ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಷ್ಯ ಮೃಗದ ನಡುವೆ...

Last Updated 7 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸಿ.ಎನ್.ಎನ್. ಡಾಟ್ ಕಾಂನಲ್ಲಿ ಒಂದು ಸುದ್ದಿ – ‘ಜಿಂಬಾಬ್ವೆಯ ಮೂವರು ಮಹಿಳೆಯರ ಮೇಲೆ ಸರಣಿ ಅತ್ಯಾಚಾರದ ಆರೋಪ’. ಅದನ್ನು ಓದಿದ ವೆಬ್‌ಪುಟಗಳ ಒಬ್ಬ ಮೋಹಿ ಕುತೂಹಲದಿಂದ ಒಂದು ಸಣ್ಣ ಸಂಶೋಧನೆ ನಡೆಸಿದ. ಪುರುಷರ ಮೇಲೆ ಮಹಿಳೆಯರು ಅತ್ಯಾಚಾರ ಮಾಡುವುದು ಸಾಧ್ಯವೇ ಎನ್ನುವುದು ಅವನ ಪ್ರಶ್ನೆ. ಅದಕ್ಕೆ ಉತ್ತರ ಕಂಡುಕೊಳ್ಳಲು ಹಲವು ವೈದ್ಯರನ್ನು ಸಂಪರ್ಕಿಸಿದ.

ಜಿಂಬಾಬ್ವೆಯ ಮಹಿಳೆಯರು ೧೭ ಪುರುಷರಿಗೆ ಮಾದಕ ದ್ರವ್ಯಗಳನ್ನು ನೀಡಿ, ಅವರನ್ನು ಅತ್ಯಾಚಾರ ಮಾಡಿ, ನಂತರ ಆ ಪುರುಷರ ವೀರ್ಯವನ್ನು ತಾವು ನಂಬಿದ ಧಾರ್ಮಿಕ ಕಾರ್ಯಕ್ಕೆಂದು ಸಂಗ್ರಹಿಸಿಟ್ಟುಕೊಂಡಿದ್ದರು!

ಪುರುಷನಾದರೋ ಮಹಿಳೆಯರ ಮೇಲೆ ದೈಹಿಕವಾಗಿ ಅತ್ಯಾಚಾರ ಮಾಡುವುದು ಸಾಧ್ಯ. ಮಹಿಳೆಯರು ಪುರುಷರ ಮೇಲೆ ಹೇಗೆ ಆ ಕೃತ್ಯ ಎಸಗಿಯಾರು ಎಂಬ ಅವನ ಪ್ರಶ್ನೆಗೆ ಉತ್ತರ ಸಿಕ್ಕಿತು. ತನ್ನ ಮೇಲೆ ಮಹಿಳೆಯರಿಂದ ಆಕ್ರಮಣ ನಡೆಯುತ್ತಿದೆ ಎಂದು ಗೊತ್ತಾದಾಗಲೂ ಪುರುಷನಲ್ಲಿ ಸ್ಖಲನ ಸಾಧ್ಯವಿದೆ ಎನ್ನುವುದು ವೈದ್ಯರ ಸ್ಪಷ್ಟನೆ. ಮೂರ್ಛೆರೋಗ ಬಂದಾಗ, ನೇಣು ಹಾಕಿಕೊಂಡಾಗ ಕೂಡ ಪುರುಷ ವೀರ್ಯ ಹೊರಹಾಕಿರುವ ಉದಾಹರಣೆಗಳಿವೆ ಎನ್ನುವ ತಜ್ಞರ ಅಭಿಪ್ರಾಯ ವೆಬ್‌ಮೋಹಿಯ ಅತ್ಯಾಚಾರ ಕುತೂಹಲಕ್ಕೆ ಇನ್ನೊಂದು ತಿರುವು ನೀಡಿತು.

ಇಲ್ಲಿ, ಭಾರತದಲ್ಲಿ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಲೇ ಇವೆ. ಕಾನೂನು ಈಗ ಇನ್ನೂ ಬಲಗೊಂಡಿರುವುದರಿಂದ ಮಾಧ್ಯಮಗಳಿಗೆ ಅದು ಮುಖ್ಯ ಸುದ್ದಿ. ಈ ಸುದ್ದಿ ಭರಾಟೆಯಲ್ಲಿ ‘ಎಲ್ಲಾ ಪುರುಷರೊಳಗೂ ಅತ್ಯಾಚಾರಿ ಇರುತ್ತಾನೆಯೇ?’ ಅಥವಾ ‘ಎಲ್ಲಾ ಪುರುಷರೂ ಅತ್ಯಾಚಾರಿಗಳೇ?’ ಎಂಬ ಚರ್ಚೆ ಚದುರಿದಂತೆ ನಡೆಯುತ್ತಿದೆ.

ಇದನ್ನು ಗಮನಿಸಿದ ವೆಬ್ ಮೋಹಿಗೆ ಪ್ರಾಣಿಜಗತ್ತಿನ ಆಕ್ರಮಣಶೀಲತೆಯ ಕುರಿತು ಅರಿಯಬೇಕು ಎನ್ನಿಸಿತು. ಅಡಿಗಡಿಗೂ ಬೆರಗಿನ ಸಂಗತಿಗಳು ಬಿಚ್ಚಿಕೊಂಡವು.

ಜೇನಿನಲ್ಲಿ ಹೆಣ್ಣೇ ರಾಣಿ, ರಾಜ ಇಲ್ಲ. ನವಿಲಿನಲ್ಲಿ ಗಂಡಿಗೆ ಕುಣಿಯುವ ಯೋಗ. ತೋಳ, ಸಿಂಹಗಳಲ್ಲಿ ಗಂಡು ಗುಟುರು ಹಾಕುವುದೇ ಹೆಚ್ಚು. ಪಕ್ಷಿಗಳ ಕೆಲವು ಪ್ರಭೇದಗಳಲ್ಲಿ ಗಂಡಿನ ಪ್ರಾಬಲ್ಯ, ಇನ್ನು ಕೆಲವು ಪ್ರಭೇದಗಳಲ್ಲಿ ಹೆಣ್ಣಿನದ್ದೇ ಮೇಲಾಟ. ಆನೆಯೊಂದು ಗರ್ಭ ಧರಿಸಿದರೆ ಸುತ್ತಲ ಐದು ಕಿ.ಮೀ. ವ್ಯಾಪ್ತಿಯ ಎಲ್ಲಾ ಹೆಣ್ಣಾನೆಗಳ ಗರ್ಭವೂ ತುಂಬುತ್ತದಂತೆ. ‘ಗಜಗರ್ಭ’ದ ಈ ಸತ್ಯವಂತೂ ಪ್ರಕೃತಿಯ ಅದ್ಭುತ. ಇರುವೆ ತನಗಿಂತ ಏಳೆಂಟು ಪಟ್ಟು ಹೆಚ್ಚು ಭಾರವನ್ನು ಹೊರಬಲ್ಲದು. ಸಾಲಾಗಿ ನಡೆಯುವ ಶಿಸ್ತು ಅದರದ್ದು. ಹಲವು ಗಂಡು ನಾಯಿಗಳು ಒಂದೇ ಹೆಣ್ಣುನಾಯಿಗೆ ಲೈನ್ ಹೊಡೆದರೂ ಸಂಗಾತಿಯ ಆಯ್ಕೆ ಆ ಹೆಣ್ಣುನಾಯಿಯದ್ದೇ.

ಪ್ರಾಣಿಗಳಲ್ಲಿ ದಾಯಾದಿ ಮತ್ಸರ ಇಲ್ಲ. ಅವುಗಳಲ್ಲಿ ಆಕ್ರಮಣ ಎಂಬುದು ಬಹುತೇಕ ಸಲ ದೈಹಿಕ ದಾಳಿಯ ಮಟ್ಟಕ್ಕೆ ಮುಂದುವರಿಯುವುದಿಲ್ಲ. ವ್ಯಗ್ರವಾದ ಕಾಡುಪ್ರಾಣಿಗಳು ಕೂಡ ಮುಖಭಾವದಿಂದ, ಧ್ವನಿಯಿಂದ, ದೇಹಾಕಾರದಿಂದ, ಕಣ್ಣೋಟದಿಂದ, ಸಂಖ್ಯಾಬಲದಿಂದ ಹೆದರಿಸುತ್ತವೆಯೇ ಹೊರತು ದೈಹಿಕ ದಾಳಿಗೆ ಇಳಿಯುವುದು ವಿರಳ. ಒಂದು ವೇಳೆ ಇಳಿದರೂ ಪರಚುವುದು, ನೂಕುವುದು ಇತ್ಯಾದಿ ಬಲಪ್ರದರ್ಶನಕ್ಕಷ್ಟೇ ಅದು ಸೀಮಿತಗೊಳ್ಳುತ್ತದೆ. ಜೀವಿವೈವಿಧ್ಯ ಅಧ್ಯಯನಗಳ ಪ್ರಕಾರ ಕೊಲ್ಲುವ ಮಟ್ಟಕ್ಕೆ ಇಳಿದಿರುವ ಎರಡು ಪ್ರಾಣಿಗಳು– ಚಿಂಪಾಂಜಿ ಹಾಗೂ ಮನುಷ್ಯ.

ಪ್ರಾಣಿಗಳಲ್ಲಿ ಆಕ್ರಮಣಶೀಲತೆ ಇದ್ದರೂ ಅತ್ಯಾಚಾರ ಎಂಬುದು ಇಲ್ಲ. ‘ಸೆಕ್ಸ್’ ಎಂಬುದು ಅವುಗಳ ಪಾಲಿಗೆ ಸಂತಾನೋತ್ಪತ್ತಿಯ ಚಟುವಟಿಕೆಯಷ್ಟೇ ಆಗಿದ್ದರೂ ಅವು ಸಂಗಾತಿಯ ಸಮ್ಮತಿಯಿಲ್ಲದೆ ಕೂಡುವುದಿಲ್ಲ. ಜೈವಿಕವಾಗಿ ಅದು ಸಾಧ್ಯವೂ ಇಲ್ಲ.

ಮನುಷ್ಯ ಹೇಳಿಕೇಳಿ ನಾಗರಿಕ. ಅವನು ಜಾಣ. ಬೆಳೆದ. ಸಾಮ್ರಾಜ್ಯ ಕಟ್ಟಿದ. ಅದಕ್ಕಾಗಿ ಕಾಳಗ ಮಾಡಿದ. ಕಾಳಗಗಳು ಯುದ್ಧಗಳಾದವು. ಬಲ ಪ್ರದರ್ಶನಕ್ಕೆ ಅದು ದೊಡ್ಡ ತಿರುವು. ಅದಕ್ಕಾಗಿ ತರಬೇತಿ, ಶಿಬಿರಗಳು ಹುಟ್ಟಿಕೊಂಡವು. ಸಿಪಾಯಿಗಳು ತಯಾರಾದರು. ಮನೆ ಬಿಟ್ಟು, ಯುದ್ಧಕ್ಕಾಗಿ ಸನ್ನದ್ಧರಾಗುವುದಷ್ಟೇ ಆ ಸಿಪಾಯಿಗಳ ಕೆಲಸ. ಕೊಲ್ಲುವುದು ವೃತ್ತಿಧರ್ಮ.

ಅಂದಮೇಲೆ, ಮನಸ್ಸಿನ ತುಂಬಾ ಹಿಂಸೆಯ ಬಿಂಬ. ಕೊಲ್ಲುವವನಿಗೆ ಅದು ಅಪರಾಧ ಎನ್ನುವ ಭಾವ ಇಲ್ಲದ ಮೇಲೆ ಅತ್ಯಾಚಾರ ಮಾಡುವುದು ಅಪರಾಧ ಎಂದು ಹೇಗೆ ಅನ್ನಿಸೀತು. ಹೀಗಾಗಿಯೇ ಯುದ್ಧಗಳೇ ಅತ್ಯಾಚಾರಿಗಳ ಹುಟ್ಟಿನ ಮೂಲ ಎಂಬ ವಾದವನ್ನು ಹಲವು ಮನೋವಿಜ್ಞಾನಿಗಳು ಮುಂದಿಟ್ಟದ್ದು.

ದರೋಡೆ ಮಾಡಲು ಹೋದವರು ತಾವು ಕಟ್ಟಿಹಾಕಿದ ಮಹಿಳೆಯ ಅಂಗಾಂಗಗಳನ್ನು ಅವಳ ಅಸಹಾಯಕತೆಯಲ್ಲಿ ಕಂಡು ಅತ್ಯಾಚಾರ ಮಾಡಲು ಪ್ರೇರೇಪಿತರಾಗುವುದು ಒಂದು ಬಗೆ. ಕಾಮಾತುರದಿಂದ ಎಲ್ಲರನ್ನೂ ಎಲ್ಲವನ್ನೂ ಧಿಕ್ಕರಿಸಿ, ಸಂಚು ಹೂಡಿ ಅತ್ಯಾಚಾರ ಎಸಗುವುದು ಇನ್ನೊಂದು ಬಗೆ. ಮನೋವ್ಯಾಧಿಗೆ ಸಿಲುಕಿ, ತನ್ನನ್ನು ತಾನೇ ಮರೆತು, ವನಿತೆಯರು ಇರುವುದೇ ಕಾಮಕ್ಕೆ ಎಂದು ಭಾವಿಸಿ ಅತ್ಯಾಚಾರಕ್ಕೆ ಮುಂದಾಗುವವರದ್ದು ಮತ್ತೊಂದು ಬಗೆ. ಇಂಥ ಎಲ್ಲಾ ಮನಸ್ಥಿತಿಗಳ ಹಿಂದೆಯೂ ಯುದ್ಧಪಿಪಾಸು ದೋರಣೆ ಅಡಗಿರುತ್ತದಂತೆ.

ದೈಹಿಕವಾಗಿ ಮಹಿಳೆಯರಿಂತ ಬಲಾಢ್ಯರಾದ ಪುರುಷರು ಆಕ್ರಮಣಶೀಲತೆಯಲ್ಲಿ ಸದಾ ಮುಂದು ಎಂಬುದು ಸಹಜ ಭಾವನೆ. ಆದರೆ ಮಾನಸಿಕವಾಗಿ ಹೆಣ್ಣು ಸಬಲೆ ಎನ್ನುತ್ತದೆ ಇನ್ನೊಂದು ಅಧ್ಯಯನ. ಅದರ ಪ್ರಕಾರ ಕ್ರೀಡೆಯಲ್ಲಿ ಹೆಚ್ಚು ಆಕ್ರಮಣಶೀಲತೆ ತೋರುವುದು ಮಹಿಳೆಯರೇ. ಅದಕ್ಕೇ ಮಹಿಳೆಯರು ಆಡುವ ಕ್ರೀಡೆಗಳಿಗೆ ಜಾಗತಿಕ ಮಟ್ಟದಲ್ಲ ಹೆಚ್ಚು ಜನಪ್ರಿಯತೆ ದೊರೆತಿದೆ. ಜೋರಾಗಿ ಕೂಗುತ್ತಿದ್ದ ಟೆನಿಸ್‌ ಆಟಗಾರ್ತಿ ಮೋನಿಕಾ ಸೆಲೆಸ್‌, ಪುರುಷರನ್ನು ಹೋಲುವ ಮಾಂಸಖಂಡಗಳಿರುವ ಇನ್ನೊಬ್ಬ ಟೆನಿಸ್‌ ಆಟಗಾರ್ತಿ ಸೆರೆನಾ ವಿಲಿಯಮ್ಸ್‌, ಪೋಲ್‌ವಾಲ್ಟ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚು ಸಲ ತನ್ನ ವಿಶ್ವ ದಾಖಲೆಯನ್ನು ತಾನೇ ಉತ್ತಮಪಡಿಸಿದ ಎಲೆನಾ ಇಸನ್ಬಯೇವಾ ಇದಕ್ಕೆ ಕೆಲವು ಉದಾಹರಣೆಗಳು.

ಹುಡುಗಿಯರಲ್ಲಿ ಋತುಮತಿಯರಾದ ನಂತರ, ನಾಲ್ಕೈದು ವರ್ಷ ಆಕ್ರಮಣಶೀಲ ಧೋರಣೆ ಹೆಚ್ಚಾಗುತ್ತದೆ. ಹುಡುಗರಲ್ಲಿ ಅದು ಹುಡುಗಿಯರಿಗಿಂತ ಕೊಂಚ ತಡವಾಗಿ ಪ್ರಾರಂಭವಾಗುತ್ತದೆ.

ಕಾನೂನು ರೂಪಿಸುವವರು ಸಹಜವಾಗಿಯೇ ದೈಹಿಕವಾಗಿ ಪುರುಷರಿಗಿಂತ ದುರ್ಬಲರಾದ, ಸಮಾಜದಲ್ಲಿ ದೊಡ್ಡ ಚೌಕಟ್ಟಿನಲ್ಲಿ ಇರುವ ಮಹಿಳೆಯರನ್ನು ದೃಷ್ಟಿಯಲ್ಲಿಟ್ಟುಕೊಂಡಿರುತ್ತಾರೆ. ಬದಲಾದ ಕಾಲದಿಂದ ಉದ್ಭವವಾಗುವ ಪ್ರಸಂಗಗಳು ಆ ಕಾನೂನಿನ ಸದ್ಬಳಕೆ, ದುರ್ಬಳಕೆಯ ಜಿಜ್ಞಾಸೆಯನ್ನು ಮುಂದೊಡ್ಡುತ್ತವೆ.

ಅತ್ಯಾಚಾರಕ್ಕೆ ಮಾನಸಿಕ, ಸಾಂಸ್ಕೃತಿಕ, ಸಾಮಾಜಿಕ ಕಾರಣಗಳಿವೆ. ಅದು ತುಂಬಾ ಖಾಸಗಿಯಾದ ಸಂಗತಿ. ಪುರುಷ ತನ್ನ ಖಾಸಗೀ ಪರಿಧಿಯಲ್ಲಿಯೇ ‘ಪವರ್‌’ ಪ್ರತಿಷ್ಠಾಪಿಸುವ ಮನಸ್ಥಿತಿಯಲ್ಲಿ ನಡೆಯುವ ಕ್ರಿಯೆ. ಅದು ನಡೆದ ನಂತರ ಅವನಲ್ಲಿ ಆಗುವ ತಲ್ಲಣಗಳು ಅತ್ಯಾಚಾರಕ್ಕೆ ಒಳಗಾಗುವ ಹುಡುಗಿಯಲ್ಲಿ ಆಗುವ ತಲ್ಲಣದ ಪ್ರಮಾಣಕ್ಕೇ ಸಮವಂತೆ. ಆದರೆ, ಅದೊಂದು ಚಟವೋ, ವ್ಯಾಧಿಯೋ ಆದಾಗ ಸಮಸ್ಯೆ ಬೇರೆಯದೇ ಸ್ವರೂಪ ಪಡೆದುಕೊಳ್ಳುತ್ತದೆ.

ಹಲವು ಗಂಡಸರ ಜೊತೆ ಮಲಗಿದ ಕಾದಂಬರಿಯ ಒಂದು ಪಾತ್ರ ತನಗೆ ಹುಟ್ಟುವ ಮಗು ಇಂಥವನದ್ದೇ ಎಂದು ಕಲ್ಪಿಸಿಕೊಳ್ಳುವ ಕಥಾನಕದಲ್ಲಿ ಇರುವುದು ಅತ್ಯಾಚಾರವೋ, ಫ್ಯಾಂಟಸಿಯೋ? ಇಂಥ ಹಲವು ಪ್ರಶ್ನೆಗಳನ್ನು ‘ಅತ್ಯಾಚಾರ’ ಹುಟ್ಟುಹಾಕುತ್ತದೆ. ತಾತ್ವಿಕವಾಗಿ ತುಂಬಾ ಖಾಸಗಿಯಾದ ಅದರ ಬೇರುಗಳು ಸುಲಭವಾಗಿ ಕೈಗೆ ಎಟಕುವುದಿಲ್ಲ. ಅದು ಮೃಗೀಯ ಎನ್ನುವುದು ಕೂಡ ವೈಜ್ಞಾನಿಕವಾಗಿ ಸತ್ಯಕ್ಕೆ ದೂರವಾದ ಮಾತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT