ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನ್ನಣೆಯ ದಾಹಕ್ಕೆ ನಿಲುಕದವರು

ನಾನು ಕಂಡ ವಿವೇಕಾನಂದ
Last Updated 26 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಮಹಾನ್ ಮತ್ತು ಅಸಾಧಾರಣ ವ್ಯಕ್ತಿಗಳು ನಮ್ಮಂತಹ ಜನಸಾಮಾನ್ಯರಿಂದ ಬೇರೆಯಾಗಿ ನಿಲ್ಲುವಂತೆ ಮಾಡುವುದು ಅವರು ತಮ್ಮ ಜೀವನದ ಉದ್ದಕ್ಕೂ ಕಾಯ್ದುಕೊಂಡು ಬರುವ ಮೌಲ್ಯ ಮತ್ತು ಸದಾ ವಿನೀತರಾಗಿ ಉಳಿಯಬಲ್ಲ ಅವರ ಸಾಮರ್ಥ್ಯ. ತಮಗೆ ದೊರೆಯುವ ಮನ್ನಣೆಯಿಂದ ಅವರು ಬದಲಾಗುವುದಿಲ್ಲ ಮತ್ತು ತಮ್ಮ ದೃಢ ನಿಶ್ಚಯದಿಂದ ಎಂದಿಗೂ ದೂರ ಸರಿಯುವುದಿಲ್ಲ. ಅಭದ್ರತೆ ಹೊಂದಿದವರು ಹಾಗೂ ಸಮಾಜದ ಮನ್ನಣೆಗೆ ತಹತಹಿಸುವವರಷ್ಟೇ ಆಗಾಗ್ಗೆ ತಮ್ಮನ್ನು ತಾವು ಮಹಾನ್ ವ್ಯಕ್ತಿಗಳು ಎಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಾ ಇರುತ್ತಾರೆ.

ನಮ್ಮ ರಾಜಕೀಯ ನಾಯಕರು ಕೆಂಪು ದೀಪದ ಕಾರಿಗೆ ಬೇಡಿಕೆ ಇಡುವುದನ್ನು ಮತ್ತು ಅದರ ಜೊತೆಜೊತೆಗೆ ಪೊಲೀಸರ ಕಾರುಗಳು ಸಾಗಿ ಬರಬೇಕೆಂದು ಬಯಸುವುದನ್ನು ನಾವು ಕಾಣುತ್ತೇವೆ. ಇದರಿಂದ ತಮ್ಮ ಸ್ಥಾನಮಾನ ಪ್ರದರ್ಶನದ ಜೊತೆಗೆ, ಆ ಕಾರಣದಿಂದಲೇ ತಮ್ಮ ಸುತ್ತಮುತ್ತಲಿನ ಜನ ತಮ್ಮನ್ನು ಗೌರವಿಸಬೇಕು ಎಂಬುದು ಅವರ ಇಂಗಿತ ಆಗಿರುತ್ತದೆ. ಇಂತಹ ಸ್ವಯಂ ಏಳ್ಗೆಯ ವಾಂಛೆಯು ನಮ್ಮ ಕೆಲವು ಧಾರ್ಮಿಕ ನಾಯಕರನ್ನೂ ಬಿಟ್ಟಿಲ್ಲ. ಆದರೆ ತಮಗಿದ್ದ ಮಹತ್ವ ಮತ್ತು ಜನಪ್ರಿಯತೆ ತಮ್ಮ ಮೇಲೆ ಯಾವುದೇ ಪರಿಣಾಮ ಬೀರಲು ಅವಕಾಶವನ್ನೇ ಕೊಡದಂತಹ ವ್ಯಕ್ತಿಗಳಲ್ಲಿ ಸ್ವಾಮಿ ವಿವೇಕಾನಂದರು ಎದ್ದು ಕಾಣುತ್ತಾರೆ.

ಅಮೆರಿಕದಿಂದ ಹಿಂದಿರುಗಿದ ನಂತರ ಅವರು, ಈಗಿನ ರಾಜಸ್ತಾನದಲ್ಲಿರುವ ಆಳ್ವರ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಡೆದ ಎರಡು ಘಟನೆಗಳನ್ನು ನಾನು ಇಲ್ಲಿ ಉದಾಹರಿಸ ಬಯಸುತ್ತೇನೆ.

ಆ ಹೊತ್ತಿಗೆ ಜನಪ್ರಿಯರಾಗಿ ಪ್ರಸಿದ್ಧಿಗೆ ಬಂದಿದ್ದ ಸ್ವಾಮೀಜಿ, ತಮ್ಮ ಆಪ್ತ ಸ್ನೇಹಿತರು ಮತ್ತು ಭಕ್ತರನ್ನು ಭೇಟಿ ಮಾಡಲು ಆಳ್ವರ್‌ಗೆ ಬಂದಿದ್ದರು. ಅವರಿಗೆ ಭವ್ಯ ಸ್ವಾಗತ ಕೋರಲು ಹಲವರು ರೈಲು ನಿಲ್ದಾಣದಲ್ಲಿ ನೆರೆದಿದ್ದರು. ಹೀಗೆ ಸೇರಿದ್ದವರಲ್ಲಿ ಖ್ಯಾತನಾಮರು, ಗಣ್ಯ ವ್ಯಕ್ತಿಗಳು ಇದ್ದರು. ಅವರೆಲ್ಲರೂ ಸ್ವಾಮೀಜಿಯನ್ನು ಭೇಟಿ ಮಾಡಿ ಮಾತನಾಡಲು ನಾ ಮುಂದು ತಾ ಮುಂದು ಎಂದು ಪೈಪೋಟಿ ನಡೆಸುತ್ತಿದ್ದರು.

ಆದರೆ ಈ ಸಂದರ್ಭದಲ್ಲಿ ಸ್ವಾಮೀಜಿಯ ದೃಷ್ಟಿ ಆ ಗುಂಪಿನ ಅಂಚಿನಲ್ಲಿ ಅತ್ಯಂತ ವಿನೀತನಾಗಿ ನಿಂತಿದ್ದ ವ್ಯಕ್ತಿಯೊಬ್ಬನ ಮೇಲೆ ನೆಟ್ಟಿತು. ಆತ ಮಾಸಲು ಬಟ್ಟೆ ತೊಟ್ಟಿದ್ದರೂ, ಸಾಕಷ್ಟು ದಿನಗಳ ನಂತರ ತನ್ನ ಸ್ವಾಮೀಜಿಯನ್ನು ನೋಡುತ್ತಿದ್ದ ಸಂತಸ, ಅವರನ್ನು ಕಂಡು ಮಾತನಾಡುವ ಕಾತುರ ಅವನ ಮುಖದಲ್ಲಿ ಮನೆ ಮಾಡಿತ್ತು. ಆದರೆ ಪಟ್ಟಣದ ಗಣ್ಯ ವ್ಯಕ್ತಿಗಳ ಗುಂಪನ್ನು ಭೇದಿಸಿಕೊಂಡು ಹೋಗಿ ಅವರನ್ನು ಕಾಣುವ ಧೈರ್ಯ ಮಾತ್ರ ಅವನಲ್ಲಿ ಇರಲಿಲ್ಲ. ಇದನ್ನು ಗಮನಿಸಿದ ಸ್ವಾಮೀಜಿ ಜೋರಾಗಿ `ರಾಮಸ್ನೇಹಿ, ರಾಮಸ್ನೇಹಿ' ಎಂದು ಕೂಗಿದರು. ಆಗ ಗುಂಪು ಈ ಸರಳ ವ್ಯಕ್ತಿಗೆ ದಾರಿ ಮಾಡಿಕೊಟ್ಟಿತು. ಆತ ಮುಂದೆ ಬಂದು ಸ್ವಾಮೀಜಿಯನ್ನು ಸ್ವಾಗತಿಸಿದ. ವಿವೇಕಾನಂದರು ಪ್ರೀತಿಯಿಂದ ಮಾತನಾಡಿ ಅವನೊಂದಿಗೆ ಒಂದಷ್ಟು ಹೊತ್ತು ಕಳೆದರು.

ಸ್ವಾಮೀಜಿಯ ಇಂತಹ ನಡವಳಿಕೆಗೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಆಳ್ವರ್‌ನಲ್ಲಿದ್ದ ಅವಧಿಯಲ್ಲಿ ಹಲವು ಶ್ರೀಮಂತ ಮತ್ತು ಪ್ರಮುಖ ವ್ಯಕ್ತಿಗಳು ಅವರನ್ನು ಊಟಕ್ಕೆ ಆಹ್ವಾನಿಸುತ್ತಿದ್ದರು. ಆದರೆ ಇಂತಹ ಆಹ್ವಾನಗಳನ್ನು ಒಪ್ಪಿಕೊಳ್ಳುವ ಮುನ್ನ ಸ್ವಾಮೀಜಿ, ಬಡ ವೃದ್ಧ ಮಹಿಳೆಯೊಬ್ಬಳ ಆತಿಥ್ಯ ಸ್ವೀಕರಿಸಿದರು.

ಆಕೆ ಹಿಂದೆ ಅವರು ಪರ್ಯಟನಾ ನಿರತರಾಗಿದ್ದ ಸಮಯದಲ್ಲಿ ತಿನ್ನಲು ಏನೂ ಇಲ್ಲದಿದ್ದಾಗ ಅವರಿಗೆ ಊಟ ಕೊಟ್ಟು ಉಪಚರಿಸಿದ್ದ ಮಹಿಳೆಯಾಗಿದ್ದಳು. ಅಂದಿನ ಅವಳ ದಯಾಪರತೆಯನ್ನು ಸ್ವಾಮೀಜಿ ಮರೆತಿರಲಿಲ್ಲ. ಆಳ್ವರ್ ತಲುಪಿದ ಕೂಡಲೇ ಅವರು, ಕೆಲ ವರ್ಷಗಳ ಹಿಂದೆ ತಮಗೆ ನೀಡಿದ್ದ ರುಚಿಕಟ್ಟಾದ ದಪ್ಪ ಚಪಾತಿ ತಿನ್ನುವ ಬಯಕೆ ಆಗಿರುವುದಾಗಿ ಆಕೆಗೆ ಸಂದೇಶ ಕಳುಹಿಸಿದ್ದರು. ಇದನ್ನು ಕೇಳಿ ಆ ಮಹಿಳೆಯ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು.

ಅತ್ಯಂತ ಕಾಳಜಿಯಿಂದ ಚಪಾತಿಗಳನ್ನು ತಯಾರಿಸಿದ ಆಕೆಯು ಸ್ವಾಮೀಜಿ ಮತ್ತು ಅವರ ಶಿಷ್ಯರ ಬರುವಿಕೆಗಾಗಿ ಕಾಯುತ್ತಿದ್ದಳು. ಅವರು ಬರುತ್ತಿದ್ದಂತೆಯೇ ಅತ್ಯಂತ ಪ್ರೀತಿಯಿಂದ ಅದನ್ನು ಉಣಬಡಿಸಿದಳು. ಸ್ವಾಮೀಜಿ ಖುಷಿಯಿಂದ ತಿಂದರು. ಅಲ್ಲದೆ `ನೋಡಿ ಎಷ್ಟು ಶ್ರದ್ಧೆಯಿಂದ ಇದನ್ನೆಲ್ಲಾ ಮಾಡುತ್ತಿರುವ ಈ ವೃದ್ಧೆಯಲ್ಲಿ ಎಂತಹ ತಾಯಿ ಪ್ರೀತಿ ಇದೆ. ಜೊತೆಗೆ ಈ ಊಟ ಸಹ ಸರಳವಾಗಿದ್ದರೂ ಎಷ್ಟೊಂದು ರುಚಿಕಟ್ಟಾಗಿದೆ' ಎಂದು ತಮ್ಮ ಶಿಷ್ಯಂದಿರಿಗೆ ಹೇಳಿದ್ದರು.

ಇಂತಹ ಘಟನೆಗಳು ಖ್ಯಾತಿ, ಮನ್ನಣೆ, ಪ್ರಶಂಸೆ ಯಾವುದರಿಂದಲೂ ಸ್ವಾಮೀಜಿ ಬದಲಾಗಲಿಲ್ಲ ಎಂಬುದನ್ನು ತೋರಿಸುತ್ತವೆ. ಬಡವರು ಮತ್ತು ದಿಕ್ಕಿಲ್ಲದವರ ಬಗೆಗಿನ ಕಾಳಜಿ ಅವರಲ್ಲಿ ಸ್ವಭಾವತಃ ಅಡಕವಾಗಿತ್ತು. ಅಂತಹ ಜನರಿಗೆ ತಮ್ಮ ಹೃದಯದಲ್ಲಿ ಅವರು ವಿಶೇಷ ಸ್ಥಾನ ಕೊಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT