ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸ್ಸಿಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ವ್ಯರ್ಥವಾಗದು

ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ
Last Updated 12 ಸೆಪ್ಟೆಂಬರ್ 2013, 6:15 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಸಾಕ್ಷರತೆ ಮಹತ್ವವನ್ನು ಎಲ್ಲರೂ ಅರಿತು ಅಕ್ಷರ ಕಲಿಯುವ ಉತ್ಸಾಹ ತೋರಿದರೆ ಮಾತ್ರ ಸಾಕ್ಷರತೆ ಗುರಿಯು ಪೂರ್ಣ ಪ್ರಮಾಣದಲ್ಲಿ ಈಡೇರಿದಂತಾಗುತ್ತದೆ. ಪ್ರಜ್ಞಾವಂತ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್‌.­ಎನ್‌.ಚಿನ್ನಪ್ಪ ಅಭಿಪ್ರಾಯ­ಪಟ್ಟರು.

ಅಂತರರಾಷ್ಟ್ರೀಯ ಸಾಕ್ಷರತಾ ದಿನಾ­ಚರಣೆ ಅಂಗವಾಗಿ ನಗರದ ಡಾ.­ಎ.ಪಿ.ಜೆ.ಅಬ್ದುಲ್‌ ಕಲಾಂ ಸಭಾಂಗಣ­ದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ­ಪಂಚಾಯಿತಿ, ಅಕ್ಷರನಂದಿ ಜಿಲ್ಲಾ ಸಾಕ್ಷ­ರತಾ ಸಮಿತಿ, ಜಿಲ್ಲಾ ಮತ್ತು ತಾಲ್ಲೂಕು ಲೋಕ ಶಿಕ್ಷಣ ಸಮಿತಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತ­ನಾಡಿದ ಅವರು, ಈಗಿನ ಮಕ್ಕಳ ಜೊತೆಗೆ ಹಿರಿಯರು ಸಹ ಅಕ್ಷರಗಳನ್ನು ಕಲಿಯಲು ಆಸಕ್ತಿ ತೋರಬೇಕು ಎಂದರು.

ಬಡತನ, ಕೌಟಂಬಿಕ ಸಮಸ್ಯೆ ಮತ್ತು ಇನ್ನಿತರ ಕಾರಣಗಳಿಂದ ಅಕ್ಷರ ಕಲಿ­ಯಲು ಸಾಧ್ಯವಾಗಲಿಲ್ಲ ಎಂದು ಬೇಸರ­ಪಡುವ ಬದಲು ಹಿರಿಯರು ಈಗಲೂ ಸಹ ಸಾಕ್ಷರತಾ ಅಭಿಯಾನದಲ್ಲಿ ಪಾಲ್ಗೊಂಡು ಅಕ್ಷರಗಳನ್ನು ಕಲಿಯ­ಬಹುದು. ಸಾಕ್ಷರರಾಗಲು ಬಯಸಿದಲ್ಲಿ, ಸರ್ಕಾರ ಸಂಪೂರ್ಣ ಸಹಕಾರ ನೀಡಲು ಸಿದ್ಧವಿದೆ. ಶಿಕ್ಷಣದಿಂದಾಗಿ ಹೊಸ ವಿಚಾರ­ಗಳನ್ನು ಕಲಿಯಬಹುದು ಮತ್ತು ಉತ್ತಮ ಸಮಾಜ ನಿಮಿರ್ಸಬಹುದು ಎಂಬುದು ಪ್ರತಿಯೊಬ್ಬರು ಮನಗಾಣ­ಬೇಕು ಎಂದು ಅವರು ಹೇಳಿದರು.

ಸಾಕ್ಷರತೆ ಕುರಿತು ವಿಶೇಷ ಉಪನ್ಯಾಸ ನೀಡಿದ ಶಿಕ್ಷಣ ತಜ್ಞ ಪ್ರೊ. ಕೋಡಿ­ರಂಗಪ್ಪ, ದೇಶದಲ್ಲಿ ಸಾಕ್ಷರತಾ ಆಂದೋ-ಲನ ತನ್ನದೇ ಮಹತ್ವ ಹೊಂದಿದೆ. ಆಂದೋಲನಕ್ಕೆ 20ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದ್ದು, ಅಪಾರ ಸಂಖ್ಯೆಯಲ್ಲಿ ಜನರು ಸಾಕ್ಷರ­ರಾಗಿದ್ದಾರೆ. 1992ರಲ್ಲಿ ಆರಂಭ­ಗೊಂಡ ‘ಅಕ್ಷರತೆನೆ’ ಎಂಬ ವಿನೂತನ ಕಾರ್ಯಕ್ರಮ ಸಂಚಲನವನ್ನೇ ಉಂಟು ಮಾಡಿತ್ತು. ಅಕ್ಷರತೆನೆಯ ಕಾರ್ಯ­ಕರ್ತರು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಿ ಅಕ್ಷರ ಅಭಿ­ಯಾನ ಕೈಗೊಂಡಿದ್ದರು ಎಂದು ವಿವ­ರಿಸಿದರು.

ದೇಶದಲ್ಲಿ ಈಗಲೂ ಶೇ 70ರಷ್ಟು ತಾಯಂದಿರು ಅನಕ್ಷರಸ್ಥರಾಗಿದ್ದಾರೆ. ಬೇರೆ ಬೇರೆ ಮಾರ್ಗೋಪಾಯಗಳನ್ನು ಕಂಡುಕೊಂಡಾದರೂ ತಾಯಂದಿರಿಗೆ ಅಕ್ಷರ ಕಲಿಸಬೇಕು. ಅವರು ಕಲಿತರೆ ಶಾಲೆಯೊಂದು ತೆರೆದಂತೆ. ಮನಸ್ಸಿಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಖಂಡಿತವಾಗಿಯೂ ಫಲ ನೀಡುತ್ತದೆ. ನಾವು ಕಲಿತು, ಇನ್ನೊಬ್ಬರಿಗೆ ಅಕ್ಷರ­ಜ್ಞಾನದ ಬೀಜ ಬಿತ್ತಬೇಕು. ಜಿಲ್ಲೆಯಲ್ಲಿ 3 ಲಕ್ಷ ಅನಕ್ಷರಸ್ಥರಿದ್ದಾರೆ ಎಂದು ಅವರು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪಿ.ವಿ.ರಾಘವೇಂದ್ರ ಹನುಮಾನ್‌ ಮಾತನಾಡಿ, ದೇಶದಲ್ಲಿ ವಿದ್ಯಾವಂತರ ಪ್ರಮಾಣ ಹೆಚ್ಚಿಸಲೆಂದೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿವೆ. ಹೀಗಿದ್ದರೂ ಕೆಲ ಮಕ್ಕಳು ಶಾಲೆಯಿಂದ ದೂರವುಳಿಯುತ್ತಿರುವುದು ಶೋಚ­ನೀಯ. ಶಿಕ್ಷಣ ಅಭಿವೃದ್ಧಿಯ ಸಂಕೇತ ಎಂಬುದನ್ನು ತಿಳಿಸಿಯಾದರೂ ಸಾಕ್ಷರರ ಸಂಖ್ಯೆ ಹೆಚ್ಚಳಗೊಳಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ­ಕಾರ್ಯನಿರ್ವಹಣಾಧಿಕಾರಿ ನೀಲಾ ಮಂಜುನಾಥ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಜಿತ್‌­ಪ್ರಸಾದ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಸುರೇಖಾ ವಿಜಯಪ್ರಕಾಶ್‌, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ದಸ್ತ­ಗಿರ್‌ಸಾಬ್ ಮತ್ತಿತರರು ಉಪಸ್ಥಿತ­ರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT