ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನು ಹೆಣ್ಣುಕುಲದ ದ್ವೇಷಿ: ಶಾರದಾ

ವಿಶ್ವ ಮಾನವ ಹಕ್ಕುಗಳ ದಿನಾಚರಣೆಯಲ್ಲಿ ಆರೋಪ
Last Updated 11 ಡಿಸೆಂಬರ್ 2013, 8:48 IST
ಅಕ್ಷರ ಗಾತ್ರ

ದಾವಣಗೆರೆ: ‘ವೈದಿಕ ಧರ್ಮದ ಪ್ರತಿಪಾದಕನಾಗಿದ್ದ ಮನು ಹೆಣ್ಣುಕುಲದ ದ್ವೇಷಿಯಾಗಿದ್ದ’ ಎಂದು ಧಾರವಾಡದ ಮಹಿಳಾ ಹೋರಾಟಗಾರರಾದ ಶಾರದಾ ಗೋಪಾಲ್‌ ದಾಬಡೆ ಆಪಾದಿಸಿದರು.

ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಮಾನವ ಹಕ್ಕುಗಳ ವೇದಿಕೆ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಮ್ಮಿಕೊಂಡಿದ್ದ, ವಿಶ್ವ ಮಾನವ ಹಕ್ಕುಗಳ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಆಧುನಿಕ ಜಗತ್ತಿನಲ್ಲಿ ವಸ್ತ್ರವಿನ್ಯಾಸದಲ್ಲಿ ಬದಲಾವಣೆಗಳು ಆಗಿವೆ. ಆಧುನಿಕತೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ, ಇಂದಿಗೂ ನಮ್ಮೊಳಗೊಬ್ಬ ಮನು ಜೀವಂತವಾಗಿದ್ದಾನೆ. ಹೆಣ್ಣು ಜೀತದ ಆಳಿಗಿಂತ ಕಡೆ ಎಂದು ಮನು ಚಿತ್ರಿಸಿದ್ದ. ಪತಿ ಮದ್ಯವ್ಯಸನಿ ಆಗಿದ್ದರೂ ಆತನನ್ನೇ ಪೂಜಿಸಬೇಕು. ಅವನ ಸೇವೆಯನ್ನು ನಿಷ್ಠೆಯಿಂದ ಮಾಡಬೇಕು. ಪರಪುರುಷನನ್ನು ಆಕೆ ನೋಡಬಾರದು. ವಿಧವೆ ವಿಕಾರಳಾಗಿ ಇರಬೇಕು ಎಂಬ ತತ್ವ ಬರೆದಿಟ್ಟ ಮನು ಹೆಣ್ಣುಕುಲದ ದ್ವೇಷಿ’ ಎಂದು ಆರೋಪಿಸಿದರು.

‘ವೇದಶಾಸ್ತ್ರ ನಂಬದಿದ್ದರೂ ಮನುಶಾಸ್ತ್ರವನ್ನು ಇಂದಿಗೂ ಗಟ್ಟಿಯಾಗಿ ನಂಬುತ್ತಿದ್ದೇವೆ. ನಾನು ಪುರುಷ ದ್ವೇಷಿ ಅಥವಾ ಮಹಿಳಾವಾದಿ ಎಂಬ ಅರ್ಥವಲ್ಲ. ಪುರುಷ ಶ್ರೇಷ್ಠತೆ ಎಂದು ಪ್ರತಿಪಾದಿಸಿದ ಮನುವಿನ ಮೌಲ್ಯದ ವಿರುದ್ಧ ನಾನು ಮಾತನಾಡುತ್ತಿದ್ದೇನೆ. ಚಿಂತಕ ಚಾಣಕ್ಯ ಕೂಡ ಮಹಿಳೆ ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ಎಂದು ಹೇಳಿದ್ದ. ಆತ ಕೂಡ ಮಹಿಳೆಯರನ್ನು ಮಾರಾಟದ ಸರಕಿನ ರೀತಿಯಲ್ಲಿ ಬಿಂಬಿಸಿದ್ದರು. ಅರ್ಥ (ಹಣಕಾಸು)ದ ಬಗ್ಗೆ ಹೇಳಿದ್ದರೆ ವಿನಃ ಸಮಾಜದ ಸ್ವಾಸ್ಥ್ಯದ ಬಗ್ಗೆ ಹೇಳಲಿಲ್ಲ. ಸಮಾಜದಲ್ಲಿ ಸಮಾನತೆ ಬೇಕು. ಆದರೆ, ನಮ್ಮ ಚಿಂತಕರಿಗೆ ಅದು ಅರ್ಥವಾಗುತ್ತಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಮಹಿಳೆಯನ್ನು ಒಂದು ವಸ್ತುವೆಂದು ನಿರ್ಧಾರ ಮಾಡಿದ್ದೇವೆ. ಮಹಿಳೆಯರ ಮೇಲೆ ಬಲತ್ಕಾರ, ಅತ್ಯಾಚಾರ ನಡೆದರೂ ಸಮಾಜ ನಿರ್ಲಿಪ್ತವಾಗಿದೆ. ಬ್ರಿಟಿಷರ ಕಾಲದಿಂದಲೂ ಗುಜರಾತ್‌, ರಾಜಸ್ತಾನದಲ್ಲಿ ಹೆಣ್ಣು ಭ್ರೂಣ ಹತ್ಯೆಯಿತ್ತು. ಅದೇ ಕಾರಣದಿಂದ ಮಹಿಳೆಯರ ಸಂಖ್ಯೆ ಕಡಿಮೆಯಾಗಿದೆ. ಅಲ್ಲಿ ಮದುವೆ ಆಗಲೂ ಹೆಣ್ಣು ಸಿಗುತ್ತಿಲ್ಲ. ಧಾರವಾಡ, ದಾವಣಗೆರೆ ಭಾಗಕ್ಕೆ ಬಂದು ಮದುವೆಯಾಗಿ ವೇಶ್ಯಾವಾಟಿಕೆಗೆ ತಳ್ಳುವ ವ್ಯವಸ್ಥಿತ ಜಾಲವಿದೆ’ ಎಂದು ಆರೋಪಿಸಿದರು.

ಜಿಲ್ಲಾಧಿಕಾರಿ ಎಸ್‌.ಟಿ.ಅಂಜನ್‌ಕುಮಾರ್‌ ಮಾತನಾಡಿ, ಮಾನವ ಹಕ್ಕುಗಳ ಹರಣ ನಡೆದಾಗ ಅವುಗಳ ಸಂರಕ್ಷಣೆ ಮಾಡಬೇಕು. ನೈರ್ಸಗಿಕವಾಗಿ ನಾವು ಜನಿಸಿದ್ದೇವೆ. ಸರ್ವರಿಗೂ ಸಮಬಾಳು ಸಿಗಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶ ಡಿ.ಟಿ.ದೇವೇಂದ್ರನ್‌ ಮಾತನಾಡಿ, ‘21 ಮಾನವ ಹಕ್ಕುಗಳಲ್ಲಿ ಯಾವುದೊಂದು ಉಲ್ಲಂಘನೆಯಾದರೂ ತಪ್ಪು. ಮನುಷ್ಯರು ಸ್ವಾತಂತ್ರ್ಯವಾಗಿ ಬದುಕಬೇಕು ಎಂಬ ಉದ್ದೇಶದಿಂದ ಅದರ ವ್ಯಾಪ್ತಿಯನ್ನು ವಿಸ್ತಾರ ಮಾಡಲಾಗಿದೆ. ಹಕ್ಕು ಹಾಗೂ ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳು. ಹಕ್ಕುಗಳನ್ನು ಅನುಭವಿಸಿ ಕರ್ತವ್ಯ ಮರೆಯಬಾರದು. ಹಕ್ಕುಗಳ ಉಲ್ಲಂಘನೆಯಾದರೆ ಕಾನೂನು ಸೇವಾ ಪ್ರಾಧಿಕಾರ ನಿಮ್ಮ ನೆರವಿಗೆ ಬರಲಿದೆ’ ಎಂದು ಮಾಹಿತಿ ನೀಡಿದರು.

ವಕೀಲ ಎಲ್‌.ಎಚ್‌.ಅರುಣ್‌್ ಕುಮಾರ್‌ ಮಾತನಾಡಿ, ಮಾನವ ಹಕ್ಕುಗಳ ಇಂದು ಪ್ರಬಲವಾಗಿ ಕೆಲಸ ಮಾಡುತ್ತಿವೆ. ಜನಾಂಗೀಯ ದ್ವೇಷ, ಘರ್ಷಣೆಗಳು ನಡೆಯುತ್ತಿವೆ. ಧರ್ಮ, ಭಾಷೆ, ಜಾತಿ, ಲಿಂಗಭೇದದ ಆಧಾರದ ಮೇಲೆ ಘರ್ಷಣೆಗಳು ನಡೆಯುತ್ತಿವೆ. ಮಾನವ ಹಕ್ಕುಗಳ ರಕ್ಷಣೆಯ ಬಗ್ಗೆ ಅರಿವು ಮೂಡಬೇಕು. ಹೆಣ್ಣುಭ್ರೂಣ ಹತ್ಯೆ ಈಚೆಗೆ ಹೆಚ್ಚಾಗುತ್ತಿದೆ. ದಾವಣಗೆರೆಯ ಕಸದ ತೊಟ್ಟಿಗಳಲ್ಲಿ ನವಜಾತ ಶಿಶುಗಳು ಪತ್ತೆಯಾಗುತ್ತಿವೆ. ಇದು ದೊಡ್ಡ ದುರಂತ ಎಂದು ವಿಷಾದ ವ್ಯಕ್ತಪಡಿಸಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ರವಿನಾರಾಯಣ್‌ ಮಾತನಾಡಿ, ಮಾನವ ಹಕ್ಕುಗಳ ರಕ್ಷಣೆಯ ಬಗ್ಗೆ ನಮಗೆ ಅರಿವು ಇಲ್ಲ. ಇರುವ ವ್ಯವಸ್ಥೆಗೆ ಒಗ್ಗಿಕೊಂಡಿದ್ದೇವೆ. ಸಮಾಜದಲ್ಲಿ ಕ್ರಾಂತಿ ನಡೆಯಬೇಕು. ಮಾನವ ಹಕ್ಕುಗಳು ಉಲ್ಲಂಘನೆ ಆದ ಕಡೆ ಅರಿವು ಮೂಡಿಸುವ ಕೆಲಸ ನಡೆಯಬೇಕು ಎಂದು ಸಲಹೆ ನೀಡಿದರು.

ಮಾನವ ಹಕ್ಕುಗಳ ವೇದಿಕೆ ಅಧ್ಯಕ್ಷ ಎಸ್‌.ಎಚ್‌್.ಪಟೇಲ್ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಶಶಿಧರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಇಬ್ರಾಹಿಂ ಐಗೂರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT