ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ-ಮನೆಗೆ ತೆರಳಿ ಡೆಂಗೆ ಜಾಗೃತಿ

Last Updated 1 ಜೂನ್ 2013, 7:12 IST
ಅಕ್ಷರ ಗಾತ್ರ

ಶಿವಮೊಗ್ಗ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಡೆಂಗೆ ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗಿವೆ. ಡೆಂಗೆ ಕಾಯಿಲೆ ಹರಡುವ ಈಡಿಸ್ ಸೊಳ್ಳೆ ಮನೆಯಲ್ಲಿರುವ ಶುದ್ಧ ನೀರಿನಲ್ಲೆ ಬೆಳೆಯುತ್ತದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಕಡಿಮೆ ಇದ್ದು, ಜಿಲ್ಲೆಯ ಪ್ರತಿ ಮನೆ ಮನೆಗಳಿಗೆ ತೆರಳಿ ಡೆಂಗೆ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ತಿಳಿಸಿದರು.

ಜಿಲ್ಲೆಯಲ್ಲಿ 2012ರ ಮೇ ತಿಂಗಳವರೆಗೆ 12 ಡೆಂಗೆ ಪ್ರಕರಣಗಳು ಪತ್ತೆಯಾಗಿದ್ದವು. ಆದರೆ, 2013 ಮೇ ತಿಂಗಳ ಅಂತ್ಯಕ್ಕೆ 92 ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಡೆಂಗೆ ಬಗ್ಗೆ ಜಾಗೃತಿ ಮೂಡಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಈಡಿಸ್ ಸೊಳ್ಳೆ ಹಗಲಿನಲ್ಲಿ ಕಚ್ಚುವುದರಿಂದ ಡೆಂಗೆ ಹರಡುತ್ತದೆ. ಡೆಂಗೆ ಒಂದು ವೈರಲ್ ಜ್ವರ. ಇದಕ್ಕೆ ನಿರ್ದಿಷ್ಟ ಔಷಧ ಇಲ್ಲ. ಆದ್ದರಿಂದ, ಇದು ಹರಡದಂತೆ ಮುಂಜಾಗೃತೆ ವಹಿಸುವುದೇ ಉತ್ತಮ ಎಂದರು.

ಸಾರ್ವಜನಿಕರಿಗೆ ಡೆಂಗೆ ಬಗ್ಗೆ ಅರಿವು ಮೂಡಿಸಲು ಗ್ರಾಮೀಣ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರ ಮೂಲಕ ಇನ್ನು 8ದಿನಗಳಲ್ಲಿ ಜಿಲ್ಲೆಯ ಪ್ರತಿ ಮನೆ-ಮನೆಗಳಿಗೆ ತೆರಳಿ ಡೆಂಗೆ ಕಾಯಿಲೆ ಹರಡಬಹುದಾದ ಬಗ್ಗೆ ಹಾಗೂ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು.

ಪ್ಲಾಸ್ಟಿಕ್ ಲೋಟ ಬಳಕೆ ನಿಷೇಧ
ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಮುಂದಿನ 3 ತಿಂಗಳ ಅವಧಿಗೆ ಪ್ಲಾಸ್ಟಿಕ್ ಲೋಟಗಳ ಬಳಕೆ ಹಾಗೂ ಮಾರಾಟವನ್ನು ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ಲೋಟ ತ್ಯಾಜ್ಯವಾದ ನಂತರವೂ ಅದು ಕೊಳೆಯದೇ ನೀರು ನಿಲ್ಲುವುದರಿಂದ ಡೆಂಗೆ ಸೊಳ್ಳೆಗಳು ಉತ್ಪತ್ತಿ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಪ್ಲಾಸ್ಟಿಕ್ ಲೋಟಗಳನ್ನು ನಿಷೇಧಿಸಲಾಗಿದೆ ಎಂದು ವಿಪುಲ್ ಬನ್ಸಲ್ ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ಮಾತನಾಡಿ, ನೀರಿನ ಸಮಸ್ಯೆಯಿಂದ ಗ್ರಾಮಾಂತರ ಭಾಗದಲ್ಲಿ ನೀರು ಸಂಗ್ರಹ ಮಾಡುತ್ತಿರುವುದರಿಂದ ಡೆಂಗೆ ಹರಡಿರುವ ಸಾಧ್ಯತೆ ಇದೆ. ಇದು ಮಕ್ಕಳಿಗೆ ಮಾರಕವಾದ ಕಾಯಿಲೆ. ಡೆಂಗೆ ಪತ್ತೆಯಾದಲ್ಲಿ ಸಾರ್ವಜನಿಕರ ನಿರ್ಲಕ್ಷ್ಯ ಮಾಡದೆ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು.

ಡೆಂಗೆ ಬಗ್ಗೆ ಪ್ರೌಢಶಾಲೆಗಳಲ್ಲಿ ಮಾಹಿತಿ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಿವಣ್ಣ ರೆಡ್ಡಿ ಮಾತನಾಡಿ, ಡೆಂಗೆ ಕಾಯಿಲೆ ಮತ್ತು ಅದರ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲೆಯ ಎಲ್ಲಾ ಪ್ರೌಢ ಶಾಲೆಗಳಲ್ಲಿ ಜೂನ್ 10 ರವರೆಗೆ ಮಕ್ಕಳಿಗೆ ಮಾಹಿತಿ ನೀಡಲಾಗುವುದು. ನಂತರ ಪರೀಕ್ಷೆ ಯನ್ನೂ ನಡೆಸಿ, ಅತಿಹೆಚ್ಚು ಅಂಕಗಳನ್ನು ಪಡೆದ ಮಕ್ಕಳಿಗೆ ನಗದು ಬಹುಮಾನ ನೀಡ ಲಾಗುವುದು ಎಂದು ತಿಳಿಸಿದರು.

ಶೇಕಡ 85ರಷ್ಟು ಈಡಿಸ್ ಸೊಳ್ಳೆಗಳು ಮನೆಯ ಒಳಭಾಗದಲ್ಲಿ ಉತ್ಪತ್ತಿಯಾದರೆ, ಶೇಕಡ 15 ರಷ್ಟು ಮಾತ್ರ ಮನೆ ಹೊರಭಾಗದಲ್ಲಿ ವೃದ್ಧಿ ಆಗುತ್ತವೆ. ಶುದ್ಧವಾದ ನೀರಿನಲ್ಲೆ ಇವು ಸಂತಾನೋತ್ಪತ್ತಿ ಆಗುವುದರಿಂದ ನೀರು ಸಂಗ್ರಾಹಕಗಳಾದ ತೊಟ್ಟಿ, ಡ್ರಮ್ ಹಾಗೂ ಪಾತ್ರೆಗಳನ್ನು ಮುಚ್ಚುವ ಮೂಲಕ ಸೊಳ್ಳೆಗಳು ಹೆಚ್ಚುವುದನ್ನು ನಿಯಂತ್ರಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT