ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗೆ ಕೊಳವೆಯಲ್ಲಿ ಅನಿಲ: ಕನಸು ಶೀಘ್ರವೇ ನನಸು

Last Updated 18 ಫೆಬ್ರುವರಿ 2013, 19:57 IST
ಅಕ್ಷರ ಗಾತ್ರ

ಬೆಂಗಳೂರು: `ದಾಬೋಲ್- ಬೆಂಗಳೂರು ಅನಿಲ ಕೊಳವೆ ಮಾರ್ಗ'ದ ಮೂಲಕ ರಾಜ್ಯಕ್ಕೆ ಅನಿಲ ಸರಬರಾಜು ವ್ಯವಸ್ಥೆ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ರಾಜಧಾನಿಯ ಮನೆ ಮನೆಗೆ ಅನಿಲ ಸಂಪರ್ಕ ದೊರಕುವ ಕನಸು ಶೀಘ್ರದಲ್ಲಿ ನನಸಾಗಲಿದೆ.

ಬೆಂಗಳೂರಿನ ಆಸುಪಾಸಿನ 73 ಕಿ.ಮೀ. ವ್ಯಾಪ್ತಿಯಲ್ಲಿ 18 ಇಂಚು ವ್ಯಾಸದ ಕೊಳವೆ ಮಾರ್ಗವನ್ನು ಅಳವಡಿಸಿರುವ ಕಾರಣದಿಂದ ಈ ಜಾಲ ತ್ವರಿತಗತಿಯಲ್ಲಿ ನಗರದ ಮನೆಗಳಿಗೆ ಅನಿಲ ಪೂರೈಕೆ ಮಾಡಲು ನೆರವಾಗಲಿದೆ.
ಬೆಂಗಳೂರಿನ ಹೊರವರ್ತುಲ ರಸ್ತೆಯ ಭಾಗದಲ್ಲಿ ಕೊಳವೆ ಮಾರ್ಗ ಹಾದು ಹೋಗಿದ್ದು, ಆರಂಭಿಕ ಹಂತದಲ್ಲಿ ರಾಜಧಾನಿಯ ಪ್ರಮುಖ ಕೈಗಾರಿಕೆಗಳಿಗೆ ಅನಿಲ ಪೂರೈಕೆ ಮಾಡಲು ಉದ್ದೇಶಿಸಲಾಗಿದೆ.

`ಮೊದಲ ಹಂತದಲ್ಲಿ ಜಿಂದಾಲ್, ಐಟಿಪಿಎಲ್ ಸೇರಿದಂತೆ ಮೂರು ಕೈಗಾರಿಕೆಗಳು ಜಾಲವನ್ನು ಅಳವಡಿಸಿಕೊಳ್ಳಲು ಆಸಕ್ತಿ ವಹಿಸಿವೆ. ಈ ಕಂಪೆನಿಗಳಿಗೆ ಜುಲೈ ತಿಂಗಳಿನೊಳಗೆ ಅನಿಲ ಸಂಪರ್ಕ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ' ಎಂದು ಭಾರತೀಯ ಅನಿಲ ಪ್ರಾಧಿಕಾರದ (ಗೇಲ್) ವ್ಯವಸ್ಥಾಪಕ (ಕಾರ್ಪೊರೇಟ್ ಕಮ್ಯುನಿಕೇಶನ್) ರೂಪೇಶ್ ಕುಮಾರ್ `ಪ್ರಜಾವಾಣಿ'ಗೆ ಸೋಮವಾರ ತಿಳಿಸಿದರು.

ಮೊದಲನೇ ಹಂತವಾಗಿ ಚಿಕ್ಕಬಳ್ಳಾಪುರ ಅನಿಲ ಸರಬರಾಜು ಯೋಜನೆಗೆ ತುಮಕೂರು ರಸ್ತೆಯ ಜಿಂದಾಲ್ ಅಲ್ಯುಮಿನಿಯಂ ಲಿಮಿಟೆಡ್‌ನಲ್ಲಿ ಸೋಮವಾರ ಶಂಕುಸ್ಥಾಪನೆ ನೆರವೇರಿಸಲಾಯಿತು. ಬೆಂಗಳೂರಿನ ಹೊರವರ್ತುಲ ರಸ್ತೆಯ ಜಾಲದ ಮೂಲಕ ಈ ಘಟಕಕ್ಕೆ ಅನಿಲ ಪೂರೈಕೆ ಮಾಡಲು ಉದ್ದೇಶಿಸಲಾಗಿದೆ. `ಈ ಯೋಜನೆ ನಾಲ್ಕೈದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ' ಎಂದು ಜಿಂದಾಲ್ ಸಂಸ್ಥೆಯ ಉಪಾಧ್ಯಕ್ಷ ಎಲ್.ಆರ್.ರಘುನಾಥ್ ಪ್ರಕಟಿಸಿದರು.

ಬೆಂಗಳೂರು ಹಾಗೂ ಇತರ ನಗರಗಳಿಗೆ ಅನಿಲ ಪೂರೈಸುವ ಸಂಬಂಧ ಎರಡು ವರ್ಷಗಳ ಹಿಂದೆ `ಗೇಲ್' ಹಾಗೂ ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಎಸ್‌ಐಐಡಿಸಿ) ಒಡಂಬಡಿಕೆಗೆ ಸಹಿ ಹಾಕಿದ್ದವು. ಈ ಒಡಂಬಡಿಕೆಯಂತೆ ರಾಜಧಾನಿ ಹಾಗೂ ಇತರ ನಗರಗಳ  ಕೈಗಾರಿಕೆಗಳು ಹಾಗೂ ಮನೆ ಮನೆಗೆ ಅನಿಲ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ. ಪೆಟ್ರೋಲಿಯಂ ಇಲಾಖೆಯ ಒಪ್ಪಿಗೆ ದೊರೆತರೆ ಆರು ತಿಂಗಳಲ್ಲಿ ಮನೆ ಮನೆಗೆ ಅನಿಲ ಸಂಪರ್ಕ ವ್ಯವಸ್ಥೆ ಆರಂಭಗೊಳ್ಳಲಿದೆ ಎಂದು `ಗೇಲ್' ಅಧಿಕಾರಿಗಳು ತಿಳಿಸಿದರು.

ಸಮಾರಂಭದಲ್ಲಿ ಇಂಧನ ಇಲಾಖೆಯ ಕಾರ್ಯದರ್ಶಿ ಕೆ.ಎಸ್.ಪಟ್ನಾಯಕ್, ಮೇಯರ್ ಡಿ.ವೆಂಕಟೇಶಮೂರ್ತಿ ಮತ್ತಿತರರು ಹಾಜರಿದ್ದರು.

`ಗೇಲ್ ಹನುಮನಿದ್ದಂತೆ'
`ದಾಬೋಲ್-ಬೆಂಗಳೂರು ನಡುವೆ ಅನಿಲ ಕೊಳವೆ ಮಾರ್ಗ ನಿರ್ಮಿಸಿರುವ ಭಾರತೀಯ ಅನಿಲ ಪ್ರಾಧಿಕಾರವು (ಗೇಲ್) ಹನುಮನಿದ್ದಂತೆ' ಸಚಿವ ವೀರಪ್ಪ ಮೊಯಿಲಿ ಬಣ್ಣಿಸಿದರು.

ಸಮಾರಂಭದಲ್ಲಿ ಮಾತನಾಡಿದ ಅವರು, `ಈ ಕೊಳವೆ ಮಾರ್ಗವು ನದಿಗಳನ್ನು ಜಿಗಿದು ಅರಣ್ಯಗಳನ್ನು ಸೀಳಿಕೊಂಡು ಕಷ್ಟಕರ ಹಾದಿಗಳನ್ನು ಹಾದುಕೊಂಡು ಬಂದಿದೆ. ಅಸಾಧ್ಯ ಎನಿಸಿರುವ ಕೆಲವು ಹಾದಿಯಲ್ಲಿ ಸಾಗಿಬಂದ ಕೊಳವೆ ಮಾರ್ಗವನ್ನು ನಿರ್ಮಿಸಿದ ಗೇಲ್ ಪ್ರಶಂಸೆಗೆ ಅರ್ಹವಾದುದು' ಎಂದು ಹೇಳಿದರು.

ನಾಲ್ಕು ರಾಜ್ಯಗಳ ಸಭೆ:  `ದಕ್ಷಿಣ ರಾಜ್ಯಗಳಲ್ಲಿ ಇಂಧನ ಸಮಸ್ಯೆಗೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಅನಿಲ ಜಾಲ ಸಿದ್ಧಗೊಂಡಿದೆ. ಜಾಲದ ನೆರವಿನಿಂದ ಅನಿಲದ ನೆರವಿನಿಂದ ವಿದ್ಯುತ್ ಘಟಕಗಳಲ್ಲಿ ವಿದ್ಯುತ್ ಉತ್ಪಾದಿಸಿ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಂತೆ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಗೋವಾ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗುವುದು. ಈ ಸಂಬಂಧ ನಾಲ್ಕು ರಾಜ್ಯಗಳ ಪ್ರಮುಖರ ಸಭೆಯನ್ನು ಶೀಘ್ರದಲ್ಲಿ ಕರೆಯಲಾಗುವುದು' ಎಂದು ಮೊಯಿಲಿ ತಿಳಿಸಿದರು.

ಬೆಂಗಳೂರಿಗೆ ಸಿಎನ್‌ಜಿ ಕೇಂದ್ರ
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಸಾರಿಗೆ ನಿಗಮಗಳಿಗೆ ನೆರವಾಗಲು ನಿಟ್ಟಿನಲ್ಲಿ ಎರಡು ತಿಂಗಳಲ್ಲಿ ಬೆಂಗಳೂರಿನಲ್ಲಿ ಸಿಎನ್‌ಜಿ (ಕಂಪ್ರೆಸ್ಸಿವ್ ನ್ಯಾಚುರಲ್ ಗ್ಯಾಸ್) ಕೇಂದ್ರ ಸ್ಥಾಪನೆ ಮಾಡಲು ಕೇಂದ್ರ ಸರ್ಕಾರ ಉತ್ಸುಕವಾಗಿದೆ.

ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಎಂ. ವೀರಪ್ಪ ಮೊಯಿಲಿ, ಬೆಂಗಳೂರಿನಲ್ಲಿ 3-4 ಸಿಎನ್‌ಜಿ ಕೇಂದ್ರಗಳನ್ನು ಸ್ಥಾಪಿಸಲು ಅವಕಾಶ ಇದೆ. ಈ ಇಂಧನವನ್ನು ಬಳಸಿ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಬಳಸಬಹುದು. ಈ ವ್ಯವಸ್ಥೆ ಪರಿಸರಕ್ಕೆ ಪೂರಕವಾಗಿದೆ. ನಷ್ಟವೂ ಕಡಿಮೆಯಾಗಲಿದೆ ಎಂದರು.

`ಐತಿಹಾಸಿಕ ಕ್ಷಣ'
ಇದೊಂದು ಐತಿಹಾಸಿಕ ಕ್ಷಣ. ಈ ಯೋಜನೆಯ ಅನುಷ್ಠಾನ ಮಾಡಲು ಗೇಲ್ ಹಾಗೂ ರಾಜ್ಯ ಸರ್ಕಾರ ಎರಡು ವರ್ಷಗಳ ಹಿಂದೆ ಒಡಂಬಡಿಕೆಗೆ ಸಹಿ ಹಾಕಿದ್ದವು. ತ್ವರಿತಗತಿಯಲ್ಲಿ ಈ ಯೋಜನೆಯನ್ನು ಅನುಷ್ಠಾನ ಮಾಡಬೇಕು ಎಂದು ಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲು 10 ವರ್ಷಗಳು ಬೇಕು ಎಂದು ಹಲವರು ಗೇಲಿ ಮಾಡಿದ್ದರು. ಈಗ ಕನಸು ನನಸಾಗಲಿದೆ. ಈ ಯೋಜನೆಯ ಹೆಚ್ಚಿನ ಲಾಭ ರಾಜ್ಯಕ್ಕೆ ದೊರಕಲಿದೆ.
-ಎಸ್.ವಿ.ರಂಗನಾಥ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT