ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸ್ಸಿದ್ದರೆ ಮಾರ್ಗ

Last Updated 11 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಕಿರಣ್ ಜೊನ್ನಲಗಡ

ಐದು ಬಾರಿ ಪಿಯುಸಿ ಫೇಲಾಗಿದ್ದ ಯುವಕನ ಯಶೋಗಾಥೆ ಇದು. ತನ್ನ ವಾರಿಗೆಯ ಗೆಳೆಯರೆಲ್ಲ ಎಂಜಿನಿಯರಿಂಗ್ ಮುಗಿಸಿ ಹೊರಬರುವ ವೇಳೆಗೆ ಈ ಯುವಕ ಪಿಯುಸಿಯಲ್ಲಿ ತೇರ್ಗಡೆಯಾಗಿ ಹೋರ ಬಂದ!

ಐದು ಸಲ ಪರೀಕ್ಷೆಗೆ ಕುಳಿತು ಅಂತಿಮವಾಗಿ ಪಾಸಾದ ಯುವಕ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾನೆ. ಆತನೇ ಕಿರಣ್ ಜೊನ್ನಲಗಡ. ಬೆಂಗಳೂರು ಮೂಲದ ಕಿರಣ್‌ಗೆ ಅದ್ಯಾಕೋ ಪಿಯುಸಿ ಪರೀಕ್ಷೆ ಕಬ್ಬಿಣದ ಕಡಲೆಯಾಗಿತ್ತು. ಒಂದಲ್ಲ, ಎರಡಲ್ಲ ಐದು ಬಾರಿ ಪರೀಕ್ಷೆ ಕಟ್ಟಿ ಯಶಸ್ವಿಯಾದ. ಸಾಧಿಸುವ ಮನಸ್ಸಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಕಿರಣ್ ಉತ್ತಮ ಉದಾಹರಣೆ. ಪಿಯುಸಿಯಲ್ಲಿ ಫೇಲಾದೆ ಎಂದು ಕಿರಣ್ ಎಂದೂ ಕೊರಗಲಿಲ್ಲ. ಇಂದು ಫೇಲಾದರೇನಂತೆ, ನಾಳೆ ಪಾಸಾಗುತ್ತೇನೆ ಎಂಬ ಭರವಸೆಯೊಂದಿಗೆ ಐದು ಬಾರಿ ಪರೀಕ್ಷೆಗೆ ಕುಳಿತು ಯಶಸ್ವಿಯಾದ.

ಕಿರಣ್ ಪಿಯುಸಿಯಲ್ಲಿ ಪಾಸಾಗಿದ್ದು ದೊಡ್ಡ ಸಾಧನೆಯಯೆನಲ್ಲ! ಆದರೆ ಇಂದು ಜಾನ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದಲ್ಲಿ ಹ್ಯೂಮನ್ ಪ್ರೋಟಿನ್ ರೆಫರೆನ್ಸ್ ಡಾಟಾಬೇಸ್ ತಂಡದಲ್ಲಿ  ಕೆಲಸ ಮಾಡುತ್ತಿರುವುದು ದೊಡ್ಡ ಸಾಧನೆ.  ಈವರೆಗೂ ಸುಮಾರು 3,000 ಸಂಶೋಧಿತ ಹ್ಯೂಮನ್ ಪ್ರೊಟೀನ್ ಗಳನ್ನು ಎಂಟ್ರಿ ಮಾಡಿರುವುದು ವಿಶೇಷ. ಹೆಚ್ಚು ಅಂಕಗಳು ಬರಲಿಲ್ಲ ಅಥವಾ ಫೇಲಾದೆ ಎಂದು ಎಷ್ಟೋ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ, ‘ಪರೀಕ್ಷೆಯೇ ಜೀವನದ ಅಂತಿಮವಲ್ಲ, ಅದರಾಚೆಗೂ ಸುಂದರ ಬದುಕಿದೆ ಎಂಬುದನ್ನು ಮೊದಲು ಅರಿಯಬೇಕು’ ಎನ್ನುತ್ತಾರೆ ಕಿರಣ್.

ಫೇಲಾದಾಗ ಗೆಳೆಯರು, ಮನೆಯವರು ಗೇಲಿ ಮಾಡುವುದು ಸಹಜ. ಅದನ್ನು ಮೀರಿ ಬೆಳೆಯುವ ಮನಃಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಆಗ ನಮ್ಮ ಗುರಿ ತಲುಪಲು ಸಾಧ್ಯ ಎಂದು ಕಿರಣ್ ವಿಶ್ವಾಸದಿಂದ ಹೇಳುತ್ತಾರೆ. ಕರ್ನಾಟಕ ಸರ್ಕಾರದ ಇ-ಆಡಳಿತ ವಿಭಾಗದಲ್ಲಿ ಕೆಲ ವರ್ಷಗಳು ಕೆಲಸ ಮಾಡಿದ್ದಾರೆ ಕಿರಣ್‌. ಪ್ರಸ್ತುತ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ.

ವಿವೇಕ್ ಮದನ್

ಯುವಕ ವಿವೇಕ್ ಮದನ್ ಕೂಡ ಫೇಲಾದ ಮೇಲೆಯೇ ಜೀವನದಲ್ಲಿ ಯಶಸ್ವಿ ರಂಗಕರ್ಮಿಯಾಗಿದ್ದು. ಪಿಯುಸಿಯಲ್ಲಿ
ಶೇ. 50ರಷ್ಟು ಅಂಕಗಳಿಸಿದ್ದ ವಿವೇಕ್ ಪದವಿಯಲ್ಲಿ ಪರಿಸರ ವಿಜ್ಞಾನ ವಿಷಯವನ್ನು ಆಯ್ದುಕೊಂಡರು. ಮೊದಲ ವರ್ಷವೇ ಓದಲಾಗದೇ ಕಾಲೇಜಿನಿಂದ ಹೊರಬಿದ್ದರು. ವಿವೇಕ್ ಕುಟುಂಬದವರೆಲ್ಲರೂ ವಿದ್ಯಾವಂತರು. ಇಬ್ಬರು ಅಜ್ಜಂದಿರು ಪಿಎಚ್‌ಡಿ ಪದವೀಧರರು.

ಸುಶಿಕ್ಷಿತರೇ ತುಂಬಿರುವ ಮನೆಯಲ್ಲಿ ವಿದ್ಯಾಭ್ಯಾಸ ಮೊಟಕು ಗೊಳಿಸುವುದು ಅಸಾಧ್ಯದ ಮಾತಾಗಿತ್ತು. ಮನೆಯವರ ಭಾರೀ ವಿರೋಧದ ನಡುವೆಯೇ ಬಿಎಸ್ಸಿಗೆ ಗುಡ್‌ಬೈ ಹೇಳಿದ ವಿವೇಕ್ ರಂಗಭೂಮಿಯತ್ತ  ಹೆಜ್ಜೆ ಹಾಕಿದರು. 19ನೇ ವಯಸ್ಸಿಗೆ ಕಾಲೇಜು ಬಿಟ್ಟ ವಿವೇಕ್ ನಟನೆ ಮತ್ತು ನಿರ್ದೇಶನದ ಮಜಲುಗಳನ್ನು ಕಲಿತು ಒಂದೇ ವರ್ಷದಲ್ಲಿ ನಾಟಕವೊಂದನ್ನು ನಿರ್ದೇಶಿಸುವ ಮಟ್ಟಕ್ಕೆ ಬೆಳೆದರು.

ಮತ್ತೊಂದು ವಿಪರ್ಯಾಸವೆಂದರೆ ಶಾಲಾ ಮತ್ತು ಕಾಲೇಜು ದಿನಗಳಲ್ಲಿ ಸಾಂಸ್ಕೃತಿಕ ಮತ್ತು ನಾಟಕ ತಂಡಗಳಿಂದ ವಿವೇಕ್ ಅವರನ್ನು ಹೊರ ಹಾಕಲಾಗಿತ್ತು. ಅಂದು ನಾಟಕದ ಬಗ್ಗೆ ಪ್ರಾಥಮಿಕ ಜ್ಞಾನವು ಇಲ್ಲದಿದ್ದ ವಿವೇಕ್ ಇಂದು ರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿ ಯುವ ರಂಗಕರ್ಮಿಯಾಗಿದ್ದಾರೆ. ‘ನನಗೆ ಬಿಎಸ್ಸಿ ಪದವಿ ಓದುವುದು ಕಷ್ಟವೆನಿಸಿದಾಗ ಅದರಿಂದ ಹೊರಬಂದು, ನನ್ನ ಅಭಿರುಚಿಯ ಮಾರ್ಗ ಕಂಡುಕೊಂಡಿದ್ದರಿಂದ ಇಂದು ಯಶಸ್ಸು ಪಡೆದಿದ್ದೇನೆ’ ಎನ್ನುತ್ತಾರೆ ವಿವೇಕ್. ಒಂದು ವೇಳೆ ಮನೆಯವರ ಬಲವಂತಕ್ಕಾಗಿ ನಾನು ಬಿಎಸ್ಸಿ ಮುಂದುವರೆಸಿದ್ದರೆ ಈವೊತ್ತಿಗೆ ಏನಾಗುತ್ತಿದ್ದೆನೋ ನನಗೆ ಗೊತ್ತಿಲ್ಲ ಎಂದು ಮುಗುಳ್ನಗುತ್ತಾರೆ. ಪ್ರಸ್ತುತ ಮನರಂಜನಾ ಸಂಸ್ಥೆಯನ್ನು ಸ್ಥಾಪಿಸಿರುವ ವಿವೇಕ್, ಅದರ ಮುಖಾಂತರ ಹೊಸ ಹೊಸ ನಾಟಕಗಳ ಪ್ರಯೋಗ ಮಾಡುತ್ತಿದ್ದಾರೆ. ಹಾಗೆಯೇ ಸಂಗೀತದ ಆಲ್ಬಂಗಳನ್ನು ಹೊರತರುತ್ತಿದ್ದಾರೆ.

ಕಾರ್ತಿಕ್ ನಾರಾಲಾ ಶೆಟ್ಟಿ

‘ಕಾರ್ತಿಕ್, ನೀನು ಮತ್ತು ನಿನ್ನ ಗೆಳೆಯರು ಈ ವರ್ಷ ಪಾಸಾಗಲ್ಲ, ಶಾಲೆಗೂ ಕೆಟ್ಟ ಹೆಸರು ತಪ್ಪಿದ್ದಲ್ಲ’ ಎಂದು ನಿಂದಿಸುತ್ತಿದ್ದ ಗುರುಗಳೇ ಇಂದು ಕಾರ್ತಿಕ್ ಸಾಧನೆ ಕಂಡು ಹೆಮ್ಮೆ ಪಡುತ್ತಾರೆ. ಹೌದು, ಕಾರ್ತಿಕ್ ಇಂದು ಅಮೆರಿಕದಲ್ಲಿ ಯುವ ಉದ್ಯಮಿಯಾಗಿ ಹೊರ ಹೊಮ್ಮಿದ್ದಾರೆ. ನ್ಯೂಯಾರ್ಕ್‌ನಲ್ಲಿ ‘ಸೋಷಿಯಲ್ ಬ್ಲಡ್ ಇಂಕ್’ ಎಂಬ ಕಂಪೆನಿಯನ್ನು ಆರಂಭಿಸಿ ಲಕ್ಷಾಂತರ ಡಾಲರ್ ವಹಿವಾಟು ನಡೆಸುತ್ತಿದ್ದಾರೆ. ‘ಕಾಲೇಜಿನಲ್ಲಿ ಓದುವಾಗ ಅಪ್ಪ ಕಷ್ಟಪಟ್ಟು ಸಂಪಾದಿಸಿದ ಹಣದಿಂದ ನಾನು ಪದವಿ ಪಡೆಯಬೇಕೇ ಎಂಬ ಪ್ರಶ್ನೆ ನನ್ನಲ್ಲಿ ಮೂಡಿತು. ಈ ಪ್ರಶ್ನೆ ನನ್ನನ್ನು ಮತ್ತೆ ಮತ್ತೆ ಕಾಡಲಾರಂಭಿಸಿತು. ಈ ಪದವಿ ಪಡೆದು ನಾನು ಸಾಧಿಸುವುದಾದರೂ ಏನು? ಎಂಬ ಚಿಂತೆ ಬಲವಾಗಿ ಕಾಡಿತು. ಕೂಡಲೇ ಕಾಲೇಜು ತೊರೆದು 2011ರಲ್ಲಿ ‘ಸೋಶಿಯಲ್ ಬ್ಲಡ್ ಇಂಕ್ ಕಂಪೆನಿಯನ್ನು ಕಟ್ಟಿದೆ’ ಎಂದು ಕಾರ್ತಿಕ್ ಹೆಮ್ಮೆಯಿಂದ ನುಡಿಯುತ್ತಾರೆ.

ನಾನು ಪದವಿ ಪಡೆಯಲಿಲ್ಲ. ಆದರೆ ಹಾರ್ವಡ್, ಸ್ಟ್ಯಾನ್‌ಫೋರ್ಡ್, ಎಂಐಟಿ,  ಐಐಎಂ ಸೇರಿದಂತೆ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಪದವಿ ಪಡೆದಿರುವವರು ನಮ್ಮ ಕಂಪೆನಿಯಲ್ಲಿ  ಕೆಲಸ ಮಾಡುತ್ತಿದ್ದಾರೆ ಎನ್ನುತ್ತಾರೆ ಕಾರ್ತಿಕ್. ಒಂದು ವೇಳೆ ಅಂದು ಕಾಲೇಜು ಬಿಡುವ ನಿರ್ಧಾರ ಕೈಗೊಳ್ಳದಿದ್ದಿದ್ದರೆ ಇಂದು ನಾನು ಯಾವುದೋ ಒಂದು ಕಂಪೆನಿಯಲ್ಲಿ ಕೆಲಸ ಮಾಡಬೇಕಾಗಿತ್ತು. ಅಂದಿನ ನಿರ್ಧಾರ ನನಗೆ ಉಜ್ವಲ ಭವಿಷ್ಯ, ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನಮಾನವನ್ನು ನೀಡಿದೆ ಎಂದು ಕಾರ್ತಿಕ್ ಹೇಳುತ್ತಾರೆ.

‘ಸೋಷಿಯಲ್ ಬ್ಲಡ್ ಆರ್ಗ್’ ಎಂಬ ರಕ್ತಸಂಗ್ರಹ ಮತ್ತು ರಕ್ತದಾನ ಮಾಹಿತಿಯ ವೆಬ್‌ಸೈಟ್ ತೆರೆಯುವ ಮೂಲಕ ಕಾರ್ತಿಕ್ ಸಮಾಜಮುಖಿ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ವೆಬ್‌ಸೈಟ್ ಮುಖಾಂತರ ರಕ್ತದ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದು. ಇದು 20 ದೇಶಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಬಡವರಿಗೆ ಉಚಿತ ಸೇವೆ ನೀಡಲಾಗುತ್ತಿದೆ ಎನ್ನುತ್ತಾರೆ ಕಾರ್ತಿಕ್. ಕಾರ್ತಿಕ್ ಸೇವೆಗೆ ಅಮೆರಿಕ 2012ರಲ್ಲಿ ಯುವ ಸಮಾಜ ಸೇವಾಕರ್ತ ಎಂಬ ಬಿರುದು ನೀಡಿ ಸನ್ಮಾನಿಸಿದೆ.

ಅಕ್ಷರ್

ಬೆಳಗ್ಗೆ ಪರೀಕ್ಷೆ ಇದ್ದರೂ ರಾತ್ರಿ ಪೂರ್ತಿ ವಿಡಿಯೊ ಗೇಮ್ ಆಡುತ್ತಿದ್ದ ಅಕ್ಷರ್‌ಗೆ ಅದ್ಯಾಕೋ ಅಕ್ಷರಗಳು ತಲೆಗೆ ಹತ್ತಲಿಲ್ಲ. ಆದರೆ ವ್ಯಾಪಾರ ಅಕ್ಷರ್‌ಕೈಹಿಡಿಯಿತು. ಇಂದು ದೇಶದ ಭರವಸೆಯ ಯುವ ವ್ಯಾಪಾರಸ್ಥನಾಗಿ ಅಕ್ಷರ್ ಹೆಸರು ಮಾಡಿದ್ದಾರೆ.

ಮಗ ಚೆನ್ನಾಗಿ ಓದಿ ಉನ್ನತ ಹುದ್ದೆ ಪಡೆಯಬೇಕು ಎಂಬುದು ಪೋಷಕರ ಹಂಬಲ. ಹಾಗಾಗಿ ಆಸ್ಟ್ರೇಲಿಯಾಗೆ ಓದಲು ಅಕ್ಷರ್‌ನನ್ನು ಕಳುಹಿಸಿದರು. ಎರಡು ವರ್ಷ ಆಟ, ವಿಡಿಯೊ ಗೇಮ್‌ನಲ್ಲೇ ಕಾಲ ಕಳೆದ ಅಕ್ಷರ್‌ನ ಶೈಕ್ಷಣಿಕ ಪ್ರಗತಿ ಶೂನ್ಯವಾಗಿತ್ತು. ವಿದ್ಯಾಭ್ಯಾಸವನ್ನು ಒಂದೇ ವರ್ಷಕ್ಕೆ ಮೊಟಕುಗೊಳಿಸಿ ಭಾರತಕ್ಕೆ ವಾಪಸ್ಸಾದರು.

ಆಸ್ಟ್ರೇಲಿಯಾದಿಂದ ಮರಳಿ ಬಂದಾಗ ಮನೆಯವರು, ಸಂಬಂಧಿಕರು ಮತ್ತು ಗೆಳೆಯರು ಇವನು ಉದ್ಧಾರವಾಗಲ್ಲ ಎಂದೇ ತೀರ್ಮಾನಿಸಿದ್ದರು. ಸ್ವಂತ ಪರಿಶ್ರಮದ ಮೂಲಕ ಸಣ್ಣ ವ್ಯಾಪಾರ ಆರಂಭಿಸಿದ ಅಕ್ಷರ್ ಒಂದೆರಡು ವರ್ಷಗಳಲ್ಲಿ ಅದು ಬೃಹತ್ತಾಗಿ ಬೆಳೆಯುತ್ತದೆ ಎಂದು ಊಹಿಸಿರಲಿಲ್ಲವಂತೆ.

‘ಅಂದು ನನ್ನ ಬಗ್ಗೆ ತಾತ್ಸರದಿಂದ ಮಾತನಾಡಿದ್ದ ಗೆಳೆಯರು ಮತ್ತು ಸಂಬಂಧಿಕರು ನನ್ನ ಯಶಸ್ಸನ್ನು ನೋಡಿ ಇಂದು ಸಂತೋಷ ಪಡುತ್ತಿದ್ದಾರೆ’ ಎಂದು ಅಕ್ಷರ್ ಸಂಭ್ರಮದಿಂದ ನುಡಿಯುತ್ತಾರೆ.

ಪದವಿ ಓದಿ ಕಂಪೆನಿಗಳಲ್ಲಿ ಅಥವಾ ಸರ್ಕಾರದ ಇಲಾಖೆಗಳಲ್ಲಿ ಕೆಲಸ ಮಾಡುವುದಕ್ಕಿಂತ, ಸ್ವತಂತ್ರವಾಗಿ ವ್ಯಾಪಾರ ಮಾಡುತ್ತ ನೂರಾರು ಜನರಿಗೆ ಉದ್ಯೋಗ ನೀಡುವುದರಲ್ಲೇ  ತೃಪ್ತಿ ಇದೆ.

‘ನನಗೆ ತಿಳಿದಂತೆ ವಿದ್ಯಾಭ್ಯಾಸದಲ್ಲಿ ಜೀವನದ ಯಶಸ್ಸು ಅಡಗಿಲ್ಲ, ಆ ಯಶಸ್ಸು ನಮ್ಮ ಆಲೋಚನೆ ಮತ್ತು ಆಯ್ಕೆಯ ಕ್ಷೇತ್ರದಲ್ಲಿದೆ’ ಎನ್ನುತ್ತಾರೆ ಅಕ್ಷರ್. ವ್ಯಾಪಾರ ಕ್ಷೇತ್ರದಲ್ಲಿ ಲಾಭ ಮತ್ತು ನಷ್ಟ ಸಮಭಾಗಿಗಳು. ನಷ್ಟವಾಗದಂತೆ ಎಚ್ಚರವಹಿಸಿ ವ್ಯಾಪಾರ ಮಾಡುವುದು ಒಳಿತು ಎಂದು ಯುವ ವ್ಯಾಪಾರಸ್ಥರಿಗೆ ಅಕ್ಷರ್ ಕಿವಿ ಮಾತು ಹೇಳುತ್ತಾರೆ. ‘ನಿನ್ನೆಗಿಂತ ಈ ದಿನ ಚೆನ್ನಾಗಿರಲಿ ಎಂಬುದೇ ನನ್ನ ಗುರಿ, ಇದೇ ನನ್ನ ಯಶಸ್ಸಿನ ಮೂಲ ಮಂತ್ರ’ ಎನ್ನುತ್ತಾರೆ ಅವರು. ಅಕ್ಷರ್ ಸಾಧನೆಗೆ ಅಂತರರಾಷ್ಟ್ರೀಯ ಮಟ್ಟದ ಹಲವಾರು ಸಂಘ ಸಂಸ್ಥೆಗಳು ಮತ್ತು ಉದ್ಯಮಗಳು ಸನ್ಮಾನಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT