ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಮನೆ ದಸರಾಕ್ಕೆ ಸಂಭ್ರಮದ ಚಾಲನೆ

Last Updated 20 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮೈಸೂರು: ವಿಶ್ವೇಶ್ವರನಗರ 2ನೇ ಹಂತದ ದೇವರಾಜ ಅರಸು ಕಾಲೋನಿಯಲ್ಲಿ ಮಂಗಳವಾರ ಅಕ್ಷರಶಃ ಹಬ್ಬದ ವಾತಾವರಣ. ಕಾಲೋನಿಯ ಎಲ್ಲ ಬೀದಿಗಳಲ್ಲಿ ಬಣ್ಣ ಬಣ್ಣದ ರಂಗೋಲಿ. ಹಸಿರು ತೋರಣಗಳು ಕಂಗೊಳಿಸಿದವು. ಗುಡಿಸಲು ಮನೆಯೊಂದರಲ್ಲಿ ದಸರಾ ಬೊಂಬೆಗಳ ಸಂಭ್ರಮ.

ನಾಡಹಬ್ಬ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ `ಮನೆ ಮನೆ ದಸರಾ~ದ ನೋಟವಿದು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್  ಅವರು ಪಟ್ಟಾಲದಮ್ಮ ದೇವಸ್ಥಾನದಲ್ಲಿ ಬೊಂಬೆಗಳಿಗೆ ಪೂಜೆ ಸಲ್ಲಿಸಿದರು.

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಆಳೆತ್ತರದಲ್ಲಿ ನೇತಾಡುತ್ತಿದ್ದ ಮಡಿಕೆಯನ್ನು ದೊಣ್ಣೆಯಿಂದ ಒಡೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾಲೋನಿಯ ಬೀದಿಗಳಲ್ಲಿ ಹಾಕಲಾಗಿದ್ದ ಬಣ್ಣದ ರಂಗೋಲಿಗಳನ್ನು ರಾಮದಾಸ್ ಮತ್ತು ಅಧಿಕಾರಿಗಳು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಬಿಜೆಪಿ ಚಿಹ್ನೆ ಕಮಲದ ರಂಗೋಲಿಯನ್ನು ಅಚ್ಚುಕಟ್ಟಾಗಿ ಬಿಡಿಸಿದ್ದನ್ನು ಕಂಡ ಸಚಿವರ ಹರ್ಷ ಇಮ್ಮಡಿಯಾಯಿತು.

ಕಾಲೋನಿಯಲ್ಲಿ ಕೂರಿಸಲಾಗಿದ್ದ ಬೊಂಬೆಗಳು ನೋಡುಗರ ಮನಸೂರೆಗೊಂಡವು. ಅಲ್ಲದೆ ಕಾಲೋನಿಯ ಪುಟ್ಟ ಮಕ್ಕಳು ವಿವಿಧ ವೇಷಭೂಷಣಗಳನ್ನು ತೊಟ್ಟು ಎಲ್ಲರ ಗಮನ ಸೆಳೆದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಮದಾಸ್ ಅವರು `ಕಳೆದ ವರ್ಷದಂತೆ ಈ ಬಾರಿಯೂ ಮನೆ ಮನೆ ದಸರಾ ಆಚರಿಸಲಾಗುತ್ತಿದೆ. ನಾಡಹಬ್ಬ ದಸರಾ ಸರ್ಕಾರಿ ಕಾರ್ಯಕ್ರಮ ಆಗಬಾರದು. ಪ್ರತಿ ಮನೆ-ಮನಗಳಲ್ಲೂ ಹಬ್ಬ ಆಚರಿಸುವಂತಾಗಬೇಕು. ನಿತ್ಯ ಜೀವನದಲ್ಲಿ ಮಕ್ಕಳು ಆಟವಾಡುವ ಪಗಡೆ, ಲಗೋರಿ, ಕುಂಟಬಿಲ್ಲೆಗಳಿಗೂ ಅವಕಾಶ ಇರಬೇಕು. ಮಹಿಳೆ ಮತ್ತು ಪುರುಷರಿಗೆ ಓಟದ ಸ್ಪರ್ಧೆ, ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆ ನಡೆಸಲಾಗುತ್ತದೆ~ ಎಂದು ತಿಳಿಸಿದರು.

`ಮಹಾನಗರಪಾಲಿಕೆ ವ್ಯಾಪ್ತಿಯ 65 ವಾರ್ಡ್‌ಗಳಲ್ಲಿ ಸೆ.27 ರವರೆಗೆ ಮನೆ ಮನೆ ದಸರಾ ಕಾರ್ಯಕ್ರಮ ನಡೆಸಲಾಗುವುದು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಗುವುದು. ಪ್ರತಿಯೊಬ್ಬರ ಮನೆಗಳಲ್ಲಿ ಬೊಂಬೆಗಳನ್ನು ಕೂರಿಸಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಬೇಕು~ ಎಂದು ಕರೆ ನೀಡಿದರು.

ಮೇಯರ್ ಪುಷ್ಪಲತಾ ಟಿ.ಬಿ.ಚಿಕ್ಕಣ್ಣ, ಉಪ ಮೇಯರ್ ಎಂ.ಜೆ.ರವಿಕುಮಾರ್, ಪಾಲಿಕೆ ಆಯುಕ್ತ ಕೆ.ಎಸ್.ರಾಯ್ಕರ್, ಪಾಲಿಕೆ ಸದಸ್ಯೆ ಆಶಾ ಲಕ್ಷ್ಮಿನಾರಾಯಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT