ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯೂಟ ನೆನಪಿಸುವ:ಡಬ್ಬಾವಾಲಾ

Last Updated 11 ಜುಲೈ 2012, 19:30 IST
ಅಕ್ಷರ ಗಾತ್ರ

ಮುಂಬೈನ ಆರ್ಥಿಕತೆಯ ಅವಿಭಾಜ್ಯ ಅಂಗವಾಗಿರುವ ಡಬ್ಬಾವಾಲಾ ಸಂಸ್ಕೃತಿ ನಗರದಲ್ಲೂ ಮೆಚ್ಚುಗೆ ಗಳಿಸುತ್ತಿದೆ. ಉತ್ತರ ಭಾರತದಿಂದ ಬಂದು ತಮ್ಮೂರಿನ ಸವಿಯೂಟಕ್ಕಾಗಿ ತಡಕಾಡಿದ ಯುವಕನೊಬ್ಬ ಡಬ್ಬಾ ಊಟದ ವ್ಯಾಪಾರ ಆರಂಭಿಸಿದ.
 
ಈಗ ಕೋರಮಂಗಲ,, ಕ್ರೀಡಾಗ್ರಾಮ, ಇಂದಿರಾನಗರ, ದೊಮ್ಮಲೂರು, ಈಜಿಪುರ ಮುಂತಾದೆಡೆಯ 200ಕ್ಕೂ ಹೆಚ್ಚಿನ ಜನರಿಗೆ ಡಬ್ಬಾ ಊಟ ಲಭ್ಯ. ಈ `ಘರ್ ಕಾ ಖಾನಾ~ಕ್ಕೆ ದಿನೇದಿನೇ ಏರುಗತಿಯ ಬೇಡಿಕೆ!


`ಹಾಂ  ಜಿ ಬೇಟಾ ಬೋಲೊ~ ಅಂತಾರೆ. ಫೋನ್ ಮಾಡಿದಾಗಲೆಲ್ಲ ಮನೆ ನೆನಪಾಗುತ್ತದೆ. ಅಮ್ಮ ನೆನಪಾಗುತ್ತಾಳೆ. ಅಮ್ಮನ  ರಾಜ್ಮಾ ರೋಟಿ ನೆನಪಾಗುತ್ತದೆ... ಅದನ್ನೇ ಹೇಳ್ತೇವೆ. ಆ ವಾರದಲ್ಲಿ ಆ ಊಟವೇ ಸಿಗುತ್ತದೆ.~ ಪಂಜಾಬಿ ಮೂಲದ ಜತಿನ್ ಹೇಳುತ್ತಿದ್ದುದು ಕೋರಮಂಗಲದಲ್ಲಿರುವ ಪಾಪ್ಪಾಸ್ ಟಿಫಿನ್ ಬಗ್ಗೆ.

ಕಳೆದ ಒಂದು ವರ್ಷದಿಂದ ಇವರ ಊಟದ ಸೇವೆಯನ್ನು ಆಸ್ವಾದಿಸುತ್ತಿರುವ ಜತಿನ್‌ಗೆ ಬೆಂಗಳೂರು ಸಹನೀಯ ಎನಿಸಿರುವುದು ಇವರ ಊಟದಿಂದಲೇ ಅಂತೆ. ಬೆಂಗಳೂರಿಗರು ಆಹಾರಪ್ರಿಯರು. ಆದರೆ ಇಲ್ಲಿ ಎಲ್ಲ ಬಗೆಯ ಊಟಕ್ಕೂ ದಕ್ಷಿಣದ ಒಂದು ಸ್ಪರ್ಶ ಇದ್ದೇ ಇರುತ್ತದೆ.

ಉತ್ತರ ಭಾರತೀಯರಿಗೆ ಮಸೂರ್ ದಾಲ್, ರಾಜ್ಮಾ, ಆಲೂ, ಮೇಥಿ, ಪಾಲಕ್ ಇರದಿದ್ದರೆ ನಡೆಯುವುದಿಲ್ಲ. ಎಣ್ಣೆ ಹಚ್ಚಿದ ಚಪಾತಿಗಿಂತ ಫುಲ್ಕಾಗಳೇ ಇಷ್ಟವಾಗುತ್ತವೆ. ಈ ಕಾರಣಕ್ಕೆ ಡಬ್ಬಾವಾಲಾನನ್ನು ಅವಲಂಬಿಸಿದ್ದೇವೆ ಎನ್ನುತ್ತಾರೆ ಅವರು.

ಪಾಪ್ಪಾಸ್ ಟಿಫಿನ್ಸ್‌ಗೆ ಸಂಪರ್ಕಿಸಿದರೆ, `ಉತ್ತರ ಭಾರತೀಯರಿಗೆ ಪ್ರಿಯವಾಗುವ ಊಟವನ್ನೇ ಮಧ್ಯಾಹ್ನದ ಊಟಕ್ಕೆ ಹಾಗೂ ಸಂಜೆಯೂಟಕ್ಕೆ ನೀಡುತ್ತವೆ. ಸದ್ಯಕ್ಕೆ ಆಹಾರ ಸಿದ್ಧಪಡಿಸುವಲ್ಲಿ ನಿರತರಾಗಿರುವುದರಿಂದ ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿ~, ಎಂದು ಹೆಸರು ಹೇಳುವ ಮುನ್ನವೇ ಕರೆ ಕತ್ತರಿಸುತ್ತಾರೆ. ಇವರ ವೆಬ್‌ಸೈಟ್ ಸಂಪೂರ್ಣ ಮಾಹಿತಿ ನೀಡುತ್ತದೆ. ಮಧ್ಯಾಹ್ನದೂಟ, ಸಂಜೆಯೂಟದ ಮೆನು ದೊರೆಯುತ್ತದೆ.

ಇವರಿಗೆ 1500 ರೂಪಾಯಿಗಳ- ಮರು ಪಾವತಿಸಬಹುದಾದ- ಠೇವಣಿ ನೀಡಬೇಕು. ಸದಸ್ಯರಾಗುವ ಮುನ್ನ ಆಹಾರ ಸೇವಿಸಿ ಪರಿಶೀಲಿಸಬಹುದಾಗಿದೆ. 4 ರೋಟಿ, ದಾಲ್, ಗ್ರೇವಿ, ಸೂಖಾ ಭಾಜಿ ಪಲಾವ್ ಅಥವಾ ಹೆಚ್ಚುವರಿ ಎರಡು ರೋಟಿ, ಒಂದು ಬಟ್ಟಲು ಪಾಯಸ ಇತ್ಯಾದಿ ನೀಡಲಾಗುತ್ತದೆ.

ಸಲಾಡ್ ಉಪ್ಪಿನಕಾಯಿ ಮುಂತಾದವು ಸಹ ಸೇರಿರುತ್ತವೆ. ಮಿನಿ ಮೀಲ್ ಪರಿಕಲ್ಪನೆಯೂ ಇದೆ. ಇದರಲ್ಲಿ ಸಿಹಿ ನೀಡುವುದಿಲ್ಲ. ದಾಲ್‌ನೊಂದಿಗೆ ಗ್ರೇವಿ ಅಥವಾ ಸೂಖಾ ಭಾಜಿ ಮಾತ್ರ ಇರುತ್ತದೆ.

ಇವರು ಕೋರಮಂಗಲ, ಕ್ರೀಡಾಗ್ರಾಮ, ಇಂದಿರಾನಗರ, ದೊಮ್ಮಲೂರು, ಈಜಿಪುರ ಮುಂತಾದೆಡೆಗೆ 200ಕ್ಕೂ ಹೆಚ್ಚಿನ ಜನರಿಗೆ ಊಟ ಒದಗಿಸುತ್ತಿದ್ದಾರೆ.
ಇವರದ್ದೇ ಜಾಡು ಹಿಡಿದು ಹೋದರೆ ಸಿಕ್ಕಿದ್ದು ಸಾಯಿಕೃಪಾ ಘರ್‌ಕಾ ಖಾನಾ.

ಇದನ್ನು ಮನೆಯೊಂದರಿಂದಲೇ ನಿರ್ವಹಿಸಲಾಗುತ್ತದೆ.  ಏಳು ಜನರಿಂದ ಆರಂಭವಾದ ಈ ವ್ಯಾಪಾರ ಇಂದು 200 ಜನರಿಗೆ ಊಟ ತಲುಪಿಸುತ್ತಿದೆಯಂತೆ. ಹಳೆ ಏರ್‌ಪೋರ್ಟ್ ಪ್ರದೇಶದಲ್ಲಿ ಸಾಯಿಕೃಪಾ ಖಾನಾದ ಬುತ್ತಿಯೂಟ ಲಭ್ಯ. ಇವರು ಒಂಟಿ ವೃದ್ಧರ ಮನೆಗೂ ಊಟ ತಲುಪಿಸುತ್ತಾರೆ. ಪಥ್ಯದ ಊಟವೂ ಲಭ್ಯ ಎನ್ನುತ್ತಾರೆ ಸೋನಿಯಾ ಮಹಂತಿ.

ಉತ್ತರ ಭಾರತೀಯರಿಗಾಗಿ ಉತ್ತರ ಭಾರತೀಯನಿಂದಲೇ ಆರಂಭವಾದ ಸೇವೆ `ಚುಲ್ಹಾ~ ನಿಶಾಂತ್ ಎಂಬ ಯುವಕ ಬೆಂಗಳೂರಿಗೆ ಬಂದಾಗ ಅಪ್ಪಟ ಉತ್ತರ ಭಾರತೀಯ ರುಚಿಗಾಗಿ ಹುಡುಕಾಡಿದ್ದು, ಕೈಗೆಟಕುವ ಬೆಲೆಯಲ್ಲಿ ಥಾಲಿ ಊಟಕ್ಕಾಗಿ ಅಲೆದದ್ದು ಎಲ್ಲ ಸೇರಿ ಅವರೇ `ಡಬ್ಬಾವಾಲಾ~ ಸೇವೆ ಆರಂಭಿಸುವಂತೆ ಆಯಿತಂತೆ.

`2008ರಲ್ಲಿ `ಚುಲ್ಹಾ~ (ಒಲೆ) ಉರಿಸುವ ಮುನ್ನ ಸಾಕಷ್ಟು ತಯಾರಿ ಮಾಡಿಕೊಂಡೆ. ಆರಂಭಿಸುವ ಮುನ್ನ ಮಾರುಕಟ್ಟೆಯ ಸಾಮರ್ಥ್ಯ ಅರಿತುಕೊಂಡೆ. ಆ ವರ್ಷ 35 ರೂಪಾಯಿಗೆ ಡಬ್ಬಿಯೂಟ ನೀಡಲು ಆರಂಭಿಸಿದೆ. ಕೇವಲ 10 ಜನರಿಗೆ. ಈಗ 200 ಜನರಿಗೂ ಮೀರಿ ನಿರಂತರವಾಗಿ ನೀಡುತ್ತಿರುವೆ. ಒಬ್ಬನೇ ಆರಂಭಿಸಿದ್ದ ಈ ವ್ಯಾಪಾರಕ್ಕೆ ಇದೀಗ ಎಂಟು ಜನ ಸೇರಿದ್ದಾರೆ.

ಎಂಟು ಸಹಾಯಕರನ್ನು ಇಟ್ಟುಕೊಳ್ಳುವಷ್ಟು ಸಮರ್ಥನಾಗಿದ್ದೇನೆ~ ಎಂದು ನಗುತ್ತಾರೆ ನಿಶಾಂತ್ ಚುಲ್ಹಾ. ಇವರೂ ಸಹ ತಮ್ಮದೊಂದು ವೆಬ್‌ಸೈಟ್ ನಿರ್ಮಿಸಿಕೊಂಡಿದ್ದು, ವೆಬ್‌ಸೈಟ್ ಮೂಲಕವೇ ವ್ಯವಹರಿಸುತ್ತಾರೆ.
 
`ಐಟಿ ಸಿಟಿ ಅಲ್ಲವಾ..? ಮಾತನಾಡಲು ಯಾರಿಗೂ ಸಮಯ ಇಲ್ಲ. ಕಾರ್ಪೊರೇಟ್ ವಲಯದಲ್ಲಿ ಬೆರಳುಗಳು ಮಾತನಾಡಿದಷ್ಟು ಬಾಯಿಗೆ ಕೆಲಸ ಇರೋದಿಲ್ಲ ನೋಡಿ. ಅದಕ್ಕೆ ಈ ನಾಡಿಮಿಡಿತ ಅರಿತುಕೊಂಡೇ ಈ ವೆಬ್‌ತಾಣವನ್ನು ಆರಂಭಿಸಿದೆ~ ಎನ್ನುತ್ತಾರೆ ನಿಶಾಂತ್.

ಇವರು ವಾರಾಂತ್ಯದಲ್ಲಿ ನಾನ್‌ವೆಜ್ ಊಟವನ್ನೂ ನೀಡುತ್ತಾರೆ. ಚುಲ್ಹಾದಲ್ಲಿ ಸದ್ಯಕ್ಕೆ ಒಂದು ಊಟಕ್ಕೆ 50 ರೂಪಾಯಿ ನಿಗದಿಪಡಿಸಲಾಗಿದೆ. ಮಾಂಸಾಹಾರಕ್ಕೆ 70 ರೂಪಾಯಿ. ಸದ್ಯಕ್ಕೆ ಇವರೂ ಕೋರಮಂಗಲದ ಸುತ್ತಲ ಪ್ರದೇಶಗಳಲ್ಲಿ ತಮ್ಮ ವ್ಯವಹಾರ ವಿಸ್ತರಿಸಿಕೊಂಡಿದ್ದಾರೆ.

ಡಬ್ಬಾವಾಲಾಗಳ ವ್ಯಾಪಾರ ಜೋರು ಗತಿಯಲ್ಲಿರುವುದು ಐಟಿಪಿಎಲ್, ಮಾನ್ಯತಾ ಟೆಕ್‌ಪಾರ್ಕ್ ಸಮೀಪ. ಮೊದಲೆಲ್ಲ ಸ್ಪರ್ಧೆ ಇರಲಿಲ್ಲ. ಇದೀಗ ಉತ್ತರ ಭಾರತೀಯ ಆಹಾರ ವೈವಿಧ್ಯವನ್ನೇ ಸ್ಪರ್ಧೆಗೆ ಒಡ್ಡಲಾಗುತ್ತಿದೆ. ಪಂಜಾಬಿ ಖಾನಾ, ಬಿಹಾರಿ ಖಾನಾ, ಉತ್ತರ್ ಪ್ರದೇಶ್ ಕಾ ಖಾನಾ ಎಂದೆಲ್ಲ ವಿಂಗಡಿಸಲಾಗುತ್ತಿದೆ.
 
ಆಸಕ್ತಿಯ ವಿಷಯವೆಂದರೆ ಒಮ್ಮೆ ನೀವು ಗೂಗಲ್‌ನಲ್ಲಿ ಹುಡುಕಿ, ಪ್ರದೇಶ ಮಾತ್ರವಲ್ಲ, ಜಾತಿ ಆಧರಿತ ಊಟಗಳ ವಿವರವೂ ದೊರೆಯುತ್ತದೆ! ಆದರೆ ಒಂದಂತೂ ನಿಜ, ಯಾರು ಎಷ್ಟೇ ಪ್ರಚಾರ ಮಾಡಿದರೂ...

`ದಾನೆ ದಾನೆ ಪೆ ಲಿಖಾ ಹೈ ಖಾನೆವಾಲೋಂಕಾ ನಾಮ್~ ನನ್ನ ಬಳಿ ಬರುವವರು ಇಲ್ಲಿಯೇ ಮುಂದುವರಿಯುತ್ತಾರೆ ಋಣ ಇರುವವರೆಗೆ ಎನ್ನುತ್ತ ಮಾತಿಗೆ ಪೂರ್ಣವಿರಾಮ ಹಾಕುತ್ತಾರೆ.ಮಾಡುವುದೆಲ್ಲವೂ ಹೊಟ್ಟೆಗಾಗಿ ಎಂಬುದು ಇವರಿಗೂ ಇವರ ಗ್ರಾಹಕರಿಗೂ ಅನ್ವಯಿಸುವ ಮಾತಾಗಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
ಚುಲ್ಹಾ: ನಿಶಾಂತ್ ಚುಲ್ಹಾ 98866 44750 www.chulha.co.in
ಸಾಯಿಕೃಪಾ ಘರ್ ಕಾ ಖಾನಾ:
99808 39339
ಇಟ್ಸ್ ಮೈ ಮೀಲ್ 96321 00235
ಪಾಪ್ಪಾಸ್ ಟಿಫಿನ್ಸ್: 94804 93872 www.pappastiffin.com
ಸಿನ್ನಾಮನ್ ಫುಡ್ಸ್: ಸಿನ್ನಾಮನ್ ದ ಕಿಂಗ್ 9886016417

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT