ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಉಳಿಸಿಕೊಳ್ಳಲು ಹಸುಗೂಸು ಮಾರಾಟ ಯತ್ನ

Last Updated 24 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಳಗಾವಿ: ಸರ್ಕಾರದ ಮಾಸಾಶನ ನಿಂತು, ಬಡತನದ ಬೇಗೆಯಲ್ಲಿ ಬೇಯುತ್ತಿರುವ ದಂಪತಿ  ತಮ್ಮ ಆಶ್ರಯ ಮನೆಯನ್ನು ಉಳಿಸಿಕೊಳ್ಳಲು ಐದು ತಿಂಗಳ ಮಗನನ್ನೇ ಮಾರಾಟ ಮಾಡಲು ಮುಂದಾಗಿರುವ ಹೃದಯ ವಿದ್ರಾವಕ ಘಟನೆ ನಗರದ ಹೊರ ವಲಯದಲ್ಲಿರುವ ಅಲಾರವಾಡದಲ್ಲಿ ನಡೆದಿದೆ.

ಜಿಲ್ಲಾ ಕೇಂದ್ರದಿಂದ 10 ಕಿ.ಮೀ. ದೂರದಲ್ಲಿರುವ ಅಲಾರವಾಡದಲ್ಲಿ ಅನಾರೋಗ್ಯ ಪೀಡಿತರಾಗಿರುವ ವಿಜಯ ದಿವಟೆ ಹಾಗೂ ಮಂಜುಳಾ ದಂಪತಿ ಒಂದು ಹೊತ್ತು ಊಟಕ್ಕೂ ನಿತ್ಯ ಪರದಾಡುತ್ತಿದ್ದಾರೆ. ವಯಸ್ಸಾದ ತಾಯಿ ಚಂದ್ರವ್ವ, ನಾಲ್ಕು ವರ್ಷದ ಮಗ ಶ್ರೀಧರ ಹಾಗೂ 5 ತಿಂಗಳ ಮಗ ಪ್ರೇಮ್ ಸಹ ಇವರ ಜೊತೆಗಿದ್ದು, ತುತ್ತಿನ ಚೀಲ ತುಂಬಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.

ಕೈಕಾಲಿನಲ್ಲಿ ಚರ್ಮ ರೋಗದಿಂದಾಗಿ ಅಂಗವೈಕಲ್ಯ ಉಂಟಾಗಿದ್ದರಿಂದ ಕೆಲಸ ಮಾಡಲಾಗದ ವಿಜಯ ದಿವಟೆ ಅವರಿಗೆ ಸರ್ಕಾರದಿಂದ ರೂ. 400 ಮಾಸಾಶನ ಬರುತ್ತಿತ್ತು. ಜೊತೆಗೆ ತಾಯಿ ಚಂದ್ರವ್ವಳಿಗೂ ರೂ. 400 ವೃದ್ಧಾಪ್ಯ ವೇತನ ಬರುತ್ತಿತ್ತು. ಕಳೆದ ವರ್ಷದಿಂದ ಏಕಾಏಕಿ ಇಬ್ಬರ ಮಾಸಾಶನ ನಿಂತಿದ್ದರಿಂದ ಜೀವನ ಬಂಡಿಯೇ ಓಡದಂತಾಗಿದೆ.

ಅಲಾರವಾಡದ ಆಶ್ರಯ ಕಾಲೊನಿಯಲ್ಲಿ ವಿಜಯ ದಿವಟೆಗೆ ಮಂಜೂರಾಗಿದ್ದ ಆಶ್ರಯ ಮನೆಗೆ 40 ಸಾವಿರ ರೂಪಾಯಿ ಸಾಲದ ಕಂತು ಕಟ್ಟಬೇಕಾಗಿದೆ. ಸಾಲದ ಕಂತು ಕಟ್ಟದಿದ್ದರೆ ಮನೆ ಖಾಲಿ ಮಾಡುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿರುವುದು ಕುಟುಂಬಕ್ಕೆ ಸಿಡಿಲು ಬಡಿದಂತಾಗಿದೆ.

`ಅಂಗವೈಕಲ್ಯದಿಂದಾಗಿ ಯಾವುದೇ ಕೆಲಸ ಮಾಡಲು ನನಗೆ ಸಾಧ್ಯವಿಲ್ಲ. ಚರ್ಮ ರೋಗದಿಂದಾಗಿ ಯಾರೂ ಸಮೀಪಕ್ಕೆ ಬರಲು ಕೊಡುವುದಿಲ್ಲ. ಹೆಂಡತಿಗೆ ಹೃದಯರೋಗ ಇರುವುದರಿಂದ ಹೊರಗಡೆ ಹೋಗಿ ದುಡಿಯಲೂ ಆಗುತ್ತಿಲ್ಲ. ಸರ್ಕಾರದ ಮಾಸಾಶನದಿಂದಾಗಿ ಎರಡು ಹೊತ್ತು ಹೇಗೋ ಊಟ ಮಾಡುತ್ತಿದ್ದೆವು. ಇದೀಗ ಮಾಸಾಶನವೂ ಬರುತ್ತಿಲ್ಲ. ಮಂಜುಳಾಳಿಗೆ ತಾಯಿಯ ನಿವೃತ್ತಿ ವೇತನ 2000 ರೂಪಾಯಿ ನೀಡುವುದನ್ನೂ ನಿಲ್ಲಿಸಲಾಗಿದೆ. ಹೀಗಾಗಿ ನಮ್ಮ ಐದು ತಿಂಗಳ ಮಗ ಪ್ರೇಮ್‌ನನ್ನು ಯಾರಿಗಾದರೂ ಮಾರಾಟ ಮಾಡಿಯಾದರೂ ಇದ್ದ ಒಂದು ಸೂರನ್ನು ಉಳಿಸಿಕೊಳ್ಳಬೇಕು ಎಂಬ ನಿರ್ಧಾರಕ್ಕೆ ನಾವು ಬಂದಿದ್ದೇವೆ' ಎನ್ನುತ್ತಾರೆ ವಿಜಯ ದಿವಟೆ.

`ತಾಯಿ ಚಂದ್ರವ್ವ ಜೋಗತಿಗೆ ಹೋಗಿ ಬೇಡಿಕೊಂಡು ಬಂದು ವಿಜಯ್‌ನ ಕುಟುಂಬವನ್ನು ಸಾಕುತ್ತಿದ್ದಳು. ಇದೀಗ ವೃದ್ಧಾಪ್ಯದಿಂದಾಗಿ ಆಕೆಯೂ ಹಾಸಿಗೆ ಹಿಡಿದಿದ್ದಾಳೆ. ಮಾಸಾಶನ ನಿಂತಿರುವುದರಿಂದ ಸಮೀಪದಲ್ಲೇ ಇರುವ ಸರ್ಕಾರಿ ಶಾಲೆಯಿಂದ ಬಿಸಿಯೂಟವನ್ನು ಪಡೆದುಕೊಂಡು ಬಂದು ಊಟ ಮಾಡುತ್ತಿದ್ದಾರೆ. ಬಡತನದಿಂದ ಬೇಸತ್ತು.ಬಂಗಾರದಂತಹ ಮಗನನ್ನೇ ಮಾರಾಟ ಮಾಡಲು ಮುಂದಾಗಿದ್ದಾರೆ' ಎಂದು ಹೇಳುವಾಗ ಪಕ್ಕದ ಮನೆಯ ಯಲ್ಲವ್ವ ಕೋಣಕೇರಿ ಗದ್ಗದಿತರಾದರು.

`ಆಶ್ರಯ ಮನೆಗೆ ಪಡೆದಿದ್ದ ವಿದ್ಯುತ್ ಸಂಪರ್ಕದ ಬಿಲ್ ಸುಮಾರು 3 ಸಾವಿರ ಬಾಕಿ ಇದೆ. ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಮಗುವಿನ ಹಾಲಿಗಾಗಿ ಸಾಲ ಮಾಡಿದ್ದನ್ನು ತೀರಿಸಲು ಆಗದೇ ಇರುವುದರಿಂದ ಮನೆಯ ತಾಮ್ರದ ಕೊಡಗಳನ್ನು ತೆಗೆದುಕೊಂಡು ಹೋಗಲಾಗಿದೆ. ಆಶ್ರಯ ಮನೆಯ ಸಾಲದ ಕಂತು ಸೇರಿದಂತೆ ಸುಮಾರು 60 ಸಾವಿರ ರೂಪಾಯಿ ಸಾಲ ಇದೆ. ಮಾಸಾಶನ ಏಕೆ ನಿಲ್ಲಿಸಲಾಗಿದೆ ಎಂಬ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ. ಹೀಗಾಗಿ ದಿವಟೆ ಕುಟುಂಬದ ಮಗು ಮಾರಾಟ ವಾಗುವುದನ್ನು ತಡೆಗಟ್ಟಲು ಸಾರ್ವಜನಿಕರು ನೆರವಿನ ಹಸ್ತ ಚಾಚಬೇಕು' ಎನ್ನುತ್ತಾರೆ ವಿಜಯ ದಿವಟೆ ಕುಟುಂಬದ ನೆರವಿಗೆ ನಿಂತಿರುವ ಬೆಳಗಾವಿಯ ಸಮಾಜ ಸೇವಕಿ ಕಸ್ತೂರಿ ಭಾವಿ.

ವಿಜಯ ದಿವಟೆ ಅವರು ತಮ್ಮ ಇಬ್ಬರು ಮಕ್ಕಳು ಹಾಗೂ ಪತ್ನಿಯೊಂದಿಗೆ ಭಾನುವಾರ ರಾತ್ರಿಯೇ  ಕಸ್ತೂರಿ ಭಾವಿ ಅವರೊಂದಿಗೆ ಬೆಂಗಳೂರಿಗೆ ತೆರಳಿದ್ದು, ತಾಯಿ ಚಂದ್ರವ್ವ ಒಬ್ಬಳೇ ಅಲಾರವಾಡದಲ್ಲಿದ್ದಾರೆ.`ಮಕ್ಕಳನ್ನು ಮಾರುವುದು ಅಪರಾಧವಾಗಿದೆ. ಹೀಗಾಗಿ ದಿವಟೆ ಕುಟುಂಬಕ್ಕೆ ಮಕ್ಕಳನ್ನು ಸಾಕಲು ಸಾಧ್ಯವಾಗದಿದ್ದರೆ, ನಮ್ಮ ಇಲಾಖೆಯ ಬಾಲಗೃಹದಲ್ಲಿ ಪೋಷಣೆ ಮಾಡಲಾಗುವುದು. ಅಗತ್ಯ ಬಿದ್ದರೆ, ತಂದೆ- ತಾಯಿಗೂ ಆರೋಗ್ಯ ಸೇವೆ ಒದಗಿಸಿ, ಉಪಕಸುಬು ಕಲ್ಪಿಸಿಕೊಡಲು ಸಿದ್ಧರಿದ್ದೇವೆ' ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ಎಚ್. ಓಬಳಪ್ಪ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT