ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸೂರೆಗೊಂಡ ನವರಾತ್ರಿ ಸಂಗೀತೋತ್ಸವ

Last Updated 13 ಅಕ್ಟೋಬರ್ 2011, 7:30 IST
ಅಕ್ಷರ ಗಾತ್ರ

ಗುತ್ತಲ: ಸಮೀಪದ ಹೊಸರಿತ್ತಿಯಲ್ಲಿ ಮಂಗಳವಾರ ನಡೆದ 112ನೇ ಶರನ್ನವರಾತ್ರಿ ಸಂಗೀತೋತ್ಸವ ಕಾರ್ಯಕ್ರಮ ಸಂಗೀತ ಅಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.

ಪ್ರತಿ ವರ್ಷ ಅಶ್ವೀಜ ಶುದ್ಧ ದುರ್ಗಾಷ್ಟಮಿಯಂದು ನಡೆಯುವ ಈ ಅಹೋರಾತ್ರಿ ಸಂಗೀತೋತ್ಸವದಲ್ಲಿ ನಾಡಿನ ಹಿರಿ-ಕಿರಿಯ ಸಂಗೀತ ದಿಗ್ಗಜರು  ಕೇಳುಗರಿಗೆ ಸ್ವರಾಮೃತ ಉಣಿಸಿದರು. ದೂರದರ್ಶನ ಹಾಗೂ ಆಕಾಶವಾಣಿ ಸಂಗೀತ ಕಲಾವಿದರಲ್ಲದೆ ಹಲವು ಕಿರಿಯ ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಸಂಗೀತ ಅಭಿಮಾನಿಗಳಲ್ಲಿ ಪುಳಕ ಹುಟ್ಟಿಸಿದರು.

ಆರಂಭದಲ್ಲಿ ಸ್ಥಳೀಯ ಗುದ್ದಲೀಶ್ವರ ಸಂಗೀತ ಪಾಠ ಶಾಲೆಯ ವಿದ್ಯಾರ್ಥಿನಿಯರಾದ ನಂದಾ ಮಲ್ಲನಗೌಡ್ರ ಹಾಗೂ ಪೂರ್ಣಿಮಾ ಮಠದ ಅವರ ವಚನ ಸಂಗೀತ ಗಮನ ಸೆಳೆಯಿತು. ನಂತರ ಧಾರವಾಡದ ಸುಗಮ ಸಂಗೀತ ಕಲಾವಿದ ಅಯ್ಯಪ್ಪಯ್ಯ ಹಲಗಲಿಮಠ ಅವರ `ರಾಗ್ ದುರ್ಗಾ~ ಪ್ರೇಕ್ಷಕರ ತಲೆದೂಗುವಂತೆ ಮಾಡಿತು. ಅಯ್ಯಪ್ಪಯ್ಯ ಅವರ `ರಾಗ್‌ದುರ್ಗಾ~ ಹಾವೇರಿಯ ಶ್ರಮಣಕುಮಾರಕುಮಾರ ಕುಲಕರ್ಣಿ ತಬಲಾ ಸಾಥ್ ನೀಡಿದರು.

ಮುಂದೆ ಆರಂಭವಾಗಿದ್ದು ದೂರದರ್ಶನ ಹಾಗೂ ಆಕಾಶವಾಣಿ ಕಲಾವಿದ ಖ್ಯಾತ ಶಹನಾಯಿ ವಾದಕ ಪಂ.ಬಸವರಾಜ ಭಜಂತ್ರಿ ಹಾಗೂ ಹೊಸರಿತ್ತಿಯ ಖ್ಯಾತ ತಬಲಾ ವಾದಕ ಪಂ.ಭೀಮಸೇನ ಮರೋಳ ಅವರ ಜುಗಲ್ ಬಂದಿ. ಒಂದೂವರೆ ಗಂಟೆಗಳ ಕಾಲ ಪಂ. ಬಸವರಾಜ ಅವರ ಧೂನ್ ಮತ್ತು ಮಾರೋಬಿಹಾಗ್ ರಾಗಗಳಿಗೆ ಪಂ.ಭೀಮಸೇನ್ ಮರೋಳ ನುಡಿಸಿದ ತಬಲಾವಾದನ ಸಂಗೀತ ಶ್ರೀಮಂತಿಗೆ ಸಾಕ್ಷಿಯಾಗಿತ್ತು. ಪ್ರೇಕ್ಷಕರು ಕರತಾಡನದ ಮೂಲಕ ಅವರನ್ನು ಅಭಿನಂದಿಸಿ ತಮ್ಮ ಸಂತಸ ವ್ಯಕ್ತಪಡಿಸಿದರು.

ಇನ್ನೊಬ್ಬ ಆಕಾಶವಾಣಿ ಕಲಾವಿದ ಪಂ. ಡಿ. ಕುಮಾರದಾಸ ಅವರ `ಮಾಲ್‌ಕಾಂಸ~ ಹಾಗೂ `ಹಮೀರ್~ ರಾಗಗಳು ಶರನ್ನವರಾತ್ರಿ ಸಂಗೀತೋತ್ಸವದಲ್ಲಿ ವಿಶೇಷ ಗಮನ ಸೆಳೆದವು. ಇವರಿಗೆ ಪಂ.ಭೀಮಸೇನ ಮರೋಳ ಅವರು ನೀಡಿದ ತಬಲಾ ಸಾಥ್‌ಅದ್ಬುತವಾಗಿತ್ತು. ಈ ಮಧ್ಯೆ ಪ್ರೇಕ್ಷಕರ ಅಪೇಕ್ಷೆಯ ಮೆರೆಗೆ ಪಂ.ಡಿ. ಕುಮಾರದಾಸ `ನಾನಾರಿಗಲ್ಲದವಳು ಬಿದಿರು~ ಎಂಬ ಹಾಡು ಎಲ್ಲರ ಮನಸೂರೆಗೊಂಡಿತು.

ಆಕಾಶವಾಣಿ ಕಲಾವಿದ ಖ್ಯಾತ ವಾಯಿಲಿನ್ ವಾದಕ ಹನುಮಂತಪ್ಪ ಕಾಮನಹಳ್ಳಿ ಅವರು ನುಡಿಸಿದ `ಕಿರವಾಣಿ~ ರಾಗಕ್ಕೆ ವೀರಭದ್ರಪ್ಪ ಬೆಣಕಲ್ಲ ನೀಡಿದ ತಬಲಾ ಸಾಥ್, ಸಂಗೀತ ಅಭಿಮಾನಿಗಳು ಗಂಧರ್ವ ಲೋಕ ಪ್ರವೇಶಿಸುವಂತೆ ಮಾಡಿತು.

ಹಿಂದೂಸ್ತಾನಿ ಸಂಗೀತ ಕಲಾವಿದ ಶಂಕ್ರಪ್ಪ ಭೋಕನವರ ಅವರ ಜುಮುರಾ, ತ್ರಿಕಾಲ್ ಹಾಗೂ ತೀರ್‌ಚಂದಿ ರಾಗಗಳನ್ನು ಆಲಿಸಿದ ಪ್ರೇಕ್ಷಕರು ಸ್ವಲ್ಪವೂ ಅಲುಗಾಡಲಿಲ್ಲ.

ನಂತರ ಕುಮಾರ ಪ್ರಶಸ್ತಿ ವಿಜೇತ ಹೊಳೆಯಪ್ಪ ಗವಾಯಿ, ಕುಮಾರ ಹಡಗಲಿ, ಭಾಗ್ಯಮ್ಮ ಕೋಡಬಾಳ, ಅಶೋಕ ದಾವಣಗೇರೆ, ದೇವಪ್ಪ ಕರಿ, ದೊಡ್ಡಯ್ಯ ಕುದರಿ, ಮಂಜುನಾಥ ಬಡಿಗೇರ, ಮಲ್ಲಿಕಾರ್ಜುನ ತೆಗ್ಗಿಹಳ್ಳಿ ಅವರ ಸಂಗೀತಕ್ಕೆ ಬಸಲಿಂಗಯ್ಯ ಹಿರೇಮಠ, ಷಡಕ್ಷರಿ ಶೀಲವಂತರ ತಬಲಾ ಸಾಥ್ ನೀಡಿದರು.
ಹುಸೇನ್‌ಬಾಬು ನಧಾಪ್ ಅವರ ಭೈರವಿ ರಾಗದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT