ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗೊಂದು ಕವಿಗೋಷ್ಠಿ: ಸಲಹೆ

Last Updated 1 ಜೂನ್ 2011, 8:30 IST
ಅಕ್ಷರ ಗಾತ್ರ

ಚಿಂತಾಮಣಿ: ಮನೆ ಮನೆಯಲ್ಲೂ, ಹಳ್ಳಿ ಹಳ್ಳಿಯಲ್ಲೂ ಸಾಹಿತ್ಯ ಚಟುವಟಿಕೆಗಳು ಮೊಳಗುವಂತಾಗಬೇಕು. ಮನೆಗೊಂದು ಕವಿಗೋಷ್ಠಿ ನಡೆದು ಜೀವನದ ಕಷ್ಟ-ಸುಖಗಳನ್ನು ಹಂಚಿಕೊಳ್ಳುವ ನಡುಮನೆಯಂತಾಗಬೇಕು ಎಂದು ಲೇಖಕಿ ಉತ್ತನೂರು ರಾಜಮ್ಮ ಅಭಿಪ್ರಾಯಪಟ್ಟರು.

ಇಲ್ಲಿನ ಕನ್ನಡ ಸಾಹಿತ್ಯ ವೇದಿಕೆ ಹಾಗೂ ಚುಟುಕು ಸಾಹಿತ್ಯ ಪರಿಷತ್ ಈಚೆಗೆ ಹಮ್ಮಿಕೊಂಡಿದ್ದ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕವಿತೆಗೆ ಬದುಕಿನ ಎಲ್ಲ ಸ್ತರಗಳ ಜಿನುಗು ನೆಲೆಗಟ್ಟಾಗುತ್ತದೆ.

ಹೃದಯಾಂತರಾಳದಿಂದ ಮೂಡಿ ಬರುವ ಕವಿತೆಗಳು ನೈಜತೆಯಿಂದ ಕೂಡಿರುತ್ತವೆ. ಸಾಹಿತ್ಯ ಚಟುವಟಿಕೆಗಳು ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆಗೂ ಕಾರಣವಾಗುತ್ತವೆ ಎಂದರು.

ಸಾಹಿತಿ ಶಿಡ್ಲಘಟ್ಟದ ಸುಭಾನ್‌ಪ್ರಿಯ ಗಿಡಕ್ಕೆ ನೀರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಕ್ಷೇತ್ರವು ಕೆಲವೇ ಮಂದಿಯ ಸ್ವತ್ತಾಗದೆ ಎಲ್ಲ ಜನರ ಸ್ವತ್ತಾಗಬೇಕು. ಜನರು ವರ್ಗ, ಭೇದಗಳನ್ನು ಮರೆತು ಒಂದಾಗಿ ಕನ್ನಡ ರಥವನ್ನು ಎಳೆಯಲು ಮುಂದಾಗಬೇಕು. ನಿರಂತರ ಸಾಹಿತ್ಯ ಚಟುವಟಿಕೆ ಹಮ್ಮಿಕೊಳ್ಳುತ್ತಿರಬೇಕು ಎಂದು ಸಲಹೆ ಮಾಡಿದರು.

ಸಾಮಾನ್ಯ ಜನರ ಮನದಲ್ಲಿ ಸಾಹಿತ್ಯ ನೆಲೆಸುವಂತಾದಾಗ ಮಾತ್ರ ಭಾಷೆ, ಸಂಸ್ಕೃತಿ ಉಳಿದು ಬೆಳೆಯಲು ಸಾಧ್ಯ ಎಂದು ಕನ್ನಡ ಸಾಹಿತ್ಯ ವೇದಿಕೆ ಗೌರವಾಧ್ಯಕ್ಷ ಕಾಗತಿ ವೆಂಕಟರತ್ನಂ ನುಡಿದರು.

ಕವಿಗೋಷ್ಠಿಯಲ್ಲಿ ಅಣಬೆ ಪಾಪೇಗೌಡ, ಚಾಂಪಲ್ಲಿ ಚಂದ್ರಶೇಖರಯ್ಯ, ಭೋಜರಾಜ, ಸಾಯಿನಾಥ್, ವೆಂಕಟರತ್ನಂ, ಕೆ.ಎಸ್.ನೂರುಲ್ಲಾ, ರಾಯಲ್ ಮಂಜುನಾಥ್, ಕುಪೇಂದ್ರ, ತಿರುಮಲ ಪ್ರಕಾಶ್ ಮತ್ತಿತರರು ಸ್ವರಚಿತ ಕವನ ವಾಚನ ಮಾಡಿದರು.

ಉತ್ತನೂರು ರಾಜಮ್ಮ ಅವರನ್ನು ಸನ್ಮಾನಿಸಲಾಯಿತು. ಜನಪದ ಕಲಾವಿದರಾದ ಸೀಕಲ್ ನರಸಿಂಹಪ್ಪ, ವಿ.ಎಚ್.ಬಾಲಕೃಷ್ಣ ಜಾನಪದಗೀತೆ ಹಾಡಿದರು. ಮುಳ್ಳಹಳ್ಳಿ ನಂಜುಂಡಗೌಡ ಹಾಸ್ಯ ಚಟಾಕಿಗಳನ್ನು ಹಾರಿಸಿದರು. ಸಮಾಜಕಲ್ಯಾಣ ಇಲಾಖೆಯ ನಾಗರಾಜ್, ಅಮ್ಮ ಚಾರಿಟೇಬಲ್ ಟ್ರಸ್ಟ್‌ನ ನವೀನ್, ಅನ್ನಪೂರ್ಣಮ್ಮ, ಚೈತ್ರ, ದರ್ಶನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT