ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಗಳ ಕಡಿಯುವ ಸಿದ್ದಪ್ಪ

Last Updated 8 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಪುಟ್ಟಜ್ಜಿಯ ಮನೆ ಅಂಗಳದಲ್ಲಿ ಮಕ್ಕಳು ಸಂಡಿಗೆ ಹಾಕುವ ಸಂಭ್ರಮದಲ್ಲಿ ಇದ್ದವು. ಮಳೆಗಾಲ ಇನ್ನೇನು ಬರುತ್ತಿದೆ ಅನ್ನುವಾಗ ಅಜ್ಜಿ ಹೀಗೆ ಸಂಡಿಗೆ ಬಿಡುವುದು ಒಂದು ರೂಢಿ. ಆಗ ಮಕ್ಕಳೆಲ್ಲ ಬಂದು ಅಲ್ಲಿ ನೆರೆಯುತ್ತವೆ ಹಾಗು ಅಜ್ಜಿಗೆ ನೆರವಾಗುತ್ತವೆ.

ಅಂಗಳದಲ್ಲಿ ಚಾಪೆ ಹಾಸಿ ಅದರ ಮೇಲೆ ಬಿಳೇ ಪಂಚೆ ಹಾಸಿ ಪುಟ್ಟಜ್ಜಿ ಸಂಡಿಗೆ ಬಿಡುವಾಗ ಮಕ್ಕಳು ಅಜ್ಜಿಯ ಕೆಲಸ ನೋಡುತ್ತ ಅದು ಇದೂ ಮಾತನಾಡುತ್ತಲಿದ್ದವು. ಬೇಲಿ ಗೂಟದ ಮೇಲೆ ಕುಳಿತ ಕಾಗೆಗಳನ್ನ ಓಡಿಸುತ್ತಿದ್ದವು. ಆಗ ಮನೆ ಮುಂದಿನಿಂದ ಒಂದು ದನಿ ಕೇಳಿಸಿ ಮಕ್ಕಳೆಲ್ಲ ಅತ್ತ ತಿರುಗಿದರು.

“ಸೌದೆ ಒಡೆಯೋದು ಇದೆ ಏನ್ರವ್ವ ಸೌದೆ? ಸೌದೆ ಒಡೆಯೋದು ಇದೆ ಏನ್ರವ್ವ ಸೌದೆ?” ಅನ್ನುವ ದನಿ ವಿಚಿತ್ರವಾಗಿತ್ತು. ಹೀಗೆಂದು ಕೂಗುತ್ತಿದ್ದವನೂ ವಿಚಿತ್ರವಾಗಿದ್ದ. ಒಂದು ಹೆಗಲ ಮೇಲೆ ಚೂಪು ಕೊಡಲಿ ಮತ್ತೊಂದು ಹೆಗಲ ಮೇಲೆ ಚಪ್ಪಟೆ ಕೊಡಲಿ. ಕಂಕುಳಲ್ಲಿ ಕೈ ಗರಗಸ, ಹಗ್ಗ, ಮೇಲೊಂದು ಕಂಬಳಿ, ತಲೆಗೊಂದು ವಸ್ತ್ರ, ಬಾಯಲ್ಲಿ ಎಲೆ ಅಡಿಕೆ, ಕಾಲಲ್ಲಿ ಚಪ್ಪಲಿ, ಕೆದರಿದ ತಲೆ. ಅವನ ವೇಷ ನೋಡಿ ಕೆಲ ಮಕ್ಕಳು ಗಾಬರಿಯಾದವು.

ಅಜ್ಜಿ `ಇಲ್ಲಪ್ಪ' ಎಂದು ಹೇಳಿದ ಮೇಲೆ ಆತ ಕೂಗುತ್ತ ಮುಂದಿನ ಮನೆಗಳ ಕಡೆ ನಡೆದ. ಆದರೆ ಅವನನ್ನ ಮರೆಯಲು ಮಕ್ಕಳಿಂದ ಆಗಲಿಲ್ಲ. “ಅಜ್ಜಿ ಅಜ್ಜಿ ಅವನು ಯಾರು?” ಎಂದು ಮಕ್ಕಳು ಅಜ್ಜಿಯನ್ನ ಕೇಳಿದವು.
“ಅವನಾ?”- ಅಜ್ಜಿ ಗಂಟಲು ಸರಿಪಡಿಸಿಕೊಂಡಳು. ಅವಳು ಹಾಗೆ ಗಂಟಲು ಸರಿಪಡಿಸಿಕೊಂಡರೆ ಆಕೆ ಹಾಡುತ್ತಾಳೆ ಎಂದೇ ಲೆಕ್ಕ. ಮಕ್ಕಳು ಈ ಸಂತಸದಲ್ಲಿ “ಹೇಳಜ್ಜಿ” ಎಂದರು.

ಸೌದೆ ಒಡೆಯುವ ಸಿದ್ದಪ್ಪ, ಇವ ಸೌದೆ ಒಡೆಯುವ ಸಿದ್ದಪ್ಪ
ರಸ್ತೆ ಬದಿಗಳ ಮರಗಳನೆಲ್ಲ ಮೊದಲು ಕಡಿದವನು ಈ ಅಪ್ಪ
ಹೆದ್ದಾರಿಯ ಬದಿ ಸವರಿ ಬಿಟ್ಟನು ಅಲ್ಲಿಯು ಮರಗಳ ಬಿಡಲಿಲ್ಲ
ಊರು ಹಳ್ಳಿಯ ಮರಗಳನೆಲ್ಲ ಕಡಿದುರುಳಿಸಿದ ಸಿದ್ದಪ್ಪ.

ನಂತರ ಬಂದನು ಊರ ತೋಟಕೆ ಮರಗಳ ಹುಡುಕುತ್ತ
ತೋಟದಲ್ಲಿಯ ಮರಗಳನೀತ ಒಂದೂ ಬಿಡದೆ ಕಡಿದ
ಮರಗಳ ಸವರಿ, ಬೊಡ್ಡೆಯ ಉರುಳಿಸಿ ಕೊಂಬೆಗಳನ್ನೂ ಬಿಡದೆ
ಬೇರನು ಸಹಿತ ಅಗೆದನು ಈತ ತಂದು ಕೊಡಲಿ ಗರಗಸವ.

ಜನಗಳ ಮನೆಯ ಹಿಂಬದಿಯಲ್ಲಿ ಬೆಳೆದ ಮರಗಳ ಬಿಡಲಿಲ್ಲ
ಅಂಗಳದಲ್ಲಿಯ ಮಾವು ಹಲಸು ಇವನಿಂದಾಗಿ ಉಳೀಲಿಲ್ಲ
ಹಿತ್ತಿಲು ಬರಿದು ಅಂಗಳ ಬರಿದು ಕೊಡಲಿಯ ಮಸೆದ ಸಿದ್ದಪ್ಪ
ಇಡೀ ಊರೇ ಬರಿದಾಯಿತು ಇವನ ಕೊಡಲಿಯ ಕಾವಿಂದ

“ಮುಂದೆ ಏನಾಯ್ತು ಅಜ್ಜಿ?” -ಹಾಡು ಕೇಳುತ್ತ ಕುಳಿತ ಹುಡುಗನೋರ್ವ ಕೇಳಿದ.

ಊರು ಊರಿನಲಿ ಮರಗಳು ಇಲ್ಲ ಹಕ್ಕಿಯ ಗೂಡಿಗೆ ತಾವಿಲ್ಲ
ಊರ ತೋಪುಗಳು ಬಟಾ ಬಯಲು ಎಲ್ಲೆಡೆ ಕಂಡಿತು ಮೈದಾನ
ಮರಗಳ ಮಾರಿದ ಊರ ಜನ ಹಣವನ್ನೇನೊ ಮಾಡಿದರು
ಬೆವರುತ ಮನೆಯಲಿ ಸುಮ್ಮನೆ ಕುಳಿತು ಬಿಸಿ ಗಾಳಿಗೆ ನರಳಿದರು

ಜನರಿಗೆ ಹಣದ ಆಸೆಯ ತೋರಿಸಿ ಇದ್ದ ಮರಗಳ ಸಿದ್ದಪ್ಪ
ಕೊಡಲಿಯ ಕಾವಿಗೆ ಬಲಿ ಕೊಟ್ಟನು ತಾನೂ ಹಣವನು ಗಳಿಸಿದನು
ಊರಿನಲ್ಲಿಯ ಮರಗಳು ಖಾಲಿ ರಸ್ತೆ ಪಕ್ಕದ ಮರಗಳು ಖಾಲಿ
ಮರಗಳಿಲ್ಲದ ಊರಾಯಿತು ಆಗ ಬೆಂಗಾಡಿನ ಮರುಭೂಮಿ.

ಊರಲ್ಲಿಯ ಮರಗಳು ನಾಶವಾಗಲು ಇವನ ಕೊಡಲಿಯಿಂದ
ಕೆಲಸವೆ ಇಲ್ಲದೆ ಹೋಯಿತು ಮರ ಕಡಿಯುವ ಸಿದ್ದಪ್ಪನಿಗೆ
ಕೆಲಸವು ಇಲ್ಲ ಬೊಗಸೆಯು ಇಲ್ಲ ಮನೆಯಲಿ ಇಲ್ಲ ಹಿಡಿ ಅನ್ನ
ಊರೂರನು ಅಲೆದ ಸಿದ್ದಪ್ಪ ಕಡಿಯಲು ಮರವ ಹುಡುಕುತ್ತ.

ಹೀಗೆ ಸಿದ್ದಪ್ಪ ಮರ ಕಡಿಯುವ ಕೆಲಸ ಎಲ್ಲೂ ಸಿಗದೆ ಉಪವಾಸ ಉಳಿಯುವ ಸ್ಥಿತಿ ಬಂದಿತು. ಆಗ ಯಾರೋ ಅವನಿಗೆ ಹೇಳಿದರು. “ಈವರೆಗೆ ನೀನು ಮರಗಳನ್ನ ಕಡಿದದ್ದು ಸಾಕು, ಇನ್ನಾದರೂ ಮರಗಳನ್ನ ನೆಡುವ ಕೆಲಸ ಮಾಡು. ಅದರಿಂದ ನಿನಗೂ ಒಳ್ಳೆಯದಾಗುತ್ತದೆ. ಜನರಿಗೂ ಒಳಿತಾಗುತ್ತದೆ. ನಿನಗೂ ಒಂದು ಕೆಲಸ ಸಿಗುತ್ತದೆ”.

ಊರ ತುಂಬಾ ಇದ್ದ ಮರಗಳ ಕಡಿದು ಉರುಳಿಸಿದಿ ನೀನು
ಇನ್ನೆಲ್ಲಿಯ ಮರಗಳು ಹೇಳು ಹಸಿರೆಲೆಗೂ ಬರ ತಂದಿಟ್ಟಿ
ಕಡಿಯಲು ಮರಗಳೆ ಇಲ್ಲದ ಮೇಲೆ ನೀ ಕಡಿಯುವೆ ಏನನ್ನು
ಮರಗಳ ಕಡಿಯುವ ಕೆಲಸವ ನಿಲ್ಲಿಸಿ ಮರಗಳ ನೀ ಬೆಳೆಸು

ಇದುವೆ ಸರಿ ಅನಿಸಿತು ಅವನಿಗೆ ಅವನು ಹೊರಟನು ಈ ಕೆಲಸಕ್ಕೆ
ಕಡಿದಾ ಮರಗಳ ನೆನಪಿಸಿಕೊಂಡು ಹೊಸ ಮರಗಳ ಆತ ನೆಟ್ಟ
ಊರಲಿ ಮರಗಳು ಇಲ್ಲದೆ ಇರಲು ಹೊಸ ಮರಗಳ ಈತ ಬೆಳೆಸಿದನು
ಬೆಳೆಸಿದ ಮರಗಳ ಕಾಪಾಡಿ ನೀರನು ಹಾಕಿ ಬೆಳೆಸಿದನು

ಎಲ್ಲ ಕಡೆಗಳಲಿ ಗುಳಿಯನು ತೋಡಿ ಸಸಿಗಳ ತಂದು, ನೆಟ್ಟು
ಗೊಬ್ಬರ ಹಾಕಿ ನೀರನು ಹನಿಸಿ ಮುಳ್ಳಿನ ಬೇಲಿಯ ಕಟ್ಟಿ
ದನಕರು ಬಾಯಿಗೆ ಗಿಡ ಸಿಗದಂತೆ ಅದನು ಕಾದು ಕಾಪಾಡಿ
ಮರಗಳ ಈತ ಬೆಳೆಸಿ ತೋರಿಸಿದ `ಭಲೆ' ಅಂದರು ಊರ ಜನ.

“ಮರಗಳ ಬೆಳೆಸುವ ಕೆಲಸವೆಲ್ಲಿದೆ” ಎಂದು ಕೇಳುತ ತಿರುಗಿದನು
ತೋಟ ತೋಟದಲಿ ಹೆದ್ದಾರಿಯ ಬಳಿ ಮರಗಳ ಈತ ಬೆಳೆಸಿದನು
ಜನರೂ ಕರೆದರು ಇವನನ್ನ ಮರಗಳ ಬೆಳೆಸಲು ಹೇಳಿದರು
ಮರಗಳ ಬೆಳೆಸುತ ಸಿದ್ದಪ್ಪ ಬದುಕಿಗೆ ದಾರಿಯ ಕಂಡನು.

ಅಜ್ಜಿ ಹಾಡು ನಿಲ್ಲಿಸಿ ಹೇಳಿದಳು. “ಈಗ ಸಿದ್ದಪ್ಪನಿಗೆ ತುಂಬಾ ಕೆಲಸ. ಎಲ್ಲ ಜನರಿಗೆ ಮರಗಳು ಬೇಕು ಅನಿಸಿದೆ. ಅವರು ಸಿದ್ದಪ್ಪನನ್ನ ಕರೆಸಿ ಮರಗಳನ್ನ ಅವನಿಂದ ನೆಡೆಸುತ್ತಿದ್ದಾರೆ. ಊರು ಮತ್ತೆ ಹಸಿರಾಗುತ್ತಿದೆ. ಸಿದ್ದಪ್ಪ ತಾನೇ ಮಾಡಿದ ತಪ್ಪನ್ನ ತಾನೇ ತಿದ್ದಿಕೊಂಡಿದ್ದಾನೆ”.

“ಮರಗಳ ಬೆಳೆಸೋ ಕೆಲಸ ಇದೆ ಏನ್ರವ್ವಾ” ಎಂದು ಕೂಗುತ್ತಾ ಊರು ಊರು ತಿರುಗುತ್ತಿದ್ದಾನೆ. ಈ ಕೆಲಸದಲ್ಲಿ ಸಿದ್ದಪ್ಪನಿಗೆ ಸಂತೋಷ ಕೂಡ ಸಿಕ್ಕಿದೆಯಂತೆ”.
ಅಜ್ಜಿ ಕತೆ ನಿಲ್ಲಿಸಿ ತನ್ನ ಕೆಲಸದಲ್ಲಿ ತೊಡಗಿದಳು.          

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT