ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಮನಗಳಲ್ಲಿ ಕವಿ ಕಾವ್ಯ ಶ್ರಾವಣ

Last Updated 1 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ನಮ್ಮ ಸಂಸ್ಕೃತಿಯಲ್ಲಿ ಶ್ರಾವಣ ಮಾಸಕ್ಕೆ ವಿಶೇಷ ಮಹತ್ವ.  ಶ್ರಾವಣವೆಂದರೆ `ಶ್ರವಣ~; ಅಂದರೆ ಕೇಳುವ ಮಾಸ ಎಂದರ್ಥ.

ಮೊದಲಿನಿಂದಲೂ ಶ್ರಾವಣ ಮಾಸದಲ್ಲಿ ಶ್ರವಣ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿಯ ಅಂಗವಾಗಿ ನಡೆಯುತ್ತ ಬಂದಿವೆ. ಕಾವ್ಯ ಓದುವ, ಸಂಗೀತ ಕೇಳುವ ಕಾರ್ಯಕ್ರಮ ಎಲ್ಲಾ ಕಡೆ ಜರುಗುತ್ತಿದ್ದವು. 

ಜನ ಕಾವ್ಯ - ಪುಣ್ಯ ಕಥೆಗಳನ್ನು ಕೇಳುವ ಮೂಲಕ ತಮ್ಮ ಮನಸ್ಸನ್ನು  ಸಂಸ್ಕೃತಿಯೆಡೆಗೆ  ತೊಡಗಿಸಿಕೊಳ್ಳುತ್ತಿದ್ದರು. ಊರಿನ ದೇವಸ್ಥಾನಗಳಲ್ಲಿ ವಿಶೇಷವಾದ ಪೂಜಾ ಕೈಂಕರ್ಯಗಳು ನೆರವೇರುತ್ತಿದ್ದವು. 

ಶ್ರಾವಣ ಶನಿವಾರ ಹಾಗೂ ಶ್ರಾವಣ ಸೋಮವಾರವಂತೂ ಪವಿತ್ರ ಎಂದೇ ಭಾವನೆ. ಅನೇಕರು ಶ್ರಾವಣ ಮಾಸದಲ್ಲಿ ಮಿತಾಹಾರಿಗಳಾಗಿ, ಸಸ್ಯಹಾರಿಗಳಾಗಿ ಸಾತ್ವಿಕ ಜೀವನ ನಡೆಸುತ್ತಾರೆ.

ಆಧುನಿಕ ಕಾಲಘಟ್ಟದಲ್ಲಿ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾದ ಸಾಹಿತ್ಯ ಶ್ರವಣಗಳು ಕಡಿಮೆಯಾಗುತ್ತಾ  ಬಂದು  ಜನ ಮಾನಸಿಕವಾದ ಕ್ಷೋಭೆ, ಒತ್ತಡಕ್ಕೆ ಒಳಗಾಗಿರುವುದನ್ನು, ಯಾಂತ್ರಿಕವಾಗಿ ಬದುಕುತ್ತಿರುವುದನ್ನು ಗಮನಿಸಬಹುದು. 

ಬೆಂಗಳೂರು ಮಹಾನಗರದಲ್ಲಂತೂ ನಾನಾ ಕಾರಣದಿಂದ  ಪರಸ್ಪರ ಪ್ರೀತಿ, ವಿಶ್ವಾಸ, ಸಂಬಂಧಗಳು ಕಡಿಮೆಯಾಗುತ್ತಿರುವುದನ್ನು  ಕಾಣಬಹುದು.

ಇಂತಹ ಸಂದರ್ಭದಲ್ಲಿ ವಚನಜ್ಯೋತಿ ಬಳಗವು ಆಗಸ್ಟ್ 28ರವರೆಗೆ ಶ್ರಾವಣ ಮಾಸದುದ್ದಕ್ಕೂ  ನಗರದ ವಿವಿಧ ಬಡಾವಣೆಗಳ ಸಾಹಿತ್ಯಾಸಕ್ತರ ಮನೆಗಳಲ್ಲಿ ಒಂದು ತಿಂಗಳು  `ಕವಿ ಕಾವ್ಯ ಶ್ರಾವಣ~ ಹಮ್ಮಿಕೊಂಡಿದೆ. ಮಹಾಕವಿ ಪಂಪನಿಂದ ರಾಷ್ಟ್ರಕವಿ ಕುವೆಂಪು ವರೆಗೆ ಪ್ರಮುಖ 29 ಕವಿಗಳನ್ನು ಪರಿಚಯಿಸುವ ಪ್ರಯತ್ನ ಇದು.

ಸಂಬಂಧಗಳು ಸಡಿಲಗೊಳ್ಳುತ್ತಿರುವ ನಗರದ ಬದುಕಿನಲ್ಲಿ ಮನೆ ಮಂದಿಯೆಲ್ಲ ಒಂದೆಡೆ ಸೇರುವುದೇ ಅಪರೂಪವಾಗುತ್ತಿದೆ. ನೆರೆಹೊರೆಯವರೊಂದಿಗೆ ಬೆರೆಯುವುದು ಇನ್ನೂ ಕಡಿಮೆಯಾಗುತ್ತಿದೆ. 

ಕನಿಷ್ಠ ಇಂತಹ ಕಾರ್ಯಕ್ರಮದಲ್ಲಾದರೂ ಮನೆ ಮಂದಿ ಹಾಗೂ ನೆರೆಹೊರೆಯವರು ಪಾಲ್ಗೊಳ್ಳುವ ಅವಕಾಶ ಕಲ್ಪಿಸಿ ಸಾಮಾಜಿಕ ಬಾಂಧವ್ಯ ಬಲಗೊಳಿಸುವುದು, ಸಾಂಸ್ಕೃತಿಕ ವಾತಾವರಣ ನಿರ್ಮಾಣ ಮಾಡುವುದು  ಕವಿ ಕಾವ್ಯ ಶ್ರಾವಣವನ್ನು ಮನೆ ಮನೆಗಳಲ್ಲಿಯೇ ನಡೆಸಲು ಮುಖ್ಯ ಕಾರಣ.

ಅಲ್ಲದೆ ಹಿರಿಯರಿಗೆ ಕನ್ನಡ ಕವಿ ಪರಂಪರೆ ಗೊತ್ತಿರಬಹುದು. ಆದರೆ ಎಳೆಯ ಮನಸ್ಸುಗಳಲ್ಲಿ, ಯುವ ಪೀಳಿಗೆಯಲ್ಲಿ ಕನ್ನಡದ ಸಂಸ್ಕೃತಿಯ ಕಂಪನ್ನು ಬಿತ್ತುವ ಆಶಯವೂ ಇಲ್ಲಿದೆ.

 ಹೆಸರಾಂತ ಗಾಯಕರುಗಳಾದ ದೇವೇಂದ್ರಕುಮಾರ ಮುಧೋಳ, ನಾಗಲಿಂಗಯ್ಯ ವಸ್ತ್ರದಮಠ, ರವೀಂದ್ರ ಸೊರಗಾವಿ, ಅಪ್ಪಗೆರೆ ತಿಮ್ಮರಾಜು, ಆನಂದ ಮಾದಲಗೆರೆ, ಅರಬಗಟ್ಟ ಬಸವರಾಜು, ಮೃತ್ಯುಂಜಯ ದೊಡ್ಡವಾಡ,  ಟಿ. ತಿಮ್ಮೇಶ್, ಆಂಜನೇಯ ಗದ್ದಿ, ಸುನೀತ, ಸರಸ್ವತಿ ಹೆಗಡೆ, ವೀಣಾಮೂರ್ತಿ, ಚೇತನಾ ಮುಧೋಳ, ಈರಯ್ಯ ಚಿಕ್ಕಮಠ ಮೊದಲಾದವರು  ಆಯಾ ದಿನದ ಕವಿಯ ಕಾವ್ಯ ಗಾಯನ ಮಾಡುವರು. ನಂತರದಲ್ಲಿ ವಿದ್ವಾಂಸರು ಒಬ್ಬ ಕವಿಯನ್ನು ಕುರಿತು ಮಾತನಾಡುವರು. ಸಭಿಕರು ಕೂಡ ಸಂವಾದದಲ್ಲಿ ಪಾಲ್ಗೊಳಬಹುದು.

ಶ್ರಿವಿಜಯ, ಪಂಪ, ರನ್ನ, ಬಸವಣ್ಣ, ಅಲ್ಲಮಪ್ರಭು, ಸಿದ್ಧರಾಮ, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಹಡಪದ ಅಪ್ಪಣ್ಣ, ಹರಿಹರ, ರಾಘವಾಂಕ, ಕುಮಾರವ್ಯಾಸ, ಚಾಮರಸ, ಲಕ್ಷ್ಮೀಶ, ಪುರಂದರದಾಸ, ಕನಕದಾಸ, ನಿಜಗುಣ ಶಿವಯೋಗಿ,  ಶಿಶುನಾಳ ಷರೀಫ, ಮುದ್ದಣ್ಣ, ಬಿಎಂಶ್ರಿ, ಗೋವಿಂದ ಪೈ, ರಾಜರತ್ನಂ, ಡಿವಿಜಿ, ಬೇಂದ್ರೆ, ಕುವೆಂಪು ಮೊದಲಾದ ಕವಿಗಳನ್ನು  ಕವಿ ಕಾವ್ಯ ಶ್ರಾವಣದಲ್ಲಿ ಪರಿಚಯಿಸಲಾಗುವುದು.

ವಚನಜ್ಯೋತಿ ಬಳಗ ಹದಿನೈದು ವರ್ಷಗಳಿಂದ ಕನ್ನಡ ಸಾಹಿತ್ಯ- ಸಂಸ್ಕೃತಿ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ. ಈ ನಿಟ್ಟಿನಲ್ಲಿ `ಶಾಲೆಯಿಂದ ಶಾಲೆಗೆ ವಚನಜ್ಯೋತಿ, ಕನ್ನಡ ಸಂಸ್ಕೃತಿ ಸಂಚಾರ, ವಚನ ಸಂಜೆ , ವಚನಾಮೃತವರ್ಷಿಣಿ ಮಹೋತ್ಸವ, ಸಂಗೀತ ಯುಗಾದಿ, ಬಸವ ಉತ್ಸವ, ವಚನ ಸಂಭ್ರಮ~ ಮೊದಲಾದ ಕಾರ‌್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ ಎನ್ನುತ್ತಾರೆ ಬಳಗದ ಅಧ್ಯಕ್ಷ ಎಸ್. ಪಿನಾಕಪಾಣಿ. ಮಾಹಿತಿಗೆ: 98451 84267.                                               
                                                      ಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT