ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸ್ಸಿನಲ್ಲಿದ್ದಂತೆ ಕೃತಕ ಕೈ ಚಲನೆ

Last Updated 25 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಪೆಂಟಗನ್ ಬೆಂಬಲಿತ ವಿಜ್ಞಾನಿಗಳು ಆಧುನಿಕ ಮೆದುಳು ನಿಯಂತ್ರಿತ ಕೃತಕ (ಪ್ರಾಸ್ಥೆಟಿಕ್) ರೋಬೊಟ್ ಕೈಯೊಂದನ್ನು ತಯಾರಿಸಿ ತಂತ್ರಜ್ಞಾನ ಲೋಕದಲ್ಲಿ ಬೆರಗು ಮೂಡಿಸಿದ್ದಾರೆ. 

ನರವಿಜ್ಞಾನಿಗಳು ಮತ್ತು ಜೈವಿಕ ಎಂಜಿನಿಯರ್‌ಗಳ ತಂಡದ `ದಿ ಲ್ಯಾನ್ಸೆಟ್' ವರದಿ ಪ್ರಕಾರ, `ಮನಸ್ಸಿನಿಂದ ನಿಯಂತ್ರಿತವಾದ ಈ ಕೃತಕ ಅಂಗವು ಬಹಳ ಅದ್ಭುತವಾಗಿದೆ. ದೀರ್ಘಾವಧಿ ಯಿಂದ ಪಾರ್ಶ್ವವಾಯು ಪೀಡಿತನಾದ ವ್ಯಕ್ತಿಯ ನೈಸರ್ಗಿಕವಾದ ಮತ್ತು ಅಂತರ್ಬೋಧೆಯ ಸಂದೇಶಗಳನ್ನು ಈ ಕೃತಕ ಕೈ ತಕ್ಷಣ ಗ್ರಹಿಸಿಕೊಳ್ಳಬಲ್ಲದಾಗಿದೆ.  ಮರುಕ್ಷಣವೇ ಈ ಕೈ ತನ್ನನ್ನು ಅಪ್ಪಿಕೊಂಡಿರುವ ದೇಹದ ಒಡೆಯ ತನ್ನ ದೈನಂದಿನ ಚಟುವಟಿಕೆಗಳನ್ನು ಇತರೆ ಸಾಮಾನ್ಯರಂತೆ ನಿರ್ವಹಿಸಲು ಅವಕಾಶವಾಗುವಂತೆ ಮಾಡುತ್ತದೆ. ನೈಸರ್ಗಿಕವಾದ ಮತ್ತು ಅಂತರ್ಬೋಧೆಯ ಸಂದೇಶಗಳನ್ನು ವಿದ್ಯುತ್ ಕಾಂತೀಯ ಸಂಜ್ಞೆಗಳಾಗಿಸಿ, ನಂತರ ಕಂಪ್ಯೂಟರ್ ಕೋಡ್‌ಗೆ ಪರಿವರ್ತಿಸಿ, ಲಿಪ್ಯಂತರಗೊಳಿಸಿ ಕೃತಕ ಅಂಗದ ಚಲನೆಗೆ ಆದೇಶ ತಲುಪಿ ಜಾರಿಯಾಗುವಂತೆ ಮಾಡುತ್ತದೆ ಈ ರೋಬೊ ಆರ್ಮ್ (ಯಾಂತ್ರಿಕ ಕೈ) ತಂತ್ರಜ್ಞಾನ'.

ಚಲನೆಗೆ ಸಂಬಂಧಿಸಿದ ವಿದ್ಯುತ್‌ಕಾಂತೀಯ ಸಂಜ್ಞೆಗಳನ್ನು(ಎಲೆಕ್ಟ್ರಿಕ್ ಸಿಗ್ನಲ್) ದೇಹಕ್ಕೆ ಹೊಂದಿಕೊಂಡಿರುವ ಈ ಕೃತಕ ಅಂಗಕ್ಕೆ ತಲುಪಿಸಿ, ಮೆದುಳು ಹಾಗೂ ಕೃತಕ ಯಂತ್ರದ ನಡುವೆ ಸರಾಗ ಸಂಪರ್ಕ ಸಾಧ್ಯವಾಗುವಂತೆ ಮಾಡುವುದು ಸಂಶೋಧಕರ ಬಹಳ ದಿನದ ಕನಸಾಗಿತ್ತು. ಅದು ಈಗ ಈಡೇರಿದಂತಾಗಿದೆ.

`ನಿಖರವಾಗಿ ಹಾಗೂ ಯಾವುದಏ ಹಾನಿಯಾಗದಂತೆ ರೋಬೊಟ್ ಪ್ರೇರಿತ ಕೃತಕ ಅಂಗವನ್ನು ನಿಯಂತ್ರಿಸಲು, ಅಂಗ ಚಲನೆ ಸೂಚಿಸುವ ಮೆದುಳಿನ ಸಂಕೇತಗಳನ್ನು ಕಂಪ್ಯೂಟರ್ ಸಂಕೇತಗಳನ್ನಾಗಿ ಭಾಷಾಂತರಿಸುವುದು ವಿಜ್ಞಾನಿಗಳ ಎದುರಿಗಿದ್ದ ದೊಡ್ಡ ಸವಾಲಾಗಿತ್ತು. ಕಂಪ್ಯೂಟರ್‌ನ ಸಂಕೀರ್ಣ ಮಾಹಿತಿ ಕೋಶ(ಕಾಂಪ್ಲೆಕ್ಸ್ ಲೈಬ್ರರಿ) ಹಾಗೂ ಮೆದುಳಿನ ಸಂಪರ್ಕಗಳನ್ನೊಳಗೊಂಡ ಅಲ್ಗಾರಿದಮ್ (ಕ್ರಮಬದ್ಧವಾದ ಕಾರ್ಯವಿಧಾನ)ನಿಂದಾಗಿ ಮನಸ್ಸಿನ ನಿಯಂತ್ರಣಕ್ಕೊಳಪಟ್ಟ ಸಮರ್ಥ ಕೃತಕ ಅಂಗವೊಂದನ್ನು ರೂಪಿಸಲು ವಿಜ್ಞಾನಿಗಳಿಗೆ ಈಗ ಸಾಧ್ಯವಾಗಿದೆ' ಎನ್ನುತ್ತಾ ಹರ್ಷ ವ್ಯಕ್ತಪಡಿಸುತ್ತಾರೆ ನ್ಯೂರೋಬಯಾಲಜಿ ಪ್ರಾಧ್ಯಾಪಕ ಆಂಡ್ರ್ಯೂ ಶ್ವಾರ್ಟ್ಜ್.

ಕುಗ್ಗದ ಮೆದುಳು ನಿಯಂತ್ರಿತ ಚಲನೆಯನ್ನು ನಿಕಟವಾಗಿ ಅನುಕರಿಸುವ ಮಾಡೆಲ್ -ಬೇಸ್ಡ್ ಕಂಪ್ಯೂಟರ್ ಅಲ್ಗಾರಿದಮ್‌ನ್ನು ಉಪಯೋಗಿಸಿಕೊಂಡು ನಿಖರವಾಗಿ ಮತ್ತು ಸಹಜವಾಗಿ ಚಲಿಸುವ ಕೃತಕ ಕೈ ಯೊಂದನ್ನು ತಯಾರಿಸಲಾಯಿತು. ಇದು ಹಿಂದಿನ ಪ್ರಯತ್ನ ಗಳಿಗಿಂತ ಉತ್ತಮವಾಗಿದೆ ಎಂಬುದಾಗಿ ಅವರು ವಿವರಣೆ ನೀಡುತ್ತಾರೆ. 

ಪೆನ್ಸಿಲ್ವೇನಿಯಾದ ಪಿಟ್ಸ್‌ಬರ್ಗ್ ವಿಶ್ವವಿದ್ಯಾಲಯದ ಈ ತಂಡ, ತಾವು ರೂಪಿಸಿದ ಕೃತಕ ಕೈನ ಕಾರ್ಯವೈಖರಿ ಖಚಿತಪಡಿಸಿಕೊಳ್ಳಲು ಪಾರ್ಶ್ವವಾಯು ಪೀಡಿತ 52 ವರ್ಷದ ಮಹಿಳೆಯನ್ನು ಆಯ್ಕೆ ಮಾಡಿಕೊಂಡರು. ಆ ಮಹಿಳೆಯ ದೇಹದ ಎಡ ಭಾಗ ಕತ್ತಿನಿಂದ ಕಾಲಿನವರೆಗೆ ಪಾರ್ಶ್ವವಾಯುವಾಗಿತ್ತು. ಇದರಿಂದ ಆಕೆಗೆ ತನ್ನ ಕೈ ಹಾಗೂ ಕಾಲುಗಳನ್ನು ಸರಿಸಲು ಆಗುತ್ತಿರಲಿಲ್ಲ. ಈ ಸ್ಥಿತಿಗೆ `ಸ್ಪೈನೋಸೆರೆಬೆಲ್ಲಾರ್ ಡಿಜನರೇಷನ್' ಎಂದು ಕರೆಯುತ್ತಾರೆ. 

ತಂತ್ರಜ್ಞರ ತಂಡ, ಮೊದಲು ಈ ಮಹಿಳೆಯ ಮಿದುಳಿನ ಎಡಪಾರ್ಶ್ವದ ಮೋಟರ್ ಕೋರ್ ಟೆಕ್ಸ್‌ಗೆ ಎರಡು `ಮೈಕ್ರೊ ಎಲೆಕ್ಟ್ರೋಡ್ ಅರೆ'ಗಳನ್ನು (ಮೆದುಳಿನ ಸಂಕೇತಗಳನ್ನು ಕಳುಹಿಸುವ ಅಥವಾ ಸ್ವೀಕರಿಸುವ ಒಂದು ಸಾಧನ) ಅಳವಡಿಸಿದರು.

ಎರಡು ವಾರಗಳ ನಂತರ ಶಸ್ತ್ರಚಿಕಿತ್ಸೆ ನಡೆಸಿ ರೊಬೊ ನಿಯಂತ್ರಿತ ಕೃತಕ ಕೈಯವನ್ನು ಮಹಿಳೆಯ ದೇಹಕ್ಕೆ ಜೋಡಿಸಿದರು. ಶಸ್ತ್ರಚಿಕಿತ್ಸೆಯಿಂದ ಆಕೆ  ತುಸು ಚೇತರಿಸಿಕೊಂಡ ತಕ್ಷಣ 14 ವಾರಗಳ ತರಬೇತಿ ಆರಂಭಿಸಲಾಯಿತು. ಅಚ್ಚರಿ ಎಂಬಂತೆ ಎರಡನೇ ದಿನವೇ ಆಕೆಯ ಮನಸ್ಸಿನಿಂದ ಹೊರಟ ಸಂಜ್ಞೆಗಳನ್ನು ಅರ್ಥೈಸಿಕೊಂಡ ಕೃತಕ ಕೈ ಅತ್ತಿತ್ತ ಸರಿದಾಡಲು ಆರಂಭಿಸಿತು.

ಒಡತಿಯ ಮನಸ್ಸಿನ ಆಜ್ಞೆಯನ್ನು  ಅರ್ಥೈಸಿಕೊಂಡು ಈ ರೊಬೊ ಹ್ಯಾಂಡ್, ಎದುರಿಗಿರುವ ವಸ್ತುಗಳನ್ನು ಬಿಗಿಯಾಗಿ ಹಿಡಿದುಕೊಳ್ಳುವ, ಸಣ್ಣ ವಸ್ತುಗಳನ್ನು ಎಡ-ಬಲ ಮತ್ತು ಮೇಲಕ್ಕೆ-ಕೆಳಕ್ಕೆ ಎತ್ತಿ ಕೊಂಡೊಯ್ಯುವ, ಕೋನ್‌ಗಳನ್ನು ಜೋಡಿಸುವ, ಚೆಂಡನ್ನು ಎಸೆಯುವ ಮೊದಲಾದ 9 ಬಗೆಯ ಕೆಲಸಗಳಲ್ಲಿ ನೈಪುಣ್ಯತೆ ಸಾಧಿಸುವಂತೆ ಮಾಡುವುದೇ ಈ ತರಬೇತಿಯ ಮುಖ್ಯ ಉದ್ದೇಶವಾಗಿತ್ತು. ತರಬೇತಿ ನೀಡುವವರು ತಮ್ಮ ಚಟುವಟಿಕೆಯನ್ನು ಶೇ 91.6ರಷ್ಟು ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು.

ಪಾರ್ಶ್ವ ವಾಯು ಪೀಡಿತ ವ್ಯಕ್ತಿಯು ತಾನು ಸ್ಪರ್ಶಿಸಲು ಇಚ್ಛಿಸಿದ ವಸ್ತುವಿನ ಮೇಲ್ಮೈ ಬಿಸಿಯಾಗಿದೆಯೋ, ತಣ್ಣಗಿದೆಯೋ, ಒರಟಾಗಿದೆಯೋ, ನಯವಾಗಿದೆಯೋ ಎಂಬುದನ್ನು ತಿಳಿಯುವ ಸಲುವಾಗಿ ಸೂಚನೆಗಳನ್ನು ಅರ್ಥ ಮಾಡಿಕೊಳ್ಳುವಂತಹ ಸೆನ್ಸರ್‌ಗಳನ್ನು ರೋಬೊಟ್ ಹ್ಯಾಂಡ್‌ಗೆ ಮುಂದಿನ ಹಂತದಲ್ಲಿ ಅಳವಡಿಸಲಾಗುವುದು. ವ್ಯಕ್ತಿಯ ಮಿದುಳು ಮತ್ತು ಕೃತಕ ಕೈನ ನಡುವಿನ ಸಂಪರ್ಕಕ್ಕೆ ತಂತಿ ಬಳಸುವುದಕ್ಕೆ ಬದಲಾಗಿ ನಿಸ್ತಂತು ಜಾಲ (ವೈಫೈ) ಬಳಸಬಹುದು ಎಂದಿದೆ  ರೊಬೋಟ್ ಹ್ಯಾಂಡ್ ಸಂಶೋಧನೆಯನ್ನು ಯಶಸ್ವಿಯಾಗಿ ಪೂರೈಸಿದ ನರವಿಜ್ಞಾನಿಗಳು ಮತ್ತು ಜೈವಿಕ ಎಂಜಿನಿಯರ್‌ಗಳ ತಂಡ.
- ವಿವಿಧ ಮೂಲಗಳಿಂದ ಸತೀಶ್ ಬೆಳ್ಳಕ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT