ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುವನದಲ್ಲಿ ಉಕ್ಕಿ ಹರಿದ ‘ರಾಜಭಕ್ತಿ’

Last Updated 12 ಡಿಸೆಂಬರ್ 2013, 6:44 IST
ಅಕ್ಷರ ಗಾತ್ರ

ಮೈಸೂರು: ‘ರಾಜ ಪ್ರತ್ಯಕ್ಷ ದೇವತಃ’ ಈ ಮಾತಿಗೆ ಎಷ್ಟೇ ಟೀಕೆಗಳಿರಿಲಿ ಬಿಡಲಿ, ಬುಧವಾರ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅಂತ್ಯಸಂಸ್ಕಾರ ನಡೆಯುತ್ತಿದ್ದ ‘ಮನುವನ’ಕ್ಕೆ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಜನಸ್ತೋಮ ಈ ಮಾತನ್ನು ಸಾಬೀತುಪಡಿಸುವಂತೆ ಇತ್ತು.

ಅಂತ್ಯಸಂಸ್ಕಾರದ ಕ್ಷಣವನ್ನು ಕಾಣುವುದಕ್ಕೆ ಅವಕಾಶ ವಂಚಿತರಾದ ಕೆಲವರು ರಸ್ತೆಯಲ್ಲೇ ಚಪ್ಪಲಿ ಕಳಚಿ ಕೈ ಮುಗಿಯುತ್ತಿದ್ದರು... ಮತ್ತೆ ಕೆಲವರು ಒಡೆಯರ್ ಅವರ ಪಾರ್ಥಿವ ಶರೀರಕ್ಕೆ ಮೆರವಣಿಗೆಯಲ್ಲಿ ತೂರುತ್ತಿದ್ದ ಹೂಗಳನ್ನು ಎತ್ತಿಕೊಂಡು ಕಣ್ಣಿಗೊತ್ತಿಕೊಳ್ಳುತ್ತಿದ್ದರು... ಮತ್ತೆ ಕೆಲವರು ತಮ್ಮ ಮನೆಯಲ್ಲೇ ಯಾರೋ ಒಬ್ಬರನ್ನು ಕಳೆದುಕೊಂಡವರಂತೆ ಕಣ್ಣೀರಿಡುತ್ತಿದ್ದರು...

ಈ ಎಲ್ಲಾ ದೃಶ್ಯಗಳಿಗೆ ಮನುವನದ ಹೊರಗಿನ ರಸ್ತೆ ಮೂಕಸಾಕ್ಷಿಯಾಗಿತ್ತು.
ಹೌದು, ರಾಜ ಪರಂಪರೆಗೆ ಸಂಬಂಧಿಸಿದಂತೆ ಏನೇ ಟೀಕೆ ಟಿಪ್ಪಣಿಗಳಿರಲಿ. ಜನರ ಮನಸ್ಸಿನಲ್ಲಿ ಇನ್ನೂ ರಾಜಭಕ್ತಿ ಕರಗಿಲ್ಲ ಎಂಬ ಅನಿಸಿಕೆ ಮೇಲಿನ ದೃಶ್ಯ ನೋಡಿದ ಯಾರಿಗಾದರೂ ಬಾರದೇ ಇರದು.

ಇಲ್ಲಿಗೆ ಬರೇ ವಯಸ್ಸಾದ ಹಿರಿಯ ನಾಗರಿಕರಷ್ಟೇ ಬಂದಿರಲಿಲ್ಲ. ಯುವ ತಲೆಮಾರೂ ಕೂಡ ಕಾತರದಿಂದ ಬೆಳಿಗ್ಗೆಯಿಂದ ಸಂಜೆವರೆಗೂ ಮಧ್ಯಾಹ್ನದ ಊಟದ ಪರಿವೇ ಇಲ್ಲದೆ, ನೆತ್ತಿ ಮೇಲೆ ಸುಡುತ್ತಿದ್ದ ಸೂರ್ಯನ ಬಿರುಬಿಸಿಲನ್ನೂ ಲೆಕ್ಕಿಸದೇ ನಿಂತಿತ್ತು.

ಕನಕಗಿರಿಯಿಂದ ಬಂದಿದ್ದ ಯುವ ಶಿಕ್ಷಕಿ ಶ್ವೇತಾ ಅವರು ಒಳಗೆ ಬಿಡುವಂತೆ ಬ್ಯಾರಿಕೇಡ್ ಬಳಿ ಪೊಲೀಸರನ್ನು ಪರಿಪರಿಯಾಗಿ ಕೇಳಿಕೊಳ್ಳುತ್ತಿದ್ದರು. ‘ಇದೇಕೆ ಇಷ್ಟು ಭಾವೋದ್ವೇಗಗೊಂಡಿರುವಿರಿ’ ಎಂದು ಪ್ರಶ್ನಿಸಿದರೆ, ತಕ್ಷಣ ಅವರು ಹೇಳಿದ್ದಿಷ್ಟು ‘ನಮ್ಮ ಊರಿನ ಮಹಾರಾಜರು ಸಾರ್, ನೋಡಬೇಕು ಅನ್ನಿಸೊಲ್ವೆ? ಇಂದೇ ಕೊನೆ. ನಾಳೆ ಸಿಗ್ತಾರಾ?

ನಮ್ಮ ಮೈಸೂರಿನ ಪ್ರಭು ಸಾರ್ ಅವರು...’ ಎಂದು ಹೇಳಿ ಮತ್ತೆ ಮತ್ತೆ ಒಳಗೆ ಹೋಗಲು ಪ್ರಯತ್ನಿಸುತ್ತಿದ್ದರು.
ಕುವೆಂಪುನಗರದಿಂದ ಬಂದಿದ್ದ ದ್ವಿತೀಯ ಪದವಿ ವ್ಯಾಸಂಗ ಮಾಡುತ್ತಿರುವ ಸುಷ್ಮಾ ಕೂಡ ‘ನಮ್ಮ ದೊರೆ ಸಾರ್. ನೋಡಬೇಕು ಅನ್ನಿಸ್ತು. ಬಂದ್ಬಿಟ್ಟೆ. ಅರಮನೇಲಿ ಅವಕಾಶ ಸಿಗಲಿಲ್ಲ. ಕನಿಷ್ಠ ಇಲ್ಲಾದರೂ ದೂರದಲ್ಲಿ ನಿಂತು ಕೈಮುಗಿದರೆ ಅಷ್ಟೇ ಸಾಕು ಸಾರ್’ ಎಂದು ಒಳಗೆ ನುಸುಳಲು ಯತ್ನಿಸುತ್ತಿದ್ದರು.

ಒಂದೆಡೆ ಯುವತಲೆಮಾರು ಪೊಲೀಸರೊಂದಿಗೆ ವಾಗ್ವಾದ ನಡೆಸಿ, ಏನೇ ಆಗಲಿ ಒಳಗೆ ಹೋಗಲೇಬೇಕು ಎಂದು ಪ್ರಯತ್ನಪಡುತ್ತಿದ್ದರೆ, ಅದೇ ವಯಸ್ಸಾದ ಹಿರಿಯ ನಾಗರಿಕರು ಒಳಗೆ ಬಿಟ್ಟರೆ ಸಾಕು ಎಂದು ಪರಿತಪಿಸುತ್ತಿದ್ದರು.

ಎಚ್.ಡಿ. ಕೋಟೆಯಿಂದ ಬಂದಿದ್ದ ವೆಂಕಟರಾಮರಾಜ ಅರಸ್ ಅವರನ್ನು ‘ಒಡೆಯರು ನಿಮ್ಮ ಸಂಬಂಧಿಕರಾ’ ಎಂದು ಕೇಳಿದರೆ, ‘ಏನ್ ಸ್ವಾಮಿ ಇದು. ಇವರನ್ನ ನೋಡಲು ಸಂಬಂಧಿಕರೇ ಬರಬೇಕಾ? ಎಲ್ಲರಿಗೂ ಸಂಬಂಧ ಸ್ವಾಮಿ. ಮಹಾರಾಜ ಅಂದ್ರೆ ಸುಮ್ಮನೆ ಅಂದುಕೊಂಡ್ರಾ? ಅವರ ಮೇಲಿನ ಭಕ್ತಿ ನಮಗೆ ಗೊತ್ತಿಲ್ಲದಂತೆ ಎಳೆದು ತರುತ್ತೆ ನೋಡಿ’ ಎಂದರು.

ಮಂಡ್ಯ, ಮದ್ದೂರು, ರಾಮನಗರ, ಚಾಮರಾಜನಗರ, ಗುಂಡ್ಲುಪೇಟೆ ... ಹೀಗೆ ಅನೇಕ ಊರುಗಳಿಂದಲೂ ಜನ ಅಂತ್ಯಸಂಸ್ಕಾರ ನೋಡಲು ಮುಗಿಬಿದ್ದಿದ್ದರು.

ರಮೇಶ್ ಬಾಬು ಎಂಬುವವರಂತೂ ‘ದೂರದ ಊರಿನಿಂದ ಬಂದಿದ್ದೀವಿ ಸಾರ್. ಸಾರ್ವಜನಿಕರನ್ನೂ ಒಳಗೆ ಬಿಡಬಾರದಿತ್ತಾ ಹೇಳಿ ಸಾರ್. ನಾಳೆ ನೋಡೋಕೆ ಆಗುತ್ತಾ ಹೇಳಿ...’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೆಂಗಸರೂ ಕೂಡ ಹಿಂದೆ ಬಿದ್ದಿರಲಿಲ್ಲ. ಚಾಮರಾಜ ಮೊಹಲ್ಲಾದಿಂದ ಬಂದಿದ್ದ ಉಮಾ, ಸೋನಾರ್ ಬೀದಿಯ ಪದ್ಮಿನಿ, ವಿದ್ಯಾರಣ್ಯಾಪುರಂನ ಸುಮಾ ಎಂಬುವವರು ಬಿಸಿಲಿನ ಝಳಕ್ಕೆ ಕೊಡೆಯನ್ನು ಹಿಡಿದು, ಚಾತಕಪಕ್ಷಿಗಳ ಹಾಗೆ ಕಾಯುತ್ತಾ ನಿಂತಿದ್ದರು. ಅಂತಿಮ ಯಾತ್ರೆಯ ಮೆರವಣಿಗೆ ಬಂದಾಗ ಕೈಮುಗಿದರು.

ಹೊರಗಡೆ ವಿಶಾಲ ಪರದೆಯನ್ನು ಇಟ್ಟು ಅಂತಿಮ ವಿಧಿ–ವಿಧಾನದ ನೇರಪ್ರಸಾರವನ್ನು ಮಾಡಲಾಗಿತ್ತು. ಇದು ರಸ್ತೆಯಲ್ಲಿ ನಿಂತಿದ್ದ ಜನಸ್ತೋಮಕ್ಕೆ ಸಮಾಧಾನ ತರಿಸಿತು. ಇನ್ನೊಂದೆರಡು ಪರದೆಗಳನ್ನು ಹಾಕಿದ್ದರೆ ಅನುಕೂಲವಾಗುತ್ತಿತ್ತು ಎಂಬ ಮಾತುಗಳೂ ಕೇಳಿಬಂದವು.

ಮೆರವಣಿಗೆ ಬಂದಾಗಲಂತೂ ನೂಕುನುಗ್ಗಲು ಹೆಚ್ಚಾಯಿತು. ಪೊಲೀಸರು ಲಘು ಲಾಠಿಪ್ರಹಾರ ನಡೆಸಿ ಪರಿಸ್ಥಿತಿಯನ್ನು ತಹಬದಿಗೆ ತಂದರು. ಅತ್ತ ಪಡುವಣದಲ್ಲಿ ಸೂರ್ಯಾಸ್ತವಾಗುತ್ತಿದ್ದರೆ ಇತ್ತ ಚಿತೆಗೆ ಅಗ್ನಿಸ್ಪರ್ಶವಾಯಿತು. ಬೆಳಿಗ್ಗೆ ಕಾದು ಬಸವಳಿದಿದ್ದ ದುಃಖತಪ್ತ ಜನ ‘ಯಾರಿಗೇನು ಶಾಶ್ವತ’ ಎಂದುಕೊಳ್ಳುತ್ತಾ ತಮ್ಮ ತಮ್ಮ ಮನೆಗಳತ್ತ ಭಾರವಾದ ಹೆಜ್ಜೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT