ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸ್ಸಿನ ಲಗಾಮಿಗೆ ಯೋಗ ಅಸ್ತ್ರ

Last Updated 17 ಜನವರಿ 2012, 5:50 IST
ಅಕ್ಷರ ಗಾತ್ರ

ಮಡಿಕೇರಿ: ಯೋಗ-ಧ್ಯಾನ ಅಸ್ತ್ರದ ಮೂಲಕ ಹುಚ್ಚುಕೋಡಿ ಮನಸ್ಸು ನಿಯಂತ್ರಿಸುವುದು ಸಾಧ್ಯ. ನಿಯಂತ್ರಿತ ಮನಸ್ಸು ಯಾವಾಗಲೂ ಜನಹಿತವಾಗಿರುತ್ತದೆ ಎಂದು  ಖ್ಯಾತ ಧ್ಯಾನ ಗುರು  ಶ್ರೀ ಎಂ (ಮುಮ್ತಾಜ್ ಅಲಿ) ಹೇಳಿದರು.

ನಗರದ ಭಾರತೀಯ ವಿದ್ಯಾ ಭವನವು ಸೋಮವಾರ ಆಯೋಜಿಸಿದ ಉಪನ್ಯಾಸ ಕಾರ್ಯ ಕ್ರಮದಲ್ಲಿ ಅವರು ಭಗವದ್ಗೀತಾದಲ್ಲಿ ಪ್ರಸ್ತಾಪ ವಾಗಿರುವ ಧ್ಯಾನ ಯೋಗದ ಕುರಿತು ಮಾತನಾಡಿದರು.

ಭಗವದ್ಗೀತೆಯಲ್ಲಿ ಕೃಷ್ಣ ಪರಮಾತ್ಮನು ಅರ್ಜುನನಿಗೆ ಧ್ಯಾನ ಯೋಗದ ಬಗ್ಗೆ ಪ್ರಸ್ತಾಪಿಸುತ್ತ, ಹುಚ್ಚುಕೋಡಿ ಮನಸ್ಸನ್ನು ನಿಯಂತ್ರಿಸಲು ಯೋಗ-ಧ್ಯಾನ ಅವಶ್ಯಕವಾಗಿದೆ. ಮನಸ್ಸಿಗೆ ಉತ್ತಮ ಹವ್ಯಾಸಗಳನ್ನು ಹಚ್ಚುವಲ್ಲಿ ಯೋಗದ ಕೊಡುಗೆ ಸಾಕಷ್ಟಿದೆ ಎಂದರು.

ಮೂಲತಃ ಮನಸ್ಸು ಹವ್ಯಾಸಗಳ ದಾಸ. ಹೀಗಾಗಿಯೇ ಮನಸ್ಸು ಯಾವಾಗಲೂ ಯಾವು ದಾದರೂ ಒಂದು ಹವ್ಯಾಸಕ್ಕೆ ಕಟುಬೀಳುವುದು. ಇಂತಹ ಮನಸ್ಸನ್ನು ಒಳ್ಳೆಯ ಹವ್ಯಾಸಗಳಿಂದ ನಿಯಂತ್ರಿಸಬಹುದು. ಈ ಮೂಲಕ ಮನಸ್ಸನ್ನು ಉತ್ತಮ ಸ್ನೇಹಿತನನ್ನಾಗಿ ಮಾಡಿಕೊಳ್ಳಬಹುದು ಎಂದು ತಿಳಿಸಿದರು.

ಇಂದಿನ ಜಗತ್ತಿನಲ್ಲಿ ಎಲ್ಲಿ ನೋಡಿದರೂ ಮನಸ್ಸನ್ನು ಆಕರ್ಷಿಸುವ, ಪ್ರಚೋದನಕಾರಿ ಮಾಡುವ ಸಂಗತಿಗಳೇ ಕಾಣುತ್ತವೆ. ಇಂತಹ ಸಂದರ್ಭದಲ್ಲಿ ಮನಸ್ಸನ್ನು ಶಾಂತಚಿತ್ತವಾಗಿಸಲು ಯೋಗದ ಪಾತ್ರ ದೊಡ್ಡದು ಎಂದರು.

ಹಸಿವು, ಉಡುಗೆ- ತೊಡುಗೆಗಿಂತ ಇಂದು ಮನಸ್ಸನ್ನು ಅಹಂಕಾರದ ಭಾವವು ಹೆಚ್ಚು ವಿಚಲಿತವಾಗಿಸುತ್ತಿದೆ. ನೆರೆಮನೆಯವರ, ಸಂಬಂಧಿಕರ ಏಳಿಗೆಯನ್ನು ಈ  ಮನಸ್ಸು ಸಹಿಸುತ್ತಿಲ್ಲ. ಇದನ್ನು ನಿಯಂತ್ರಿಸದೇ ಧ್ಯಾನ ಸಾಧ್ಯವಾಗದು ಎಂದರು.

ಆರಂಭದಲ್ಲಿ ಮನುಷ್ಯನ ಮನಸ್ಸು ಸ್ವಹಿತವನ್ನಷ್ಟೇ ಬಯಸುತ್ತದೆ. ಮನಸ್ಸು ಬೆಳೆದಂತೆ ಕುಟುಂಬದವರ ಬಗ್ಗೆ, ತದನಂತರ ನೆರೆಹೊರೆಯವರ ಬಗ್ಗೆ ಚಿಂತಿಸುತ್ತದೆ. ಅಂತಿಮವಾಗಿ ಅಂದರೆ ಸಮಾಜದ ಎಲ್ಲ ಜನರ ಒಳಿತಿನ ಬಗ್ಗೆ ಮನಸ್ಸು ಯೋಚಿಸಿದಾಗ ಅದು ಪಕ್ವವಾದಂತೆ. ಅದು ಧ್ಯಾನಕ್ಕೆ ಸೂಕ್ತ ಸಮಯ ಎಂದು ಅಭಿಪ್ರಾಯ ಪಟ್ಟರು.

ಯೋಗ, ಧ್ಯಾನವೆಂದರೆ ಎಲ್ಲವನ್ನೂ ತ್ಯಜಿಸುವುದಲ್ಲ. ನಾವು ಮಾಡುವ ಕೆಲಸವನ್ನು ಅಚ್ಚು ಕಟ್ಟಾಗಿ ಯಾವುದೇ ಫಲಾಪೇಕ್ಷೆ ಇಲ್ಲದೇ ಮಾಡುವ ಕಾಯಕವೇ ಇದಾಗಿದೆ ಎಂದು ಕೃಷ್ಣ ಭಗವದ್ಗೀತೆಯಲ್ಲಿ ಉಲ್ಲೇಖಿಸಿರುವ ಮಾತನ್ನು ಪ್ರಸ್ತಾಪಿಸಿದರು.

ಯೋಗ-ಧ್ಯಾನವನ್ನು ಮಾಡಲು ಕಾಡಿಗೆ ಹೋಗಬೇಕೆಂದಿಲ್ಲ. ನಾವು ವಾಸಿಸುವ ಸ್ಥಳದಲ್ಲಿ, ನಮ್ಮ ಮನೆಯಲ್ಲಿ ಅಥವಾ ಕಚೇರಿಯಲ್ಲೂ ಮಾಡಬಹುದಾಗಿದೆ. ಮನಸ್ಸು ಪಕ್ವವಾಗಿರಬೇಕಷ್ಟೇ ಎಂದು ಹೇಳಿದರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT