ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೋಲ್ಲಾಸದ ಮರುಕಳಿಕೆ

Last Updated 17 ಜೂನ್ 2012, 19:30 IST
ಅಕ್ಷರ ಗಾತ್ರ

ನಮ್ಮ ರಾಜ್ಯದ ವೃತ್ತಿ ರಂಗಭೂಮಿ ಕ್ಷೇತ್ರದಲ್ಲಿ ಗುಬ್ಬಿ ಕಂಪನಿ ಎಂದೆಂದಿಗೂ ಹೊಳೆಯುವ ನಕ್ಷತ್ರ. ಅವರ ಪ್ರಖ್ಯಾತ ನಾಟಕಗಳಲ್ಲಿ ಒಂದಾದ `ಸದಾರಮೆ~ ಕನ್ನಡಿಗರ ಜನಮನದಲ್ಲಿ ಚಿರಸ್ಥಾಯಿ. ಹೆಗ್ಗೋಡಿನ ನೀನಾಸಂ ಸ್ಥಾಪಕ ಕೆ.ವಿ.ಸುಬ್ಬಣ್ಣನವರು ಆ ನಾಟಕವನ್ನು ಸಮಕಾಲೀನ ಸಂದರ್ಭಕ್ಕೆ ಅನ್ವಯಿಸಿ `ಮಿಸ್ ಸದಾರಮೆ~ಯಾಗಿ ಪರಿವರ್ತಿಸಿದರು. ಹವ್ಯಾಸಿ ಕನ್ನಡ ರಂಗಭೂಮಿಯ ಅತ್ಯಂತ ಪ್ರತಿಭಾನ್ವಿತ ಬಿ.ವಿ. ಕಾರಂತರ ನಿರ್ದೇಶನದಲ್ಲಿ ನೀನಾಸಂ ತಿರುಗಾಟದಲ್ಲಿ ನಾಡಿನ ಪ್ರೇಕ್ಷಕರ ಮನಸ್ಸನ್ನು ಸೂರೆಗೊಂಡದ್ದು ಕೂಡ ಐತಿಹಾಸಿಕ ಸತ್ಯ. ಹೆಗ್ಗಳಿಕೆಯ ಮಾತೆಂದರೆ ಈ ನಾಟಕ ದಕ್ಷಿಣ ಭಾರತದ ಕೆಲವು ಭಾಷೆಗಳಲ್ಲಿಯೂ ಯಶಸ್ವಿ ಪ್ರಯೋಗಗಳನ್ನು ಕಂಡಿದೆ. ಅದೇ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದ ಮಂಜುನಾಥ್ ಬಡಿಗೇರ ಅವರ ನಿರ್ದೇಶನದಲ್ಲಿ ಈ ನಾಟಕ ಸಮಷ್ಟಿ ತಂಡದ ಆಶ್ರಯದಲ್ಲಿ ಪ್ರದರ್ಶನಗೊಂಡಾಗ ಪ್ರೇಕ್ಷಕರಲ್ಲಿ ವಿವಿಧ ಬಗೆಯ ನಿರೀಕ್ಷೆಗಳು ಉಂಟಾಗುವುದು ತೀರ ಸಹಜ. ಮಂಜುನಾಥ್ ಎಲ್. ಬಡಿಗೇರ ನಿರ್ದೇಶನದ `ಕಥನ~, `ಸಾಫಲ~, `ಬೊಮ್ಮನ ಹಳ್ಳಿಯ ಕಿಂದರಿಜೋಗಿ~ ಮುಂತಾದ ಮೆಚ್ಚುಗೆ ಪಡೆದ ಪ್ರಯೋಗಗಳೂ ಈ ನಿರೀಕ್ಷೆಯ ಹೆಚ್ಚಳಕ್ಕೆ ಕಾರಣ. 

ನಾಟಕದ ಕಥಾ ಹಂದರ ಸರಳ. ಮದುವೆಯೇ ಬೇಡವೆನ್ನುವ ರಾಜಕುಮಾರ ಬಂಗಾರ ಶೆಟ್ಟಿಯ ಮಗಳಾದ ಸದಾರಮೆಯಲ್ಲಿ ಅನುರಕ್ತನಾಗಿ, ಅವಳನ್ನು ಮದುವೆಯಾಗಿ ರಾಜ್ಯಕೋಶಗಳನ್ನು ತೊರೆದು ಅವಳೊಡನೆ ಹೊರಟು ಹೋಗುತ್ತಾನೆ. ಅನಂತರ ಅವರ ಪಯಣ ವಿಧಿ ವಿಲಾಸಕ್ಕೆ ಒಳಗಾಗುತ್ತದೆ. ಇವರ ಮುಗ್ಧ ಹಾಗೂ ಅಸ್ಥಿರ ಪರಿಸ್ಥಿತಿಯ ದುರುಪಯೋಗ ಪಡೆದು ಅವಳನ್ನು ವರಿಸಲು ಪ್ರಯತ್ನಿಸುವ ಕಳ್ಳ ಮತ್ತು ಇನ್ನೊಬ್ಬ ರಾಜನ ಕುಟಿಲ ತಂತ್ರಗಳನ್ನು ಸಮರ್ಥವಾಗಿ ಎದುರಿಸುವ ಸಂದರ್ಭದಲ್ಲಿ ಇಬ್ಬರೂ ಬೇರ್ಪಡುತ್ತಾರೆ; ಸದಾರಮೆ ಸಂಕಷ್ಟಕ್ಕೆ ಸಿಲುಕುತ್ತಾಳೆ. ಕ್ರಮೇಣ ಅವರು ಎಲ್ಲ ಅಡೆತಡೆಗಳನ್ನು ಎದುರಿಸಿ ಗೆಲ್ಲುತ್ತಾರೆ. ವೃತ್ತಿ ರಂಗಭೂಮಿಯ ಅಂಶಗಳಲ್ಲಿ ಒಂದಾದ ಸಾಂದರ್ಭಿಕ ಹಾಡುಗಳು ನಾಟಕದುದ್ದಕ್ಕೂ ಹಬ್ಬಿ ಅಪೇಕ್ಷಿತ ಭಾವೋದ್ದೀಪನೆಗೆ ಸಹಕಾರಿಯಾಗಿದೆ.

ನಾಟಕ ತೆರೆದುಕೊಳ್ಳುತ್ತಿದ್ದಂತೆ ಮೊದಲ ನೋಟದಲ್ಲಿಯೇ ಗಮನಕ್ಕೆ ಬರುವುದು ರಂಗ ಸಜ್ಜಿಕೆಯಲ್ಲಿನ ದೃಶ್ಯದ ವಾತಾವರಣ ಸೃಷ್ಟಿಗೆ ಮಾತ್ರ ಅಗತ್ಯವಾದ ರಂಗ ಪರಿಕರಗಳು. ರಾಜನ ಅರಮನೆಯಾಗಲೀ, ವರ್ತಕನ ಮನೆಯಾಗಲೀ, ಹೊರಾಂಗಣ ಸನ್ನಿವೇಶಗಳಾಗಲೀ ಎಲ್ಲಿಯೂ ಸರಳತೆಯನ್ನು ಮೀರುವುದಿಲ್ಲ. ತ್ವರಿತ ಗತಿಯಲ್ಲಿಯೇ ಮುಂದುವರಿಯುತ್ತದೆ. ಪ್ರತಿ ದೃಶ್ಯದಲ್ಲಿ ಅದರ ಪ್ರಗತಿಗೆ ಅನುಸಾರವಾಗಿ ಪಾತ್ರಗಳಾಡುವ ಮಾತಿಗೆ ಹಾಸ್ಯದ ಲೇಪನವಿದೆ. ಇದನ್ನು ಆಡುವ ಪದಗಳಿಗೆ ಕೊಡುವ ಒತ್ತು, ಆಂಗಿಕ ಅಭಿನಯ ಹಾಗೂ ಚಲನೆಯಿಂದ ಪಾತ್ರಗಳು ನಿರ್ವಹಿಸುತ್ತವೆ. ಇದರಿಂದಾಗಿ ರಾಜನ ಹತಾಶೆ, ಶೆಟ್ಟಿಯ ಜಿಪುಣತನ, ಆದಿಮೂರ್ತಿಯ ದುರಾಸೆ, ಕಳ್ಳನ ಜಾಣತನ ಹಾಗೂ ಸಮಕಾಲೀನ ಪ್ರಜ್ಞೆ ಮುಂತಾದವುಗಳ ಪಾತ್ರ ಸ್ವರೂಪದಲ್ಲಿ ಅಗತ್ಯದ ಕಾರಣ ಸಹಜತೆಯನ್ನು ಕೊಂಚ ಮೀರಿದ್ದರೂ ಅತಿರೇಕವೆನಿಸುವುದಿಲ್ಲ. ಕೆಲವೊಮ್ಮೆ ಮಾತುಗಳ ಮಧ್ಯದ ಮೌನದಲ್ಲಿ ಜರುಗುವ ಕ್ರಿಯೆಗಳು ಸಾಕಷ್ಟು ಪ್ರಭಾವ ಬೀರುತ್ತದೆ. ಸದಾರಮೆ (ಕೃತಿ ಬಿ. ಶೆಟ್ಟಿ) ಮತ್ತು ರಾಜಕುಮಾರ (ರೇಣುಕಾ ಪ್ರಸಾದ್) ಪಾತ್ರಗಳನ್ನು ಹೊರತುಪಡಿಸಿ ಉಳಿದ ಮುಖ್ಯ ಪಾತ್ರಗಳಿಗೆ ಅನ್ವಯಿಸುತ್ತದೆ. ಅಂದರೆ ಮುದಿರಾಜ (ಜಿ.ವಿ. ರವಿ ಕುಮಾರ್), ಬಂಗಾರ ಶೆಟ್ಟಿ (ಪಿ. ರಾಘವೇಂದ್ರ ಶೆಟ್ಟಿ), ಅವನ ಮಗ  ಆದಿಮೂರ್ತಿ (ಎಂ.ಎಸ್. ಮಂಜುನಾಥ್), ಕಳ್ಳ (ಪಿ.ಆನಂದ್), ಇವರುಗಳು. ನಾಟಕದಲ್ಲಿ ಕಂಪನಿ ನಾಟಕದ ಅಂಶವಿರುವುದನ್ನು ಎತ್ತಿ ತೋರಿಸುವ ಸಲುವಾಗಿ ಮೂಕಮ್ಮ (ಶ್ರೀನಿವಾಸ ಪ್ರಸಾದ್) ಎನ್ನುವ ಪಾತ್ರದಲ್ಲಿ ಹೆಣ್ಣು ವೇಷದ ಗಂಡಸು ಇರುವುದು ವಿಶೇಷ. 
ನಾಟಕದಲ್ಲಿ ಮಾತುಗಳ ಮೂಲಕ ಸಮಕಾಲೀನ ಸನ್ನಿವೇಶವನ್ನು ಬಿಂಬಿಸುವ ಸಫಲ ಪ್ರಯತ್ನದೊಂದಿಗೆ ಇತರ ಅಂಶಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಮುಖ್ಯವಾಗಿ ಪಾತ್ರ ಪೋಷಣೆ. ಸದಾರಮೆ ಮತ್ತು ರಾಜಕುಮಾರರ ಮದುವೆ ಇಡೀ ನಾಟಕದ ಬೆಳವಣಿಗೆಗೆ ಕಾರಣವಾಗುತ್ತದೆ ಎನ್ನುವುದನ್ನು ಬಿಟ್ಟರೆ ಅವರಿಬ್ಬರ ನಡುವೆ ಉಂಟಾಗುವ ಪ್ರೇಮಕ್ಕೆ ಪ್ರಥಮ ಸಮಾಗಮ ಮಾತ್ರ ಸಾಕಾಗುತ್ತದೆ ಎನ್ನುವುದು ಅಗತ್ಯ ಸಮರ್ಥನೆ ಒದಗಿಸುವುದಿಲ್ಲ. ಅದೇ ರೀತಿಯಲ್ಲಿ ಅವರಿಬ್ಬರ ಅಗಲಿಕೆಯಲ್ಲಿ ವಿರಹದ ತಾಪದ ಕಾವು ಪ್ರೇಕ್ಷಕರನ್ನು ತಲುಪುವುದೇ ಇಲ್ಲ. ಜೊತೆಗೆ ನಾಟಕದ ಒಟ್ಟು ಅವಧಿಯಲ್ಲಿ ಈ ಪಾತ್ರಗಳು ಆಕ್ರಮಿಸುವ ಸಮಯ ಉಳಿದ ಮುಖ್ಯ ಪಾತ್ರಗಳಿಗೆ ಹೋಲಿಸಿದರೆ ಕಡಿಮೆ. ಇದಕ್ಕೆ ಪ್ರೇಕ್ಷಕರನ್ನು ರಂಜಿಸುವ ಉದ್ದೇಶದಿಂದ ಇತರ ಪಾತ್ರಗಳಿಗಿರುವ ಹಾಸ್ಯದ ಅಂತರಂಗ ಕಾರಣವೆಂದು ತಿಳಿಯಲು ಸಾಧ್ಯವಿದೆ. ಇದೇನಿದ್ದರೂ ಮೊದಲೇ ಹೆಸರಿಸಿದ ಮುಖ್ಯ ಪೋಷಕ ಪಾತ್ರಧಾರಿಗಳು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆಂದು ಹೇಳಬೇಕು. ಕಂಪನಿ ನಾಟಕದ ಛಾಪು ಉಳಿಸಿಕೊಂಡ ಸನ್ನಿವೇಶಕ್ಕೆ ಪೂರಕವೆನಿಸುವ ಹಾಡುಗಳ ಹಿನ್ನೆಲೆ ಸಂಗೀತ (ಗಜಾನನ ಹೆಗಡೆ) ಮುದವೆನ್ನಿಸುತ್ತದೆ.

ಕೊನೆಯಲ್ಲಿ ಮದುವೆ ಮಾಡಿಕೊಳ್ಳುವುದಕ್ಕೆ ಬಂದವರನ್ನು ನಿರ್ನಾಮ ಮಾಡುತ್ತಿದ್ದ ರಾಣಿಗೆ ಗಂಡುವೇಷದ ಸದಾರಮೆ ಉಂಟುಮಾಡುವ ಅರಿವಿನ ನಂತರ ಆಕೆಯ ಆಸ್ಥಾನದಲ್ಲಿ ಸದಾರಮೆ ಮತ್ತು ರಾಜಕುಮಾರ ಭೇಟಿಯಾದ ನಂತರದ ಸನ್ನಿವೇಶ ಬೆರಗನ್ನು ಉಂಟುಮಾಡುತ್ತದೆ. ಸದಾರಮೆ ದ.ರಾ. ಬೇಂದ್ರೆಯವರ `ಮೊದಲಗಿತ್ತಿ~ ಕವನದ ಹಿನ್ನಲೆ ಗಾಯನದಲ್ಲಿ ಹಣತೆಯನ್ನು ಹಿಡಿದು ಎಲ್ಲರನ್ನೂ, ಎಲ್ಲವನ್ನೂ ತೊರೆದು ವಿರಾಗಿಣಿಯಂತೆ ನಡೆದು ಹೋಗುತ್ತಾಳೆ. ಈ ಕವನದಲ್ಲಿ ಕವಿ ಯುಗಯುಗಗಳಿಂದ ಅನೇಕಾನೇಕ ಸಂಕಷ್ಟಗಳನ್ನು ಪರಿಹರಿಸಿಕೊಂಡು ಇಂದಿಗೂ ನವ ವಧುವಿನಂತೆ ಕಂಗೊಳಿಸುತ್ತಿದ್ದೀಯೆ ಎಂದು ಭಾರತ ಮಾತೆಯನ್ನು ಕುರಿತು ಹೇಳುತ್ತಾರೆ. ಇದನ್ನು ಸದಾರಮೆಗೆ ಅನ್ವಯಿಸಿರುವುದು ಕೊಂಚವೂ ಹೊಂದಿಕೆಯಾಗುವುದಿಲ್ಲ. ನಾಟಕದಲ್ಲಿ ಅದಕ್ಕೆ ಯಾವ ಸಮರ್ಥನೆಯೂ ದೊರೆಯುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT