ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ, ಅಂಗಡಿಗೆ ಎಎಸ್‌ಐ ನೋಟಿಸ್: ವಿರೋಧ

Last Updated 13 ಜನವರಿ 2011, 10:10 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ (ಎಎಸ್‌ಐ) ವ್ಯಾಪ್ತಿಯ ಸ್ಮಾರಕಗಳ 300 ಮೀ. ಅಂತರದಲ್ಲಿರುವ ಮನೆ, ಅಂಗಡಿ ಇತರ ನಿರ್ಮಾಣಗಳನ್ನು ತೆರವು ಮಾಡುವ ಸಂಬಂಧ ಎಎಸ್‌ಐ ಸಿಬ್ಬಂದಿ ಬುಧವಾರ ಸ್ಮಾರಕ ಆಸುಪಾಸಿನ ಮನೆ, ಅಂಗಡಿಗಳಿಗೆ ತೆರಳಿ ನೋಟಿಸ್ ವಿತರಿಸಿದರು.

ಪಟ್ಟಣದ ಜಾಮಿಯಾ ಮಸೀದಿ, ಟಿಪ್ಪು ಮೃತದೇಹ ದೊರೆತ ಸ್ಥಳಕ್ಕೆ ಸಮೀಪದ ಜನವಸತಿ ಸ್ಥಳದಲ್ಲಿ ನೋಟಿಸ್ ಹಂಚಿದರು. ಸ್ಮಾರಕಗಳ ಸುತ್ತ 100 ಮೀ. ವ್ಯಾಪ್ತಿಯನ್ನು ನಿಷೇಧಿತ, ಅದರ ಆಚೆಗಿನ 200 ಮೀ. ವ್ಯಾಪ್ತಿಯನ್ನು ನಿಯಂತ್ರಿತ ಪ್ರದೇಶವೆಂದು ಘೋಷಿಸಿರುವ ಕರಪತ್ರ ವಿತರಿಸಿದರು. 1992ರ ನಂತರ ನಿಷೇಧಿತ ಹಾಗೂ ನಿಯಂತ್ರಿತ ಪ್ರದೇಶದಲ್ಲಿ ಇಲಾಖೆಯ ಪೂರ್ವಾನುಮತಿ ಇಲ್ಲದೆ ನಿರ್ಮಾಣವಾಗಿರುವ ಕಟ್ಟಡಗಳನ್ನು ಅನಧಿಕೃತ ಎಂದು ಈ ನೋಟಿಸ್ ಬಿಂಬಿಸುತ್ತಿದೆ. 1992 ಕಾಯಿದೆ ಜೈಲು ಶಿಕ್ಷೆಯನ್ನು 3 ತಿಂಗಳಿನಿಂದ ಎರಡು ವರ್ಷ ಹಾಗೂ ದಂಡವನ್ನು ರೂ.5 ಸಾವಿರದಿಂದ ಒಂದು ಲಕ್ಷ ರೂಪಾಯಿಗೆ ಹೆಚ್ಚಿದೆ.

ಪಟ್ಟಣದ ರಂಗನಾಥಸ್ವಾಮಿ ದೇವಾಲಯ, ದರಿಯಾ ದೌಲತ್, ಡಂಜನ್ ಸೇರಿದಂತೆ 10 ಸ್ಮಾರಕಗಳು ಎಎಸ್‌ಐ ವ್ಯಾಪ್ತಿಗೆ ಬರುತ್ತವೆ. ಇವುಗಳ 300 ಮೀ.ವ್ಯಾಪ್ತಿಯಲ್ಲಿನ ಅನಧಿಕೃತ ನಿರ್ಮಾಣಗಳನ್ನು ತೆರವು ಮಾಡಲು ಕಾಯಿದೆಯಲ್ಲಿ ಅವಕಾಶ ಇದ್ದು, ಸಾರ್ವಜನಿಕರಿಗೆ ತಿಳಿವಳಿಕೆ ನೋಟಿಸ್ ಹಂಚಲಾಗುತ್ತಿದೆ ಎಂದು ಎಎಸ್‌ಐ ಸಿಬ್ಬಂದಿ ತಿಳಿಸಿದ್ದಾರೆ. ಆದರೆ ಹೀಗೆ ನೋಟಿಸ್ ಹಂಚುತ್ತಿರುವುದಕ್ಕೆ ನಾಗರಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

‘ಐದಾರು ತಿಂಗಳ ಹಿಂದೆ ಕೂಡ ಹೀಗೆ ನೋಟಿಸ್ ಹಂಚಲಾಗಿತ್ತು. ರಾಜ್ಯ ಸರ್ಕಾರವೇ ಎಎಸ್‌ಐ ನಿಯಮ ಮೀರಿ ಇಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದ ಕಟ್ಟಡಗಳನ್ನು ನಿರ್ಮಿಸಿದೆ. ಆದರೆ ಬಡವರು ಮನೆ, ಅಂಗಡಿ ನಿರ್ಮಿಸಲು ಅಡ್ಡಗಾಲು ಹಾಕುತ್ತಿದೆ. ಇರುವ ಸ್ಮಾರಕಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡದೆ ನೋಟಿಸ್ ಹಂಚುವ ಮೂಲಕ ಜನರ ನೆಮ್ಮದಿ ಹಾಳು ಮಾಡಲಾಗುತ್ತಿದೆ. ಇಂತಹ ಜನ ವಿರೋಧಿ ನಿಯಮವನ್ನು ಬದಲಿಸಬೇಕು’ ಎಂದು ಕೃಷ್ಣರಾಜೇಂದ್ರ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಉಮೇಶ್ ಕುಮಾರ್ ಹೇಳಿದ್ದಾರೆ.

‘ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ ಅನುಸರಿಸುತ್ತಿರುವ ಕ್ರಮ ಸರಿಯಲ್ಲ. ಈ ಬಗ್ಗೆ ಸಂಸತ್ ಸದಸ್ಯರು ಸದನದಲ್ಲಿ ದನಿ ಎತ್ತಬೇಕು. ಹತ್ತಾರು ವರ್ಷಗಳಿಂದ ನೆಲೆಸಿರುವ ಜನರನ್ನು ಒಕ್ಕಲೆಬ್ಬಿಸುವ ಕಾಯಿದೆಗೆ ತಿದ್ದುಪಡಿ ತರಬೇಕು. ಜನರಿಗೆ ತೊಂದರೆಯಾಗ ದಂತೆ ಸ್ಮಾರಕಗಳ ರಕ್ಷಣೆ ಮಾಡುವ ನಿಯಮ ರೂಪಿಸಬೇಕು’ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಿ.ಉಮಾಶಂಕರ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT