ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯೂ ಕಲೆಯ ಮನವೂ

Last Updated 5 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಪರಿಶುದ್ಧ ಬೆಳಕು, ನೆಲಕ್ಕೆ ಕಲ್ಲಿನ ಹಾಸು, ನೀರು ಇಂಗಲು ಮಧ್ಯೆ ಹಾಗೆಯೇ ಬಿಟ್ಟ ಮಣ್ಣಿನ ಅಂಗಣ, ಕಣ್ಣು ಹಾಯಿಸಿದರೆ ಮಣ್ಣಿನದೇ ಗೋಡೆ, ಮರದ ಜೋಕಾಲಿ, ಒಪ್ಪವಾಗಿ ಜೋಡಿಸಿಟ್ಟ ಮರದ ಕುರ್ಚಿಗಳು, ಒಣಗಿದ ತೆಂಗಿನ ಮರದಿಂದ ರೂಪು ತಳೆದ ಕಿಟಕಿ, ಬಾಗಿಲು, ಕಾಂಕ್ರೀಟ್ ಲೇಪವಿಲ್ಲದ ಅಂದದ ಅಡುಗೆ ಕೋಣೆ, ಹಳೆಯ ಮರಕ್ಕೆ ಸಿಕ್ಕಿದ ಶೆಲ್ಫ್ ರೂಪ, ಅದರ ಮೇಲೆ ಚೆಂದವಾಗಿ ಕುಳಿತಿದ್ದ ಡಬ್ಬಗಳು...

`ಬಿಂಬ ದಿ ಆರ್ಟ್ ಆಶ್ರಮ'ದ ಕಲಾರಾಧಕಿ ದೀಪಿಕಾ ದೊರೆಸ್ವಾಮಿ ಕಲ್ಪನೆಯಲ್ಲಿ ರೂಪುತಳೆದ ಮನೆ ಇದು. ಬಸವನಗುಡಿಯ ರತ್ನವಿಲಾಸ ರಸ್ತೆಯಲ್ಲಿರುವ `ಬಿಂಬ ದಿ ಆರ್ಟ್ ಆಶ್ರಮ'ದ ಮನೆಯೊಡತಿ ದೀಪಿಕಾ ಅವರದ್ದು `ಭೂ ಸಂವೇದಿ ಕಲೆ'ಯತ್ತ ಮಿಡಿಯುವ ಮನಸ್ಸು. ನೂರಾರು ವರ್ಷಗಳ ಹಿಂದಿನ ಮನೆ ಖರೀದಿಸಿ, ಅದಕ್ಕೆ ಹಳ್ಳಿಮನೆಯ ಮೆರುಗು ನೀಡಿದ್ದಾರೆ. ಸುಮಾರು ವರ್ಷದ ಹಿಂದಿನ ತೆಂಗಿನ ಮರ, ಒಣ ಕಟ್ಟಿಗೆಗಳನ್ನು ತಮ್ಮ ಕಲ್ಪನೆ ಸಾಕಾರಗೊಳಿಸಿಕೊಳ್ಳಲು ಮರುಬಳಸಿಕೊಂಡಿದ್ದಾರೆ.

ಹಳೆಮರಕ್ಕೆ ಕಲೆಯ ಸ್ಪರ್ಶ
ಬೇಡವಾದ ಹಳೆಕಾಲದ ಮರದ ಕಟ್ಟಿಗೆಗಳನ್ನು ತಂದು ಕುರ್ಚಿ, ಕಪಾಟು, ಕಿಟಕಿ, ಟೇಬಲ್, ಸರ್ವಿಂಗ್ ಟ್ರೇ, ಬಳೆ, ಆಲಂಕಾರಿಕ ವಸ್ತುಗಳು, ಉಯ್ಯಾಲೆ, ವಾಲ್ ಹ್ಯಾಂಗಿಂಗ್ಸ್ ಹೀಗೆ ಹತ್ತಾರು ರೂಪ ನೀಡಲಾಗಿದೆ. ಇವುಗಳ ಆಕಾರ, ಬಣ್ಣ, ವಿನ್ಯಾಸವನ್ನು ಖುದ್ದು ದೀಪಿಕಾ ಅವರೇ ಆಸ್ಥೆಯಿಂದ ಮಾಡಿದ್ದಾರೆ. ನಾನಾ ವಿನ್ಯಾಸಗಳಲ್ಲಿ ಉಡುಪು ತಯಾರಿಸುವುದು, ಚಿತ್ರಕಲೆ, ರಸಲೋಕ, ನೃತ್ಯ ಹೀಗೆ ಕಲೆಯ ವಿವಿಧ ಪ್ರಕಾರಗಳಲ್ಲಿ ತೊಡಗಿಸಿಕೊಂಡಿರುವ ದೀಪಿಕಾ ಈ ಬಾರಿ ತಮ್ಮದೇ ಕಲ್ಪನೆಯ ಮನೆಯನ್ನೂ ನಿರ್ಮಿಸಿ ಸೈ ಎನಿಸಿಕೊಂಡಿದ್ದಾರೆ.

ಕನಸು ಮನೆಯಾಗಿ...
ವಿಶಾಲವಾಗಿ ಹರಡಿರುವ ಈ ಮನೆಯಲ್ಲಿ ಮಣ್ಣಿನಿಂದ ನಿರ್ಮಾಣವಾದ ಇಟ್ಟಿಗೆಗಳ ಗೋಡೆಗಳಿವೆ. ವಿಶೇಷವೇನೆಂದರೆ ಈ ಎಲ್ಲಾ ಇಟ್ಟಿಗೆಗಳನ್ನು ನಿರ್ಮಿಸಿದ್ದು ಸ್ವತಃ ದೀಪಿಕಾ. ಕಮಾನಿನಾಕಾರದಲ್ಲಿ ತಯಾರಾದ ಛಾವಣಿಯ ನಿರ್ಮಾಣದಲ್ಲೂ ಅವರದ್ದೇ ಕೈಚಳಕ. ವೃತ್ತಾಕಾರದ ತೆಂಗಿನ ಮರದ ತುಂಡುಗಳು ಕಿಟಿಕಿಯ ಆಕಾರ ಪಡೆದದ್ದು ನೂತನ ಪರಿಕಲ್ಪನೆಗೆ ತೆರೆದುಕೊಂಡಂತಿದೆ.
ಗೋಡೆಯ ಮೇಲೆ ಇಳಿಬಿಟ್ಟ ಹ್ಯಾಂಗಿಂಗ್‌ಗಳೂ ನೈಜತೆಯಿಂದ ಇಷ್ಟವಾಗುತ್ತವೆ. ಭಗವಂತನ ಮೊದಲ ಅವತಾರ ಮತ್ಸ್ಯ. ಹೀಗಾಗಿ ಮೀನಿನಾಕಾರದ ಚಿತ್ರಕ್ಕೆ ಪ್ರಾಧಾನ್ಯ. ಅವರ ಮನೆಯ್ಲ್ಲಲೂ ವಿವಿಧ ಆಕಾರದ ಮೀನುಗಳು ಆಲಂಕಾರಿಕ ವಸ್ತುಗಳಾಗಿವೆ. ಮನೆಯ ಅಂಚಿಗೆ ತಾಳೆಗರಿಗಳ ಸಿಂಗಾರ ಹಳ್ಳಿಯ ನೆನಪನ್ನು ಮರುಕಳಿಸುವಂತಿತ್ತು. ಮನೆಯ ಅಲ್ಲಲ್ಲಿ ಸಿಂಗರಿಸಲಾದ ಗ್ಲಾಸ್‌ನ ಒಳಗೂ ತಾಳೆಗರಿಯದ್ದೇ ಕಾರುಬಾರು.

ಅಲ್ಲೇ ಪಕ್ಕದಲ್ಲಿ ಇನ್ನೊಂದು ಕೊಠಡಿಯ ವಿನ್ಯಾಸ. ತುಸು ಮುಂದೆ ದೇವರ ಮನೆ. ಅದಕ್ಕೆ ಪೀಠ ತಯಾರಿಸಿದ ಕಮಾನು 100 ವರ್ಷಗಳಷ್ಟು ಹಿಂದಿನದ್ದು. ಆವರಣದ ಅಂಚಿಗೆ ತಂತಿಯ ಕಿಟಕಿ, ಅದಕ್ಕೆ ವಿಶೇಷವಾಗಿ ವಿನ್ಯಾಸಗೊಂಡ ಪುಟ್ಟ ಮಡಕೆ, ಕಣ್ಸೆಳೆವ ಶಿಲೆಗಲ್ಲಿನ ಚಿಕ್ಕ ಚಿಕ್ಕ ಕಂಬಗಳು, ಬಾಗಿಲಿಗೆ ಕತ್ತರಿಸಿ ಉಳಿದ ಬಿದಿರಿನ ತೋರಣ. ಮನೆಯ ಹಿಂಭಾಗದಲ್ಲಿ ತೆರೆದ ಅಂಗಣ. ಡೈನಿಂಗ್ ಟೇಬಲ್ ಇರುವುದು ಅಲ್ಲೇ.

ಮರುಬಳಕೆಯ ಮಂತ್ರ
`ಭೂ ಸಂವೇದಿ ಕಲೆ'ಯ ಇನ್ನೊಂದು ವಿಶೇಷತೆ ಎಂದರೆ ಇಲ್ಲಿ ಪಾತ್ರೆ ತೊಳೆಯಲು ಉಪಯೋಗಿಸುವುದು ಬಳಸಿದ ಕಾಫಿ ಪುಡಿ, ಬೂದಿ. ಪಾತ್ರೆ ತೊಳೆದ ನೀರನ್ನೇ ಗಿಡಮರಗಳಿಗೆ ಹರಿಬಿಡಲಾಗಿದೆ. `ಹ್ಯಾಂಡ್ ಮೇಡ್ ಟೈಲ್ಸ್'ನ ನಾನಾ ರೂಪಗಳು ಇಲ್ಲಿವೆ. ಅದರಿಂದಲೇ ಹಲವಾರು ವಿನ್ಯಾಸಗಳನ್ನು ಮಾಡಿದ್ದಾರೆ.

`ಆ ಮರಗಳು ಹಾಗೇ ಬಿದ್ದಿದ್ದವು. ಇದಕ್ಕೆ ಒಂದಲ್ಲಾ ಒಂದು ದಿನ ರೂಪ ಕೊಡುತ್ತೇನೆ. ಆದರೆ ಏನು ಎಂಬುದು ಗೊತ್ತಿಲ್ಲ' ಎನ್ನುತ್ತಿದ್ದಳು. ಆದರೆ ಈಗ ನೋಡಿ ಡಬ್ಬ ಇಡುವ ಕಪಾಟು ಮಾಡಿದ್ದಾಳೆ. ಎಷ್ಟು ಚೆನ್ನಾಗಿ ಕಾಣುತ್ತಿದೆ ಅಲ್ಲವೇ' ಎಂದು ದೀಪಿಕಾ ಅವರ ಪತಿ ದೀಪಕ್ ಪತ್ನಿಯ ಕಲಾಕೌಶಲವನ್ನು ಹೊಗಳಿದರು.

ಛಾವಣಿಗೆ ಮಡಕೆ
ಅವರು ನಿರ್ಮಿಸಿದ ಮನೆಯ ಎದುರು ವಿಶಾಲವಾದ ಪ್ರಾರ್ಥನಾ ಮಂದಿರವಿದೆ. ಅಲ್ಲಿ ಕಪ್ಪೆ ಚಿಪ್ಪಿನಿಂದ ಮಾಡಿದ ಹಾರದ ಅಲಂಕಾರ. ಪ್ರತಿದಿನ ಇಲ್ಲಿ ಧ್ಯಾನ ಮಾಡುತ್ತಾರೆ. ಮನೆಯ ಮೇಲ್ಛಾವಣಿ ಆಕರ್ಷಣೀಯ. ಸುಮಾರು 150 ಮಡಕೆಗಳನ್ನು ಬಳಸಿ ನಿರ್ಮಿಸಲಾದ ಈ ಮೇಲ್ಛಾವಣಿಯ ಅಂದವನ್ನು ನೋಡಿಯೇ ಸವಿಯಬೇಕು.

`150 ಮಡಕೆ ಲಭ್ಯವಾದವು. ಆದರೆ ನಿರ್ಮಾಣ ಹಂತದಲ್ಲಿ ಮೂರು ಒಡೆದುಹೋದವು. ದೀಪಿಕಾ ಸುಮ್ಮನೆ ಕುಳಿತುಕೊಳ್ಳದೆ ತಾನೇ ಆ ಮೂರು ಮಡಕೆಗಳನ್ನು ತಯಾರಿಸಿಬಿಟ್ಟಳು. ಕೋಣೆಗಳಲ್ಲಿ ಈ ರೀತಿಯಾಗಿ ಖಾಲಿ ಜಾಗ ಬಿಡುವುದು ಉತ್ತಮ' ಎಂದು ವಿವರ ನೀಡಿದರು ದೀಪಕ್.

ಹಿರಿಯರು ಹಾಕಿದ ವೇದಿಕೆ
`ಅಮ್ಮ ಅಜ್ಜಿಯರಿಂದ ಬಳುವಳಿಯಾಗಿ ಬಂದಿದ್ದು ಕಲೆ. ಸಂಗೀತ, ನೃತ್ಯವನ್ನೂ ಕಲಿತಿದ್ದೇನೆ. ಕಲೆ ಒಲಿದದ್ದು ಭಾಗ್ಯ ಎಂದೇ ನನ್ನ ನಂಬಿಕೆ. ಸೌಂದರ್ಯ ಎಂದರೆ ಸರಳವಾಗಿರಬೇಕು ಎಂಬುದನ್ನು ನಂಬಿದವಳು ನಾನು. ನನ್ನ ಕಲ್ಪನೆಯನ್ನು ಹಂಚಿಕೊಳ್ಳಲು ಕಲೆಯನ್ನು ಮಾಧ್ಯಮವಾಗಿಸಿಕೊಂಡೆ. ಕಲೆಯೊಂದಿಗಿನ ಪಯಣ, ಚಿಂತನೆ ನನಗೆ ಸ್ಫೂರ್ತಿ.

ಭೂ ಸಂವೇದಿ ಮನೆಯನ್ನು ನಿರ್ಮಾಣ ಮಾಡುವಾಗ ತುಂಬಾ ಸವಾಲುಗಳಿದ್ದವು. ಪ್ರದರ್ಶನಕ್ಕೆ, ತರಗತಿ, ಪ್ರೇಕ್ಷಕರಿಗೆ, ವಾರ್ತಾಲಾಪ ಎಲ್ಲದಕ್ಕೂ ಜಾಗ ಹೊಂದುವಂತೆ ಮನೆಯ ನಿರ್ಮಾಣವಾಗಬೇಕಿತ್ತು. 11 ತಿಂಗಳು ಹಗಲು ರಾತ್ರಿ ಕೆಲಸ ಮಾಡಿ ಮನೆಯ ನಿರ್ಮಾಣದ ಕೆಲಸ ಮುಗಿಸಿದೆ.

ಭೂಮಿತಾಯಿ ನೀಡುವ ಸಂಪತ್ತನ್ನು ನಮಗೆಷ್ಟು ಬೇಕೊ ಅಷ್ಟೇ ಬಳಸಿಕೊಳ್ಳಬೇಕು ಎಂಬುದು ನನ್ನ ಸಿದ್ಧಾಂತ. ಬೇಕೋ ಬೇಡವೋ ಅನಿವಾರ್ಯವಿಲ್ಲದಷ್ಟು ಕಟ್ಟುತ್ತಾರೆ. ಭೂಮಿ ತಾಯಿಗೆ ವಿನಾಕಾರಣ ಹೊರೆ ಮಾಡಿದರೆ ಆಕೆ ಹೇಗೆ ಸಹಿಸಿಯಾಳು?

ನನ್ನ ಚಿಂತನೆಯ ಮನೆ ಇಷ್ಟಪಟ್ಟು ಸಲಹೆ ಕೇಳಿದರೆ ಖಂಡಿತ ಸಹಾಯ ಮಾಡುತ್ತೇನೆ. ಎಲ್ಲ ಕಡೆಯೂ ಭೂಸಂವೇದಿ ಮನೆಯ ನಿರ್ಮಾಣ ಆಗಬೇಕು ಎಂಬುದು ನನ್ನ ಕನಸು' ಎಂದು ಕಾಳಜಿ ವ್ಯಕ್ತಪಡಿಸುತ್ತಾರೆ ದೀಪಿಕಾ.

ಕಲಾಪ್ರದರ್ಶನ
`ಬಿಂಬ ದಿ ಆರ್ಟ್ ಆಶ್ರಮದ'ಲ್ಲಿ ಏಪ್ರಿಲ್ 20ರವರೆಗೆ `ಅರ್ತ್ ಸೆನ್ಸಿಟಿವ್ ಆರ್ಟ್' ಕಲಾಪ್ರದರ್ಶನ ನಡೆಯಲಿದೆ.
ಸ್ಥಳ: ಬಿಂಬ ದಿ ಆರ್ಟ್ ಆಶ್ರಮ, 42, ರತ್ನ ವಿಲಾಸ ರಸ್ತೆ, ಬಸವನಗುಡಿ. ಸಂಪರ್ಕಕ್ಕೆ- 080 26622639

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT