ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯೊಂದು ಮೂರು ಬಾಗಿಲು!

Last Updated 14 ಜನವರಿ 2012, 19:30 IST
ಅಕ್ಷರ ಗಾತ್ರ

`ರೀ... ಟೂತ್‌ಪೇಸ್ಟಲ್ಲಿ ಚಿನ್ನ ಬಂದಿದೇ...~ ಪಮ್ಮಿ ಬೆಳ್ಳಂಬೆಳಿಗ್ಗೆ ಒಮ್ಮೆಲೆ ಕೂಗಿಕೊಂಡಾಗ ಸ್ನಾನದ ಮನೆಯಲ್ಲಿದ್ದ ಪರಮೇಶಿ ಕುತೂಹಲ ತಡೆದುಕೊಳ್ಳಲಾಗದೆ ಸೋಪಿನ ನೊರೆಯೊಂದಿಗೇ ಆಚೆ ಬಂದು `ಎಲ್ಲಿ ಚಿನ್ನ?~ ಎಂದು ಮಡದಿಯ ಮುಖ ನೋಡಿದ.

ಟೂತ್‌ಪೇಸ್ಟ್ ಕವರನ್ನು ಪರಮೇಶಿಯ ಮುಖಕ್ಕಿಡಿದ ಪಮ್ಮಿ `ನೋಡಿ, ಕಂಗ್ರಾಜುಲೇಶನ್ಸ್ ಅಂತ ಕೊಟ್ಟಿದಾರೆ. ಫೈವ್ ಗೋಲ್ಡನ್ ಟಿಪ್ಸ್ ಗೆದ್ದಿದೀರಿ ಅಂತ ಇದೆ ಇದ್ರಲ್ಲಿ. ಗೋಲ್ಡನ್ ಟಿಪ್ಸ್ ಅಂದ್ರೆ ಗೋಲ್ಡ್ ಕಾಯಿನ್ ತರಾನಾ?~ ಪಮ್ಮಿ ಖುಷಿ ಖುಷಿಯಾಗಿ ಕೇಳಿದಳು.

ಪರಮೇಶಿಗೆ ಕವರ್‌ನ ಆ ಸಾಲುಗಳಲ್ಲಿ ಗೋಲ್ಡ್ ಮತ್ತು ಕಂಗ್ರಾಜುಲೇಶನ್ಸ್ ಅನ್ನೋ ಪದಗಳಷ್ಟೇ ಕಾಣಿಸಿದ್ದರಿಂದ ಚಿನ್ನ ಗೆದ್ದ ಸಂಭ್ರಮದಲ್ಲಿ ಫಾಸ್ಟ್ ಪಾರ್ವರ್ಡ್ ಥರ ಚಕಚಕನೆ ಸ್ನಾನದ ಮನೆ ಹೊಕ್ಕು ಎರಡು ಚೆಂಬು ನೀರು ಸುರಿದುಕೊಂಡು ಆಚೆ ಬಂದ.

ಎಷ್ಟು ಗ್ರಾಂ ಟೂತ್‌ಪೇಸ್ಟ್ ಖರೀದಿಸುತ್ತೀರೋ ಅಷ್ಟು ಗ್ರಾಂ ಚಿನ್ನ ಗೆಲ್ಲಬಹುದು ಎಂದು ಕಂಪೆನಿಯವರು ಜಾಹೀರಾತು ಕೊಟ್ಟಿದ್ದರಿಂದ ನೂರು ಗ್ರಾಂ ಪೇಸ್ಟ್‌ಗೆ ನೂರು ಗ್ರಾಂ ಚಿನ್ನ ಗ್ಯಾರಂಟಿ ಎಂದುಕೊಂಡು, ಚಿನ್ನ ಪಡೆದುಕೊಳ್ಳಲು ಮುಂದೆ ಏನು ಮಾಡಬೇಕು ಎಂದು ಸಲಹೆ ಕೇಳಲು ಸೀದಾ ತೆಪರೇಸಿ ಬಳಿಗೆ ಓಡಿದ.

ತೆಪರೇಸಿ ಟೂತ್‌ಪೇಸ್ಟ್ ಕವರ್‌ನಲ್ಲಿ ಪ್ರಿಂಟಾಗಿದ್ದನ್ನು ಓದಿ ನಗುತ್ತ `ಚಿನ್ನ ಅಲ್ಲ ಕಣಯ್ಯ, ಚಿನ್ನದಂಥ ಸಲಹೆಗಳನ್ನ ನೀನು ಗೆದ್ದಿದೀಯಂತೆ! ಎಲ್ಲಿ ನಿನ್ನ ಮೊಬೈಲ್ ಕೊಡಿಲ್ಲಿ ಕಂಪೆನಿಗೆ ಮೆಸೇಜ್ ಕಳಿಸಬೇಕಂತೆ, ಏನ್ ಬರುತ್ತೆ ನೋಡೋಣ~ ಎಂದ.

ಪರಮೇಶಿಗೆ ನಿರಾಶೆಯಾದರೂ ಕುತೂಹಲ ಹಾಗೇ ಇತ್ತು. ತೆಪರೇಸಿ ಕಂಪೆನಿಗೆ ಮೆಸೇಜ್ ಕಳಿಸಿದ ಎರಡೇ ಸೆಕೆಂಡ್‌ನಲ್ಲಿ ಪ್ರತಿಕ್ರಿಯೆ ಬಂತು. ಮೊಬೈಲ್‌ನಲ್ಲಿ ಚಿನ್ನದಂಥ ಸಲಹೆಗಳು! `ಹಲ್ಲುಗಳನ್ನು ದಿನಕ್ಕೆ ಎರಡು ಬಾರಿ ಉಜ್ಜಿರಿ, ಮೂರು ತಿಂಗಳಿಗೊಮ್ಮೆ ಬ್ರಶ್ ಬದಲಾಯಿಸಿ, ವಸಡಿನ ಆರೋಗ್ಯ ಕಾಪಾಡಿಕೊಳ್ಳಿ, ಒಳ್ಳೆಯ ಆಹಾರ ಸೇವಿಸಿ... ಇತ್ಯಾದಿ, ಇತ್ಯಾದಿ.~

ಪರಮೇಶಿ ಮುಖ ನೋಡಿದ ತೆಪರೇಸಿಗೆ ನಗು ತಡೆಯಲಾಗಲಿಲ್ಲ. ಪರಮೇಶಿಗೋ ಕೋಪ. `ಇದು ಭಾರೀ ಮೋಸ ಕಣಲೆ~ ಎಂದು ಬೇಸರ ಮಾಡಿಕೊಂಡ. `ಅಲ್ಲಿ ಪಮ್ಮಿ ನೂರು ಗ್ರಾಂ ಚಿನ್ನದಲ್ಲಿ ಏನೇನು ಒಡವೆ ಮಾಡಿಸ್ಕೋಬೇಕು ಅಂತ ಲೆಕ್ಕ ಹಾಕ್ತಿರ‌್ತಾಳೆ ಗೊತ್ತಾ?...~ ಎಂದಾಗ ತೆಪರೇಸಿಗೆ ಇನ್ನಷ್ಟು ನಗು!

`ಈ ಕಂಪೆನಿಗಳು ನಮ್ಮಂಥೋರ‌್ನ ಬಲೆಗೆ ಬೀಳಿಸೋದು ಹಿಂಗೇ ಕಣಲೆ, ಟೀ ಪುಡಿ ಒಳಗೆ ಚಿನ್ನ ಇಟ್ಟಿದೀವಿ ಅಂತಾರೆ, ಕೂಲ್‌ಡ್ರಿಂಕ್ಸ್ ಮುಚ್ಚಳದಲ್ಲಿ ಕೋಟಿ ರೂಪಾಯಿ ಬಹುಮಾನ ಇಟ್ಟಿದೀವಿ ಅಂತಾರೆ. ಕಾರು ಬಹುಮಾನ ಕೊಡ್ತೀವಿ ಅಂತ ಹೇಳಿ ಉಜ್ಜೋ ಕೂಪನ್ ಕೊಡ್ತಾರೆ. ಉಜ್ಜಿದ್ರೆ ಪೆನ್ನೋ, ಪೆನ್ಸಿಲ್ಲೊ ಬಹುಮಾನ ಇರುತ್ತೆ.

ಮನೆ ಬಾಗಿಲಿಗೆ ಸಾಲ ಅಂತ ಜಾಹೀರಾತು ಕೊಡ್ತಾರೆ. ಬಡ್ಡಿಗೇ ಮನೆ ಮಾರಿಸಿಬಿಡ್ತಾರೆ. ನಮ್ಮ ದುಡ್ಡಲ್ಲಿ ನಮಗೇ ಟೋಪಿ ಹಾಕಿಬಿಡ್ತಾರೆ. ಇಂಥದಕ್ಕೆಲ್ಲ ಮೊದ್ಲು ಬೀಳೋದೇ ನಮ್ಮಂಥ ಮಿಡ್ಲ್ ಕ್ಲಾಸ್ ಜನ. ನಾವು ಇತ್ಲಾಗೆ ಬಿಪಿಎಲ್ಲೂ ಅಲ್ಲ, ಅತ್ಲಾಗೆ ಎಪಿಎಲ್ಲೂ ಅಲ್ಲ. ಮಿಡ್ಲ್ ಕ್ಲಾಸ್‌ಗೆ ಮೋಹಗಳು ಜಾಸ್ತಿ ಕಣಯ್ಯ~ ಎಂದ ತೆಪರೇಸಿ.

`ಹ್ಞೂ ಮಾರಾಯ, ಈ ಪಮ್ಮಿದೆಲ್ಲ ಬರೀ ಇಂಥವೇ. ಏನೇ ಆಗ್ಲಿ ಒಂದ್ಸಲ ಏರೋಪ್ಲೇನ್ ಹತ್ತಬೇಕು ಅಂತಾಳೆ. ಅದ್ಯಾವುದೋ ಸ್ಕೀಂನಲ್ಲಿ ಒಂದು ರೂಪಾಯಿಗೆ ವಿಮಾನದ ಟಿಕೆಟ್ ಕೊಡ್ತಾರಂತಲ್ಲ, ಅದನ್ನ ಬುಕ್ ಮಾಡಿದಾಳೆ. ಡಿಸ್ಕೌಂಟು, ಫ್ರೀ ಅಂತ ಬೋರ್ಡ್ ಕಾಣ್ಸಂಗಿಲ್ಲ, ನುಗ್ಗಿಬಿಡ್ತಾಳೆ.

ಎರಡು ಶರ್ಟ್‌ಗೆ ಮೂರು ಫ್ಯಾಂಟ್ ಫ್ರೀ, ನಾಲ್ಕು ಸೀರೆಗೆ ಐದು ಸೀರೆ ಫ್ರೀ ಅಂತ ಹಾಕಿರ‌್ತಾರಲ್ಲ, ಅಲ್ಲಿಗೆ ಹೋಗಿ ದುಡ್ಡು ಕೊಟ್ಟು ಟೋಪಿ ಹಾಕಿಸ್ಕಂಡ್ ಬರ‌್ತಾಳೆ. ಟೂತ್ ಪೇಸ್ಟ್‌ನಲ್ಲಿ ಚಿನ್ನ ಸಿಗುತ್ತೆ ಅಂತ ಟಿ.ವಿ. ಜಾಹೀರಾತು ನೋಡಿ ನೂರು ಗ್ರಾಂದು ಆರು ಪೇಸ್ಟ್ ತಂದಿದಾಳೆ ಕಣಲೆ. ಮನೇಲಿ ಇರೋದು ನಾವಿಬ್ರೇ. ಎಷ್ಟು ತಿಂಗಳಿಗೆ ಖಾಲಿ ಆಗಬೇಕು ಅದು?~ ಪರಮೇಶಿ ಪೇಚಾಡಿದ.

`ಈ ಜಗತ್ತೇ ಮೋಸ ಕಣಲೆ, ನನ್ನ ಹೆಂಡ್ತಿ ಕತೆ ನಿಂಗೊತ್ತಿಲ್ಲ ಅನ್ಸುತ್ತೆ. ನಾವಿರೋ ಬಾಡಿಗೆ ಮನೇಲಿ ಒಂದು ಕಾರ್ ಶೆಡ್ಡಿತ್ತು. ಅದನ್ನ ನೋಡಿದ ನನ್ನ ಹೆಂಡ್ತಿ `ರೀ ಹೆಂಗಿದ್ರು ಕಾರ್ ಶೆಡ್ ಖಾಲಿ ಇದೆ, ಒಂದು ಕಾರು ತಗೊಳ್ಳಣಾರೀ...~ ಅಂತ ಗಂಟು ಬಿದ್ದಿದ್ಲಪ್ಪ. ಗೂಟ ಇದೆ, ಹಗ್ಗ ಇದೆ ಅದಕ್ಕೊಂದು ಎಮ್ಮೆ ತಗಂಬರ‌್ರಿ ಅಂತ ಅದ್ಯಾರೋ ಒಬ್ಲು ಹೇಳಿದ್ಲಂತೆ. ಹಂಗಾತು ಇವಳ ಕತೆ~ ಎಂದ ತೆಪರೇಸಿ ನಗುತ್ತ.

`ಇನ್ನೊಂದ್ ಕಡೆ ನೂರಕ್ಕೆ ನೂರು ಡಿಸ್ಕೌಂಟ್ ಅಂತ ಬೋರ್ಡ್ ಹಾಕಿತ್ತಪ್ಪ. ಇದೇನಿದು ಫ್ರೀ ಕೊಡ್ತಾರಾ? ಅಂತ ಹತ್ತಿರ ಹೋಗಿ ನೋಡಿದ್ದಕ್ಕೆ `ಕಂಡೀಶನ್ಸ್ ಅಪ್ಲೈ~ ಅಂತ ಸಣ್ಣಗೆ ಹಾಕಿದ್ರು. ಏನು ಕಂಡೀಶನ್ನು? ಸೀರೆ ಫ್ರೀಯಂತೆ, ಆದ್ರೆ ಒಂದು ಕರ್ಚೀಫ್ ಖರೀದಿ ಮಾಡಬೇಕಂತೆ. ಕರ್ಚೀಪಿನ ಬೆಲೆ ಜಾಸ್ತಿ ಏನಿಲ್ಲ, ಕೇವಲ ಐದುನೂರು ರೂಪಾಯಂತೆ! ಅಂಗಡಿಯೋರ ಗಿಮಿಕ್ಕು ಹೆಂಗೆ?~ ಎಂದ ಪರಮೇಶಿ.

`ಮೋಸ ಮಾಡೋದ್ರಲ್ಲಿ ರಾಜಕೀಯದವರೇನು ಕಡಿಮೇನಾ? ಸುಳ್ಳಲ್ಲೆ ಮನೆ ಕಟ್ಟಿಬಿಡ್ತಾರೆ. ಚುನಾವಣೇಲಿ ಜನಕ್ಕೆ ಹಣ-ಹೆಂಡ ಕೊಟ್ಟು ಮೋಸ ಮಾಡೋದಿಲ್ವಾ? ಎರಡು ರೂಪಾಯಿಗೆ ಕೆ.ಜಿ. ಅಕ್ಕಿ ಅಂದ್ರು, ಹಾಲಿನ ರೇಟು 30 ರೂಪಾಯಿಗೆ ಏರಿಸಿದ್ರು. ಫ್ರೀ ಕರೆಂಟ್ ಕೊಡ್ತೀವಿ ಅಂದ್ರು, ಮೇಣದ ಬತ್ತಿ ಹಚ್ಕಳಂಗೆ ಮಾಡಿದ್ರು. ಕರ್ನಾಟಕನ ಸಿಂಗಾಪುರ್ ಮಾಡ್ತೀವಿ ಅಂದ್ರು, ಕೋಟಿ ಕೋಟಿ ರೊಕ್ಕ, ಎಕರೆಗಟ್ಲೆ ಭೂಮಿ ನುಂಗಿ ನೀರು ಕುಡಿದ್ರು. `ಮೋಸಂ ಸರ್ವಾಂತರ್ಯಾಮಿಂ~ ಎಂದ ತೆಪರೇಸಿ.

ಅಷ್ಟರಲ್ಲಿ ಅಲ್ಲಿಗೆ  ಬಂದ ಗುಡ್ಡೆ `ಏನ್ರಲೆ ಇಬ್ರೂ ಏನೋ ಗುಪ್ತ್ ಗುಪ್ತ್ ನಡೆಸೀರಲ್ಲ?~ ಎಂದ ನಗುತ್ತ.

`ಏನಿಲ್ಲಲೆ, ಪರಮೇಶಿಗೆ ಟೂತ್‌ಪೇಸ್ಟಲ್ಲಿ ನೂರು ಗ್ರಾಂ ಚಿನ್ನ ಬಹುಮಾನ ಬಂದಿತ್ತು. ಅದನ್ನ ಇಬ್ರೂ ಹಂಚ್ಕೋತಿದ್ವಿ~ ಎಂದ ತೆಪರೇಸಿ ಸೀರಿಯಸ್ಸಾಗಿ. `ಹೌದಾ? ಏನ್ ಅದೃಷ್ಟಲೇ ನಿಂದೂ... ಸರಿ ಪಾರ್ಟಿ ಯಾವಾಗ?~ ಎನ್ನುತ್ತ ಪರಮೇಶಿಯ ಕೈ ಕುಲುಕಿದ ಗುಡ್ಡೆ.

`ನಿನ್ತೆಲಿ, ಚಿನ್ನನೂ ಇಲ್ಲ, ಏನೂ ಇಲ್ಲ. ಬರೀ ಮೋಸ~ ಎಂದ ಪರಮೇಶಿ, `ನಮ್ ಕತಿ ಹಂಗಿರ‌್ಲಿ, ನಿಮ್ ಯಡ್ಯೂರಪ್ಪ ಹೆಂಗದಾರೋ ಗುಡ್ಡೆ? ಸಂಕ್ರಾಂತಿಗೆ ಏನೋ ಮಾಡ್ತೀನಿ ಅಂತಿದ್ರು?~ ಎಂದು ಪ್ರಶ್ನಿಸಿದ.

`ಯಡ್ಯೂರಪ್ಪೋರು ತಮಗೂ ಮೋಸ ಆಗಿದೆ ಅಂತ ಹಾರಾಡ್ತಿದ್ರು ಕಣ್ರಲೆ, ಎಚ್1-ಎನ್1 ಸ್ಟೈಲಲ್ಲಿ ಕೆ1-ಎಸ್1 ಅಂತ ಕೂಗಾಡ್ತ ಇದ್ರು~ ಎಂದ ಗುಡ್ಡೆ ವಿಚಿತ್ರವಾಗಿ ನಗುತ್ತ.
`ಎಚ್1-ಎನ್1 ಗೊತ್ತು. ಇದ್ಯಾವುದಿದು ಕೆ1-ಎಸ್1?~
`ಕುಮಾರಸ್ವಾಮಿನೂ ಒಂದೇ, ಸದಾನಂದಗೌಡ್ರೂ ಒಂದೇ ಅಂತ. ಅವರು ಖುರ್ಚಿ ಬಿಟ್‌ಕೊಡ್ಲಿಲ್ಲ, ಇವರು ಕೊಟ್ಟ ಖುರ್ಚಿನೇ ವಾಪಾಸ್ ಕೊಡ್ತಿಲ್ಲ ಅಂತ!~ ಗುಡ್ಡೆ ಮಾತಿಗೆ ಎಲ್ಲರೂ ನಕ್ಕರು.

`ಅದಾಯ್ತು, ನಿಮ್ ಬಿಜೆಪಿ ಕತೆ ಏನು?~
`ಬಿಜೆಪಿ ಕತೆನಾ? ಅದು `ಮನೆಯೊಂದು ಮೂರು ಬಾಗಿಲು!~
`ಮೂರು ಬಾಗಿಲಾ? ಯಾವ್ಯಾವುದಪ್ಪ ಅದು?~
`ಯಡ್ಯೂರಪ್ಪ, ಈಶ್ವರಪ್ಪ, ಸದಾನಂದಗೌಡ್ರು ಮೂರು ಬಾಗಿಲು... ಆದ್ರೆ...~
`ಆದ್ರೆ ಏನು?~
`ಸದ್ಯ ಒಬ್ಬರ ಬಾಗಿಲಲ್ಲಿ ಇನ್ನೊಬ್ರು ಹೋಗಂಗಿಲ್ಲ!~ ಗುಡ್ಡೆ ಜೋರಾಗಿ ನಗುತ್ತ ಹೇಳಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT