ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸು ಬೆಸೆಯಿರಿ, ಒಡೆಯಬೇಡಿ...

Last Updated 7 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಅಬ್ರಹಾಂ ಲಿಂಕನ್ ನೋಡಲು ಚೆನ್ನಾಗಿಲ್ಲ ಎಂದು ಮನೆಯವರು ಪದೇ ಪದೇ ಹೇಳುತ್ತಿದ್ದುದನ್ನು ಪುಟ್ಟ ಬಾಲಕಿಯೊಬ್ಬಳು ಕೇಳಿಸಿಕೊಂಡಿದ್ದಳು. ಒಂದು ದಿನ ಆಕೆಯ ಅಪ್ಪ ಲಿಂಕನ್ ಭೇಟಿಗಾಗಿ ಆಕೆಯನ್ನು ಶ್ವೇತಭವನಕ್ಕೆ ಕರೆದೊಯ್ದ.

ಲಿಂಕನ್ ಕೂಡಲೇ ಆ ಬಾಲಕಿಯನ್ನು ಪ್ರೀತಿಯಿಂದ ಎತ್ತಿಕೊಂಡ. ಆಕೆಯ ಬಳಿ ಮೃದುವಾಗಿ ಮಾತನಾಡಿದ. ಆಕೆಯ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಂಡ. ಕೂಡಲೇ ಆ ಬಾಲಕಿ ಹೇಳಿದಳು. `ಅಪ್ಪಾ..ಅವನೆಷ್ಟು ಚೆನ್ನಾಗಿದ್ದಾನಲ್ಲ...!~

ಮಕ್ಕಳು ಎಷ್ಟು ಬೇಗ ಬೆರೆಯುತ್ತಾರೆ, ಬೆಸೆಯುತ್ತಾರೆ ನೋಡಿ. ಅದೇ ದೊಡ್ಡವರು ಒಡಕು ಮನಸು ಹೊಂದಿರುತ್ತಾರೆ. ಈ ಬಂಧ ನಮ್ಮನ್ನು ಪೂರ್ಣವಾಗಿಸುತ್ತದೆ. ಆರೋಗ್ಯಕರವಾಗಿ ಇಡುತ್ತದೆ.

ಸೂಕ್ಷ್ಮತೆ, ಆಶಾವಾದ ತಂದುಕೊಡುತ್ತದೆ. ನಿಮ್ಮ ಸುತ್ತಲೂ ಒಮ್ಮೆ ಕಣ್ಣರಳಿಸಿ ನೋಡಿ. ನಮ್ಮ ಸಮವಯಸ್ಕರು, ಒಡಹುಟ್ಟಿದವರು, ಮುದುಕರು, ಯುವಕರು, ಮಧ್ಯವಯಸ್ಕರು, ಪ್ರಾಣಿ, ಪಕ್ಷಿ, ಹೂವು, ಗಿಡ, ಮರ ಎಲ್ಲರ ಜತೆ, ಎಲ್ಲದರ ಜತೆ ನಾವು ಸ್ನೇಹ ಸಾಧಿಸಬಹುದು.

ಜಾರ್ಜ್ ಎಲಿಯಟ್ ಇದನ್ನು ಸುಂದರವಾಗಿ ವರ್ಣಿಸಿದ್ದರು. `ನಮಗೆ ಸಹಜ ಅನಿಸುವುದನ್ನೆಲ್ಲ ನಾವು ಸೂಕ್ಷ್ಮವಾಗಿ ಗಮನಿಸುವಂತಿದ್ದರೆ ಹುಲ್ಲು ಬೆಳೆಯುವುದನ್ನು, ಅಳಿಲಿನ ಎದೆ ಬಡಿತವನ್ನು ನಾವು ಕೇಳಬಹುದಿತ್ತು.~

ಎಲಿಯಟ್ ಹೇಳಿದ್ದನ್ನು ಇತ್ತೀಚೆಗೆ ನಾನು ಖುದ್ದಾಗಿ ಅನುಭವಿಸಿದೆ. ಬಾಲ್ಕನಿಯಲ್ಲಿ ಕುಳಿತು ಕುಂಡದಲ್ಲಿದ್ದ ತುಳಸಿ ವಾಸನೆಯನ್ನು, ಮೈಗೆ ತಾಗುತ್ತಿದ್ದ ಲಿಂಬೆ ಹುಲ್ಲಿನ ಗಿಡದ ಸ್ಪರ್ಶವನ್ನು ಅನುಭವಿಸುತ್ತಿದ್ದೆ. 12 ಅಂತಸ್ತಿನ ಫ್ಲ್ಯಾಟ್‌ನಿಂದ ಅಕ್ಕ, ಪಕ್ಕದ ಪ್ರದೇಶವೆಲ್ಲ ಚೆನ್ನಾಗಿ ಕಾಣುತ್ತಿತ್ತು.

ನಮ್ಮ ಅಪಾರ್ಟ್‌ಮೆಂಟ್ ಬ್ಲಾಕ್ ಹೊರಗೆ ಹರಿಯುವ ತೊರೆಯಲ್ಲಿ ಬಿಳಿಯ ಪ್ಲಾಸ್ಟಿಕ್ ಬ್ಯಾಗ್ ತೇಲಾಡುತ್ತಿದ್ದುದನ್ನು ನೋಡಿದೆ. ಮತ್ತಷ್ಟು ಗಮನವಿಟ್ಟು ನೋಡಿದಾಗ ಅದು ಪ್ಲಾಸ್ಟಿಕ್ ಬ್ಯಾಗ್ ಅಲ್ಲ.

ಸೀಗಲ್‌ಗಳು ಎಂದು ಅರಿವಾಯಿತು. ಈ ಬಿಳಿ ಹಕ್ಕಿಗಳು ನೀರಿಗೆ ಧುಮುಕಿ ನೀರಿನ ಹರಿವಿನಲ್ಲಿ ಖುಷಿಯಿಂದ ತೇಲಿಹೋಗುತ್ತಿದ್ದವು. ಆ ಕ್ಷಣವನ್ನು ಅನುಭವಿಸುತ್ತಿದ್ದವು. ಆ ಹಕ್ಕಿಗಳನ್ನು ನೋಡುತ್ತಲೇ ಹೃದಯ ತುಂಬಿದ ಅನುಭವವಾಯಿತು. ಮಕ್ಕಳಂತೆ ಸಂತಸ ಪಡುವುದು ಹೇಗೆ ಎಂಬುದನ್ನು ಆ ಹಕ್ಕಿಗಳು ನನಗೆ ಕಲಿಸಿಕೊಟ್ಟಿದ್ದವು. ಅಂಥ ಮಾಂತ್ರಿಕ ಕ್ಷಣಗಳಲ್ಲಿ ನಿಮ್ಮಳಗೆ ಚೈತನ್ಯ ಉಕ್ಕಿಹರಿಯುತ್ತದೆ.

ಲೌಕಿಕ ಜಗತ್ತಿನ ಆಗುಹೋಗುಗಳಂತೆ ನಾವು ಭೇದಭಾವ ಮಾಡದಾಗ, ಇನ್ನೊಬ್ಬರ ಒಳ್ಳೆಯತನವನ್ನು, ಸೌಂದರ್ಯವನ್ನು ಹೊಗಳಿದಾಗ ನಾವು ಬಾಂಧವ್ಯ ಬೆಸೆಯುತ್ತೇವೆ. ನಾವು ಬಾಂಧವ್ಯ ಬೆಳೆಸಿಕೊಳ್ಳುವುದು ಹೇಗೆ? ಪ್ರೀತಿ, ದಯೆ, ಕರುಣೆ, ಮೆಚ್ಚುಗೆ ತುಂಬಿದ ಆಲೋಚನೆಗಳಿಂದ, ಭಾವನೆಯಿಂದ ನಾವು ಬಾಂಧವ್ಯ, ಸ್ನೇಹ ಬೆಳೆಸಿಕೊಳ್ಳಬಹುದು.

`ಓ.... ಆತ ವಂಚಕ, ಮೋಸಗಾರ~ ಎಂದು ಅಸಹ್ಯ ಪಟ್ಟುಕೊಂಡಾಗ, ಪೂರ್ವಗ್ರಹ ಪೀಡಿತರಾಗಿ ಯಾರದೋ ಕುರಿತು ತೀರ್ಮಾನ ತೆಗೆದುಕೊಂಡಾಗ ತಕ್ಷಣವೇ ಎಚ್ಚೆತ್ತುಕೊಳ್ಳಿ. ನಿಮ್ಮನ್ನು ನೀವು ತಿದ್ದಿಕೊಳ್ಳಿ. ಈ ತರಹದ ಆಲೋಚನೆ ಸರಿಯಲ್ಲ ಎಂದು ಹೇಳಿಕೊಳ್ಳಿ. ಆ ವ್ಯಕ್ತಿಯನ್ನು ನಿಮ್ಮ ಕಣ್ಣಮುಂದೆ ತಂದುಕೊಳ್ಳಿ. ಆತನ ಸುತ್ತಲೂ ಹೊಂಬಣ್ಣದ ಪ್ರಭಾವಳಿ ಇದೆ ಎಂದು ಊಹಿಸಿಕೊಳ್ಳಿ. ಯಾರೇ ಆಗಲಿ ಅವರ ಬಗ್ಗೆ ಅಸಹನೆ, ಕೆಟ್ಟ ಭಾವ ಉದ್ಭವಿಸಿದ ತಕ್ಷಣ ಅವರನ್ನು ದೈವಿಕ ಶಕ್ತಿಯಾಗಿ ಭಾವಿಸಿಕೊಳ್ಳಿ.

ನಿಮ್ಮ ಅಹಂಕಾರ, ಇಗೊ ಅದನ್ನು ವಿರೋಧಿಸಬಹುದು. ಆತ ದೈವಿಕ ವ್ಯಕ್ತಿ ಎಂಬುದನ್ನು ನಿಮ್ಮ ಮನಸ್ಸು ಒಪ್ಪಿಕೊಳ್ಳದಿರಬಹುದು. ಮೊಂಡು ಹಟ ಹಿಡಿಯಬಹುದು. ಆ ವ್ಯಕ್ತಿಗೂ ಇದಕ್ಕೂ ಸಂಬಂಧವಿಲ್ಲ. ದೈವಿಕ ದಾರಿಯಲ್ಲಿ ಯೋಚಿಸಲು ನೀವು ನಿಮ್ಮ ಮನಸ್ಸಿಗೆ ತರಬೇತಿ ನೀಡುತ್ತಿದ್ದಿರಿ ಅಷ್ಟೇ. ಪ್ರೀತಿಸಲು, ಬಾಂಧವ್ಯ ಬೆಸೆಯಲು ಮನಸಿಗೆ ಕಲಿಸುತ್ತಿದ್ದೀರಿ. ಬಾಲ್ಯದಲ್ಲಿ ಮಗ್ಗಿಯ ಕೋಷ್ಟಕ ಬಾಯಿಪಾಠ ಮಾಡಿದಂತೆ ಈ ಭಾವವನ್ನು ಮತ್ತೆ, ಮತ್ತೆ ಮನಸಿನಲ್ಲಿ ತಂದುಕೊಳ್ಳಿ.

ಬಾಂಧವ್ಯ ಬೆಸೆದುಕೊಳ್ಳಲು ಮತ್ತೊಂದು ಸುಲಭದ ಹಾದಿ. ಮನಸ್ಸಿನ ಆಳದಲ್ಲಿರುವ ಕೊಳೆಯನ್ನು ತೊಳೆದು ಹಾಕುವುದು. ಈರುಳ್ಳಿಯ ಸಿಪ್ಪೆ ಸುಲಿಯುತ್ತ ಹೋದಂತೆ ಪೂರ್ವಗ್ರಹಪೀಡಿತ ಮನಸ್ಸಿನ ಪದರಗಳನ್ನು ಕಿತ್ತುಹಾಕುವುದು.

ಯಾರನ್ನಾದರೂ ದೈಹಿಕ ಲಕ್ಷಣದಿಂದ, ಬ್ಯಾಂಕ್ ಬ್ಯಾಲೆನ್ಸ್‌ನಿಂದ, ಅವರು ಇರುವ ಹುದ್ದೆಯಿಂದ ನಿರ್ಧರಿಸುವುದು ಸರಿಯೇ? ಅಸಲಿಗೆ ಯಾರ ಕುರಿತಾದರೂ ನಿರ್ಧಾರ ತಾಳುವುದು ಸರಿಯೇ ಎಂದು ನಿಮಗೆ ನೀವೇ ಪ್ರಶ್ನೆ ಹಾಕಿಕೊಳ್ಳಿ.

ಎದೆಯಲ್ಲಿ ಗೂಡುಕಟ್ಟಿದಂತಹ ಈ ಭಾವಗಳು ದೂರವಾದಾಗ ಮನಸ್ಸು ಹಗುರವಾಗುವುದು ನಿಮ್ಮ ಗಮನಕ್ಕೆ ಬರುತ್ತದೆ. ತಾಜಾತನ, ಉಲ್ಲಾಸ ನಿಮ್ಮ ಮನಸ್ಸು ಪ್ರವೇಶಿಸುತ್ತದೆ. ಅಂಧಕಾರದ ಕೆಳಮಾಳಿಗೆಯಲ್ಲಿ ಬಂಧಿತನಾದ ವ್ಯಕ್ತಿಯೊಬ್ಬ ಬಾಗಿಲಿನಿಂದ ಬೆಳಕು ತೂರಿಬಂದಾಗ ತಡವರಿಸುವಂತಹ ಅನುಭವ ನಿಮಗಾಗುತ್ತದೆ. ಬದುಕು ಸರಳವಾಗುತ್ತದೆ. ಸುಲಭವಾಗುತ್ತದೆ. ನೀವು ನಡೆದಾಡುವಾಗ, ವ್ಯಾಯಾಮ ಮಾಡುವಾಗ ದೇಹ ಮೃದುವಾಗಿರುವುದು ಅರಿವಾಗುತ್ತದೆ.

ನೀವು ದೇಹಕ್ಕಿಂತ ಹೆಚ್ಚಾಗಿ ಒಂದು ಆತ್ಮ ಎಂಬುದೂ ಗೊತ್ತಾಗುತ್ತದೆ. ಪೂರ್ಣವಾಗಿರುವುದು ಅಂದರೆ ಅದೇ. ಜನರ ಮುಖ ಲಕ್ಷಣ, ಅವರ ಬಳಿ ಇರುವ ಸಂಪತ್ತಿನಿಂದ ನಾವು ಅವರನ್ನು ಅಳೆಯುವುದಿಲ್ಲ. ಷರತ್ತುರಹಿತವಾಗಿ ಪ್ರೀತಿಯನ್ನು ನೀಡುವ, ಸ್ವೀಕರಿಸುವ ಸಂತಸವನ್ನು ನಾವು ಅನುಭವಿಸುತ್ತೇವೆ.

ಎಫ್‌ಎಂ ರೇಡಿಯೊ ಕೇಳುತ್ತಿರುವಾಗ ಅಸ್ಪಷ್ಟ ಧ್ವನಿಗಳು ಕೇಳದಂತೆ ಟ್ಯೂನ್ ಮಾಡುವ ರೀತಿಯಲ್ಲಿ, ಪೂರ್ವಗ್ರಹ ತುಂಬಿದ ಭಾವನೆಗಳನ್ನು ದೂರ ಮಾಡಿ. ಸ್ಪಷ್ಟವಾದ, ಸುಂದರವಾದ ಧ್ವನಿಗಳು ನಿಮ್ಮ ಮನಸ್ಸಿನಲ್ಲಿ ಅನುರಣಿಸಲಿ.

`ಎಲ್ಲ ಜನರು, ಎಲ್ಲ ಸಂಗತಿಗಳನ್ನು ದೈವಿಕವಾಗಿ ನೋಡುವಂತೆ ನನ್ನ ಮನಸ್ಸು ಪರಿಶುದ್ಧತೆಯ ಸುಗಂಧದಲ್ಲಿ ತೇಲಲಿ, ಎಲ್ಲರಲ್ಲೂ ಶ್ರೇಷ್ಠತೆಯನ್ನೇ ನೋಡುವಂತೆ ನನ್ನ ಹೃದಯದಲ್ಲಿ ಸೌಂದರ್ಯ, ಬೆಳಕು, ಪ್ರೀತಿ ಅರಳಲಿ, ನನ್ನ ದೇಹ ಮತ್ತು ಎಲ್ಲರ ದೇಹವನ್ನು ಆರೋಗ್ಯಕರವಾದ ಚಿನ್ನದ ಬೆಳಕು ಆವರಿಸಲಿ~ ಎಂದು ಹೇಳಿಕೊಳ್ಳಿ. ಗಾಳಿ ಬಂದಾಗಲೆಲ್ಲ ಬಾಗುವ ಲಿಂಬೆ ಹುಲ್ಲಿನ ಎಲೆಯಂತೆ `ನೀನು ಎಷ್ಟೊಂದು ಸುಂದರ...!~ ಎಂದು ಪರಸ್ಪರ ಹೇಳಿಕೊಳ್ಳೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT