ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಕುಲಕ್ಕೆ ಪ್ರೀತಿಯ ಸಂದೇಶ ನೀಡುವ ಕ್ರಿಸ್‌ಮಸ್‌

ಇದು ಏಸುಸ್ವಾಮಿಯ ತ್ಯಾಗ ಕರುಣೆ ಸ್ನೇಹ ಪ್ರೀತಿ ಬಾಂಧವ್ಯ ಬೆಸುಗೆ ಅಧ್ಯಾತ್ಮ ಸಂದೇಶ ಸಾರುವ ಹಬ್ಬ
Last Updated 24 ಡಿಸೆಂಬರ್ 2013, 6:27 IST
ಅಕ್ಷರ ಗಾತ್ರ

ಕ್ರಿಸ್‌ಮಸ್‌ ಪ್ರೀತಿ, ಶಾಂತಿ, ಸಹೋದರತೆಯ ಸಂಕೇತ. ವಿಶ್ವಮನ್ನಣೆ ಪಡೆದ ಏಕೈಕ ಹಬ್ಬ. ಜಗತ್ತಿನ ಬಹುಪಾಲು ಜನತೆ ಒಂದೆಡೆ ಕಲೆತು ಸಂಭ್ರಮಿಸುವ ಹಬ್ಬ.

ಕ್ರಿಸ್‌ಮಸ್‌ ಎಂದರೇ ಏಸು ಕ್ರಿಸ್ತನ ಜನ್ಮದಿನ. ಕೆಂಪು ನಿಲುವಂಗಿ ತೊಟ್ಟ ಸಾಂತಾಕ್ಲಾಸ್‌ನನ್ನು ಕಣ್ಣೆದುರು ಕಾಣುವ ದಿನ. ವರ್ಷವಿಡೀ ಪುಟಾಣಿಗಳು ಉಡುಗೊರೆಗಾಗಿ ಕಾಯುವ ದಿನ. ಚರ್ಚ್‌ಗಳ ಮೂಲಕ ಜಗತ್ತಿಗೆ ಶಾಂತಿ, ಪ್ರೀತಿಯ ಸಂದೇಶ ಸಾರುವ ದಿನ.

ಕ್ರಿಸ್‌ಮಸ್‌ ಕೇಕ್‌ಗೆ ಬೇಡಿಕೆ ಹೆಚ್ಚು. ಬಹುತೇಕ ಬೇಕರಿಗಳು ಈ ಸಮಯ ಪ್ರತ್ಯೇಕ ಸ್ಟಾಲ್‌ ತೆರೆಯುತ್ತವೆ. ಕೇಕ್‌ ಸವಿದು, ಪರಸ್ಪರ ಶುಭ ಹಾರೈಸುತ್ತಾರೆ. ಉಡುಗೊರೆಗಳ ವಿನಿಮಯವೂ ನಡೆಯುತ್ತದೆ.

ಡಿಸೆಂಬರ್‌ ಆರಂಭವಾಗುತ್ತಿದ್ದಂತೆ ಕ್ರಿಶ್ಚಿಯನ್ನರ ಮೈ–ಮನ ರೋಮಾಂಚನ. ವರ್ಷದ ಏಕೈಕ ಹಬ್ಬದ ಆಚರಣೆಗಾಗಿ ಮೇರೆಯಿಲ್ಲದ ಸಡಗರ ಸಂಭ್ರಮ. ಚರ್ಚ್‌ಗಳು ಸೇರಿದಂತೆ ಎಲ್ಲರ ಮನೆಗಳು ಸುಣ್ಣ–ಬಣ್ಣದಿಂದ ಕಂಗೊಳಿಸುತ್ತವೆ. ವಿದ್ಯುತ್‌ ದೀಪಾಲಂಕಾರದಿಂದ ಝಗಮಗಿಸುತ್ತವೆ.
ಒಂದೇ ಸೂರಿನಡಿ ಬಂಧು–ಬಾಂಧವರು ನೆರೆದು ಸಂಭ್ರಮಿಸಲು ವೇದಿಕೆಗಳು ಸಿದ್ದಗೊಳ್ಳುತ್ತವೆ. ಚರ್ಚ್‌ಗಳಲ್ಲಿ ಹಿರಿಯರ, ಕಿರಿಯರ, ಯುವಕರ ಕ್ರಿಸ್‌ಮಸ್‌ಗಳು ಆಚರಿಸಲ್ಪಡುತ್ತವೆ. ಹಬ್ಬಕ್ಕಾಗಿ ಹೊಸ ವಸ್ತು, ಬಟ್ಟೆಗಳ ಖರೀದಿ, ಸಿಹಿ ತಿಂಡಿ, ಭೂರಿ ಭೋಜನದ ಮೆನು, ವೈನ್‌ ಎಲ್ಲವೂ ಒಂದೊಂದಾಗಿ ಸಿದ್ಧಗೊಳ್ಳುತ್ತದೆ.

ಕ್ರಿಶ್ಚಿಯನ್‌ ಧರ್ಮೀಯರ ಪ್ರತಿ ಮನೆಯಲ್ಲೂ ಏಸುಕ್ರಿಸ್ತನ ಜನನ ಬಿಂಬಿಸುವ ಗೋದಲಿ, ಕ್ರಿಸ್‌ಮಸ್‌ ಟ್ರೀ ಅಲಂಕಾರಕ್ಕೆ ಹೆಚ್ಚಿನ ಆದ್ಯತೆ. ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಗೋದಲಿ ಅಲಂಕಾರ ಮಾಡುತ್ತಾರೆ. ಜತೆಗೆ ಅದರ ಮಹತ್ವವನ್ನು ಪುಟ್ಟ ಕಲಾಕೃತಿಯಲ್ಲೇ ಚಿತ್ರಿಸುತ್ತಾರೆ. ಕೆಲವೆಡೆ ಗೋದಲಿ ಅಲಂಕಾರದ ಸ್ಪರ್ಧೆ ನಡೆಯುತ್ತದೆ.

ಸಂಪ್ರದಾಯಸ್ಥರು ವರ್ಷವಿಡೀ ಗಿಡ ಬೆಳೆಸಿ ಹಬ್ಬದ ದಿನ ಅಲಂಕಾರ ಮಾಡಿ, ಪೂಜಿಸಿ ಧನ್ಯತಾಭಾವ ಹೊಂದುತ್ತಾರೆ. ಶ್ರೀಮಂತರು ಕ್ರಿಸ್‌ಮಸ್‌ ಟ್ರೀಗಾಗಿ ನರ್ಸರಿಗಳ ಮೊರೆ ಹೋಗುತ್ತಾರೆ. ಈಚೆಗೆ ಕೃತಕ ಕ್ರಿಸ್‌ಮಸ್‌ ಟ್ರೀಗಳು ಬಹುತೇಕರ ಮನೆಗಳ ಅಂಗಳವನ್ನು ಅಲಂಕರಿಸುತ್ತಿವೆ. ಬಡವರು ಬಾಳೆ ಅಥವಾ ಮಾವಿನ ಗಿಡಗಳಿಗೆ ಅಲಂಕಾರ ಮಾಡಿ ತೃಪ್ತರಾಗುತ್ತಾರೆ.

ಡಿಸೆಂಬರ್‌ ಆರಂಭದೊಡನೆ ಸಂಪ್ರದಾಯಸ್ಥ ಕ್ರಿಶ್ಚಿಯನ್ನರು ಉಪವಾಸ ವ್ರತ ಕೈಗೊಳ್ಳುತ್ತಾರೆ. ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಉಪವಾಸ ನಡೆಯುತ್ತದೆ. ಕೆಲವರು ಮಾಂಸ–ಮದ್ಯ ವ್ಯರ್ಜಿಸುತ್ತಾರೆ. ಇಪ್ಪತ್ನಾಲ್ಕು ದಿನ ಉಪವಾಸ ನಡೆಸುವರು ಇದ್ದಾರೆ.

ಚರ್ಚ್‌ಗಳು ದೀಪಾಲಂಕಾರ, ಹೂವಿನ ಮಾಲೆಗಳಿಂದ ಶೃಂಗಾರಗೊಳ್ಳುತ್ತವೆ. ಮೊಂಬತ್ತಿಯ ದೀಪಗಳು ನಡುರಾತ್ರಿಯ ಪ್ರಾರ್ಥನೆಗೆ ಅಣಿಯಾಗುತ್ತವೆ. ನಿತ್ಯ ರಾತ್ರಿ ಕ್ರಿಸ್‌ಮಸ್‌ ಗೀತೆಗಳು ಮೊಳಗುತ್ತವೆ. ಒಂದೊಂದು ಕುಟುಂಬದವರು ಒಂದೊಂದು ದಿನ ಹಾಡುಗಳನ್ನು ಹೇಳುತ್ತಾರೆ.

ಕ್ರಿಶ್ಚಿಯನ್ನರು ವಾಸಿಸುವ ಬೀದಿಗಳಲ್ಲಿ ರಾತ್ರಿ ವೇಳೆ ವಾದ್ಯ ಪರಿಕರಗಳ ಜತೆ ಮೆರವಣಿಗೆ ನಡೆಸಲಾಗುತ್ತದೆ. ಜತೆಗೆ ಈ ಸಮಯ ಕ್ರಿಸ್‌ಮಸ್‌ ಗೀತೆಗಳನ್ನು ಹಾಡಲಾಗುತ್ತದೆ. ಪ್ರಾರ್ಥನೆಗಳು ಮನೆಗಳಲ್ಲೂ ನಡೆಯುತ್ತವೆ. ಪ್ರಾರ್ಥನಾ ತಂಡ ಮನೆ ಮಾಲೀಕರಿಗೆ ಕ್ರಿಸ್‌ಮಸ್‌ ಉಡುಗೊರೆ ನೀಡುತ್ತದೆ. ಮನೆಯವರ ಆತಿಥ್ಯ ಮರೆಯಲಾಗದ್ದು. ಎರಡೂ ಕಡೆಯಿಂದ ಉಡುಗೊರೆಗಳು ವಿನಿಮಯವಾಗುತ್ತವೆ. ಸ್ಥಿತಿವಂತರು ದುರ್ಬಲರಿಗೆ ದಾನ ಮಾಡುವ ಮೂಲಕ ಕೃತಾರ್ಥರಾಗುತ್ತಾರೆ.

ಪ್ರದೇಶದಿಂದ ಪ್ರದೇಶಕ್ಕೆ ಹಬ್ಬದ ಆಚರಣೆಯಲ್ಲಿನ ರೀತಿ–ನೀತಿ ಭಿನ್ನವಾಗಿರುತ್ತವೆ. ಆದರೆ ಉದ್ದೇಶ ಮಾತ್ರ ಜಗತ್ತಿನ ಎಲ್ಲೆಡೆ ಒಂದೇ. ಅದುವೇ ‘ಪ್ರೀತಿ–ಶಾಂತಿ–ಸಹೋದರತೆಯ’ ಮಂತ್ರ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT