ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗೊಂದು ಗೋವು ಸಾಕಿ: ಒಡಿಯೂರು ಶ್ರೀ

Last Updated 28 ಫೆಬ್ರುವರಿ 2011, 6:50 IST
ಅಕ್ಷರ ಗಾತ್ರ

ಪಜೀರು: ‘ಮನೆಗೊಂದು ಗೋವು ಸಾಕುವ ಮೂಲಕ ಗೋಸಂತತಿ ರಕ್ಷಣೆಗೆ ಎಲ್ಲರೂ ಪಣತೊಡಬೇಕು’ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಹೇಳಿದರು.ಗೋವನಿತಾಶ್ರಯ ಟ್ರಸ್ಟ್  ಪಜೀರು ಬೀಜಗುರಿಯ ಗೋಶಾಲಾ ವಠಾರದಲ್ಲಿ ಹಮ್ಮಿಕೊಂಡ ‘ಬೃಹತ್ ಗೋಸಮ್ಮೇಳನ’ದ ಸಮಾರೋಪದಲ್ಲಿ ಭಾನುವಾರ ಅವರು ಮಾತನಾಡಿದರು.
‘ನಗರದಲ್ಲಿ ವಾಸಿಸುವವರು ದನ ಕಟ್ಟಲು ಜಾಗ ಇಲ್ಲ ಎಂದು ಕೊರಗಬೇಕಾಗಿಲ್ಲ. ಗೋಶಾಲೆಗಳಲ್ಲಿನ ದನಗಳನ್ನು ದತ್ತು ಪಡೆದು ಅವುಗಳ ಸಾಕಣಿಕೆ ವೆಚ್ಚವನ್ನು ಭರಿಸಬಹುದು.

ಆಗಾಗ ಬಂದು ತಾವು ದತ್ತು ಸ್ವೀಕರಿಸಿದ ದನವನ್ನು ಮಾತನಾಡಿಸಿ ಹೋದರೆ ಮನಸ್ಸಿಗೆ ನೆಮ್ಮದಿಯೂ ಲಭಿಸುತ್ತದೆ ಜತೆಗೆ ಪುಣ್ಯವೂ ಪ್ರಾಪ್ತಿಯಾಗುತ್ತದೆ’ ಎಂದರು. ‘ಸರ್ಕಾರ ಗೋಶಾಲೆ ನಿರ್ಮಾಣಕ್ಕೆ ಜಮೀನು ನೀಡುತ್ತಿದೆ. ಆದರೆ ಅಲ್ಲಿನ ದನಗಳಿಗೆ ಸುರಕ್ಷತೆ ಕಲ್ಪಿಸುವತ್ತಲೂ ಸರ್ಕಾರ ಚಿಂತನೆ ನಡೆಸಬೇಕಾಗಿದೆ’ ಎಂದರು. ‘ಪ್ರೀತಿ ವಿಶ್ವಾಸ ತೋರುವ ವಿಷಯದಲ್ಲಿ ಮನುಷ್ಯ ಪ್ರಾಣಿಗಳಿಗಿಂತಲೂ ಕೀಳಾಗುತ್ತಿದ್ದಾನೆ. ಗೋ ಆಶ್ರಯಗಳನ್ನು ತೆರೆದಂತೆ ವೃದ್ಧಾಶ್ರಮಗಳ ಸಂಖ್ಯೆಯನ್ನು ಹೆಚ್ಚಿಸಬೇಕಾದ ದುರಂತ ಎದುರಾಗಿದೆ’ ಎಂದು ಖೇದ ವ್ಯಕ್ತಪಡಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೆಮಾರ್ ಮಾತನಾಡಿ, ‘ದನಗಳ ಸಾವಿನಲ್ಲಿ ಪ್ಲಾಸ್ಟಿಕ್ ಪಾತ್ರವೂ ಇತ್ತು. ಪರಿಸರ ಸಚಿವನಾದ ತಕ್ಷಣವೇ 20 ಮೈಕ್ರಾನ್ ಹಾಗೂ 40 ಮೈಕ್ರಾನ್ ದಪ್ಪದ ಪ್ಲಾಸ್ಟಿಕ್ ಬಳಕೆ ನಿಷೇಧಿಸಲು ಕ್ರಮಕೈಗೊಂಡಿದ್ದೇನೆ’ ಎಂದರು.ಶಾಸಕ ಯು.ಟಿ.ಖಾದರ್ ಮಾತನಾಡಿ, ‘ರೂ 10 ಸಾವಿರ ವೆಚ್ಚಮಾಡಿ ನಾಯಿ ಸಾಕುತ್ತಾರೆ. ಪರ್ಷಿಯನ್ ಬೆಕ್ಕು ಸಾಕಲು ರೂ 4ಸಾವಿರ ಖರ್ಚು ಮಾಡುವವರಿದ್ದಾರೆ. ಆದರೆ ದನ ಸಾಕಣೆ ವರ್ಷ ವರ್ಷ ಕುಸಿಯುತ್ತಿರುವುದು ಆತಂಕಕಾರಿ. ಮಕ್ಕಳಲ್ಲಿ ದನ ಸಾಕಣೆ ಬಗ್ಗೆ ಕಾಳಜಿ ಮೂಡಿಸಬೇಕು’ ಎಂದರು.
1.82 ಲಕ್ಷ ದನಕರುಗಳನ್ನು ಪೋಷಿಸುತ್ತಿರುವ ರಾಜಸ್ಥಾನದ ಗೋವರ್ಧನ ಗೋಶಾಲೆಯ ಪತ್ಮೇಡಾ ಗೋಪಾಲ, ಮೈಸೂರಿನ ಪಂಚಗವ್ಯ ಆಯುರ್ವೇದ ಆಸ್ಪತ್ರೆ ಸಂಸ್ಥಾಪಕ ನಾರಾಯಣ ಸ್ವಾಮೀಜಿ ಹಾಗೂ ಪಜೀರು ಗೋವನಿತಾಶ್ರಯದ ಉಸ್ತುವಾರಿ ನೊಡಿಕೊಳ್ಳುತ್ತಿರುವ ಸದಾಶಿವ- ಸುಶೀಲಾ ದಂಪತಿಯನ್ನು ಸನ್ಮಾನಿಸಲಾಯಿತು.

ನಾರಾಯಣ ಸ್ವಾಮೀಜಿ ಮಾತನಾಡಿ, ‘ಎತ್ತನ್ನು ಬಳಸಿ ಗಾಣದ ರೀತಿ ಬಳಸಿ ವಿದ್ಯುತ್ ಉತ್ಪಾದಿಸುವ ಸಂಶೋಧನೆ ಪ್ರಗತಿಯಲ್ಲಿದೆ. ಇದು ಯಶಸ್ವಿಯಾದರೆ ರೈತರು ಅತ್ಯಂತ ಕಡಿಮೆ ಹಣದಲ್ಲಿ ಪಂಪ್‌ಸೆಟ್‌ಗೆ ಹಾಗೂ ಗೃಹಬಳಕೆಗೆ ಬೇಕಾದ ವಿದ್ಯುತ್ ಉತ್ಪಾದಿಸಬಹುದು’ ಎಂದರು.ಗುರುಪುರ ಕ್ಷೇತ್ರದ ರಾಜಶೇಖರಾನಂದ ಸ್ವಾಮೀಜಿ, ಕೊಂಡೆವೂರು ಕ್ಷೇತ್ರದ ಯೋಗಾನಂದ ಸ್ವಾಮೀಜಿ, ಗೋವನಿತಾಶ್ರಯ ಟ್ರಸ್ಟ್ ಗೌರವಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್, ಕಾರ್ಯಾಧ್ಯಕ್ಷ ಹಿತೇಂದ್ರ ಕೊಠಾರಿ, ಪ್ರಧಾನ ಕಾರ್ಯದರ್ಶಿ ಡಾ.ಪಿ.ಅನಂತಕೃಷ್ಣ ಭಟ್, ಕೋಶಾಧ್ಯಕ್ಷೆ ಡಾ.ಅನಂತಲಕ್ಷ್ಮೀ ಭಟ್, ಟ್ರಸ್ಟಿ ಶ್ರಿಧರ ಗಣೇಶ ಭಟ್, ರಘುರಾಮ ಕಾಜಾವ, ಬಜರಂಗದಳ ರಾಜ್ಯ ಘಟಕ ಸಂಚಾಲಕ ಸೂರ್ಯನಾರಾಯಣ ರಾವ್, ಕೆಎಸ್‌ಆರ್‌ಪಿ ಕಮಾಂಡೆಂಟ್ ರಾಮದಾಸ ಗೌಡ, ವಿಎಚ್‌ಪಿ  ಮುಖಂಡ ಕೇಶವ ಹೆಗ್ಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT