾಮಸ್ಥರಿಗೆ ಅರಿವಿದೆ. ಹೀಗೆ ಕೆರೆಯಲ್ಲಿ ನೀರು ಉಳಿಸಿದ ಪರಿಣಾಮವೇ 150 ಅಡಿಗೆ ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿದೆ.

ಈ ಊರಲ್ಲಿ ಇನ್ನೂ ಒಂದು ನಿಯಮವಿದೆ. ಕೊಳವೆಬಾವಿ ಇರುವವರು ಸಮೀಪದ ತೋಟದ ಜನರಿಗೆ ಪುಕ್ಕಟೆ ನೀರು ಕೊಡುತ್ತಾರೆ.
`ನಮ್ಮಂಥ ಊರುಗಳು ನೂರಾಗಲಿ' ಅನ್ನುತ್ತಾರೆ ಈ ಊರಿನ ಜನರು. ಚಿಕ್ಕನಾಯಕನಹಳ್ಳಿಯ ಗೋಪಾಲಪುರದಲ್ಲೂ ಸಂತರಿದ್ದಾರೆ. ಈ ಗ್ರಾಮದಲ್ಲಿ ಮೂರು ಕೆರೆಗಳಿಗೆ ಜೀವ ತುಂಬಿದ್ದಾರೆ. ಹೆಚ್ಚು, ಹೆಚ್ಚು ಕೊಳವೆಬಾವಿ ಕೊರೆಯಲು ಜನತೆ ಸ್ವಯಂ ನಿರ್ಬಂಧ ಹೇರಿಕೊಂಡಿದ್ದಾರೆ.

`ಕೆರೆ ಇದ್ದರೆ ಕೊಳವೆಬಾವಿ ಏಕೆ ಬೇಕು. ಕೆರೆ ನೀರು ಪೋಲು ಮಾಡುವುದನ್ನು ನಿಲ್ಲಿಸಿ, ಕೆರೆಗೆ ನೀರು ಇಂಗಿಸುವುದಕ್ಕೆ ನಮ್ಮ ಮೊದಲ ಆದ್ಯತೆ' ಎನ್ನುತ್ತಾರೆ ಇಲ್ಲಿನ ಉಪನ್ಯಾಸಕ ರಘು. ಪಾವಗಡದ ಸಣ್ಣ ಊರು ಯರಮ್ಮನಹಳ್ಳಿ ಜನರದ್ದೂ ಕೂಡ ಸಾಹಸಗಾಥೆ. ಇವರು ಕೂಡ ಮಳೆ ನೀರಲ್ಲೇ ಕೆರೆ ತುಂಬಿಸಿಕೊಳ್ಳುತ್ತಾರೆ.

ಚಿಕ್ಕನಾಯಕಹಳ್ಳಿಯ ತಾರಿಕಟ್ಟೆತಾಂಡ ಕೆರೆಯ ಹನ್ನೆರಡು ಎಕರೆ ಒತ್ತುವರಿಯನ್ನು ತೆರವುಗೊಳಿಸಿ ನೆಡುತೋಪು ನೆಟ್ಟ ಮಹಾಲಿಂಗಯ್ಯ ಹಾಗೂ ಅವರ ಸ್ನೇಹಿತರು, ಗ್ರಾಮಸ್ಥರ ತಂಡ ಮಾಡಿದೆ. ನೀರಿಲ್ಲದೇ ಒಣಗಿದ ಕೆರೆಯಲ್ಲಿ ನೀರು ನಳನಳಿಸುವಂತೆ ಮಾಡಿ ಮೀನುಗಾರಿಕೆ ಆರಂಭಿಸಿ ಗ್ರಾಮದ ಜನರಿಗೆ ಆದಾಯ ತಂದುಕೊಟ್ಟ ಬೇವಿನಹಳ್ಳಿಯ ಧರಣೇಶ್ ಅವರೂರಿನ ಜನರ ತಂಡ, ತಾವೇ ನಿಂತು 40 ಸಾವಿರ ಟ್ರ್ಯಾಕ್ಟರ್ ಹೂಳು ತೆಗೆದ ಗುಮ್ಮಘಟ್ಟದ ಜನರು...

ಕಡಿಮೆ ಮಳೆ ಬಂದರೂ ಸಾಕು ಬಸವನಹಳ್ಳಿಯ ಕೆರೆ ಖಂಡಿತಾ ತುಂಬುತ್ತದೆ. ಕೆರೆಗೆ ನೀರು ಬರುತ್ತಿದ್ದ ಈರಣ್ಣನಬೆಟ್ಟದ ಹಳ್ಳ, ಜಾಡನಹಳ್ಳ ಮುಚ್ಚಿಹೋಗಿದ್ದವು. ಹಳ್ಳಗಳನ್ನು ನಾವೇ ನಿಂತು ಶ್ರಮದಾನದ ಮೂಲಕ ಸರಿಪಡಿಸಿದವು. ಗಿಡಗಂಟೆಗಳನ್ನು ಕಿತ್ತೊಗೆದವು. ಈಗ ಪ್ರತಿವರ್ಷ ಕೆರೆ ತುಂಬುತ್ತದೆ ಎನ್ನುತ್ತಾರೆ ಇಲ್ಲಿನ ಜನರು. ಬಸವನಹಳ್ಳಿ ಕೆರೆ ಬಳಕೆದಾರರ ಸಂಘದ ಅಧ್ಯಕ್ಷೆ ಅನಿತಾ ಲಕ್ಷ್ಮೀ, ಕೆರೆ ಉಳಿಸಿಕೊಳ್ಳುವಲ್ಲಿ ಇಡೀ ಗ್ರಾಮದ ಜನರ ಪರಿಶ್ರಮವಿದೆ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT