ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಮನೆಗೂ ಮತ ಜಾಗೃತಿ

ಸಮಸ್ಯೆ ತೋಡಿಕೊಂಡ ಹೆಂಚಿನ ಕಾರ್ಖಾನೆ ನಿವಾಸಿಗಳು
Last Updated 11 ಏಪ್ರಿಲ್ 2014, 6:04 IST
ಅಕ್ಷರ ಗಾತ್ರ

ಕೋಲಾರ: ನಗರದ ಗೌರಿಪೇಟೆ, ಅಂಬೇಡ್ಕರ್‌ ನಗರ, ಹೆಂಚಿನ ಕಾರ್ಖಾನೆ ಬಡಾವಣೆ ಸೇರಿದಂತೆ ಹಲವು ವಾರ್ಡ್‌ ಜನರಿಗೆ ಗುರುವಾರ ಎಂದಿಗಿಂತಲೂ ವಿಶೇಷವಾಗಿತ್ತು.

ಪ್ರತಿ ಮನೆಗೆ ಬಾಗಿಲಿಗೂ ಜಿಲ್ಲಾ ಚುನಾವಣಾಧಿಕಾರಿ ಡಿ.ಕೆ.ರವಿ ಭೇಟಿ ನೀಡಿ ‘ತಪ್ಪದೇ ಮತದಾನ ಮಾಡಿ’ ನೆನಪಿರಲಿ ದೇಶದ ಭವಿಷ್ಯ ರೂಪಿಸುವವರು ನೀವೇ...ನೀವೂ ಮತದಾನ ಮಾಡಿ ನಿಮ್ಮವರನ್ನೂ ಕರೆ ತನ್ನಿ...ನಾಡನ್ನು ಕಟ್ಟುವ ನಾಯಕರಿಗೆ ನಿಮ್ಮ ಮತವಿರಲಿ..’ ಎಂಬ ಸಂದೇಶ ಸಾರಿದರು. ಮತದಾನ ಮಾಡಬೇಕೋ ಬೇಡವೋ ಎಂಬ ಎರಡು ಆಲೋಚನೆಗಳಿಗೆ ಅವಕಾಶವೇ ಇಲ್ಲದ ರೀತಿಯಲ್ಲಿ ದಿಢೀರನೇ ಎದುರಾದ ಚುನಾವಣಾಧಿಕಾರಿ ಮಾತಿಗೆ ಯಾರೊಬ್ಬರೂ ಎದುರಾಡಲಿಲ್ಲ. ಹೀಗಾಗಿಯೆ ‘ನಾವು ಖಂಡಿತ  ಮತದಾನ ಮಾಡುತ್ತೇವೆ‘ ಎಂಬ ವಾಗ್ದಾನವನ್ನೂ ಮಾಡಿದರು.

ಚುನಾವಣಾಧಿಕಾರಿಗಳ ತಂಡದ ಜೊತೆಗೆ ಸುಮಾರು 6 ತಂಡಗಳಲ್ಲಿ ಅಧಿಕಾರಿಗಳು ಮತ್ತು ನೂರಾರು ವಿದ್ಯಾರ್ಥಿ­ಗಳು ನಗರದ ವಿವಿಧ ಬಡಾವಣೆಗಳಿಗೆ ತೆರಳಿ ಮತ ಚಲಾವಣೆ ಕುರಿತು ಕರಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸಿದರು. ಸ್ವೀಪ್‌ ಸಮಿತಿ ಅಧ್ಯಕ್ಷೆಯಾಗಿರುವ ಜಿ.ಪಂ. ಸಿಇಒ ಆರ್‌.ವಿನೋತ್‌ ಪ್ರಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ನವೀನ್‌ಕುಮಾರ್‌ ರಾಜು ಅವರು ಪ್ರತ್ಯೇಕ ತಂಡ­ಗಳಲ್ಲಿ ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿದರು.

ಮನೆ ಮನೆಗೆ: ಜಿಲ್ಲಾ ಚುನಾವಣಾಧಿಕಾರಿ ಜತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ­ನಿರ್ದೇಶಕ ಎಸ್‌.ವಿ.­ಪದ್ಮನಾಭ, ನಗರಸಭೆ ಪೌರಾಯುಕ್ತ ಕೆ.ಎನ್.ಜಗದೀಶ್‌, ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ಇ.ನಾರಾಯಣಗೌಡ ಸೇರಿದಂತೆ ಹಲವು ಅಧಿಕಾರಿಗಳೂ ಜೊತೆಗೂಡಿದ್ದರು.

ಉದ್ಯಾನದಿಂದ ಬಂಗಾರಪೇಟೆ ವೃತ್ತದ ಕಡೆಗೆ ನಡೆದ ಚುನಾವಣಾಧಿಕಾರಿ ಗೌರಿಪೇಟೆ ಮೊದಲ ಕ್ರಾಸ್‌ನ ರಸ್ತೆಗಳಲ್ಲಿ ಸಂಚರಿಸಿ ಮನೆ ಮನೆಗೆ ತೆರಳಿ ಕರಪತ್ರಗಳನ್ನು ವಿತರಿಸಿದರು. ನಂತರ ಎಂಜಿ.ರಸ್ತೆ, ಅರಳೇಪೇಟೆ, ಹೊಸ ಬಡಾವಣೆ, ಹಳೆ ಹೆಂಚಿನ ಬಡಾವಣೆಗಳಲ್ಲಿ ಅವರು ಸಂಚರಿಸಿದರು.

ಸಮಸ್ಯೆ ಅನಾವರಣ: ಚುನಾವಣಾಧಿಕಾರಿಗಳು ಭೇಟಿ ನೀಡಿದ ಬಹುತೇಕ ಸ್ಥಳಗಳಲ್ಲಿ ಮತದಾರರು ಮತದಾನ ಮಾಡುತ್ತೇವೆ ಎಂದು ಭರವಸೆ ನೀಡಿದರು. ಹಳೇ ಹೆಂಚಿನ ಕಾರ್ಖಾನೆ ಬಡಾವಣೆಯಲ್ಲಿ ಕೆಲವು ಮನೆಗಳ ಮಂದಿ, ರಸ್ತೆ ಮತ್ತು ನೀರಿನ ಸೌಕರ್ಯ ಇಲ್ಲದಿರುವ ಕುರಿತು ಗಮನ ಸೆಳೆದು, ಅಸಮಾಧಾನ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳ ಉತ್ಸಾಹ: ಚುನಾವಣೆ ಸಮಯದಲ್ಲಿ ಮತ­ದಾನ ಮಹತ್ವದ ಕುರಿತು ಜನರಲ್ಲಿ ಅರಿವು ಮೂಡಿಸುವ ಜವಾ­ಬ್ದಾರಿ ಹೊತ್ತು ಪಾಲ್ಗೊಂಡ ವಿದ್ಯಾರ್ಥಿಗಳಲ್ಲಿ ಉತ್ಸಾಹ ಮತ್ತು ಸಂಭ್ರಮ ಏಕಕಾಲಕ್ಕೆ ಕಾಣಿಸಿಕೊಂಡಿತ್ತು. ಸ್ವತಃ ಚುನಾವಣಾಧಿಕಾರಿಗಳೇ ಕಾಲ್ನಡಿಗೆಯಲ್ಲಿ ಮನೆಮನೆಗೆ ತೆರಳಿದ್ದು ಕಂಡು ಉತ್ತೇಜಿತರಾಗಿದ್ದರು.  

ಮಜ್ಜಿಗೆ ವಿತರಣೆ:  ನಡಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ­ವರಿಗೆ ನೀರು ಮತ್ತು ಮಜ್ಜಿಗೆಯನ್ನು ವಿತರಿಸಲಾಗಿತ್ತು. ನಗರದ ಗೌರಿಪೇಟೆ, ಮಿಲ್ಲತ್‌ನಗರ, ವಿನಾಯಕ ನಗರ ನಗರಗಳಲ್ಲಿ ನಡಿಗೆ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT