ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಮ್ಮಿ ನಂಬರ್ 1

Last Updated 25 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಇಪ್ಪತ್ತು ವರ್ಷಗಳ ಹಿಂದೆ `ಭುಜಂಗಯ್ಯನ ದಶಾವತಾರಗಳು' ಚಿತ್ರಕ್ಕೆ ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿ ಪಡೆದಿದ್ದವರು ಗಿರಿಜಾ ಲೋಕೇಶ್. ಈಗ ಮತ್ತೊಮ್ಮೆ ಅದೇ ಪ್ರಶಸ್ತಿಯನ್ನು `ಸಿದ್ಲಿಂಗು' ಚಿತ್ರಕ್ಕೆ ಪಡೆದಿದ್ದಾರೆ.

`ಪ್ರಶಸ್ತಿ ನಿರೀಕ್ಷಿಸಿರಲೇ ಇಲ್ಲ. ಪ್ರಶಸ್ತಿಗೆ ಕಾರಣ ನಿರ್ದೇಶಕ ವಿಜಯಪ್ರಸಾದ್' ಎನ್ನುವುದು ಗಿರಿಜಾ ಅವರ ವಿನಯದ ಮಾತು.

ಒಂದೊಂದು ದೃಶ್ಯ ಮುಗಿದಾಗಲೂ `ಗಿರಿಜಮ್ಮಾ ನಿಮಗೆ ಪ್ರಶಸ್ತಿ ಗ್ಯಾರಂಟಿ' ಎನ್ನುತ್ತಿದ್ದರಂತೆ ವಿಜಯಪ್ರಸಾದ್. `ಆಗೆಲ್ಲಾ ಅವರು ನನ್ನನ್ನು ಛೇಡಿಸುತ್ತಿದ್ದಾರೇನೋ ಎಂದುಕೊಂಡು ಸುಮ್ಮನಾಗುತ್ತಿದ್ದೆ. ಆದರೆ ಪ್ರಶಸ್ತಿ ಪ್ರಕಟವಾದಾಗ ನಂಬಲೇ ಆಗಲಿಲ್ಲ. ಅದು ತುಂಬಾ ಸಹಜವಾದ `ಆಯಾ' ಪಾತ್ರ. ನಿರ್ದೇಶಕರು ಆ ಪಾತ್ರದೊಳಗೆ ನನ್ನನ್ನು ಚೆನ್ನಾಗಿ ತೊಡಗಿಸಿದರು. ಅವರು ಹೇಳಿಕೊಟ್ಟಂತೆ ಮಾಡಿದೆ. ಅಂಥದ್ದೇನೂ ಸಿದ್ಧತೆ ಮಾಡಿಕೊಂಡಿರಲಿಲ್ಲ' ಎಂದು ಗಿರಿಜಮ್ಮ `ಸಿದ್ಲಿಂಗು' ನೆನಪುಗಳನ್ನು ಮೆಲುಕು ಹಾಕುತ್ತಾರೆ.

`ಕಲಾವಿದರ ನಿಜವಾದ ಸಾಮರ್ಥ್ಯ ಹೊರತೆಗೆಯುವವರೇ ನಿರ್ದೇಶಕರು. ಕಲಾವಿದರು ಬಿಳಿ ಹಾಳೆ ಇದ್ದಂತೆ. ಅದರಲ್ಲಿ ಜೀವ ತುಂಬುವವರೇ ಅವರು. `ಭುಜಂಗಯ್ಯನ ದಶಾವತಾರ' ಚಿತ್ರಕ್ಕೂ ನಾನು ಪ್ರಶಸ್ತಿ ನಿರೀಕ್ಷಿಸಿರಲಿಲ್ಲ. ಅದರ ನಿರ್ದೇಶಕ - ನಿರ್ಮಾಪಕ ನನ್ನ ಪತಿ ಲೋಕೇಶ್. ಅದು ಗಯ್ಯಾಳಿ ಪಾತ್ರವಾದ ಕಾರಣ ನಗಬೇಡ ಎಂದಷ್ಟೇ ಹೇಳಿಕೊಟ್ಟಿದ್ದರು' ಎಂದು ನೆನಪುಗಳಿಗೆ ಜಾರುತ್ತಾರೆ.

ಗಿರಿಜಾ ಲೋಕೇಶ್ ಅವರಿಗೆ ಯಾವತ್ತೂ ಅವಕಾಶಗಳ ಕೊರತೆ ಎದುರಾಗಿಲ್ಲ. `ನಾನು ಇಷ್ಟಪಟ್ಟು ನಟಿಸಿದರಲ್ಲವೇ ನೋಡುವವರಿಗೆ ಅದು ಇಷ್ಟವಾಗುವುದು' ಎನ್ನುವ ಅವರು ಒಂದರ ನಂತರ ಬರುವ ಅವಕಾಶಗಳನ್ನು ಇಷ್ಟಪಟ್ಟೇ ಮಾಡುತ್ತಾರಂತೆ. ಪಾಲಿಗೆ ಬಂದಿದ್ದು ಪಂಚಾಮೃತ ಅನ್ನೋದು ಅವರ ಪಾಲಸಿ. ಒಂದು ದಿನ ಕೆಲಸ ಇರುವ ಪಾತ್ರವಾದರೂ ಎಂಜಾಯ್ ಮಾಡ್ತಾರಂತೆ. ಅದಕ್ಕೆ ಸಿಕ್ಕ ಪ್ರತಿಫಲ ಎಂದರೆ ಈ ವರ್ಷ 18 ಸಿನಿಮಾಗಳಲ್ಲಿ ನಟಿಸಿರುವುದು.

ಈಗ `ಸ್ಮಗ್ಲರ್', `ಕಡ್ಡಿಪುಡಿ', `ವಿಕ್ಟರಿ' ಚಿತ್ರಗಳ ಚಿತ್ರೀಕರಣ ಮುಗಿಸಿದ್ದಾರೆ. `ಭಜರಂಗಿ', `ಗರ್ಭದ ಗುಡಿ' ಚಿತ್ರೀಕರಣದಲ್ಲಿ ತೊಡಗಿದ್ದಾರೆ. `ಬಣ್ಣದ ಬುಗುರಿ' ಧಾರಾವಾಹಿಗೂ ಬಣ್ಣ ಹಚ್ಚುತ್ತಿದ್ದಾರೆ. ಹದಿನೆಂಟು ವರ್ಷಗಳ ಹಿಂದೆ `ದೊರೆ' ಚಿತ್ರದಲ್ಲಿ ಶಿವರಾಜ್‌ಕುಮಾರ್ ಅವರಿಗೆ ತಾಯಿಯಾಗಿ ಅಭಿನಯಿಸ್ದ್ದಿದ ಗಿರಿಜಾ `ಭಜರಂಗಿ'ಯಲ್ಲಿ ಮತ್ತೆ ತಾಯಿಯಾಗುತ್ತಿದ್ದಾರೆ.

ಮೂಲತಃ ಬೆಂಗಳೂರಿನವರೇ ಆದ ಗಿರಿಜಾ ಲೋಕೇಶ್ ಭರತನಾಟ್ಯ ಕಲಾವಿದೆ. ಹದಿನಾಲ್ಕನೇ ವಯಸ್ಸಿನಲ್ಲಿ ನಾಟಕರಂಗ ಪ್ರವೇಶಿಸಿದವರು. ನಾಟಕ ಆರಂಭಕ್ಕೆ ಮುಂಚೆ ನೃತ್ಯ ಮಾಡಿ ಸಂಭಾವನೆ ಪಡೆದು ಮನೆಗೆ ತೆರಳುತ್ತಿದ್ದ ಅವರು ನಂತರದಲ್ಲಿ ನಟಿಸುವ ಅವಕಾಶಗಳನ್ನು ಪಡೆದುಕೊಂಡರು.

`ಸಾಮ್ರಾಟ್ ಅಶೋಕ್‌ಕುಮಾರ್' ಅವರು ನಟಿಸಿದ ಮೊದಲ ನಾಟಕ. ಆಗ ನಟ ಲೋಕೇಶ್ ಅವರ ಪರಿಚಯವಾಯಿತು. ಬಳಿಕ `ಪ್ರಭಾತ್ ಶಿಶುವಿಹಾರ', `ರಂಗಸಂಪದ', `ನಟರಂಗ' ತಂಡಗಳಲ್ಲಿ ಸಕ್ರಿಯರಾದ ಗಿರಿಜಾ ಸಾವಿರಾರು ನಾಟಕಗಳಲ್ಲಿ ಅಭಿನಯಿಸಿದರು. ಉರ್ದು, ತಮಿಳು, ತೆಲುಗು, ಮಲಯಾಳಂ ನಾಟಕಗಳಲ್ಲೂ ನಟಿಸಿದರು.

`ಜೋಕುಮಾರಸ್ವಾಮಿ' ನಾಟಕಕ್ಕೆ ಮೂರೇ ದಿನ ತಾಲೀಮು ಮಾಡಿ ನಿರ್ದೇಶಕ ಬಿ.ವಿ. ಕಾರಂತರು ಮೆಚ್ಚುವಂತೆ ನಟಿಸಿದ್ದು ಅವರ ಹೆಗ್ಗಳಿಕೆ. ರಂಗಭೂಮಿಯಿಂದ ಸಿನಿಮಾ ರಂಗಕ್ಕೆ ಪ್ರವೇಶ ಪಡೆದ ಗಿರಿಜಾ ನಟಿಸಿದ ಮೊದಲ ಸಿನಿಮಾ `ಮಾಡಿ ಮಡಿದವರು'. ನಂತರ `ಅಬಚೂರಿನ ಪೋಸ್ಟಾಪೀಸು' ಚಿತ್ರದ ನಾಯಕಿಯಾದರು.

ಲೋಕೇಶ್ ಅವರು ಮದುವೆಯ ಆಲೋಚನೆ ಮುಂದಿಟ್ಟಾಗ ಗಿರಿಜಾ ಸಮ್ಮತಿ ಸೂಚಿಸಿದರು. ಮದುವೆಯಾದ ದಿನವೇ ಅವರಿಬ್ಬರೂ ಪ್ರಮುಖ ಪಾತ್ರಧಾರಿಗಳಾಗಿದ್ದ `ಕಾಕನಕೋಟೆ' ನಾಟಕ ಪ್ರದರ್ಶನ ಇತ್ತು. ಮದುವೆಯಾದ ದಿನವೇ ರಂಗದ ಮೇಲೆ ಅಪ್ಪ-ಮಗಳಾಗಿ ಅಭಿನಯಿಸಿದ್ದು ಅವರಿಬ್ಬರ ಕಲಾಬದುಕಿನ ತಿರುಳು.

ಮದುವೆ ನಂತರ ಹದಿನಾಲ್ಕು ವರ್ಷ ಮಕ್ಕಳ ಪಾಲನೆ-ಪೋಷಣೆಯಲ್ಲಿ ತೊಡಗಿದ ಗಿರಿಜಾ, ಬಣ್ಣದ ಲೋಕದಿಂದ ಸಂಪೂರ್ಣವಾಗಿ ದೂರವಾದರು. `ಚಿರಂಜೀವಿ ಸುಧಾಕರ' ಚಿತ್ರದ ಮೂಲಕ ಚಿತ್ರರಂಗಕ್ಕೆ ಮರಳಿದವರು, ಇಂದಿಗೂ ನಟಿಸುತ್ತಿದ್ದಾರೆ. ಅವರು ನಟಿಸಿದ ಸಿನಿಮಾಗಳ ಸಂಖ್ಯೆ ಇನ್ನೂರು ದಾಟಿರಬಹುದು ಎಂಬುದು ಅವರ ಅಂದಾಜು.

ದೂರದರ್ಶನದಲ್ಲಿ 13 ಎಪಿಸೋಡುಗಳ ಧಾರಾವಾಹಿ ಆರಂಭವಾದಾಗಿನಿಂದಲೂ ನಟಿಸುತ್ತಿರುವ ಗಿರಿಜಾ 300ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಕಾಣಿಸಿಕೊಂಡವರು. ರಮೇಶ್ ಭಟ್ ಜೊತೆ ನಟಿಸಿದ್ದ `ಕ್ರೇಜಿ ಕರ್ನಲ್' ಧಾರಾವಾಹಿ ಅವರಿಗೆ ಜನಪ್ರಿಯತೆ ತಂದುಕೊಟ್ಟಿತ್ತು. `ವೈಶಾಲಿ ಕಾಸರವಳ್ಳಿ ನಿರ್ದೇಶನದ `ಮುತ್ತಿನ ತೋರಣ' ಧಾರಾವಾಹಿ ತಮ್ಮ ಪ್ರತಿಭೆಯನ್ನು ಹೊರತೆಗೆಯಿತು ಎನ್ನುತ್ತಾರೆ ಗಿರಿಜಾ.

`ಲೋಕೇಶ್ ಅವರನ್ನು ನನ್ನ ಮಗ ಸೃಜನ್‌ನಲ್ಲಿ ನೋಡುತ್ತಿರುವೆ. ಅವರದೇ ಸ್ವಾಭಿಮಾನ, ಪ್ರತಿಭೆ ಅವನಲ್ಲೂ ಇದೆ. ಅದನ್ನು ಚಿತ್ರರಂಗ ಗುರುತಿಸುವ ದಿನಕ್ಕಾಗಿ ಕಾಯುತ್ತಿರುವೆ. ಪ್ರತಿಭೆಯಿಂದಷ್ಟೇ ಮೇಲೆ ಬರಲು ಯತ್ನಿಸುತ್ತಿರುವ ನನ್ನ ಮಕ್ಕಳ ಬಗ್ಗೆ ಹೆಮ್ಮೆ ಇದೆ' ಎನ್ನುತ್ತಾರೆ.

ಪ್ರಶಸ್ತಿಯ ಜೊತೆಗೆ `ತೆರೆಯ ಮೇಲೆ ನೀವು ಥೇಟ್ ಅಮ್ಮನಂತೆ ಕಾಣುವಿರಿ' ಎನ್ನುವ ಜನರ ಪ್ರೀತಿಯೂ ಗಿರಿಜಾ ಅವರಲ್ಲಿ ಧನ್ಯತಾ ಭಾವ ಮೂಡಿಸಿದೆ.

1991ರಲ್ಲಿ `ಭುಜಂಗಯ್ಯನ ದಶಾವತಾರ' ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿದಾಗ, ಪ್ರಶಸ್ತಿಯ ರೂಪದಲ್ಲಿ ಗಿರಿಜಾ ಲೋಕೇಶ್ ಅವರಿಗೆ ದೊರೆತ ಹಣ ಎರಡು ಸಾವಿರ ರೂಪಾಯಿ. ಇದು ತೀರಾ ಕಡಿಮೆಯಾಯಿತು ಎಂದವರು ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರ ಗಮನಸೆಳೆದಿದ್ದರಂತೆ. ಈಗ ಆ ಮೊತ್ತ ಇಪ್ಪತ್ತು ಸಾವಿರ ರೂಪಾಯಿ ಆಗಿದೆ.

`ಅಂದಿನ ಎರಡು ಸಾವಿರ ರೂಪಾಯಿಗೆ ಇಂದಿನ ಇಪ್ಪತ್ತು ಸಾವಿರ ಸರಿಸಮ ಎನ್ನಬಹುದು. ಆದರೆ, ಇಷ್ಟು ಕಡಿಮೆ ಮಟ್ಟದ ಪ್ರೋತ್ಸಾಹ ಧನ ನೀಡುವುದು ಸರಿಯೇ?' ಎನ್ನುವುದು ಅವರ ಪ್ರಶ್ನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT