ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ನಿರ್ಮಾಣ ವಿಳಂಬ:ಅಲೆಮಾರಿಗಳ ಅಳಲು

Last Updated 5 ಡಿಸೆಂಬರ್ 2012, 6:40 IST
ಅಕ್ಷರ ಗಾತ್ರ

ಕುಷ್ಟಗಿ:  ಸ್ವಂತ ಸೂರಿನ ಕನಸಿನಲ್ಲಿಯೇ ಕಳೆದ ಎರಡು ವರ್ಷಗಳಿಂದಲೂ ಕಾದು ಕಾದು ಸುಸ್ತಾಗಿರುವ ಪಟ್ಟಣದ ಸಂತ ಶಿಶುನಾಳ ಷರೀಫ ನಗರದ ನೂರಕ್ಕೂ ಅಧಿಕ ಅಲೆಮಾರಿ ಜನಾಂಗಕ್ಕೆ ಸೇರಿದ ಬಡ ಕುಟುಂಬಗಳು ಹರುಕು ಮುರುಕು ಗುಡಿಸಲುಗಳಲ್ಲೇ ಬದುಕು ಸವೆಸುತ್ತ ಮಳೆಗಾಳಿಗೆ ಮೈಯೊಡ್ಡಿರುವುದು ಕಂಡುಬಂದಿದೆ.

ಹಾವಾಡಿಗರು, ಸುಡಗಾಡು ಸಿದ್ಧರು, ದಾಸರು, ಬಡುಬುಡಿಕೆ, ಬುಡಗಜಂಗಮ ಹೀಗೆ ಸುಮಾರು 109 ಕುಟುಂಬಗಳು ವಾಸವಾಗಿದ್ದು ಹಳೆಯ ಹರಿದ ಸೀರೆ, ಧೋತರದ ಬಟ್ಟೆಗಳ ಛಾವಣಿ ಗುಡಿಸಲುಗಳೇ ಇವರಿಗೆ ಸೂರು. ಮಳೆಗಾಳಿ ಬೀಸಿದರೆ ಗೋಳು ಹೇಳತೀರದು, ಎಳೆಯ ಕಂದಮ್ಮಗಳು, ವೃದ್ಧರು, ಗರ್ಭಿಣಿ, ಬಾಣಂತಿಯರನ್ನು ದೇವರೇ ಕಾಪಾಡಬೇಕು.

ಓಡಿ ಹೋಗಿ ರಕ್ಷಣೆ ಪಡೆಯಲು ಇಲ್ಲಿ ಯಾವುದೇ ಸರ್ಕಾರಿ ಕಟ್ಟಡಗಳಿಲ್ಲ, ಶಾಲೆ, ಅಂಗನವಾಡಿ ಕೇಂದ್ರಗಳಿದ್ದರೂ ವರ್ಷದಿಂದ ಅರ್ಧಕ್ಕೆ ನಿಂತಿವೆ. ಪರ್ಯಾಯ ಉದ್ಯೋಗವಿಲ್ಲದೇ ಹೊಟ್ಟೆ ಹೊರೆಯುವುದೇ ಕಷ್ಟವಾಗಿರುವ ಈ ಕುಟುಂಬಗಳಿಗೆ ಸ್ವಂತ ಮನೆ ಕಟ್ಟಿಕೊಳ್ಳುವ ಆರ್ಥಿಕ ಶಕ್ತಿ ಇಲ್ಲ ಎಂಬ ಅಳಲು ಅಲೆಮಾರಿಗಳದು.

ಷರೀಫ ನಗರದ 91 ಕುಟುಂಬಗಳಿಗೆ ಮನೆ ಕಟ್ಟಿಸಿಕೊಳ್ಳುವುದಕ್ಕಾಗಿ ಪುರಸಭೆ 2010-11ರ ವಾಜಪೇಯಿ ನಗರ ವಸತಿ ಯೋಜನೆಯಲ್ಲಿ ಫಲಾನುಭವಿಗಳ ಆಯ್ಕೆ ಮಾಡಿದೆ.

ಒಟ್ಟು ರೂ 1.30 ಲಕ್ಷ ವೆಚ್ಚದ ಈ ಮನೆಗಳ ನಿರ್ಮಾಣಕ್ಕೆ ತಲಾ ರೂ 50 ಸಾವಿರ ಬ್ಯಾಂಕ್ ಸಾಲ ಮತ್ತು ರಾಜೀವಗಾಂಧಿ ವಸತಿ ನಿಗಮ ಅಷ್ಟೇ ಮೊತ್ತದ ಸಹಾಯಧನ ನೀಡುತ್ತದೆ. ರೂ 30 ಸಾವಿರ ಹಣವನ್ನು ಸರ್ಕಾರಕ್ಕೆ ಫಲಾನುಭವಿ ವಂತಿಗೆ ರೂಪದಲ್ಲಿ ಜಮೆ ಮಾಡಬೇಕು ಅಥವಾ ತಾವೇ ಬೇಸ್‌ಮೆಂಟ್‌ವರೆಗೆ ನಿರ್ಮಿಸಿಕೊಳ್ಳಬೇಕು.

ಹಾಗಾಗಿ ಫಲಾನುಭಗಳು ಕಳೆದ ಎರಡು ವರ್ಷದ ಹಿಂದೆಯೇ ಸಾಲ ಮಾಡಿ ಅಡಿಪಾಯ ಹಾಕಿಕೊಂಡಿದ್ದಾರೆ, ಆದರೆ ಕೇವಲ 34 ಜನರಿಗೆ ಮಾತ್ರ ಸಾಲ ವಿತರಣೆಯಾಗಿದ್ದು ಉಳಿದವರಿಗೆ ಯಾವುದೇ ಸಹಾಯ ದೊರಕದೇ ಅತಂತ್ರ ಸ್ಥಿತಿಯಲ್ಲಿದ್ದಾರೆ. ಕಾರಣವೆಂದರೆ ಸಾಲ ನೀಡುವ ಬ್ಯಾಂಕ್‌ಗಳು ಮತ್ತು ಪುರಸಭೆ ನಡುವಿನ ಸಮಯನ್ವಯಕೊರತೆ ಹಾಗೂ ಕೆಲಫಲಾನುಭವಿಗಳು ಸಕಾಲದಲ್ಲಿ ದಾಖಲೆ ನೀಡದಿರುವ ಕಾರಣಕ್ಕೆ ಸಾಲ ಮತ್ತು ಸಹಾಯಧನ ಖಾತೆಗೆ ಜಮೆಯಾಗಿಲ್ಲ.

ಯೋಜನೆ ಅನುಷ್ಟಾನಗೊಳ್ಳದ ಕಾರಣ ರಾಜೀವಗಾಂಧಿ ವಸತಿ ನಿಗಮ ಸದರಿ ಫಲಾನುಭಿಗಳ ಆಯ್ಕೆಯನ್ನು ರದ್ದುಪಡಿಸಿದ್ದು ಸಮಸ್ಯೆಯಾಗಿ ಪರಿಣಮಿಸಿದೆ. ಈ ನಿವಾಸಿಗಳು ಹತ್ತಾರು ಬಾರಿ ಪುರಸಭೆ, ಬ್ಯಾಂಕ್‌ಗಳಿಗೆ ಅಲೆದಾಡಿದರೆ ಯಾರೂ ಸ್ಪಂದಿಸಿಲ್ಲ ಎಂಬುದು ಅಲೆಮಾರಿಗಳ ಸಂಘದ ಅಧ್ಯಕ್ಷ ಮೆಹಬೂಬಸಾಬ್ ಹಾವಾಡಿಗ ಹೇಳಿದರು.

ಡಿ.ಸಿ ಭರವಸೆ:ಡಿ.4ರಂದು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದ ಅಲೆಮಾರಿ ಕುಟುಂಬಗಳು ಸಮಸ್ಯೆ ವಿವರಿಸಿದ್ದು, ಶುಕ್ರವಾರದೊಳಗೆ ಸಹಾಯಧನ ಮತ್ತು ಸಾಲ ದೊರಕಿಸಿಕೊಡುವಲ್ಲಿ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಮೆಹಬೂಬಸಾಬ್ ಹೇಳಿದರು.  ನಿವೇಶನ, ಹಕ್ಕುಪತ್ರ, ರಸ್ತೆ, ನೀರು, ವಿದ್ಯುತ್, ಶಾಲೆ ಹೀಗೆ ಪ್ರತಿಯೊಂದು ಮೂಲಸೌಕರ್ಯ ಪಡೆಯುವುದಕ್ಕೆ ಒಂದು ದಶಕದಿಂದಲೂ ಇವರು ಹೋರಾಟ ನಡೆಸುತ್ತ ಬಂದರೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT