ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ- ಜಗತ್ತು: ಸಂತಸವೇ ಯಶಸ್ಸು

Last Updated 11 ಮೇ 2012, 19:30 IST
ಅಕ್ಷರ ಗಾತ್ರ

ಕಚೇರಿ-ಕುಟುಂಬ  -ಹೀಗೆ ಎರಡೂ ಪಾತ್ರಗಳನ್ನು ಒಟ್ಟಿಗೆ ನಿಭಾಯಿಸುವಾಗ ಸಮತೋಲನ ಸಾಧಿಸುವ ಸಂದರ್ಭದಲ್ಲಿ  ವೃತ್ತಿ ಬೇರೆ. ವೈಯಕ್ತಿಕ ಬದುಕು ಬೇರೆ ಎಂದು ತಿಳಿದವಳು ನಾನು. ಎರಡನ್ನೂ ಬೆರೆಸುವುದಿಲ್ಲ. ನನ್ನ ಪತಿ ಡಾ. ನಾಗರಾಜ ಡಿ. ಬೆಂಗಳೂರಿನ `ನಿಮ್ಹಾನ್ಸ್~ ನಿರ್ದೇಶಕರಾಗಿದ್ದರು. ಪುತ್ರ ಡಾ. ಕಾರ್ತಿಕ್ ನರರೋಗದಲ್ಲಿ ಸೂಪರ್ ಸ್ಪೆಷಾಲಿಟಿ ಕಲಿಯುತ್ತಿದ್ದಾನೆ. ಕುಟುಂಬದ ಜವಾಬ್ದಾರಿ ಹೆಚ್ಚಿಲ್ಲ. ಇನ್ನು ನನ್ನ ಬೆಳವಣಿಗೆಗೆ ಹೆತ್ತವರೂ ಪ್ರೋತ್ಸಾಹ ನೀಡುತ್ತಿದ್ದಾರೆ. ನನ್ನ ವೈಯಕ್ತಿಕ ಸಮಸ್ಯೆಗಳು ಯಾವತ್ತೂ ವೃತ್ತಿಗೆ ಅಡ್ಡಿಯಾಗಿಲ್ಲ. 

 ಟಿಪಿಕಲ್ ಹೋಂ ಮೇಕರ್ ನಾನು. ಶಾಪಿಂಗ್ ಮಾಡುವುದು, ಅಡುಗೆ ಮಾಡುವುದು ನಾನೇ. ಮನೆ ನಿಭಾಯಿಸುವುದೂ ನಾನೇ. ಆದರೆ ಕರ್ತವ್ಯ ನಿಮಿತ್ತ ಬೇರೆ ಬೇರೆ ಊರುಗಳಿಗೆ ಹೋದಾಗ ಮಾತ್ರ ಅಡುಗೆಯಿಂದ ವಿನಾಯಿತಿ ಸಿಗುತ್ತದೆ. 

 ಕೆಲಸದ ಒತ್ತಡದ ನಡುವೆಯೂ ಪತಿ, ಮಕ್ಕಳು ಹಾಗೂ ಮನೆಯ ಹಿರಿಯರ ನಿರೀಕ್ಷೆಗಳನ್ನು ಪೂರೈಸಬೇಕೆಂಬ ಒತ್ತಡ ನನಗಿಲ್ಲ.  ಕುಟುಂಬದವರೆಲ್ಲ ನನ್ನಿಂದ ಏನನ್ನೂ ನಿರೀಕ್ಷಿಸುವುದಿಲ್ಲ. ಆದರೂ ನನ್ನ ಕೈಲಾದಷ್ಟು ಮಾಡುವೆ.

 ಶೈಕ್ಷಣಿಕ ವಿಷಯದಲ್ಲಿ ನಾನು ಯಾವಾಗಲೂ ಮುಂದೆ. ಆದರೆ ಕುಟುಂಬದ ಸಮಾರಂಭಗಳಿಗೆ ಹಾಜರಾಗುವ ವಿಚಾರಗಳಲ್ಲಿ ಹಾಗೂ ಸಾರ್ವಜನಿಕ ಸಮಾರಂಭಗಳಲ್ಲಿ ನನ್ನದು ಕೊನೆಯ ಬೆಂಚು. ಈ ರೀತಿ ಕೊನೆಯ ಬೆಂಚಲ್ಲಿ ಕುಳಿತವಳು `ಕಿಮ್ಸ~ ನಿರ್ದೇಶಕಿಯಾದ ಮೇಲೆ ಡ್ರೈವಿಂಗ್ ಸೀಟಲ್ಲಿ ಕೂತಿರುವೆ.
 
ನನ್ನದೇ ಶೈಲಿಯಲ್ಲಿ ಸಮರ್ಥವಾಗಿ ಮುನ್ನಡೆಸಿಕೊಂಡು ಹೊರಟಿರುವೆ. ಅದರಲ್ಲೂ ನನ್ನತನವನ್ನು ಉಳಿಸಿಕೊಂಡು ಮುನ್ನಡೆದಿರುವೆ. ಮುಖ್ಯವಾಗಿ ಕಾಯಕವೇ ಕೈಲಾಸವೆಂದು ನಂಬಿರುವೆ. ಆದರೆ ಸಮಯ ಸಿಕ್ಕಾಗ, ಊರಲ್ಲಿದ್ದರೆ ಕುಟುಂಬದ ಕಾರ್ಯಕ್ರಮಗಳಲ್ಲಿ ಭಾಗವಹಿಸುವೆ.

ಓದುವ ಹವ್ಯಾಸವೇ ನನಗೆ ಮನರಂಜನೆ. ಸ್ವಲ್ಪ ಸಮಯ ಟಿವಿಗಾಗಿ ಮೀಸಲಿಡುವೆ. ನಿತ್ಯ ವಾಕ್ ಮಾಡುವೆ. ಕೆಲ ವರ್ಷಗಳ ಹಿಂದೆ ವಿಶ್ವ ಆರೋಗ್ಯ ಸಂಸ್ಥೆಯ ವತಿಯಿಂದ ಅಮೆರಿಕದಲ್ಲಿ ಫೆಲೋಶಿಪ್ ಸಿಕ್ಕಿತ್ತು. ಅಲ್ಲಿ ನಿತ್ಯ ಭಗವದ್ಗೀತೆಯ ಒಂದೊಂದು ಅಧ್ಯಾಯ ಓದಿದೆ. 18 ಅಧ್ಯಾಯಗಳಾದ ಮೇಲೆ ಮತ್ತೆ ಮೊದಲಿನ ಅಧ್ಯಾಯದಿಂದ ಓದುತ್ತಿದ್ದೆ.

ಹೀಗಾಗಿ ಸುಮಾರು ಶ್ಲೋಕಗಳು ಕಂಠಪಾಠ ಆಗಿವೆ. ಈಗಲೂ ಭಗವದ್ಗೀತೆ ಓದುತ್ತಿರುವೆ. ಇದರಿಂದ ಮನಶಾಂತಿ ಸಿಗುತ್ತದೆ. ತಾಳ್ಮೆ, ಸಹನಶೀಲತೆ ಬಂದಿದೆ. ಪ್ರೌಢತೆ ಹೆಚ್ಚಿದೆ.
 ಕಥೆ, ಪ್ರವಾಸ ಕಥನ, ಜೀವನ ಚರಿತ್ರೆ - ಹೀಗೆ ಯಾವ ಪುಸ್ತಕವಾದರೂ ಓದುವೆ.
 
ಈಚೆಗೆ ರ‌್ಯಾಂಡಿ ಪಾಷ್ ಬರೆದ `ದಿ ಲಾಸ್ಟ್ ಲೆಕ್ಚರ್~ ಪುಸ್ತಕ ಓದಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿದ್ದ ರ‌್ಯಾಂಡಿ ಪಾಷ್, ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಕುರಿತು ಉಪನ್ಯಾಸ ನೀಡಿದ ಅದ್ಭುತ ಪುಸ್ತಕವದು. ಇದರೊಂದಿಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕೇಳುವೆ.

ಡಾ. ಗಂಗೂಬಾಯಿ ಹಾನಗಲ್ಲ, ಪಂ. ಭೀಮಸೇನ ಜೋಶಿ, ಮಲ್ಲಿಕಾರ್ಜುನ ಮನ್ಸೂರ, ಬಸವರಾಜ ರಾಜಗುರು, ಕಿಶೋರಿ ಅಮೋಣಕರ, ಪಂ. ಜಸ್‌ರಾಜ್ ಗಾಯನ ಕೇಳುವೆ. ಎಷ್ಟೇ ಬ್ಯುಸಿ ಇದ್ದರೂ ಓದಲು, ಸಂಗೀತ ಕೇಳಲು ಬಿಡುವು ಮಾಡಿಕೊಳ್ಳುವೆ. 

 ನನ್ನ ಯಶಸ್ಸಿನ ಮಂತ್ರ ಎಂದರೆ, ಯಶಸ್ಸು ಸಂತಸದ ಕೀಲಿ ಕೈ ಅಲ್ಲ. ಸಂತಸವೇ ಯಶಸ್ಸಿನ ಕೀಲಿ ಕೈ. ನೀವು ಮಾಡುವ ಕೆಲಸವನ್ನು ಪ್ರೀತಿಸುತ್ತಿದ್ದರೆ ನೀವು ಯಶಸ್ಸು ಗಳಿಸಿದಂತೆಯೇ. ಜೊತೆಗೆ ನಾನು ಯಾವಾಗಲೂ ನಂಬುವುದು
ಭವಿಷ್ಯವನ್ನು ನಂಬಬೇಡ ಆದರೆ ಖುಷಿಯಿಂದಿರು
ಕಳೆದು ಹೋದದ್ದನ್ನು ಮುಗಿದ ವಿಚಾರ ಎಂದು ತಿಳಿ
ಪ್ರಸ್ತುತ ಸಮಾಜದೊಂದಿಗೇ ಬದುಕು
ದೇವರು ನಿನ್ನ ತಲೆಯ ಮೇಲಿದ್ದಾನೆ

(ಎಚ್.ಡಬ್ಲ್ಯು .ಲಾಂಗ್‌ಫೆಲೋರನ `ಸಾಮ್ ಆಫ್ ಲೈಫ್~) ಕವಿತೆಯ ಸಾಲುಗಳು ಸದಾ ಕಾಡುತ್ತವೆ.

(ಆಡಳಿತ ಸೂತ್ರ ಹಿಡಿದ ಯಶಸ್ವಿ ಮಹಿಳೆಯರ ಮನದಾಳದ ಮಾತುಗಳಿಗೆ ಭೂಮಿಕೆಯಾಗಿರುವ ಈ ಅಂಕಣ ಪ್ರತಿ ಹದಿನೈದು ದಿನಗಳಿಗೊಮ್ಮೆ ಪ್ರಕಟವಾಗುತ್ತದೆ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT