ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸೆಳೆದ ನೃತ್ಯ; ರಂಜಿಸಿದ ಗಾಯನ

ನಾದ-ನೃತ್ಯ
Last Updated 16 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಕಿರಿಯ ನರ್ತಕಿ
ನಾಟ್ಯಶ್ರೀ ನೃತ್ಯ ಶಾಲೆಯ ಸುಮಾ ನಾಗೇಶ್ ಮತ್ತು ಆರ್. ನಾಗೇಶ್ ಅವರು ಹಿರಿಯ ನರ್ತಕರಾಗಿ, ಶಿಕ್ಷಕರಾಗಿ ಮಾನಿತರು. ನಾಗೇಶ್ ಅವರು ನಟರಾಗೂ ಜನಾನುರಾಗಿ. ಅವರ ಮಗಳು ಮಾಧುರಿ ನಾಗೇಶ್ ಸಹ ಪೋಷಕರ ಮಾರ್ಗದಲ್ಲೇ ಹೆಜ್ಜೆ ಹಾಕುತ್ತಿದ್ದಾಳೆ. ತಾಯಿಯಿಂದಲೇ ನೃತ್ಯಾಭ್ಯಾಸ ಆರಂಭಿಸಿ, ಸೀನಿಯರ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಈಕೆ, ಹಿರಿಯ ಗುರು ಪ್ರೊ. ಎಂ.ಆರ್. ಕೃಷ್ಣಮೂರ್ತಿ ಅವರ ಕಲಾಕ್ಷಿತಿಯಲ್ಲಿ ಪ್ರೌಢ ವ್ಯಾಸಂಗ ಮಾಡುತ್ತಿದ್ದಾರೆ. ರಂಗ ಪ್ರವೇಶವನ್ನೂ ಮುಗಿಸಿದ್ದು, ಅನೇಕ ನೃತ್ಯ ರೂಪಕಗಳಲ್ಲಿ ಪಾಲ್ಗೊಂಡಿರುವರಲ್ಲದೆ, ಕೆಲ ಸಭೆಗಳಲ್ಲಿ ತನಿಯಾಗೂ ನರ್ತಿಸಿದ ಅನುಭವ ಈಕೆಯದ್ದು. ಜೊತೆಗೆ ಮಾಧುರಿ ಓದಿನಲ್ಲೂ ಮುಂದು. ಸಸ್ಯಶಾಸ್ತ್ರದಲ್ಲಿ ಎಂ.ಎಸ್‌ಸಿ. ಮಾಡಿ ಸ್ವರ್ಣ ಪದಕವನ್ನೂ ಗಳಿಸಿದ್ದಾರೆ.

ತನ್ನ ಪ್ರಸ್ತುತ ಕಾರ್ಯಕ್ರಮದಲ್ಲಿ ಮಾಧುರಿ ನಾಗೇಶ್, ಸಹಜವಾಗೇ, ವರ್ಣವನ್ನೇ ಪ್ರಧಾನವಾಗಿ ಆಯ್ದರು. ಪಾಪನಾಶಂ ಶಿವನ್ ಅವರ ಸ್ವಾಮಿನೀ ವರ್ಣವು ಪ್ರಸಿದ್ಧವಾದುದೇ. ಶ್ರೀರಂಜಿನಿ ರಾಗದ ವರ್ಣದಲ್ಲಿ ವಿರಹೋತ್ ಖಂಡಿತ ನಾಯಕಿಯ ಅಭಿನಯವನ್ನು ಸುಂದರವಾಗೇ ಅಭಿನಯಿಸಿದರು. ಉತ್ತಮ ನೃತ್ತ-ನೃತ್ಯಗಳಿಂದ ವರ್ಣದ ಪ್ರೌಢತೆಯನ್ನು ಕಾಪಾಡಿಕೊಂಡು ಹೋಗುವ ಪ್ರಯತ್ನ ಮಾಡಿದರು. ಆ ಮೊದಲು ಮಾಡಿದ ಅಲರಿಪು ಮುಂಬರವು ಕೃತಿಗಳ ದಿಕ್ಸೂಚಿಯಂತಿದ್ದವು. ತೋಡಿ ರಾಗದ ಅಷ್ಟಪದಿ ರಾಧೆ ಹರಿಯಲ್ಲಿ ಮತ್ತು ಕಮಾಚ್ ರಾಗದ ಜಾವಡಿಗಳಲ್ಲಿ ಅಭಿನಯ ಹಸನಾಗಿ ಮೂಡಿತು. ದೇವರನಾಮ (ವೆಂಕಟಾಚಲ ನಿಲಯಂ) ಮತ್ತು ತಿಲ್ಲಾನ (ಹಿಂದೋಳ)ಗಳೂ ಚುರುಕಾಗಿದ್ದವು. ಹೆಚ್ಚಿನ ಶಿಕ್ಷಣಗಳಿಂದ ಮಾಧುರಿ ನಾಗೇಶ್ ಲಯವನ್ನು ಪರಿಷ್ಕಾರಗೊಳಿಸಿಕೊಂಡು ಪ್ರಯತ್ನವನ್ನು ಪರಿಣಾಮಕಾರಿಯಾಗಿ ಮಾಡಿಕೊಳ್ಳಬಹುದು.

ಗಾನ ವಾರಿಧಿ
ಎಂ.ಎ. ನರಸಿಂಹಾಚಾರ್ ಅವರು ಗಾಯಕ, ಬೋಧಕ, ರಹಗಾರರಾಗಿ ಸಂಗೀತ ಕ್ಷೇತ್ರದಲ್ಲಿ ತ್ರಿವಿಧ ಸೇವೆ ಮಾಡಿರುವವರು. ಅವರ ಹೆಸರಿನಲ್ಲಿ ಸ್ಥಾಪಿಸಿರುವ  ಎಂ.ಎ. ನರಸಿಂಹಾಚಾರ್ ಮ್ಯೂಸಿಕ್ ಫೌಂಡೇಶನ್ ಆಶ್ರಯದಲ್ಲಿ 11ನೇ ಸಂಗೀತೋತ್ಸವ ಐದು ದಿನಗಳವರೆಗೆ ನಡೆಯಿತು. ಪ್ರತಿಭಾವಂತ ಪಿಟೀಲು ವಾದಕ ಎಚ್.ಕೆ. ವೆಂಕಟ್‌ರಾಂ ಅವರಿಗೆ ಗಾನವಾರಿಧಿ ಸನ್ಮಾನವನ್ನು ಪ್ರದಾನ ಮಾಡಲಾಯಿತು. ರಾಗಮಾಲಿಕೆಗಳ ಬಗೆಗೆ ಪ್ರಾತ್ಯಕ್ಷಿಕೆ ನೀಡಿದ ಮಾನಸಿ ಪ್ರಸಾದ್ ಹತ್ತಾರು ರಾಗಮಾಲಿಕೆಗಳನ್ನು ಸಾದರ ಪಡಿಸಿದರು. ವರ್ಣದಿಂದ ಲಾಲಿಯವರೆಗೆ ಹತ್ತಾರು ರಾಗಮಾಲಿಕೆಗಳನ್ನು ನಿರೂಪಿಸಿದರು. ತಂಜಾವೂರು ಶಂಕರ ಅಯ್ಯರ್ ಅವರ ರಂಜನಿಮಾಲಾ ಜನಾನುರಾಗಿ ಆದದ್ದೇ. ದೀಕ್ಷಿತರ ಶ್ರೀ ವಿಶ್ವನಾಥಂ ಭಜೇಹಂ ಚತುರ್ದಶ ರಾಗಮಾಲಿಕೆ. ಸ್ವಾತಿ ತಿರುನಾಳ್ ಅವರ ಸಾನಂದ ಕಮಲಾ ಮನೋಹರಿ ಯು 4 ರಾಗಗಳಲ್ಲಿ ಬೆಳಗಿತು. ಅಮೃತವರ್ಷಿಣಿ ಮತ್ತು ಆನಂದಭೈರವಿ ರಾಗಗಳಲ್ಲಿ ದ್ವಿರಾಗ ಪಲ್ಲವಿಯನ್ನು ಖಂಢ ಮಥ್ಯ ತಾಳದಲ್ಲಿ ಹಾಡಿ, ಶ್ರೀರಾಮನ ಮೇಲೆ ಲಾಲಿಯನ್ನು ನಿರೂಪಿಸಿ, ರಾಗಮಾಲಿಕೆಯ ಮೇಲೆ ಗಾಢ ಪರಿಣಾಮವನ್ನು ಬೀರಿದರು. ಪಿಟೀಲಿನಲ್ಲಿ ನಳಿನಾ ಮೋಹನ್, ಸಿ.ಚೆಲುವರಾಜ್ ಮೃದಂಗದ ಮೇಲೆ ಹಾಗೂ ಸುಕನ್ಯಾ ರಾಮಗೋಪಾಲ್ ಅವರು ಘಟದ ಮೇಲೆ ಒತ್ತಾಸೆ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT