ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಕಟ್ಟಿಕೊಳ್ಳಲು ರೂ. 2.5 ಲಕ್ಷ ನೆರವು

Last Updated 21 ಜೂನ್ 2011, 7:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ಮನೆ ಕಟ್ಟಿಕೊಳ್ಳಲು 2.50 ಲಕ್ಷ ರೂಪಾಯಿ ನೆರವು ನೀಡಬೇಕೆಂಬ ಪ್ರಸ್ತಾವವನ್ನು ಸರ್ಕಾರಕ್ಕೆ ಕಳಿಸಲಾಗುತ್ತದೆ~ ಎಂದು ಮೇಯರ್ ಪೂರ್ಣಾ ಪಾಟೀಲ ತಿಳಿಸಿದರು.

ಅವಳಿನಗರದಲ್ಲಿಯ ನಿರಂತರ ನೀರು ಸರಬರಾಜು ಯೋಜನೆಯ ಅನುಷ್ಠಾನ ಮತ್ತು ಪರಿಣಾಮ ಕುರಿತು ಮಂಗಳೂರಿನ ಪಾಲಿಕೆಯ ತಂಡದೊಂದಿಗೆ ಇಲ್ಲಿಯ ಪಾಲಿಕೆಯ ಕಚೇರಿಯಲ್ಲಿ ಸೋಮವಾರ ಸಭೆ ನಡೆದ ನಂತರ ಅವರು ಮಾತನಾಡಿದರು.

`ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಹುಬ್ಬಳ್ಳಿ-ಧಾರವಾಡ ಪಾಲಿಕೆಯಿಂದ 35 ಸಾವಿರ ರೂಪಾಯಿ ನೆರವು ನೀಡಲಾಗುತ್ತದೆ. ಆದರೆ ಮಂಗಳೂರು ಪಾಲಿಕೆಯಲ್ಲಿ 2.50 ಲಕ್ಷ ನೆರವು ನೀಡಲಾಗುತ್ತದೆ. ಇದು ಶ್ಲಾಘನೀಯ ಸಂಗತಿ. ಕೇವಲ 30 ಸಾವಿರ ರೂಪಾಯಿ ಅನುದಾನದಲ್ಲಿ ಮನೆ ಕಟ್ಟಿಕೊಳ್ಳಲು ಸಾಧ್ಯವಾಗದು. ಇದಕ್ಕಾಗಿ ಅವಳಿನಗರದ ವ್ಯಾಪ್ತಿಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಮನೆ ಕಟ್ಟಿಕೊಳ್ಳಲು 2.50 ಲಕ್ಷ ಅನುದಾನ ಒದಗಿಸಲು ಯತ್ನಿಸಲಾಗುತ್ತದೆ. ಇದರೊಂದಿಗೆ ಮನೆ ಕಟ್ಟಿಕೊಳ್ಳಲು ಪಡೆಯುವ ಪರವಾನಗಿಯನ್ನು ಶೀಘ್ರದಲ್ಲೇ ಒದಗಿಸಲಾಗುತ್ತದೆ~ ಎಂದು ಅವರು ಭರವಸೆ ನೀಡಿದರು.

`ಮಂಗಳೂರು ಪಾಲಿಕೆಯ ಆಹ್ವಾನದ ಮೇರೆಗೆ ಹುಬ್ಬಳ್ಳಿ-ಧಾರವಾಡ ಪಾಲಿಕೆಯ ತಂಡ ಜುಲೈ ಮೊದಲ ವಾರದಲ್ಲಿ ಮಂಗಳೂರಿಗೆ ಭೇಟಿ ನೀಡಲಿದೆ. ಅಲ್ಲಿಯ ಹೊಸ ಯೋಜನೆಗಳನ್ನು ಇಲ್ಲಿ ಅಳವಡಿಸಲಾಗುತ್ತದೆ. ಹೀಗೆ ಪರಸ್ಪರ ಚರ್ಚಿಸುವ ಮೂಲಕ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿ ಸಲು ಸಾಧ್ಯವಾಗುತ್ತದೆ~ ಎಂದರು.

ಇದಕ್ಕೂ ಮೊದಲು ನಡೆದ ಚರ್ಚೆಯಲ್ಲಿ ಮಂಗಳೂರು ಪಾಲಿಕೆ ಸಚೇತಕ ಸುಧೀರ ಶೆಟ್ಟಿ ಮಾತನಾಡಿ, `ಮಂಗಳೂರಿನ 5 ಲಕ್ಷ ಜನರಿಗೆ ನಿತ್ಯ 160 ಎಂಎಲ್‌ಡಿ (ಮಿಲಿಯನ್ ಲೀಟರ್ ಪರ್ ಡೆ) ನೀರು ಪೂರೈಸ ಲಾಗುತ್ತದೆ. ಒಟ್ಟು 60 ವಾರ್ಡುಗಳಲ್ಲಿ 13 ವಾರ್ಡ್‌ಗಳಿಗೆ ನಿತ್ಯ ನೀರು ಪೂರೈಸುತ್ತೇವೆ. ಆದರೆ ಸೋರಿಕೆಯೇ ಹೆಚ್ಚು. ಇದನ್ನು ತಡೆಗಟ್ಟುವ ಜತೆಗೆ ಎಲ್ಲ ವಾರ್ಡ್‌ಗಳಿಗೆ ನಿತ್ಯ ನೀರು ಪೂರೈಸುವ ಸಂಬಂಧ ಚರ್ಚಿಸಲು ಇಲ್ಲಿಗೆ ಬಂದಿದ್ದೇವೆ~ ಎಂದರು.

ಪ್ರಾಸ್ತಾವಿಕವಾಗಿ ಮಾತಾಡಿದ ಪಾಲಿಕೆಯ ಸೂಪರಿಂಟೆಂಡೆಂಟ್ ಎಂಜಿನಿಯರ್ ಲಕ್ಷ್ಮೀಕಾಂತ ನಾಯಕ, `24್ಡ7 ನೀರು ಸರಬರಾಜು ಯೋಜನೆ 2007ರಲ್ಲಿ ಆರಂಭವಾಯಿತು. ಆರಂಭದಲ್ಲಿ ಸಾರ್ವಜನಿಕರು ನಂಬಿರಲಿಲ್ಲ. ಪ್ರತಿ ಶನಿವಾರ ಸಾರ್ವಜನಿಕರೊಂದಿಗೆ ಸಂವಾದ ನಡೆಸುವ ಮೂಲಕ ಮನವರಿಕೆ ಮಾಡಿಕೊಟ್ಟೆವು. 67 ವಾರ್ಡುಗಳಲ್ಲಿ 8 ವಾರ್ಡುಗಳಿಗೆ ಮಾತ್ರ ನಿತ್ಯ ನೀರು ಪೂರೈಕೆಯಾಗುತ್ತಿದೆ. ಈ ಯೋಜನೆಗಾಗಿಯೇ ಪ್ರತ್ಯೇಕ ಅಧಿಕಾರಿಗಳಿದ್ದಾರೆ~ ಎಂದರು.

ಜಲಮಂಡಳಿಯ ಕಾರ್ಯ ನಿರ್ವಾಹಕ ಎಂಜಿನಿಯರ್ ಜಯರಾಂ ಮಾತನಾಡಿ, `ನಳದ ಸಂಪರ್ಕಕ್ಕೆ 2 ಸಾವಿರ ರೂಪಾಯಿ ಶುಲ್ಕವಿದೆ. ಬಡವರಿಗೆ ಒಂದು ಸಾವಿರ ರೂಪಾಯಿಗೂ ಕಡಿಮೆ ಶುಲ್ಕವಿದೆ~ ಎಂದರು. ಇದಕ್ಕೆ ಮಂಗಳೂರು ಪಾಲಿಕೆ ಮೇಯರ್ ಪ್ರವೀಣ ಅಂಚನ್, `ಮಂಗಳೂರಿನಲ್ಲಿ 1300 ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಉಚಿತವಾಗಿ ನೀರು ಪೂರೈಸಲಾಗುತ್ತದೆ~ ಎಂದರು. ಲಕ್ಷ್ಮೀಕಾಂತ ನಾಯಕ, `ನೀರನ್ನು ಉಚಿತವಾಗಿ ನೀಡಿ. ಆದರೆ ನಳದ ಸಂಪರ್ಕ ಕೊಡುವಾಗ ಶುಲ್ಕ ವಿಧಿಸಿ~ ಎಂದು ಸಲಹೆ ನೀಡಿದರು. ಮಂಗಳೂರಿನ ಕಾರ್ಯನಿರ್ವಾಹಕ ಎಂಜಿನಿಯರ್ ಗೋಪಾಲಗೌಡ, `ಮಂಗಳೂರಲ್ಲಿ ನೀರು ಪೂರೈಸುವ ಪೈಪುಗಳು ಹಳೆಯವು. ಜೊತೆಗೆ 4-5 ನಳಗಳ ಮೂಲಕ ಒಂದೊಂದು ಹೋಟೆಲಿನವರು ನೀರು ಪಡೆಯುತ್ತಾರೆ. ಇದನ್ನು ಹೇಗೆ ತಡೆಗಟ್ಟಬೇಕು?~ ಎಂದು ಕೇಳಿದರು. ಜೊತೆಗೆ ಮಂಗಳೂರು ಪಾಲಿಕೆ ಸದಸ್ಯ ರಂಗನಾಥ ಕಿಣಿ, `ಮಂಗಳೂರಲ್ಲಿ 1500 ಅಕ್ರಮವಾಗಿ ನಳಗಳ ಸಂಪರ್ಕಗಳಿವೆ. ಇವುಗಳನ್ನು ಹೇಗೆ ತಡೆಗಟ್ಟಬೇಕು~ ಎಂದು ಕೇಳಿದರು. ಇದಕ್ಕೆ ` ಸದಸ್ಯರು ಹಾಗೂ ಎಂಜಿನಿಯರ್ ನೇತೃತ್ವದಲ್ಲೇ ಕಾರ್ಯಾಚರಣೆಗೆ ಇಳಿಯಿರಿ~ ಎಂದು ಜಯರಾಂ ಹೇಳಿದರು.

ಸಭೆಯಲ್ಲಿ ಮಂಗಳೂರು ಪಾಲಿಕೆ ಉಪಮೇಯರ್ ಗೀತಾ ನಾಯಕ, ಹುಬ್ಬಳ್ಳಿ-ಧಾರವಾಡ ಪಾಲಿಕೆ ಉಪಮೇಯರ್ ನಾರಾಯಣ ಜರತಾರಘರ, ಪಾಲಿಕೆ ಸದಸ್ಯರಾದ ರಾಘವೇಂದ್ರ ರಾಮದುರ್ಗ, ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ಅಧಿಕಾರಿ ಎಂ.ಕೆ. ಮನಗೊಂಡ ಮೊದಲಾದವರು ಹಾಜರಿದ್ದರು.

ನಿತ್ಯ ನೀರು ಪೂರೈಕೆಯಾಗುವ 8 ವಾರ್ಡುಗಳಿಗೆ ಮಂಗಳೂರಿನ ಪಾಲಿಕೆ ತಂಡ ಮಂಗಳವಾರ ಭೇಟಿ ನೀಡಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT